ಮೊದಲ ಸಲ ದಿಯಾ ಬಹುತೇಕ ತಪ್ಪಿಸಿಕೊಂಡಿದ್ದರು.

ಸೂರತ್‌ ನಗರದಿಂದ ಝಲೋಡ್‌ ಎನ್ನುವಲ್ಲಿಗೆ ಟಿಕೆಟ್‌ ಖರೀದಿಸಿದ್ದ ಅವರು ಬಸ್‌ ಜನರಿಂದ ತುಂಬುವುದನ್ನೇ ಕಾಯುತ್ತಿದ್ದರು. ಅಲ್ಲಿಗೆ ತಲುಪಿಕೊಂಡರೆ ಅಲ್ಲಿಂದ ಗುಜರಾತ್‌ ಗಡಿ ದಾಟಿ ತನ್ನ ಊರಾದ ಕುಶಾಲಗಢ ತಲುಪುವುದು ಸುಲಭವೆನ್ನುವುದು ದಿಯಾರಿಗೆ ತಿಳಿದಿತ್ತು.

ಅವರು ಬಸ್ಸಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದರೆ ರವಿ ಅವರ ಹಿಂದೆ ಬಂದು ನಿಂತಿದ್ದ. ಅದು ಅವರ ಅರಿವಿಗೆ ಬರುವ ಮೊದಲೇ ಅವನು ಅವರ ಕೈ ಹಿಡಿದು ಬಸ್ಸಿನಿಂದ ಹೊರಗೆ ಎಳೆಯತೊಡಗಿದ್ದ.

ಬಸ್ಸಿನಲ್ಲಿದ್ದ ಜನರು ಲಗೇಜ್‌ ಇರಿಸುವುದು, ಮಕ್ಕಳನ್ನು ಸಂಭಾಳಿಸುವುದರಲ್ಲಿ ಮುಳುಗಿಹೋಗಿದ್ದರು. ಅವರ್ಯಾರೂ ಆ ಆಕ್ರೋಶಭರಿತ ಯುವಕ ಮತ್ತು ಹೆದರಿದ ಹದಿಹರೆಯದ ಹುಡುಗಿಯ ಕಿತ್ತಾಟದತ್ತ ಗಮನ ನೀಡಿರಲಿಲ್ಲ. “ನಾನಂತೂ ಹೆದರಿ ಹೋಗಿದ್ದೆ” ಎನ್ನುತ್ತಾರೆ ದಿಯಾ. ರವಿಯ ಸಿಟ್ಟಿನ ಅರಿವಿದ್ದ ಅವರಿಗೆ ಸುಮ್ಮನಿರುವುದೇ ಒಳ್ಳೆಯದು ಅನ್ನಿಸಿತು.

ಕಳೆದ ಆರು ತಿಂಗಳಿನಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಅವರ ಪಾಲಿಗೆ ಮನೆ ಮತ್ತು ಜೈಲು ಎರಡೂ ಆಗಿತ್ತು. ಅವರು ಒಂದು ದಿನವೂ ಮಲಗಿರಲಿಲ್ಲ. ಅವರ ಇಡೀ ಮೈ-ಕೈ ನೋಯುತ್ತಿತ್ತು. ರವಿಯ ಹೊಡೆತಗಳಿಂದಾಗಿ ಚರ್ಮ ಹರಿದು ಅಲ್ಲಲ್ಲಿ ಗಾಯಗಳಾಗಿದ್ದವು. “ಅವನು ಮುಷ್ಟಿಗಟ್ಟಿ ಹೊಡೆಯುತ್ತಿದ್ದ, ಒದೆಯುತ್ತಿದ್ದ” ಎಂದು ನೆನಪಿಸಿಕೊಳ್ಳುತ್ತಾರೆ. ಯಾರಾದರೂ ಗಂಡಸರು ತಪ್ಪಿಸಲು ಬಂದರೆ ಅವರ ಮೇಲೆ ದಿಯಾ ಮೇಲೆ ಕಣ್ಣು ಹಾಕಿರುವ ಆರೋಪವನ್ನು ಹೊರಿಸಲಾಗುತ್ತಿತ್ತು. ರವಿಯ ಬೈಗುಳಕ್ಕೆ ಅಂಜಿ ಹೆಂಗಸರೂ ದೂರ ಉಳಿಯುತ್ತಿದ್ದರು. ಯಾರಾದರೂ ಧೈರ್ಯ ಮಾಡಿ ಪ್ರಶ್ನಿಸಿದರೆ, 'ಮೇರಿ ಘರ್ವಾಲಿ ಹೈ, ತುಮ್ ಕ್ಯೂಂ ಬೀಚ್ ಮೇ ಆ ರಹೇ ಹೋ [ಅವಳು ನನ್ನ ಹೆಂಡತಿ. ನೀವು ಏಕೆ ನಡುವೆ ಬರುತ್ತಿದ್ದೀರಿ]?ʼ ಎಂದು ರವಿ ಕೇಳುತ್ತಿದ್ದ.

“ಪ್ರತಿ ಸಲ ಏಟು ಬಿದ್ದಾಗಲೂ ಆಸ್ಪತ್ರೆಗೆ ಹೋಗಿ ಮಲ್ಲಮ್‌ ಪಟ್ಟಿ [ಗಾಯದ ಬ್ಯಾಂಡೇಜ್]‌ ಮಾಡಿಸಲು ನನಗೆ 500 ರೂಪಾಯಿ ಬೇಕಾಗುತ್ತಿತ್ತು. ಕೆಲವೊಮ್ಮೆ ರವಿಯ ಸಹೋದರ ನನಗೆ ಹಣ ನೀಡುತ್ತಿದ್ದ, ಮತ್ತೆ ಜೊತೆಗೆ ಆಸ್ಪತ್ರೆಗೂ ಬರುತ್ತಿದ್ದ. ಅವನು “ತುಮ್ ಘರ್ ಪೆ ಚಲೇ ಜಾ [ನೀನು ತವರಿಗೆ ಹೋಗಿಬಿಡು]” ಎನ್ನುತ್ತ್ತಿದ್ದ. ಆದರೆ ಹೋಗುವುದು ಹೇಗೆ ಎನ್ನುವುದು ಇಬ್ಬರಿಗೂ ತಿಳಿದಿರಲಿಲ್ಲ.

Kushalgarh town in southern Rajasthan has many bus stations from where migrants leave everyday for work in neighbouring Gujarat. They travel with their families
PHOTO • Priti David
Kushalgarh town in southern Rajasthan has many bus stations from where migrants leave everyday for work in neighbouring Gujarat. They travel with their families
PHOTO • Priti David

ದಕ್ಷಿಣ ರಾಜಸ್ಥಾನದ ಕುಶಾಲಗಡ್ ಪಟ್ಟಣದಲ್ಲಿ ಅನೇಕ ಬಸ್ ನಿಲ್ದಾಣಗಳಿವೆ, ಅಲ್ಲಿಂದ ಪ್ರತಿದಿನ ಸಾಕಷ್ಟು ಜನರು ನೆರೆ ಗುಜರಾತಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಅವರು ತಮ್ಮ ಕುಟುಂಬ ಸಮೇತ ವಲಸೆ ಹೋಗುತ್ತಾರೆ

ದಿಯಾ ಮತ್ತು ರವಿ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಭಿಲ್ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, 2023ರ ಬಹು ಆಯಾಮದ ಬಡತನ ಅಧ್ಯಯನ ವರದಿಯ ಪ್ರಕಾರ,  ಸಮುದಾಯವು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಬಡವರನ್ನು ಹೊಂದಿದೆ. ಸಣ್ಣ ಹಿಡುವಳಿಗಳು, ನೀರಾವರಿಯ ಕೊರತೆ, ಉದ್ಯೋಗಗಳ ಕೊರತೆ ಮತ್ತು ಒಟ್ಟಾರೆ ಬಡತನವು ಕುಶಾಲಗಢ ತಹಸಿಲ್ ಪ್ರದೇಶದ ಜನಸಂಖ್ಯೆಯ ಶೇಕಡಾ 90ರಷ್ಟಿರುವ ಭಿಲ್ ಬುಡಕಟ್ಟು ಸಮುದಾಯದ ಜನರನ್ನು ಸಂಕಷ್ಟದ ವಲಸೆಯ ಕೇಂದ್ರವನ್ನಾಗಿ ಮಾಡಿದೆ.

ದಿಯಾ ಮತ್ತು ರವಿ ಕೂಡಾ ಮೇಲ್ನೋಟಕ್ಕೆ ಗುಜರಾತಿಗೆ ನಿರ್ಮಾಣ ಕ್ಷೇತ್ರಗಳಲ್ಲಿ ಕೆಲಸ ಹುಡುಕಿಕೊಂಡು ಬರುವ ವಲಸಿಗರಂತೆ ಕಾಣುತ್ತಾರೆ. ಆದರೆ ದಿಯಾರ ವಲಸೆ ಅಪಹರಣವಾಗಿತ್ತು.

ಆಗ ನೆರೆಯ ಸಜ್ಜನಗಢದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷದ ಯುವತಿಯಾಗಿದ್ದ ದಿಯಾ, ರವಿಯನ್ನು ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಭೇಟಿಯಾಗಿದ್ದರು. ಹಳ್ಳಿಯ ಹಿರಿಯ ಮಹಿಳೆಯೊಬ್ಬಳು ಅವನ ಫೋನ್ ನಂಬರನ್ನು ಒಂದು ತುಂಡು ಕಾಗದದ ಮೇಲೆ ಬೆರದು ಹಸ್ತಾಂತರಿಸಿದ್ದಳು. ಜೊತೆಗೆ ಅದೇ ಮಹಿಳೆ ಅಂದು ಅವನು ದಿಯಾರನ್ನು ನೋಡಲು ಬಯಸಿದ್ದು, ಒಮ್ಮೆ ಅವನನ್ನು ಭೇಟಿಯಾಗು ಎಂದು ಮಹಿಳೆ ಒತ್ತಾಯಿಸಿದ್ದಳು.

ದಿಯಾ ಅವನಿಗೆ ಫೋನ್‌ ಮಾಡಲಿಲ್ಲ. ಮುಂದಿನ ವಾರ ಅವನು ಮತ್ತು ಮಾರುಕಟ್ಟೆಯಲ್ಲಿ ಸಿಕ್ಕಾಗ ಅವನೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದಳು. "ಹಮ್ಕೊ ಘುಮ್ನೆ ಲೇ ಜಾಯೇಗಾ ಬೋಲಾ, ಬಾಗಿಡೋರಾ. ಬೈಕ್ ಪೇ. [ಬೈಕಿನಲ್ಲಿ ಬಾಗಿಡೋರಾ ಎನ್ನುವಲ್ಲಿಗೆ ತಿರುಗಾಡಲು ಕರೆದುಕೊಂಡು ಹೋಗುವುದಾಗಿ ತಿಳಿಸಿದ]. ಅದಕ್ಕಾ ಶಾಲೆ ಬಿಡುವ ಒಂದು ಗಂಟೆ ಮೊದಲು ಅಂದರೆ ಮಧ್ಯಾಹ್ನ ಎರಡು ಗಂಟೆಗೆ ಹೊರಡಲು ತಿಳಿಸಿದ್ದ” ಎಂದು ನೆನಪಿಸಿಕೊಳ್ಳುತ್ತಾರೆ. ಮಾರನೇ ದಿನ ಅವನು ತನ್ನ ಗೆಳೆಯನೊಂದಿಗೆ ದಿಯಾರ ಶಾಲೆಯ ಹೊರಗೆ ಬಂದು ಕಾಯುತ್ತಾ ನಿಂತಿದ್ದ.

“ಆ ದಿನ ನಾವು ಬಾಗಿಡೋರಾಕ್ಕೆ ಹೋಗಲಿಲ್ಲ. ಅವನು ನನ್ನನ್ನು ಅಲ್ಲಿಂದ ಬಸ್‌ ನಿಲ್ದಾಣ್ಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಅಹ್ಮದಾಬಾದ್‌ ಬಸ್‌ ಹತ್ತಿಸಿದ್ದ” ಎಂದು ದಿಯಾ ಹೇಳುತ್ತಾರೆ. ಆ ಊರಿನಿಂದ ಅಹಮದಾಬಾದ್‌ 500 ಕಿಲೋಮೀಟರುಗಳಷ್ಟು ದೂರ.

ಆತಂಕಿತರಾದ ದಿಯಾ ಹೇಗೋ ತನ್ನ ಪೋಷಕರಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದರು. “ನನ್ನ ಚಾಚಾ [ಚಿಕ್ಕಪ್ಪ] ನನ್ನನ್ನು ಕರೆದುಕೊಂಡು ಹೋಗಲೆಂದು ಅಹಮದಾಬಾದಿಗೆ ಬಂದಿದ್ದರು. ಆದರೆ ಈ ವಿಷಯ ಊರಲ್ಲಿರುವ ಗೆಳೆಯರ ಮೂಲಕ ರವಿಗೆ ತಿಳಿಯಿತು. ಅವನು ನನ್ನನ್ನು ಅಲ್ಲಿಂದ ಸೂರತ್‌ ನಗರಕ್ಕೆ ಎಳೆದುಕೊಂಡು ಹೋದ.”

ಅಂದಿನಿಂದ ಅವನು ಅವರು ಯಾರೊಂದಿಗಾದರೂ ಮಾತನಾಡಬಹುದೆನ್ನುವ ಸಂಶಯ ಪಿಶಾಚಿಯಾದ. ಅದರೊಂದಿಗೆ ಹಿಂಸೆಯೂ ಆರಂಭವಾಯಿತು. ಕರೆ ಮಾಡುವ ಸಲುವಾಗಿ ಫೋನ್‌ ಕೇಳಿದರಂತೂ ನರಕದರ್ಶನ ಮಾಡಿಸಿಬಿಡುತ್ತಿದ್ದ. ಒಂದು ದಿನ ದಿಯಾರಿಗೆ ತನ್ನ ಮನೆಯ ನೆನಪು ಬಹಳವಾಗಿ ಕಾಡಿದ್ದ ಕಾರಣ ಅವನನ್ನು ಫೋನ್‌ ಕೊಡುವಂತೆ ಅಳುತ್ತಾ ಬೇಡಿದ್ದರು. “ಆಗ ಅವನು ನನ್ನನ್ನು ಆಗಷ್ಟೇ ಕಟ್ಟುತ್ತಿದ್ದ ಬಿಲ್ಡಿಂಗಿನ ಒಂದನೇ ಮಹಡಿಗೆ ಎಳೆದೊಯ್ದು ಅಲ್ಲಿಂದ ದೂಡಿದ್ದ. ಪುಣ್ಯಕ್ಕೆ ನಾನು ಅಲ್ಲಿದ್ದ ಮಣ್ಣಿನ ರಾಶಿಯ ಮೇಲೆ ಬಿದ್ದಿದ್ದೆ. ಆದರೆ ಮೈಯೆಲ್ಲ ಗಾಯವಾಗಿತ್ತು” ಎಂದು ಈಗಲೂ ನೋಯುತ್ತಿರುವ ತನ್ನ ಬೆನ್ನಿನ ಭಾಗವನ್ನು ತೋರಿಸುತ್ತಾ ಆ ಭೀಕರ ಅನುಭವವನ್ನು ನೆನಪಿಸಿಕೊಂಡರು.

Left: A government high school in Banswara district.
PHOTO • Priti David
Right: the Kushalgarh police station is in the centre of the town
PHOTO • Priti David

ಎಡ: ಬನ್ಸ್ವಾರಾ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ. ಬಲ: ಕುಶಾಲಗಢ ಪೊಲೀಸ್ ಠಾಣೆ ಪಟ್ಟಣದ ಮಧ್ಯಭಾಗದಲ್ಲಿದೆ

*****

ದಿಯಾರ ತಾಯಿ 35 ವರ್ಷದ ಕಮಲಾ ಓರ್ವ ದಿನಗೂಲಿ ಮಹಿಳೆ. ಅಪಹರಣದ ವಿಷಯ ತಿಳಿದಾಗ ಅವರು ಮಗಳನ್ನು ಕರೆತರಲು ಪ್ರಯತ್ನಿಸಿದರು. ಆ ದಿನ ಊರಿನಲ್ಲಿರುವ ಗುಡಿಸಲಿನಲ್ಲಿ ಕುಳಿತು ಅಳುತ್ತಿದ್ದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರ ಮನೆಯಿರುವುದು ಬನ್ಸ್ವಾರಾ ಜಿಲ್ಲೆಯ ಕುಗ್ರಾಮವೊಂದರಲ್ಲಿ. "ಬೇಟಿ ತೋ ಹೈ ಮೇರಿ. ಅಪ್ನೆ ಕೋ ದಿಲ್ ನಹೀಂ ಹೋತಾ ಕ್ಯಾ [ಎಷ್ಟಾದರೂ ಅವಳು ನನ್ನ ಮಗಳು. ಅವಳು ಬೇಕೆಂದು ನನಗೂ ಅನ್ನಿಸುವುದಿಲ್ಲವೆ]?”

ರವಿ ಮಗಳನ್ನು ಅಪಹರಿಸಿಕೊಂಡು ಹೋದ ಕೆಲವು ದಿನಗಳ ನಂತರ ಕಮಲಾ ಪೊಲೀಸರ ಬಳಿ ದೂರು ನೀಡಿದರು.

ರಾಜಸ್ಥಾನವು ಮಹಿಳಾ ದೌರ್ಜನ್ಯದ ವಿಷಯದಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಪ್ರಕಟಿಸಿದ ಕ್ರೈಮ್ಸ್ ಇನ್ ಇಂಡಿಯಾ 2020 ವರದಿಯ ಪ್ರಕಾರ, ಈ ಅಪರಾಧಗಳ ವಿಷಯದಲ್ಲಿ ಚಾರ್ಜ್‌ ಆಗುವುದು ಬಹಳ ಕಡಿಮೆ.ಇಲ್ಲಿ ಇಂತಹ ಅಪರಾಧಗಳ ವಿಷಯದಲ್ಲಿ ಚಾರ್ಜ್‌ಹಶೀಟ್‌ ಆಗುವುದು ಕೇವಲ 55 ಸೇಕಡಾ ಎನ್ನುತ್ತದೆ ವರದಿ. ಇಲ್ಲಿ ಮೂರು ಅಪಹರಣ ಪ್ರಕರಣಗಳು ನಡೆದರೆ ಅವುಗಳಲ್ಲಿ ಎರಡರ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ. ದಿಯಾರ ಅಪಹರಣವೂ ಪೊಲೀಸ್‌ ಫೈಲುಗಳಲ್ಲಿ ದಾಖಲಾಗಲಿಲ್ಲ.

“ಅವರು ಕೇಸ್‌ ವಾಪಸ್‌ ತೆಗೆದುಕೊಂಡರು” ಎಂದು ನೆನಪಿಸಿಕೊಳ್ಳುತ್ತಾರೆ ಕುಶಾಲಗಢ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ರೂಪ್ ಸಿಂಗ್. ಸ್ಥಳೀಯವಾಗಿ ಪರ್ಯಾಯ ನ್ಯಾಯಾಲಯದಂತೆ ಕೆಲಸ ಮಾಡುವ ಬಂಜಾಡಿಯಾ ಎನ್ನುವ ಊರಿನ ಗಂಡಸರ ಗುಂಪು ಇದರಲ್ಲಿ ಮೂಗು ತೂರಿಸಿತು ಎಂದು ಕಮಲಾ ಹೇಳುತ್ತಾರೆ. ಈ ಗುಂಪು ದಿಯಾರ ಪೋಷಕರಾದ ಕಮಲಾ ಮತ್ತು ಅವರ ಪತಿ ಕಿಶನ್ ಅವರನ್ನು ʼವಧು ದಕ್ಷಿಣೆʼ (ಭಿಲ್‌ ಸಮುದಾಯದಲ್ಲಿ ಮದುವೆಯಾಗುವಾಗ ಗಂಡು ಹೆಣ್ಣಿಗೆ ಒಂದಷ್ಟು ಹಣ ನೀಡುತ್ತಾನೆ. ಕೆಲವೊಮ್ಮೆ ಮದುವೆ ಮುರಿದುಬಿದ್ದ ಸಂದರ್ಭದಲ್ಲಿ ಈ ಹಣವನ್ನು ಮರಳಿಸುವಂತೆ ಗಂಡು ಒತ್ತಾಯಿಸುತ್ತಾನೆ) ಪಡೆದು ಪೊಲೀಸ್‌ ಕೇಸ್‌ ಹಿಂಪಡೆಯುವಂತೆ ಒತ್ತಾಯಿಸಿತು.

1-2 ಲಕ್ಷ ಹಣ ಪಡೆದು ಪೊಲೀಸ್‌ ಕೇಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಲಾಯಿತು ಎನ್ನುತ್ತದೆ ಕುಟುಂಬ. ಇದರೊಂದಿಗೆ ಈಗ ಮದುವೆಗೆ ಸಾಮಾಜಿಕ ಮನ್ನಣೆ ದೊರೆತಂತಾಗಿತ್ತು. ದಿಯಾರ ಒಪ್ಪಿಗೆ ಮತ್ತು ಅಪ್ರಾಪ್ತ ವಯಸ್ಸನ್ನು ಇಲ್ಲಿ ಪರಿಗಣನೆಗೇ ತೆಗೆದುಕೊಂಡಿಲ್ಲ. 20-24 ವರ್ಷ ವಯಸ್ಸಿನ ಕಾಲು ಭಾಗದಷ್ಟು ಮಹಿಳೆಯರು 18 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ ಎಂದು ಇತ್ತೀಚಿನ ಎನ್ಎಫ್ಎಚ್ಎಸ್ -5 ವರದಿ ಹೇಳುತ್ತದೆ.

ಕುಶಾಲಗಢದ ಸಾಮಾಜಿಕ ಕಾರ್ಯಕರ್ತೆ ಟೀನಾ ಗರಸಿಯಾ ತಾನು ದಿಯಾಳ ವಿಷಯವನ್ನು ಓಡಿ ಹೋಗಿ ಮದುವೆಯಾದ ಪ್ರಕರಣವೆಂದು ಒಪ್ಪಲು ತಯಾರಿಲ್ಲ ಎನ್ನುತ್ತಾರೆ. ಸ್ವತಃ ಭಿಲ್‌ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಅವರು ಇಂತಹ ಪ್ರಕರಣಗಳನ್ನು ಹುಡುಗಿ ಓಡಿ ಹೋಗಿ ಮದುವೆಯಾದಳು ಎಂದಷ್ಟೇ ನೋಡಲು ಸಾಧ್ಯವಿಲ್ಲ ಎನ್ನುತ್ತಾರೆ. “ನಮ್ಮ ಬಳಿ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು ಸ್ವಯಿಚ್ಛೆಯಿಂದ ಓಡಿಹೋಗಿದ್ದಾರೆಂದು ನನಗೆ ಅನ್ನಿಸಿಲ್ಲ. ಅಥವಾ ಅವರು ತಮಗೆ ಇದರಿಂದ ಪ್ರಯೋಜನವಾಗಲಿದೆಯೆಂದು ಸಹ ಹೋಗಿರುವುದಿಲ್ಲ. ಅಲ್ಲಿ ಕನಿಷ್ಟ ಪ್ರೇಮ ಸಂಬಂಧದ ಸಂಭ್ರಮ ಕೂಡಾ ಇರುವುದಿಲ್ಲ” ಎನ್ನುವ ಅವರು ಬನ್ಸ್ವಾರಾ ಜಿಲ್ಲೆಯ ಆಜೀವಿಕಾ ಸಂಘಟನೆಯ ಜೀವನೋಪಾಯ ಬ್ಯೂರೋದ ಮುಖ್ಯಸ್ಥರೂ ಹೌದು. ಅವರು ಕಳೆದ ಒಂದು ದಶಕದಿಂದ ವಲಸೆ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದಾರೆ.

“ನಾನು ಈ ಓಡಿ ಹೋಗುವಿಕೆಯನ್ನು ಒಂದು ಪಿತೂರಿಯಾಗಿ, ಕಳ್ಳಸಾಗಾಣಿಕೆಯ ತಂತ್ರವಾಗಿ ನೋಡುತ್ತೇನೆ. ಹುಡುಗಿಯರನ್ನು ಈ ಸಂಬಂಧದ ಹಳ್ಳದೊಳಗೆ ತಳ್ಳುವ ಜನರು ಅವರೊಳಗೇ ಇದ್ದಾರೆ” ಎಂದು ಟೀನಾ ಹೇಳುತ್ತಾರೆ. ಹುಡುಗಿಯನ್ನು ಪರಿಚಯಿಸಿ ಕೊಡುವುದಕ್ಕಾಗಿಯೇ ಇಲ್ಲಿ ಹಣ ಕೈ ಬದಲಾಗುತ್ತದೆ ಎಂದು ಅವರು ಆರೋಪಿಸುತ್ತಾರೆ. “ಒಬ್ಬ 14 – 15 ವರ್ಷದ ಹುಡುಗಿಗೆ ಬದುಕು, ಸಂಬಂಧ ಇವುಗಳ ಬಗ್ಗೆ ಎಷ್ಟರಮಟ್ಟಿಗೆ ತಿಳಿದಿರಲು ಸಾಧ್ಯ?”

ಜನವರಿ ತಿಂಗಳ ಒಂದು ಬೆಳಗ್ಗೆ ಕುಶಾಲಗಢದಲ್ಲಿನ ಟೀನಾ ಅವರ ಕಚೇರಿಗೆ ಮೂವರು ಹೆಣ್ಣುಮಕ್ಕಳ ತಾಯಂದಿರು ಬಂದು ಕುಳಿತಿದ್ದರು. ಅವರೆಲ್ಲರ ಕತೆಯೂ ದಿಯಾರ ಕತೆಯಂತೆಯೇ ಇತ್ತು.

Left: Teena Garasia (green sweater) heads Banswara Livelihood Bureau's Migrant Women Workers Reference Center; Anita Babulal (purple sari) is a Senior Associate at Aaajevika Bureaa, and Kanku (uses only this name) is a sanghatan (group) leader. Jyotsana (standing) also from Aajeevika, is a community counselor stationed at the police station, and seen here helping families with paperwork
PHOTO • Priti David
Left: Teena Garasia (green sweater) heads Banswara Livelihood Bureau's Migrant Women Workers Reference Center; Anita Babulal (purple sari) is a Senior Associate at Aaajevika Bureaa, and Kanku (uses only this name) is a sanghatan (group) leader. Jyotsana (standing) also from Aajeevika, is a community counselor stationed at the police station, and seen here helping families with paperwork
PHOTO • Priti David

ಎಡ: ಟೀನಾ ಗರಾಸಿಯಾ (ಕೆಂಪು ಸ್ವೆಟರ್) ಬನ್ಸ್ವಾರಾ ಲೈವ್ಲಿಹುಡ್ ಬ್ಯೂರೋದ ವಲಸೆ ಮಹಿಳಾ ಕಾರ್ಮಿಕರ ಮಾಹಿತಿ ಕೇಂದ್ರದ ಮುಖ್ಯಸ್ಥರಾಗಿದ್ದಾರೆ; ಅನಿತಾ ಬಾಬುಲಾಲ್ (ನೇರಳೆ ಬಣ್ಣದ ಸೀರೆ) ಆಜೀವಿಕಾ ಬ್ಯೂರೋದಲ್ಲಿ ಹಿರಿಯ ಸಹಾಯಕರಾಗಿದ್ದಾರೆ, ಮತ್ತು ಕಂಕು (ಈ ಹೆಸರನ್ನು ಮಾತ್ರ ಬಳಸುತ್ತಾರೆ) ಸಂಘಟನ್ (ಗುಂಪು) ನಾಯಕಿ. ಆಜೀವಿಕಾ ಮೂಲದ ಜ್ಯೋತ್ಸನಾ (ಕಂದು ಬಣ್ಣದ ರವಿಕೆ ತೊಟ್ಟು ನಿಂತಿರುವ) ಪೊಲೀಸ್ ಠಾಣೆಯಲ್ಲಿ ಸಮುದಾಯ ಸಲಹೆಗಾರರಾಗಿದ್ದು, ಕುಟುಂಬಗಳಿಗೆ ಕಾಗದಪತ್ರಗಳ ವಿಷಯದಲ್ಲಿ ಸಹಾಯ ಮಾಡುತ್ತಿರುವುದನ್ನು ಕಾಣಬಹುದು

ಸೀಮಾ ತನ್ನ 16ನೇ ವರ್ಷದಲ್ಲಿ ಮದುವೆಯಾಗಿ ಪತಿಯೊಂದಿಗೆ ಗುಜರಾತಿಗೆ ತೆರಳಿದರು. “ನಾನು ಯಾರೊಂದಿಗಾದರೂ ಮಾತನಾಡಿದರೆ ಅವನು ಬಹಳ ಅಸೂಯೆಪಡುತ್ತಿದ್ದ. ಒಮ್ಮೆ ಅವನು ಬಲವಾಗಿ ಕಿವಿ ಮೇಲೆ ಹೊಡೆದಿದ್ದ ಅಂದಿನಿಂದ ನನಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ” ಎಂದು ಅವರು ಹೇಳುತ್ತಾರೆ.

“ಪೆಟ್ಟುಗಳು ಭಯಾನಕವಾಗಿರುತ್ತಿದ್ದವು. ನೆಲದಿಂದ ಮೇಲೇಳಲು ಸಾಧ್ಯವಾಗದಂತೆ ಹೊಡೆಯುತ್ತಿದ್ದ. ನಂತರ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಕಾಮ್‌ಚೋರ್‌ [ಸೋಮಾರಿ] ಎಂದು ಬಯ್ಯುತ್ತಿದ್ದ. ಹೀಗಾಗಿ ನಾನು ಆ ನೋವಿನಲ್ಲೇ ಕೆಲಸ ಮಾಡುತ್ತಿದ್ದೆ” ಎನ್ನುತ್ತಾರವರು. ಆಕೆಯ ಸಂಪಾದನೆಯೆಲ್ಲ ನೇರ ಅವನ ಕೈಸೇರುತ್ತಿತ್ತು. “ಅವನು ಆಟ್ಟಾ [ಗೋಧಿ ಹಿಟ್ಟು] ಕೂಡಾ ಖರೀದಿಸುತ್ತಿರಲಿಲ್ಲ, ಎಲ್ಲವನ್ನೂ ಕುಡಿತಕ್ಕೆ ಖರ್ಚು ಮಾಡುತ್ತಿದ್ದ.”

ಕೊನೆಗೂ ಆಕೆ ಅವನಿಗೆ ಆತ್ಮಹತ್ಯೆಯ ಬೆದರಿಕೆ ಹಾಕುವ ಮೂಲಕ ಅವನಿಂದ ಬೇರೆಯಾದರು. ಅಂದಿನಿಂದ ಅವನು ಇನ್ನೊಬ್ಬ ಹೆಂಗಸಿನೊಂದಿಗೆ ಸಂಸಾರ ಮಾಡುತ್ತಿದ್ದಾನೆ. “ಈಗ ನಾನು ಗರ್ಭಿಣಿ. ಆದರೆ ಅವನು ನನಗೆ ವಿಚ್ಛೇದನ ನೀಡುವುದಕ್ಕಾಗಲಿ, ಬದುಕಲು ಹಣ ಕೊಡುವುದಕ್ಕಾಗಲಿ ತಯಾರಿಲ್ಲ” ಎಂದು ಅವರು ಹೇಳುತ್ತಾರೆ. ಈಗ ಕುಟುಂಬ ಅವನ ವಿರುದ್ಧ ಎಫ್‌ಐಆರ್ ದಾಖಲಿಸಿದೆ.‌ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ, 2005 ಸೆಕ್ಷನ್ 20.1 (ಡಿ) ಜೀವನಾಂಶವನ್ನು ಒದಗಿಸಬೇಕು ಎಂದು ಹೇಳುತ್ತದೆ ಮತ್ತು ಈ ಪ್ರಕರಣವು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 125 ಅಡಿಯೂ ಬರುತ್ತದೆ.

19 ವರ್ಷದ ರಾಣಿ ಮೂರು ವರ್ಷದ ಮಗುವಿನ ತಾಯಿಯಾಗಿದ್ದು, ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಅವರು ಕೂಡ ತನ್ನ ಪತಿಯಿಂದ ತ್ಯಜಿಸಲ್ಪಟ್ಟಿದ್ದಾರೆ. ಆದರೆ ಅದಕ್ಕೂ ಮೊದಲು ಅವರು ತನ್ನ ಗಂಡನಿಂದ ಮೌಖಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆ. “ಅವನು ಪ್ರತಿದಿನ ಕುಡಿದು ಬಂದು 'ಗಂದಿ ಔರತ್, ರಂಡಿ ಹೈ [ಅಶ್ಲೀಲ ಮಹಿಳೆ, ವೇಶ್ಯೆ] ಎಂದು ಜಗಳವಾಡಲು ಪ್ರಾರಂಭಿಸುತ್ತಿದ್ದ" ಎಂದು ಅವರು ಹೇಳುತ್ತಾರೆ.

ಆಕೆ ಈ ಕುರಿತು ಪೊಲೀಸರಿಗೆ ದೂರನ್ನು ಸಹ ನೀಡಿದ್ದರು. ಆದರೆ ಅದೇ ಬಂಜಾಡಿಯಾ ಗುಂಪು ಬಂದು ಮಧ್ಯಸ್ಥಿಕೆ ವಹಿಸಿತು. ಅವರ ನಡೆಸಿದ ಪಂಚಾಯತಿಕೆಯಲ್ಲಿ ಅವನು ಇನ್ನು ಮುಂದೆ ಸರಿಯಾಗಿರುತ್ತಾನೆ ಎಂದು ಹುಡುಗನ ಕುಟುಂಬವು 50 ರೂಪಾಯಿ ಮುಖಬೆಲೆಯ ಛಾಪಾ ಕಾಗದದಲ್ಲಿ ಬರೆದುಕೊಟ್ಟಿತು ಮತ್ತು ಇದರೊಂದಿಗೆ ಹುಡುಗಿ ಕಡೆಯವರು ದೂರನ್ನು ಹಿಂಪಡೆದರು. ಆದರೆ ಮತ್ತೆ ಒಂದು ತಿಂಗಳ ನಂತರ ಮತ್ತೆ ಅದೇ ನರಕ ದರ್ಶನ ಆರಂಭವಾಯಿತು. ಆದರೆ ಬಂಜಾಡಿಯ ಗುಂಪು ತನಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಕಣ್ಣುಮುಚ್ಚಿ ಕುಳಿತುಬಿಟ್ಟಿತು. “ನಾನು ಪೊಲೀಸರ ಬಳಿಯೂ ಹೋಗಿದ್ದ. ಆದರೆ ಈ ಹಿಂದೆ ನಾನು ದೂರು ಹಿಂಪಡೆದಿದ್ದ ಕಾರಣ ಸಾಕ್ಷಿಗಳು ಕಳೆದುಹೋಗಿದ್ದವು” ಎನ್ನುತ್ತಾರೆ ರಾಣಿ. ಆಲೆ ಮಟ್ಟಿಲನ್ನೇ ಹತ್ತದ ರಾಣಿ ಈಗ ಕಾನೂನಿನ ಹಗ್ಗವನ್ನು ಪಳಗಿಸಲು ನೋಡುತ್ತಿದ್ದಾರೆ. ಭಿಲ್ ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇಕಡಾ 31ರಷ್ಟಿದೆ (ಪರಿಶಿಷ್ಟ ಪಂಗಡಗಳ ಅಂಕಿಅಂಶಗಳ ವಿವರ, 2013ರ ಪ್ರಕಾರ).

ಆಜೀವಿಕಾ ಬ್ಯೂರೋ ಕಚೇರಿಯಲ್ಲಿ, ತಂಡದ ಸದಸ್ಯರು ದಿಯಾ, ಸೀಮಾ ಮತ್ತು ರಾಣಿಯಂತಹ ಮಹಿಳೆಯರಿಗೆ ಕಾನೂನು ಸೇರಿದಂತೆ ಇತರ ವ್ಯಾಪಕ ಬೆಂಬಲವನ್ನು ನೀಡುತ್ತಾರೆ. ಸಹಾಯವಾಣಿಗಳು, ಆಸ್ಪತ್ರೆಗಳು, ಕಾರ್ಮಿಕ ಕಾರ್ಡುಗಳು ಹಾಗೂ ಇನ್ನೂ ಹಲವು ಸಂಗತಿಗಳ ಬಗ್ಗೆ ಮಹಿಳೆಯರಿಗೆ ತಿಳಿಸಲು ಫೋಟೋಗಳು ಮತ್ತು ಗ್ರಾಫಿಕ್ಸ್ ಮಾಧ್ಯಮವನ್ನು ಬಳಸಿ "ಶ್ರಮಿಕ್ ಮಹಿಳಾಂವೋ ಕಾ ಸುರಕ್ಷಿತ್ ಪ್ರವಾಸ್ [ಮಹಿಳಾ ಕಾರ್ಮಿಕರ ಸುರಕ್ಷಿತ ವಲಸೆ]" ಎಂಬ ಕಿರುಪುಸ್ತಕವನ್ನು ಸಹ ಅವರು ಮುದ್ರಿಸಿದ್ದಾರೆ.

ಆದರೆ ಸಂತ್ರಸ್ತರ ಪಾಲಿಗೆ ಈ ವಲಸೆಯೆನ್ನುವುದು ಪೊಲೀಸ್‌ ಸ್ಟೇಷನ್‌, ಪದೇ ಪದೇ ಕೋರ್ಟಿಗೆ ಅಲೆಯುವುದು ಮತ್ತು ಮುಗಿಯದ ಹೋರಾಟವೆನ್ನಿಸಿಕೊಂಡಿದೆ. ಈ ಮಹಿಳೆಯರಿಗೆ ಚಿಕ್ಕ ಮಕ್ಕಳ ಹೆಚ್ಚುವರಿ ಜವಾಬ್ದಾರಿಯೂ ಇರುವುದರಿಂದಾಗಿ ಅವರಿಗೆ ವಲಸೆ ಹೋಗುವುದಕ್ಕೂ ಆಗುವುದಿಲ್ಲ.

The booklet, Shramak mahilaon ka surakshit pravas [Safe migration for women labourers] is an updated version of an earlier guide, but targeted specifically for women and created in 2023 by Keerthana S Ragh who now works with the Bureau
PHOTO • Priti David
The booklet, Shramak mahilaon ka surakshit pravas [Safe migration for women labourers] is an updated version of an earlier guide, but targeted specifically for women and created in 2023 by Keerthana S Ragh who now works with the Bureau
PHOTO • Priti David

ಶ್ರಮಿಕ್ ಮಹಿಳಾಂವೋ ಕಾ ಸುರಕ್ಷಿತ್ ಪ್ರವಾಸ್ [ಮಹಿಳಾ ಕಾರ್ಮಿಕರ ಸುರಕ್ಷಿತ ವಲಸೆ] ಎನ್ನುವ ಕಿರು ಪುಸ್ತಿಕೆಯು ಈ ಹಿಂದಿನ ಮಾರ್ಗದರ್ಶಿಯ ನವೀಕೃತ ಆವೃತ್ತಿ. ಆದರೆ ಇದನ್ನು ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಚಿಸಲಾಗಿದೆ. ಮತ್ತು ಇದನ್ನು 2023ರಲ್ಲಿ ಪ್ರಸ್ತುತ ಬ್ಯೂರೋ ಜೊತೆ ಕೆಲಸ ಮಾಡುತ್ತಿರುವ ಕೀರ್ತನಾ ಎಸ್‌ ರಾಘ್‌ ಅವರು ರಚಿಸಿದರು

Left: Menka, also from Aajeevika (in the centre) holding a afternoon workshop with a group of young girls, discussing their futures and more.
PHOTO • Priti David
Right: Teena speaking to young girls
PHOTO • Priti David

ಎಡ: ಆಜೀವಿಕಾ ಸಂಘಟನೆಯವರಾದ ಮೇನಕಾ (ಮಧ್ಯದಲ್ಲಿ) ಕೂಡ ಯುವತಿಯರ ಗುಂಪಿನೊಂದಿಗೆ ಮಧ್ಯಾಹ್ನದ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ, ಅಲ್ಲಿ ಅವರ ಭವಿಷ್ಯ ಮತ್ತು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಬಲ: ಟೀನಾ ಯುವತಿಯರೊಂದಿಗೆ ಮಾತನಾಡುತ್ತಿದ್ದಾರೆ

ಟೀನಾ ಈ ಪ್ರಕರಣಗಳನ್ನು ಲಿಂಗ ಸಂಬಂಧಿ ಹಿಂಸಾಚಾರವನ್ನಾಗಿ ಮಾತ್ರವಲ್ಲದೆ ಯುವತಿಯರ ಕಳ್ಳಸಾಗಣೆ ಎಂದೂ ನೋಡುತ್ತಾರೆ. "ಹುಡುಗಿಯರನ್ನು ಓಡಿ ಹೋಗುವಂತೆ ಪುಸಲಾಯಿಸಿದ ಪ್ರಕರಣಗಳನ್ನು ಸಹ ನಾವು ನೋಡಿದ್ದೇವೆ. ನಂತರ ಅವರನ್ನು ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಲಾದ ಪ್ರಕರಣಗಳೂ ಇವೆ. ಕಳ್ಳಸಾಗಾಣಿಕೆಯ ತಸ್ಕರಿ ಆಯಾಮ ಇದೇ ಆಗಿರುತ್ತದೆ ಎನ್ನುವುದು ನನ್ನ ನಂಬಿಕೆ. ಇದನ್ನು ಸೀದಾ ಸಾದಾ ನೋಡಿದರೆ ಇವು ಹೆಣ್ಣುಮಕ್ಕಳ ಕಳ್ಳಸಾಗಣೆಯಲ್ಲದೆ ಇನ್ನೇನೂ ಅಲ್ಲ. ಕಳವಳಕಾರಿ ಅಂಶವೆಂದರೆ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.” ಎಂದು ಅವರು ಹೇಳುತ್ತಾರೆ.

*****

ಅಹಮದಾಬಾದ್‌ ಮತ್ತು ಸೂರತ್‌ ಅಪಹರಣದ ನಂತರ, ದಿಯಾರನ್ನು ಕೆಲಸಕ್ಕೆ ಸೇರಿಸಲಾಯಿತು. ಅವರು ರವಿಯೊಂದಿಗೆ ಸೇರಿ ರೋಕ್ಡಿ ಮಾಡತೊಡಗಿದಳು (ಗುತ್ತಿಗೆದಾರರು ಕೂಲಿ ಮಂಡಿಗಳಿಂದ 350ರಿಂದ 400 ರೂ.ಗಳ ದಿನಗೂಲಿಗೆ ಜನರನ್ನು ಕರೆದೊಯ್ಯುತ್ತಾರೆ. ಅಲ್ಲಿ ದುಡಿಯುವುದನ್ನು ರೋಕ್ಡಿ ಎನ್ನಲಾಗುತ್ತದೆ). ಮೊದಲಿಗೆ ಅವರು ಕಾಲುದಾರಿಗಳಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿದ್ದರು. ನಂತರ ರವಿಗೆ ಕಾಯಂ ಕೆಲಸ ದೊರಕಿತು. ಅಂದರೆ ಅವನಿಗೆ ನಿರ್ಮಾಣ ಸ್ಥಳದಲ್ಲಿ ತಿಂಗಳ ಸಂಬಳದ ಕೆಲಸ ಮತ್ತು ಅರೆ ನಿರ್ಮಿತ ಕಟ್ಟಡದಲ್ಲೇ ವಾಸಿಸಲು ಸ್ಥಳ ದೊರಕಿತು.

“[ಆದರೆ] ಒಂದೂ ದಿನವೂ ನಾನು ನನ್ನ ಸಂಪಾದನೆಯನ್ನು ನೋಡಲು ಸಾಧ್ಯವಾಗಲಿಲ್ಲ. ಎಲ್ಲವನ್ನೂ ಅವನೇ ಇಟ್ಟುಕೊಳ್ಳುತ್ತಿದ್ದ” ಎನ್ನುತ್ತಾರೆ ದಿಯಾ. ದಿನವಿಡೀ ಮೈ ದಣಿಯುವಂತೆ ದುಡಿದ ನಂತರ ಅವರು ಮನೆಯಲ್ಲಿ ಅಡುಗೆ ಮಾಡುವುದು, ಸ್ವಚ್ಛಗೊಳಿಸುವುದು, ತೊಳೆಯುವುದು ಮತ್ತು ಇತರ ಎಲ್ಲ ಮನೆ ಕೆಲಸಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಅಲ್ಲಿನ ಇತರ ಮಹಿಳೆಯರು ಅವಳೊಡನೆ ಮಾತಿಗೆ ಬರುತ್ತಿದ್ದರು. ಆದರೆ ರವಿ ಅವರನ್ನು ಹದ್ದಿನಂತೆ ಕಾಯುತ್ತಿದ್ದ.

“ಮೂರು ಸಲ ಅಪ್ಪ ನನಗೆ ಮನೆಗೆ ಮರಳಲೆಂದು ಯಾರ್ಯಾರ ಬಳಿಯೋ ಹಣ ಕೊಟ್ಟು ಕಳುಹಿಸಿದ್ದರು. ಆದರೆ ನಾನು ಹೊರಗೆ ಕಾಲಿಡುತ್ತಿದ್ದ ಹಾಗೆ ಯಾರಾದರೂ ನೋಡಿ ಅವನಿಗೆ [ರವಿಗೆ] ಚಾಡಿ ಹೇಳುತ್ತಿದ್ದರು. ಆಗ ಅವನು ಹೋಗದಂತೆ ತಡೆಯುತ್ತಿದ್ದ. ಅಂದು ಕೂಡಾ ನಾನು ಹೇಗೋ ಬಸ್‌ ಹತ್ತಿಬಿಟ್ಟಿದ್ದೆ. ಆದರೆ ಅವನಿಗೆ ಯಾರೋ ಸುದ್ದಿ ಮುಟ್ಟಿಸಿಬಿಟ್ಟಿದ್ದರು” ಎನ್ನುತ್ತಾರೆ ದಿಯಾ.

ದಿಯಾರಿಗೆ ಬರುತ್ತಿದ್ದ ಒಂದೇ ಭಾಷೆಯೆಂದರೆ ವಾಂಗ್ಡಿ ಎನ್ನುವ ಉಪ ಭಾಷೆ. ಜೊತೆಗೆ ಒಂದಷ್ಟು ಹಿಂದಿ ಅರ್ಥವಷ್ಟೇ ಆಗುತ್ತಿತ್ತು. ಇದರಿಂದಾಗಿ ಅವರಿಗೆ ಗುಜರಾತಿನಲ್ಲಿ ರವಿಯ ಹಿಂಸೆಯಿಂದ ತಪ್ಪಿಸಿಕೊಳ್ಳಲು ಸರ್ಕಾರದ ಅಥವಾ ಗುಜರಾತಿನ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ಸ್ಥಳೀಯ ಭಾಷೆ ಮಾತನಾಡಲು ಬಾರದಿರುವುದೇ ಅವರ ಬದುಕಿಗೆ ತಡೆಗೋಡೆಯಾಗಿತ್ತು.

ರವಿ ದಿಯಾಳನ್ನು ಬಸ್ಸಿನಿಂದ ಎಳೆದುಕೊಂಡು ಹೋದ ನಾಲ್ಕು ತಿಂಗಳ ನಂತರ ದಿಯಾ ಬಸುರಿಯಾದಳು. ಆದರೆ ಇದಕ್ಕೆ ಅವಳ ಒಪ್ಪಿಗೆಯಿರಲಿಲ್ಲ. ಆ ಸಮಯದಲ್ಲಿ ಪೆಟ್ಟು ಬೀಳುವುದು ಕಡಿಮೆಯಾಗಿತ್ತು ಆದರೆ ಪೂರ್ತಿಯಾಗಿ ನಿಂತಿರಲಿಲ್ಲ.

ರವಿ ಎಂಟನೇ ತಿಂಗಳಿನಲ್ಲಿ ದಿಯಾರನ್ನು ತವರಿಗೆ ತಂದು ಬಿಟ್ಟ. ಹೆರಿಗೆಗಾಗಿ ಝಲೋಡ್‌ ಎನ್ನುವಲ್ಲಿರುವ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮವಿತ್ತರು. ಅಲ್ಲಿಯೇ ಮಗುವನ್ನು ಆಸ್ಪತ್ರೆಗೆ ಅಡ್ಮಿಟ್‌ ಮಾಡಿಕೊಳ್ಳಲಾಯಿತು. ಮಗು 12 ದಿನಗಳ ಕಾಲ ಐಸಿಯು ವಾರ್ಡಿನಲ್ಲಿತ್ತು. ಇದರಿಂದಾಗಿ ಅವರಿಗೆ ಮಗುವಿಗೆ ಹಾಲುಣಿಸಲು ಸಾಧ್ಯವಾಗಲಿಲ್ಲ. ಅದರೊಂದಿಗೆ ಎದೆಯಲ್ಲಿ ಹಾಲೂ ಬತ್ತಿ ಹೋಯಿತು.

Migrant women facing domestic violence are at a double disadvantage – contractors deal with them only through their husbands, and the women who don't speak the local language, find it impossible to get help
PHOTO • Priti David
Migrant women facing domestic violence are at a double disadvantage – contractors deal with them only through their husbands, and the women who don't speak the local language, find it impossible to get help
PHOTO • Priti David

ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವ ಮಹಿಳೆಯರು ಎರಡು ಪಟ್ಟು ತೊಂದರೆಗಳನ್ನು ಎದುರಿಸುತ್ತಾರೆ. ಗುತ್ತಿಗೆದಾರರು ಅವರ ಗಂಡಂದಿರೊಡನೆ ಮಾತ್ರ ವ್ಯವಹರಿಸುತ್ತಾರೆ, ಮತ್ತು ಈ ಮಹಿಳೆಯರಿಗೆ ಸ್ಥಳೀಯ ಭಾಷೆ ಬರುವುದಿಲ್ಲ. ಇದರಿಂದಾಗಿ ಅಲ್ಲಿ ಅವರಿಗೆ ಯಾವುದೇ ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ

ಆ ಸಮಯದಲ್ಲಿ ರವಿಯ ಹಿಂಸಾತ್ಮಕ ಪ್ರವೃತ್ತಿಯ ಬಗ್ಗೆ ಅವಳ ಕುಟುಂಬದಲ್ಲಿ ಯಾರಿಗೂ ತಿಳಿದಿರಲಿಲ್ಲ. ಅವಳು ಸ್ವಲ್ಪ ಸಮಯದವರೆಗೆ ಇದ್ದ ನಂತರ, ಪೋಷಕರು ಅವಳನ್ನು ಅವನೊಂದಿಗೆ ಕಳುಹಿಸಲು ಉತ್ಸುಕರಾಗಿದ್ದರು. (ವಲಸೆ ಯುವ ತಾಯಂದಿರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ.) ಮದುವೆಯಾದ ಹೆಣ್ಣಿಗೆ ಸಹಾರ [ಜೊತೆ] ಎಂದರೆ ಅವಳ ಗಂಡನೇ ಎಂದು ವಿವರಿಸುತ್ತಾರೆ ಕಮಲಾ. “ಅವರು ಒಟ್ಟಿಗೆ ದುಡಿಯುತ್ತಾ, ಒಟ್ಟಿಗೆ ಬದುಕುತ್ತಾರೆ.” ತಾಯಿ, ಮಗ ಕುಟುಂಬಕ್ಕೆ ಆರ್ಥಿಕವಾಗಿಯೂ ಭಾರವಾಗಿದ್ದರು.

ಈ ನಡುವೆ ರವಿಯ ದೌರ್ಜನ್ಯ ಫೋನ್‌ ಮೂಲಕ ಆರಂಭಗೊಂಡಿತ್ತು. ಮಗುವಿನ ಚಿಕಿತ್ಸೆಗೆ ಹಣ ಕೇಳಿದರೆ ಅವನು ಕೊಡುತ್ತಿರಲಿಲ್ಲ. ಮನೆಯಲ್ಲಿದ್ದ ಕಾರಣ ದಿಯಾ ಒಂದಷ್ಡು ಧೈರ್ಯ ತೋರಿಸಿ “ಸರಿ ಹಾಗಿದ್ದರೆ ಅಪ್ಪನ ಬಳಿ ಕೇಳುತ್ತೇನೆ” ತನಗಿರುವ ಸ್ವಾತಂತ್ರವನ್ನು ಪ್ರದರ್ಶಿಸುತ್ತಿದ್ದರು. “ಬಹುತ್‌ ಝಗ್ಡಾ ಕರ್ತೇ ಥೇ [ತುಂಬಾ ಜಗಳವಾಡುತ್ತಿದ್ದರು].”

ಇಂತಹದ್ದೇ ಒಂದು ಜಗಳದ ನಡುವೆ ರವಿ ತಾನು ಇನ್ನೊಬ್ಬಳನ್ನು ಮದುವೆಯಾಗುವುದಾಗಿ ಹೇಳಿ. ಅದಕ್ಕೆ ಅವಳು “ನೀನು ಇನ್ನೊಬ್ಬಳನ್ನು ಕಟ್ಟಿಕೊಳ್ಳಬಲ್ಲೆಯಾದರೆ ನಾನೂ ಇನ್ನೊಬ್ಬನನ್ನು ಕಟ್ಟಿಕೊಳ್ಳುವೆ” ಎಂದು ಹೇಳಿ ಕರೆ ತುಂಡರಿಸಿದರು.

ಕೆಲವು ಗಂಟೆಗಳ ನಂತರ ಪಕ್ಕದ ತಾಲ್ಲೂಕಿನ ತನ್ನ ಮನೆಯಲ್ಲಿದ್ದ ರವಿ ಇತರ ಐದು ಗಂಡಸರೊಂದಿಗೆ ದಿಯಾಳ ಮನೆಯನ್ನು ತಲುಪಿದ. ಅವರು ಮೂರು ಬೈಕುಗಳಲ್ಲಿ ಬಂದಿದ್ದರು. ಬಂದವನೇ ಅವಳನ್ನು ಇನ್ನು ಮುಂದೆ ತಾನು ಸರಿಯಾಗಿರುತ್ತೇನೆ ಎಂದು ಅವರನ್ನು ಪುಸಲಾಯಿಸಿ ಮನೆಗೆ ಕರೆದ. ಮತ್ತೆ ಸೂರತ್‌ಗೆ ಹೋಗೋಣ ಎಂದ.

“ಅವನು ನನ್ನನ್ನು ಅವನ ಮನೆಗೆ ಕರೆದೊಯ್ದ. ಅಲ್ಲಿ ಮಗುವನ್ನು ಮಂಚವೊಂದರ ಮೇಲೆ ಮಲಗಿಸಿದರು. ಮೊದಲಿಗೆ ಮೇರಾ ಘರ್‌ವಾಲಾ [ಗಂಡ] ನನ್ನ ಕಪಾಳಕ್ಕೆ ಹೊಡೆದ. ಕೂದಲು ಹಿಡಿದು ಇನ್ನೊಂದು ಕೋಣೆಗೆ ಎಳೆದುಕೊಂಡು ಹೋದ. ಅವನ ಸಣ್ಣ ತಮ್ಮಂದಿರು ಮತ್ತು ಗೆಳೆಯರೂ ಕೋಣೆಯೊಳಗೆ ಬಂದರು. ಗಲಾ ದಬಾಯಾ [ಕುತ್ತಿಗೆ ಹಿಸುಕಿದರು], ನಂತರ ಉಳಿದವರು ನನ್ನ ಕೈ ಹಿಡಿದುಕೊಂಡರೆ ಅವನು ಬ್ಲೇಡ್‌ ತೆಗೆದುಕೊಂಡು ನನ್ನ ತಲೆ ಬೋಳಿಸಿದ” ಎಂದು ದಿಯಾ ನೆನಪಿಸಿಕೊಳ್ಳುತ್ತಾರೆ.

ಈ ಘಟನೆಯು ದಿಯಾರ ನೆನಪಿನಲ್ಲಿ ಮಾಯದ ನೋವಾಗಿ ಅಚ್ಚೊತ್ತಿದೆ. "ನನ್ನನ್ನು ತಂಬಾ [ಕಂಬ]ಕ್ಕೆ ಒತ್ತಲಾಯಿತು. ಸಾಧ್ಯವಿರುವಷ್ಟು ಕಿರುಚಿದೆ ಮತ್ತು ಕೂಗಿದೆ, ಆದರೆ ಯಾರೂ ಬರಲಿಲ್ಲ." ನಂತರ ಉಳಿದವರು ಕೋಣೆಯಿಂದ ಹೊರಬಂದು ಬಾಗಿಲು ಮುಚ್ಚಿದರು. "ಅವನು ನನ್ನ ಬಟ್ಟೆಗಳನ್ನು ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಎಸಗಿದ. ಅವನು ಹೊರಟುಹೋದ ನಂತರ ಇತರ ಮೂವರು ನನ್ನ ಮೇಲೆ ಅತ್ಯಾಚಾರ ಮಾಡಲು ಸರದಿಯಲ್ಲಿ ಬಂದರು. ನನಗೆ ನೆನಪಿರುವುದು ಇಷ್ಟೇ, ಏಕೆಂದರೆ ಅದರ ನಂತರ ನಾನು ಪ್ರಜ್ಞಾಹೀನಳಾದೆ."

ಕೋಣೆಯ ಹೊರಗೆ, ಮಗು ಅಳಲು ಆರಂಭಿಸಿತ್ತು. "ನನ್ನ ಘರ್ವಾಲಾ [ಪತಿ] ನನ್ನ ತಾಯಿಗೆ ಫೋನ್ ಕರೆ ಮಾಡಿ, 'ಅವಳು ಬರುತ್ತಿಲ್ಲ. ನಾವು ಬಂದು ಮಗುವನ್ನು ಬಿಟ್ಟು ಹೋಗುತ್ತೇವೆʼ ಎನ್ನುವುದು ಕೇಳುತ್ತಿತ್ತು. ಅದಕ್ಕೆ ನನ್ನ ತಾಯಿ ಒಪ್ಪದೆ ತಾನೇ ಅಲ್ಲಿಗೆ ಬರುವುದಾಗಿ ತಿಳಿಸಿದರು.”

Young mothers who migrate often take their very young children with them. In Diya's case, staying with her parents was straining the family’s finances
PHOTO • Priti David
Young mothers who migrate often take their very young children with them. In Diya's case, staying with her parents was straining the family’s finances
PHOTO • Priti David

ವಲಸೆ ಹೋಗುವ ಯುವ ತಾಯಂದಿರು ಸಾಮಾನ್ಯವಾಗಿ ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ದಿಯಾ ಪ್ರಕರಣದಲ್ಲಿ, ಅವಳ ಹೆತ್ತವರಿಗೆ ತಾಯಿ ಮತ್ತು ಮಗು ಆರ್ಥಿಕವಾಗಿ ಭಾರವಾಗಿದ್ದರು

ಕಮಲಾ ಆ ದಿನ ಅಲ್ಲಿಗೆ ತಲುಪಿದಾಗ ರವಿ ಅವರ ಬಳಿ ಮಗುವನ್ನು ಕರೆದೊಯ್ಯುವಂತೆ ಹೇಳಿದ. “ಆದರೆ ನಾನು ʼಆಗುವುದಿಲ್ಲʼ ಎಂದೆ. ನನಗೆ ಮಗಳನ್ನು ನೋಡಬೇಕಿತ್ತು.” ಆಗ “ಅಂತ್ಯಕ್ರಿಯೆಗೆ ಸಿದ್ಧವಾದಂತೆ” ತಲೆ ಬೋಳಿಸಲ್ಪಟ್ಟಿದ್ದ ದಿಯಾ ನಡುಗುತ್ತಾ ಎದುರು ನಿಂತಿದ್ದರು. “ನಾನು ನನ್ನ ಗಂಡನಿಗೆ ಕರೆ ಮಾಡಿದೆ. ಹಾಗೆಯೇ ಮುಖಿಯಾ ಮತ್ತು ಸರಪಂಚರಿಗೂ ಫೋನ್‌ ಮಾಡಿದೆ. ಅವರು ಪೊಲೀಸರಿಗೆ ಸುದ್ದಿ ತಲುಪಿಸಿದರು” ಎಂದು ಕಮಲಾ ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ.

ಪೊಲೀಸರು ಬರುವ ಹೊತ್ತಿಗೆ ಇದನ್ನೆಲ್ಲ ಮಾಡಿದ್ದ ಗಂಡಸರು ಕಣ್ಮರೆಯಾಗಿದ್ದರು. ದಿಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. “ನನ್ನ ಮೈಮೇಲೆ ಕಚ್ಚಿದ ಗುರುತುಗಳಿದ್ದವು, ಅಂದು ರೇಪ್‌ ಟೆಸ್ಟ್‌ ಮಾಡಿಲ್ಲ, ನನ್ನ ಗಾಯಗಳ ಫೋಟೋ ತೆಗೆದುಕೊಂಡಿಲ್ಲ” ಎನ್ನುತ್ತಾರೆ ದಿಯಾ.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ, 2005 (9 ಜಿ) ನಲ್ಲಿ ದೈಹಿಕ ಹಿಂಸಾಚಾರ ನಡೆದಿದ್ದರೆ ಪೊಲೀಸರು ದೈಹಿಕ ಪರೀಕ್ಷೆಗೆ ಆದೇಶಿಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಈ ವರದಿಗಾರರು ಈ ಕುರಿತು ಡಿವೈಎಸ್ಪಿಯನ್ನು ಕೇಳಿದಾಗ, ದಿಯಾ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾಳೆ, ಅತ್ಯಾಚಾರದ ಬಗ್ಗೆ ಅವಳು ಹೇಳಿರಲಿಲ್ಲ ಅಲ್ಲದೆ ಅವಳಿಗೆ ಈ ಕುರಿತು ಯಾರೋ ಹೇಳಿಕೊಟ್ಟಂತಿತ್ತು ಎಂದರು. ಆದರೆ ಆಕೆಯ ಮನೆಯವರು ತಾವು ಪೊಲೀಸರಿಗೆ ಎಲ್ಲವನ್ನೂ ಹೇಳಿದ್ದೇವೆ ಎನ್ನುತ್ತಾರೆ.

ಆದರೆ ದಿಯಾಳ ಕುಟುಂಬ ಇದನ್ನು ಪೂರ್ತಿಯಾಗಿ ನಿರಾಕರಿಸುತ್ತದೆ. “ಆಧಾ ಆಧಾ ಲಿಖಾ ಔರ್‌ ಆಧಾ ಆಧಾ ಚೋಡ್‌ ದಿಯಾ [ಅವರು ಅರ್ಧದಷ್ಟು ಬರೆದುಕೊಂಡು ಅರ್ಧದಷ್ಟನ್ನು ಬಿಟ್ಟುಬಿಟ್ಟರು]” ಎನ್ನುತ್ತಾಳೆ ದಿಯಾ. “ನಾನು 2-3 ದಿನಗಳ ನಂತರ ಕೋರ್ಟಿನಲ್ಲಿ ಫೈಲನ್ನು ಓದಿ ನೋಡಿದೆ. ಅದರಲ್ಲಿ ಅವರು ನನ್ನ ಮೇಲೆ ನಾಲ್ಕು ಜನ ಅತ್ಯಾಚಾರ ಎಸಗಿರುವುದನ್ನು ಬರೆದಿರಲಿಲ್ಲ. ನಾನು ಅವರ ಹೆಸರುಗಳನ್ನು ಹೇಳಿದ್ದರು ಸಹ ಅದರಲ್ಲಿ ಅದನ್ನು ಉಲ್ಲೇಖಿಸಿರಲಿಲ್ಲ.”

The Kushalgarh police station where the number of women and their families filing cases against husbands for abandonment and violence is rising
PHOTO • Priti David

ಕುಶಾಲಗಢ ಪೊಲೀಸ್ ಠಾಣೆಯಲ್ಲಿ ಗಂಡಂದಿರ ವಿರುದ್ಧ ಪರಿತ್ಯಕ್ತಗೊಳಿಸಿದ ಮತ್ತು ಹಿಂಸೆ ಎಸಗಿದ ಪ್ರಕರಣಗಳನ್ನು ದಾಖಲಿಸುವ ಮಹಿಳೆಯರು ಮತ್ತು ಅವರ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ

ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವ ಮಹಿಳೆಯರು ದುಪ್ಪಟ್ಟು ತೊಂದರೆಗಳನ್ನೆದುರಿಸುತ್ತಾರೆ. ಗುತ್ತಿಗೆದಾರರು ಅವರ ಗಂಡಂದಿರೊಡನೆ ಮಾತ್ರ ವ್ಯವಹರಿಸುತ್ತಾರೆ, ಈ ಮಹಿಳೆಯರಿಗೆ ಸ್ಥಳೀಯ ಭಾಷೆ ಬಾರದಿರುವುದರಿಂದಾಗಿ ಸಹಾಯ ಪಡೆಯುವುದೂ ಕಷ್ಟ

ರವಿ ಮತ್ತು ತನ್ನ ಅತ್ಯಾಚಾರಿಗಳು ಎಂದು ದಿಯಾ ಪೊಲೀಸರಿಗೆ ತಿಳಿಸಿದ ಮೂವರನ್ನು ಬಂಧಿಸಲಾಗಿದೆ. ಅವನ ಕುಟುಂಬದ ಇತರ ಸದಸ್ಯರನ್ನೂ ಬಂಧಿಸಲಾಗಿದೆ. ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ರವಿಯ ಸ್ನೇಹಿತರು ಮತ್ತು ಕುಟುಂಬದಿಂದ ತನ್ನ ಜೀವಕ್ಕೆ ಬೆದರಿಕೆಯಿರುವುದಾಗಿಯೂ ದಿಯಾ ಕೇಳುತ್ತಾಳೆ.

2024ರ ಆರಂಭದಲ್ಲಿ ಈ ವರದಿಗಾರರನ್ನು ಭೇಟಿಯಾದ ದಿಯಾ, ತನ್ನ ಬದುಕು ಪದೇ ಪದೇ ಪೊಲೀಸ್‌ ಠಾಣೆ, ಕೋರ್ಟ್‌ ಮೆಟ್ಟಿಲು ಹತ್ತುವುದರಲ್ಲೇ ಕಳೆಯುತ್ತಿದೆ ಎಂದು ಹೇಳಿದಳು. ಇದರೊಂದಿಗೆ ಅವಳ 10 ತಿಂಗಳ ಮಗುವಿಗೆ ಮೂರ್ಛೆ ರೋಗವಿದ್ದು ಆದರ ಆರೈಕೆಯನ್ನೂ ಅವಳು ನೋಡಿಕೊಳ್ಳಬೇಕಿದೆ.

“ಒಂದು ಸಲ ಕುಶಾಲಗಢಕ್ಕೆ ಒಬ್ಬೊಬ್ಬರಿಗೆ 40 ರೂಪಾಯಿಗಳಷ್ಟು ಬಸ್‌ ಚಾರ್ಜ್‌ ತಗಲುತ್ತದೆ” ಎಂದು ದಿಯಾಳ ತಂದೆ ಕಿಶನ್‌ ಹೇಳುತ್ತಾರೆ. ಕೆಲವೊಮ್ಮೆ ಕುಟುಂಬವನ್ನು ತುರ್ತಾಗಿ ಬರುವಂತೆ ಹೇಳಿ ಕರೆಸಿಕೊಳ್ಳಲಾಗುತ್ತದೆ. ಆಗ ಅವರು ತಮ್ಮ ಮನೆಯಿಂದ 35 ಕಿ.ಮೀ ಪ್ರಯಾಣಕ್ಕೆ 2,000 ರೂ.ಗಳ ವೆಚ್ಚದ ಖಾಸಗಿ ವ್ಯಾನ್ ಬಾಡಿಗೆಗೆ ಪಡೆದು ಹೋಗಬೇಕಾಗುತ್ತದೆ.

ಖರ್ಚುಗಳು ಹೆಚ್ಚುತ್ತಿವೆ ಜೊತೆಗೆ ಕಿಶನ್‌ ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ. “ಈ ಕೇಸು ಮುಗಿಯದೆ ನಾನು ಹೇಗೆ ವಲಸೆ ಹೋಗುವುದು? ಆದರೆ ದುಡಿಯದೆ ಮನೆ ನಡಸಲು ಸಾಧ್ಯವಿಲ್ಲ” ಎಂದು ಅವರು ಹೇಳುತ್ತಾರೆ. “ಬಂಜಾಡಿಯಾ ಗುಂಪು ನನಗೆ ಐದು ಲಕ್ಷ ಪಡೆದು ಕೇಸ್‌ ವಾಪಸ್‌ ಪಡೆಯುವಂತೆ ಹೇಳಿತು. ಸರಪಂಚ್‌ ಕೂಡಾ ʼಹಣ ತೆಗೆದುಕೋʼ ಎಂದರು. ಆದರೆ ನಾನು ಬೇಡ ಎಂದೆ! ಕಾನೂನು ಪ್ರಕಾರ ಅವನು ಶಿಕ್ಷೆಯನ್ನು ಅನುಭವಿಸಲಿ.”

ತನ್ನ ಮನೆಯ ಮಣ್ಣಿನ ನೆಲದ ಮೇಲೆ ಕುಳಿತಿರುವ ಈಗ 19 ವರ್ಷದ ದಿಯಾ, ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ಅವರ ಕೂದಲು ಈಗ ಒಂದು ಇಂಚಿನಷ್ಟು ಉದ್ದವಾಗಿ ಬೆಳೆದಿದೆ. "ಅವರು ನನಗೆ ಏನು ಮಾಡಬೇಕೆಂದಿದ್ದರೋ ಅದನ್ನು ಮಾಡಿದರು. ಭಯಪಡಲು ಏನು ಇದೆ? ನಾನು ಹೋರಾಡುತ್ತೇನೆ. ಇಂತಹದ್ದನ್ನು ಮಾಡಿದರೆ ಅದರ ಪರಿಣಾಮ ಹೇಗಿರುತ್ತದೆನ್ನುವುದು ಅವನಿಗೆ ತಿಳಿಯಬೇಕು. ಆಗಲಷ್ಟೇ ಅವನು ಇನ್ನೊಂದು ಸಲ ಇಂತಹದ್ದನ್ನು ಮಾಡುವ ಮೊದಲು ಹೆದರುತ್ತಾನೆ."

ಎತ್ತರಿಸಿದ ದನಿಯಲ್ಲಿ ಅವರು ಹೇಳುತ್ತಾರೆ “ಅವನಿಗೆ ಶಿಕ್ಷೆಯಾಗಬೇಕು.”

ಈ ಕಥಾನಕವು ಭಾರತದಲ್ಲಿ ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರದಿಂದ (ಎಸ್‌ಜಿಬಿವಿ) ಸಂತ್ರಸ್ತರಾದವರ ಆರೈಕೆಗೆ ಇರುವ ಸಾಮಾಜಿಕ, ಸಾಂಸ್ಥಿಕ ಮತ್ತು ರಚನಾತ್ಮಕ ಅಡೆತಡೆಗಳನ್ನು ಕೇಂದ್ರವಾಗಿರಿಸಿಕೊಂಡು ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯ ಭಾಗವಾಗಿದೆ. ಇದು ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗವಾಗಿದೆ.

ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಅವರ ಗುರುತನ್ನು ರಕ್ಷಿಸುವ ಉದ್ದೇಶದಿಂದ ಬದಲಾಯಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Priti David

ਪ੍ਰੀਤੀ ਡੇਵਿਡ ਪੀਪਲਜ਼ ਆਰਕਾਈਵ ਆਫ਼ ਇੰਡੀਆ ਦੇ ਇਕ ਪੱਤਰਕਾਰ ਅਤੇ ਪਾਰੀ ਵਿਖੇ ਐਜੁਕੇਸ਼ਨ ਦੇ ਸੰਪਾਦਕ ਹਨ। ਉਹ ਪੇਂਡੂ ਮੁੱਦਿਆਂ ਨੂੰ ਕਲਾਸਰੂਮ ਅਤੇ ਪਾਠਕ੍ਰਮ ਵਿੱਚ ਲਿਆਉਣ ਲਈ ਸਿੱਖਿਅਕਾਂ ਨਾਲ ਅਤੇ ਸਮਕਾਲੀ ਮੁੱਦਿਆਂ ਨੂੰ ਦਸਤਾਵੇਜਾ ਦੇ ਰੂਪ ’ਚ ਦਰਸਾਉਣ ਲਈ ਨੌਜਵਾਨਾਂ ਨਾਲ ਕੰਮ ਕਰਦੀ ਹਨ ।

Other stories by Priti David
Illustration : Priyanka Borar

ਪ੍ਰਿਯੰਗਾ ਬੋਰਾਰ ਨਵੇਂ ਮੀਡਿਆ ਦੀ ਇੱਕ ਕਲਾਕਾਰ ਹਨ ਜੋ ਅਰਥ ਅਤੇ ਪ੍ਰਗਟਾਵੇ ਦੇ ਨਵੇਂ ਰੂਪਾਂ ਦੀ ਖੋਜ ਕਰਨ ਲਈ ਤਕਨੀਕ ਦੇ ਨਾਲ਼ ਪ੍ਰਯੋਗ ਕਰ ਰਹੀ ਹਨ। ਉਹ ਸਿੱਖਣ ਅਤੇ ਖੇਡ ਲਈ ਤਜਰਬਿਆਂ ਨੂੰ ਡਿਜਾਇਨ ਕਰਦੀ ਹਨ, ਇੰਟਰੈਕਟਿਵ ਮੀਡਿਆ ਦੇ ਨਾਲ਼ ਹੱਥ ਅਜਮਾਉਂਦੀ ਹਨ ਅਤੇ ਰਵਾਇਤੀ ਕਲਮ ਅਤੇ ਕਾਗਜ਼ ਦੇ ਨਾਲ਼ ਵੀ ਸਹਿਜ ਮਹਿਸੂਸ ਕਰਦੀ ਹਨ।

Other stories by Priyanka Borar
Series Editor : Anubha Bhonsle

ਅਨੁਭਾ ਭੋਂਸਲੇ 2015 ਦੀ ਪਾਰੀ ਫੈਲੋ, ਇੱਕ ਸੁਤੰਤਰ ਪੱਤਰਕਾਰ, ਇੱਕ ਆਈਸੀਐਫਜੇ ਨਾਈਟ ਫੈਲੋ, ਅਤੇ ਮਨੀਪੁਰ ਦੇ ਮੁਸ਼ਕਲ ਇਤਿਹਾਸ ਅਤੇ ਆਰਮਡ ਫੋਰਸਿਜ਼ ਸਪੈਸ਼ਲ ਪਾਵਰਜ਼ ਐਕਟ ਦੇ ਪ੍ਰਭਾਵ ਬਾਰੇ ਇੱਕ ਕਿਤਾਬ 'ਮਾਂ, ਕਿੱਥੇ ਮੇਰਾ ਦੇਸ਼?' ਦੀ ਲੇਖਿਕਾ ਹਨ।

Other stories by Anubha Bhonsle
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru