ಏಪ್ರಿಲ್ 19, 2024ರಂದು ಮನೋಹರ್ ಎಲವರ್ತಿಯವರು ಬೆಂಗಳೂರಿನ ಅತಿದೊಡ್ಡ ಕೊಳೆಗೇರಿಯಾದ ದೇವರ ಜೀವನಹಳ್ಳಿಯಲ್ಲಿ ಕ್ವೀರ್ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಜ್ಜಾಗಿದ್ದರು. ಎಲವರ್ತಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಹೋರಾಡುವ ಗುಂಪಾದ ಸಂಗಮದ ಸ್ಥಾಪಕರಲ್ಲಿ ಒಬ್ಬರು. ಇವರು ಬೆಲೆಯೇರಿಕೆ, ನಿರುದ್ಯೋಗ ಮತ್ತು ಜಾತ್ಯತೀತತೆಯಂತಹ ವಿಶಾಲ ಸಾಮಾಜಿಕ ಕಾಳಜಿಗಳ ಜೊತೆಗೆ ಎಲ್ಜಿಬಿಟಿಕ್ಯೂಐಎ + (ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‌ಜೆಂಡರ್, ಕ್ವೀರ್, ಇಂಟರ್ಸೆಕ್ಸ್ ಮತ್ತು ಅಸೆಕ್ಷುವಲ್ "+" ಎಂದರೆ ಸಂಕ್ಷಿಪ್ತಾಕ್ಷರಗಳಲ್ಲಿ ಇಲ್ಲದ ಇತರ ಎಲ್ಲಾ ಗುರುತುಗಳು) ಸಮುದಾಯಗಳ ಸಮಸ್ಯೆಗಳನ್ನು ಚರ್ಚಿಸಲು ಅವರು ಯೋಜಿಸಿದ್ದರು. ಅವರು ಸಂವಾದವನ್ನು ಮುನ್ನಡೆಸಲು ಜೆಂಡರ್ ಎಂಡ್ ಸೆಕ್ಷುವಲ್ ಮೈನಾರಿಟಿ ಫಾರ್ ಸೆಕ್ಯುಲರ್ ಎಂಡ್ ಕಾನ್ಸ್ಟಿಟ್ಯೂಷನಲ್ ಡೆಮಾಕ್ರಸಿ (ಜಿಎಸ್‌ಎಮ್) ಸಂಘಟನೆಯೊಂದಿಗೆ ಸೇರಿಕೊಂಡರು.
ಕಾಕತಾಳೀಯವೆನ್ನುವಂತೆ ಅಂದೇ ಭಾರತದ ಕೆಲವು ಪ್ರದೇಶಗಳು 2024ರ ಸಾರ್ವತ್ರಿಕ ಚುನಾವಣೆಗೆ ಮತ ಚಲಾಯಿಸುತ್ತಿದ್ದವು, ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಚುನಾವಣೆಗೆ ಒಂದು ವಾರ ಬಾಕಿಯಿತ್ತು.
ಎಲವರ್ತಿ ಪ್ರಚಾರ ಆರಂಭಿಸುತ್ತಿದ್ದಂತೆಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) 10 ಜನರು ಕೇಸರಿ ಶಾಲು ಮತ್ತು ಪಕ್ಷದ ಚಿಹ್ನೆಯನ್ನು ಧರಿಸಿ ಡಿಜೆ ಹಳ್ಳಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದೇವರ ಜೀವನಹಳ್ಳಿಯ ಕಿರಿದಾದ ಗಲ್ಲಿಗಳಲ್ಲಿ ಅವರನ್ನು ಮತ್ತು ನನ್ನನ್ನು (ಉದ್ದೇಶಿತ ಪ್ರಚಾರವನ್ನು ವರದಿ ಮಾಡುವ ಪತ್ರಕರ್ತರು) ಸುತ್ತುವರೆದರು. ಇಲ್ಲಿನ ಹೆಚ್ಚಿನ ಮತದಾರರು ಗ್ರಾಮೀಣ ವಲಸಿಗರು. ಮತ್ತು ಅವರಲ್ಲಿ ಅನೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.
ಅಲ್ಲಿದ್ದ ಬಿಜೆಪಿ ಸದಸ್ಯರಲ್ಲೊಬ್ಬರು “ನೀವೆಲ್ಲ ಕಾಂಗ್ರೆಸ್ ಏಜೆಂಟರು” ಎಂದು ಕೂಗಿದರು. ನಂತರ ಅಲ್ಲಿ ಜಿಎಸ್‌ಎಮ್ ಪ್ರಚಾರ ಆಂದೋಲನವನ್ನು ವಿರೋಧಿಸಲೆಂದು ಸೇರಿದವರೂ ಇದರಿಂದ ಪ್ರಚೋದಿತರಾದರು. ನಂತರ ಬಿಜೆಪಿಯವರು ಜಿಎಸ್‌ಎಮ್ ಕರಪತ್ರಗಳನ್ನು ಪ್ರದರ್ಶಿಸುತ್ತಾ “ಇವು ಕಾನೂನು ಬಾಹಿರ”ಘೋಷಿಸಿದರು.











