ಒಂದು ನಿಯಮಿತ ಗಾತ್ರದ ಪಶ್ಮಿನಾ ಶಾಲಿಗೆ ಬೇಕಾಗುವಷ್ಟು ದಾರವನ್ನು ನೇಯಲು ಫಹ್ಮೀದಾ ಬಾನೊ ಅವರಿಗೆ ಒಂದು ತಿಂಗಳಷ್ಟು ಸಮಯ ಬೇಕಾಗುತ್ತದೆ. ಜೇಡರ ಬಲೆಯ ಎಳೆಯಂತಹ ಚಾಂಗ್ತಂಗಿ ಮೇಕೆಯ ಉಣ್ಣೆಯನ್ನು ಬೇರ್ಪಡಿಸಿ ನೇಯುವುದು ಬಹಳ ಪ್ರಯಾಸಕರ ಮತ್ತು ಸೂಕ್ಷ್ಮ ಕೆಲಸವಾಗಿದೆ. 50 ವರ್ಷ ವಯಸ್ಸಿನ ಈ ಸೂಕ್ಷ್ಮ ಕುಶಲಕರ್ಮಿ ತಾನು ತಿಂಗಳಿಗೆ 1,000 ರೂಪಾಯಿ ದುಡಿಯುವ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ. “ದಿನವಿಡೀ ನಿರಂತರವಾಗಿ ದುಡಿದರೆ ದಿನವೊಂದಕ್ಕೆ 60 ರೂಪಾಯಿಗಳಷ್ಟನ್ನು ಗಳಿಸಬಹುದು” ಎಂದು ಅವರು ಹೇಳುತ್ತಾರೆ.
ಈ ಮೊತ್ತವು ಸೂಜಿ ಕಸೂತಿ ಕೆಲಸ ಮತ್ತು ನೇಯ್ದ ಮಾದರಿಗಳ ಜಟಿಲತೆಯನ್ನು ಅವಲಂಬಿಸಿ 8,000 ರೂ.ಗಳಿಂದ 1,00,000 ರೂ.ಗಳವರೆಗೆ ಬೆಲೆಬಾಳುವ ಶಾಲು ಮಾರಾಟವಾಗುವ ಬೆಲೆಯ ಅತ್ಯಲ್ಪ ಭಾಗವಾಗಿದೆ.
ಸಾಂಪ್ರದಾಯಿಕವಾಗಿ, ಪಶ್ಮಿನಾ ದಾರದ ನೂಲುವ ಕೆಲಸವನ್ನು ಮಹಿಳೆಯರು ಮನೆಕೆಲಸಗಳ ನಡುವೆ ಮಾಡುತ್ತಿದ್ದರು. ಫಹ್ಮೀದಾ ಅವರಂತಹ ಕುಶಲಕರ್ಮಿಗಳಿಗೆ ಸಿಗುತ್ತಿರುವ ಕಡಿಮೆ ವೇತನದ ಕಾರಣಕ್ಕೆ ಹೊಸಬರು ಈ ರಂಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಶ್ರೀನಗರದ ನಿವಾಸಿ ಫಿರ್ದೌಸಾ ಮದುವೆಗೆ ಮೊದಲು ಉಣ್ಣೆ ನೇಯುವ ಕೆಲಸ ಮಾಡುತ್ತಿದ್ದರು. ನಂತರ ಕುಟುಂಬ ಮತ್ತು ಮನೆಯ ಕೆಲಸಗಳಲ್ಲಿ ಅವರು ಕಳೇದು ಹೋದರು. ತನ್ನ ಯೌವನದ ದಿನಗಳನ್ನು ನೆನಪಿಸಿಕೊಳ್ಳುತ್ತಾ, “ಕುಟುಂಭದ ಹಿರಿಯರು ಕೆಲಸಕ್ಕೆ ಬಾರದ ಮಾತಿನಲ್ಲಿ ತೊಡಗುವ ಬದಲು ನಮ್ಮ ಮನಸ್ಸನ್ನು ಕೆಲಸದಲ್ಲಿ ಮಗ್ನವಾಗಿಸುವ ಇಂತಹ ಕೆಲಸಗಳಲ್ಲಿ ತೊಡಗಲು ಒತ್ತಾಯಿಸುತ್ತಿದ್ದರು” ಎಂದು ಅವರು ಹೇಳುತ್ತಾರೆ. ಅವರ ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು ತಮ್ಮ ಶಿಕ್ಷಣ ಮತ್ತು ಮನೆಕೆಲಸಗಳ ನಡುವೆ ಸಮಯ ಸಿಗದ ಕಾರಣ ನೂಲುವ ಕೆಲಸ ಮಾಡುತ್ತಿಲ್ಲ, ಜೊತೆಗೆ ಇದರಲ್ಲಿ ಅಷ್ಟು ಸಂಪಾದನೆಯೂ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣ.
ನೂಲುವುದು ಕಾಶ್ಮೀರಿ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಹೇಳುತ್ತಾ ಫಿರ್ದೌಸಾ, ಸ್ಥಳೀಯ ಖಾದ್ಯ, ನದ್ರು (ಕಮಲದ ದಂಟು) ಮತ್ತು ನೂಲುವಿಕೆಯ ನಡುವಿನ ಸಂಬಂಧವನ್ನು ಉಲ್ಲೇಖಿಸುತ್ತಾರೆ: "ಹಿಂದೆ ಮಹಿಳೆಯರು ಕಮಲದ ದಂಟಿನ ನಾರಿನಷ್ಟೇ ಉತ್ತಮವಾದ ದಾರವನ್ನು ನೇಯಲು ಪರಸ್ಪರ ಸ್ಪರ್ಧಿಸುತ್ತಿದ್ದರು." ಎಂದರು










