ನಾವು ಸತ್ಯಪ್ರಿಯಾರ ಕಥೆಯನ್ನು ಕೇಳಲು ಆರಂಭಿಸುವ ಮೊದಲು, ನಾನು ನನ್ನ ಪೆರಿಯಮ್ಮನ ಕುರಿತು ಒಂದಷ್ಟು ಹೇಳಬೇಕು. ನನಗೆ 12 ವರ್ಷವಿರುವಾಗ, ನನ್ನ ಪೆರಿಯಪ್ಪ ಮತ್ತು ಪೆರಿಯಮ್ಮ [ದೊಡ್ಡಪ್ಪ ಮತ್ತು ದೊಡ್ಡಮ್ಮ] ಮನೆಯಲ್ಲಿ ವಾಸಿಸುತ್ತಿದ್ದೆ. ಆಗ ನಾನು 6ನೇ ತರಗತಿಯಲ್ಲಿದ್ದೆ. ನಾನು ಅವರನ್ನು ಅಮ್ಮ ಮತ್ತು ಅಪ್ಪ ಎಂದೇ ಕರೆಯುತ್ತಿದ್ದೆ. ಅವರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಮ್ಮ ಕುಟುಂಬವೂ ರಜಾ ದಿನಗಳಲ್ಲಿ ಅವರ ಮನೆಗೆ ಆಗಾಗ ಹೋಗುವುದಿತ್ತು.
ನನ್ನ ಪೆರಿಯಮ್ಮ [ದೊಡ್ಡಮ್ಮ] ನನ್ನ ಬದುಕಿಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿರುವ ವ್ಯಕ್ತಿ. ಅವರು ನಮ್ಮ ಅಗತ್ಯಗಳನ್ನು ಉದಾರವಾಗಿ ನೋಡಿಕೊಳ್ಳುತ್ತಿದ್ದರು, ಸದಾ ಹೊತ್ತಿಗೆ ಸರಿಯಾಗಿ ಊಟಕ್ಕೆ ಹಾಕುತ್ತಿದ್ದರು. ನಾನು ಶಾಲೆಯಲ್ಲಿ ಇಂಗ್ಲಿಷ್ ಕಲಿಯಲು ಆರಂಭಿಸಿದ ಮೊದಲಿಗೆ ನನಗೆ ಮೂಡುತ್ತಿದ್ದ ಸಂದೇಹಗಳನ್ನು ಪರಿಹರಿಸುತ್ತಿದ್ದವರು ಸಹ ದೊಡ್ಡಮ್ಮನೇ ಆಗಿದ್ದರು. ಅವರು ಅಡುಗೆ ಮನೆಯಲ್ಲಿ ಕೆಲಸದಲ್ಲಿರುವಾಗ ನಾನು ಹೋಗಿ ಅವರಲ್ಲಿ ಪದೇ ಪದೇ ಸಹಾಯ ಕೇಳುತ್ತಿದ್ದೆ. ನನಗೆ ಕೆಲವು ಪದಗಳ ಸ್ಪೆಲ್ಲಿಂಗ್ ತಿಳಿಯುತ್ತಿರಲಿಲ್ಲ, ಆಗೆಲ್ಲ ಅವರೇ ನನಗೆ ಸಹಾಯ ಮಾಡುತ್ತಿದ್ದರು. ಅಂದಿನಿಂದಲೂ ಅವರೆಂದರೆ ನನಗೆ ಪ್ರೀತಿ.
ಮುಂದೆ ಸ್ತನ ಕ್ಯಾನ್ಸರಿನಿಂದ ಅವರು ತೀರಿಕೊಂಡರು. ಆದರೆ ಒಂದು ದಿನವೂ ಅವರು ಅವರಿಗಾಗಿ ಬದುಕಲಿಲ್ಲ ಎಂದೇ ಹೇಳಬೇಕು. ಅವರ ಬಗ್ಗೆ ಹೇಳಲು ಬಹಳಷ್ಟಿದೆ. ಆದರೆ ಇಲ್ಲಿಗೆ ನಿಲ್ಲಿಸುತ್ತೇನೆ.

















