“ರಾಜಕಾರಣಿಗಳು ನಮ್ಮ ಊರಿಗೆ ಬಂದಾಗ ನಿಲ್ಲುವುದೇ ಇಲ್ಲ. ನಮ್ಮತ್ತ ಕೈ ಬೀಸಿ ಅವರ ಕಾರುಗಳಲ್ಲಿ ಹಾರಿ ಹೋಗುತ್ತಾರೆ. ಅವರ 50 ಅಡಿ ಸಮೀಪದಲ್ಲಿಯೂ ನಮ್ಮನ್ನು ಬಿಡುವುದಿಲ್ಲ” ಎನ್ನುತ್ತಾರೆ ಪುಟ್ಟಣ್ಣ.
ಪುಟ್ಟಣ್ಣ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡಿರುವ 11 ವರ್ಷಗಳಲ್ಲಿ ಎರಡು ರಾಷ್ಟ್ರೀಯ ಚುನಾವಣೆಗಳು ಬಂದು ಹೋಗಿವೆ. ಮೂರನೆಯದು ಇನ್ನೇನು ಬರಲಿದೆ. ತುಮಕೂರಿನಲ್ಲಿ ಇದೇ ವಾರ ಏಪ್ರಿಲ್ 18 ರಂದು ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲಿದೆ.
ಈ ಕ್ಷೇತ್ರದಲ್ಲಿ ಎರಡು ಘಟಾನುಘಟಿಗಳ ನಡುವೆ ಹೋರಾಟ ನಡೆಯಲಿದೆ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಮತ್ತು ನಾಲ್ಕು ಬಾರಿ ಸಂಸದರಾಗಿರುವ ಜಿ.ಎಸ್. ಬಸವರಾಜ್, 77, ಮತ್ತು ಕಾಂಗ್ರೆಸ್-ಜನತಾ ದಳ (ಜಾತ್ಯತೀತ) ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಹಾಗು ಮಾಜಿ ಪ್ರಧಾನಿ, 86 ವರ್ಷ ವಯಸ್ಸಿನ ಎಚ್.ಡಿ. ದೇವೇಗೌಡರು.
ಆದರೆ ಮಧುಗಿರಿಯ ನೈರ್ಮಲ್ಯ ಕಾರ್ಯಕರ್ತರನ್ನು ಯಾರು ಉತ್ತಮ ಪಂತ ಎಂದು ಕೇಳಿದರೆ, ನಮಗೆ ನೀರಸ ಪ್ರತಿಕ್ರಿಯೆಗಳು ದೊರೆಯುತ್ತವೆ. ಅವರಲ್ಲಿ, 45 ವರ್ಷದ ಪುಟ್ಟಣ್ಣ ಅವರಂತಹ ಅನೇಕರು ಮಾದಿಗ ದಲಿತ ಸಮುದಾಯಕ್ಕೆ ಸೇರಿದವರು. ಶೋಷಿತ ಉಪಜಾತಿಗೆ ಸೇರಿದ ಇವರಿಗೆ, ಕೆಲಸದ ಆಯ್ಕೆಗಳು ಹೆಚ್ಚಾಗಿ ಮಲ ಹೊರುವುದಕ್ಕೇ ಸೀಮಿತವಾಗಿದೆ. (ಈ ಕಥೆಗಾಗಿ ಸಂದರ್ಶಿಸಿದ ಎಲ್ಲಾ ಕೆಲಸಗಾರರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸಬೇಕೆಂದು ಬಯಸಿದ್ದಾರೆ.) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಆಗಸ್ಟ್ 2017 ರಲ್ಲಿ ನಿಯೋಜಿಸಿದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತಿ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಹೊಂದಿದೆ. ಇವರ ಅಮಾನವೀಯ ಉದ್ಯೋಗ ಸ್ಥಿತಿ, ಕಳಪೆ ವೇತನ ಮತ್ತು ಅನೇಕ ವರ್ಷಗಳಿಂದಿರುವ ವಸತಿಯ ಕೊರತೆಯು, ರಾಜಕೀಯ ನಾಯಕರ ಮೇಲೆ ಹೆಚ್ಚಿನ ನಂಬಿಕೆ ಇಲ್ಲದಿರುವುದಕ್ಕೆ ಕೆಲವು ಕಾರಣಗಳಾಗಿವೆ.
“ರಾಷ್ಟ್ರೀಯ ಚುನಾವಣಾ ಅಭ್ಯರ್ಥಿಗಳಿಗೆ, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಒಂದು ಸಮಂಜಸ ವಿಷಯವಲ್ಲ,” ಎಂದು ದಲಿತ ಸಮುದಾಯಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ತುಮಕೂರು ಮೂಲದ ತಮಟೆ: ಸೆಂಟರ್ ಫಾರ್ ರೂರಲ್ ಎಂಪವರ್‌ಮೆಂಟ್, ಇದರ ಸಂಸ್ಥಾಪಕರಾದ ಕೆ.ಬಿ. ಓಬಳೇಶ್ ಹೇಳುತ್ತಾರೆ. "ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ 2011 ರ ಪ್ರಕಾರ, ತುಮಕೂರಿನ 3,373 [ನೈರ್ಮಲ್ಯ] ಕಾರ್ಮಿಕರ ಸಂಖ್ಯೆ, ಅವರ ಮತಗಳ ಮೇಲೆ ಪರಿಣಾಮ ಬೀರುವಷ್ಟು ದೊಡ್ಡದಲ್ಲ." ಕ್ಷೇತ್ರದ ಒಟ್ಟು ಜನಸಂಖ್ಯೆ, 26.78 ಲಕ್ಷದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳದ್ದು ಕೇವಲ ಶೇಕಡ ಒಂದರಷ್ಟಿದ್ದು, ಯಾವೊಬ್ಬ ಜನಪ್ರತಿನಿಧಿಯೂ ಅವರ ಕಾಳಜಿಯತ್ತ ಗಮನ ಹರಿಸದಿರುವುದು ಕಾರ್ಮಿಕರ ಹತಾಶೆಯನ್ನು ಹೆಚ್ಚಿಸಿದೆ ಎಂದು ಓಬಳೇಶ್ ಹೇಳುತ್ತಾರೆ.
ಇಷ್ಟು ವರ್ಷ ಶ್ರದ್ಧೆಯಿಂದ ಮತದಾನ ಮಾಡಿದರೂ ಪುಟ್ಟಣ್ಣನಂತವರ ಬದುಕು ಬದಲಾಗಿಲ್ಲ. ಅವರು ಮತ್ತು ಇತರ ನೈರ್ಮಲ್ಯ ಕಾರ್ಯಕರ್ತರು, ಏಳು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸ್ವಲ್ಪ ಬದಲಾವಣೆ ಆಯಿತು, ಆದರೆ ಅದು ಉಳಿಯಲಿಲ್ಲ ಎಂದು ಹೇಳುತ್ತಾರೆ. "2012 ರಲ್ಲಿ, ನಾವು ಇಂತಹ ಕೆಲಸವನ್ನು ಮಾಡಲು ರಕ್ಷಣಾತ್ಮಕ ಸಾಧನಗಳನ್ನು ಪಡೆದೆವು - ಸರ್ಕಾರದಿಂದ ಅಲ್ಲ, ತಮಟೆಯಿಂದ" ಎಂದು ನೈರ್ಮಲ್ಯ ಕಾರ್ಯಕರ್ತರಾದ ಮಂಜುನಾಥ್ ಹೇಳುತ್ತಾರೆ. ಕಾರ್ಮಿಕರಿಗೆ ಮುಖವಾಡಗಳು, ಕೈಗವಸುಗಳು ಮತ್ತು ಗಂಬೂಟ್‌ಗಳಂತಹ ಸುರಕ್ಷತಾ ಸಾಧನಗಳನ್ನು ಸರ್ಕಾರವು ಒದಗಿಸಿದೆ ಎಂದು ಖಚಿತಪಡಿಸಿಕೊಳ್ಳಲು ತಮಟೆ ಪ್ರಯತ್ನಿಸಿತು, ಆದರೆ ಅದು ಅಂತಿಮವಾಗಿ ನಿಂತುಹೋಯಿತು. "ಸಾವಿರಾರು ಕಾರ್ಮಿಕರಿಗೆ ಈ ರೀತಿಯ ಉಪಕರಣಗಳನ್ನು ಒಂದು ಎನ್‌ಜಿಒ ಎಷ್ಟು ಸಮಯದವರೆಗೆ ನೀಡಬಹುದು?" ಎಂದು ಪುಟ್ಟಣ್ಣ ಪ್ರಶ್ನಿಸುತ್ತಾರೆ.
ಏಪ್ರಿಲ್ 4 ರಂದು, ಸಫಾಯಿ ಕರ್ಮಚಾರಿ ಆಂದೋಲನ, ಮಲ ಹೊರುವ ಪದ್ಧತಿಯನ್ನು ನಿರ್ಮೂಲಿಸಲು ಹೋರಾಡುತ್ತಿರುವ ರಾಷ್ಟ್ರವ್ಯಾಪಿ ಆಂದೋಲನವು, ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಪಟ್ಟಿ ಮಾಡಲಾದ ಬೇಡಿಕೆಗಳಲ್ಲಿ, ಭಾರತೀಯ ಸಂವಿಧಾನದ 21ನೇ ವಿಧಿಯ ಅನುಗುಣವಾಗಿ, ಎಲ್ಲಾ ನೈರ್ಮಲ್ಯ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ, ಗೌರವಾನ್ವಿತ ಉದ್ಯೋಗ ಮತ್ತು ಜೀವನೋಪಾಯಕ್ಕೆ ಅವಕಾಶಗಳು ಮತ್ತು ಇತರೆ ಯೋಜನೆಗಳು ಹಾಗೂ ಸವಲತ್ತುಗಳನ್ನು ಒಳಗೊಂಡಿದೆ. ಕೇಂದ್ರ ಬಜೆಟ್‌ನ 1 ಪ್ರತಿಶತವನ್ನು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಕಲ್ಯಾಣಕ್ಕಾಗಿ ಮಾತ್ರ ಮೀಸಲಿಡಬೇಕು ಹಾಗು ಅದರ ಬಿಡುಗಡೆ ಮತ್ತು ಪುನರ್ವಸತಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತದೆ.
ಮಲ ಹೊರುವ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 , ಇದರ ಪ್ರಕಾರ, ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ನೇಮಿಸಿಕೊಳ್ಳುವುದು ಕಾನೂನುಬಾಹಿರ. ಹಾಗೆ ಮಾಡುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಕಾರ್ಮಿಕರು ತಮ್ಮ ಕೈಗಳಿಂದ ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಆದರೂ, ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ, 2011, ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ 1.82 ಲಕ್ಷಕ್ಕೂ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿದ್ದಾರೆ ಮತ್ತು ದಕ್ಷಿಣ ಭಾರತದಲ್ಲಿ ಕರ್ನಾಟಕವು ಅಂತಹ ಕಾರ್ಮಿಕರನ್ನು ಹೊಂದಿದೆ ಎಂದು ಹೇಳುತ್ತದೆ.
“ಚುನಾವಣೆ ಸಮಯದಲ್ಲಿ, ಎಲ್ಲರೂ ಲಂಚದೊಂದಿಗೆ ಬರುತ್ತಾರೆ, ಮತಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ಚುನಾವಣೆಗೆ ಮುನ್ನ ನಮ್ಮ ಪಾದ ಮುಟ್ಟುವ ಮಟ್ಟಕ್ಕೆ ಹೋಗುತ್ತಾರೆ, ಆದರೆ ಅವರು ಶೀಘ್ರದಲ್ಲೇ ಕಣ್ಮರೆಯಾಗುತ್ತಾರೆ ಎಂದು ಪೌರಕಾರ್ಮಿಕರಾದ ಸರೋಜಮ್ಮ, 39, ಹೇಳುತ್ತಾರೆ. ಪುಟ್ಟಣ್ಣ ಮಾತನಾಡುತ್ತಾ, “ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ನಮಗೆ ಭೇಟಿ ನೀಡಿ ಸ್ವಲ್ಪ ಹಣವನ್ನು ನೀಡುತ್ತಾರೆ, ಪ್ರತಿ ಮನೆಗೆ ಸುಮಾರು 100 ರೂ. ಮಹಿಳೆಯರಿಗೆ ತಲಾ ಒಂದು ಸೀರೆ ಮತ್ತು ಪುರುಷರಿಗೆ ಕಾಲು ಬಾಟಲಿ ಮದ್ಯ ದೊರೆಯುತ್ತದೆ.”
ಪುಟ್ಟಣ್ಣ ಕೆಲಸಕ್ಕೆ ಹೋದಾಗ ಈ ಮದ್ಯ ಉಪಯೋಗಕ್ಕೆ ಬರುತ್ತದೆ. "ಚರಂಡಿಗೆ ಇಳಿಯುವ ಮೊದಲು ನಾನು ಮದ್ಯವನ್ನು ಸೇವಿಸಬೇಕಾದ ದಿನಗಳಿವೆ" ಎಂದು ಅವರು ಹೇಳುತ್ತಾರೆ. ಮಧುಗಿರಿಯಲ್ಲಿ ಸುಮಾರು 400 ಮನೆಗಳು ಕಸ ವಿಲೇವಾರಿಗೆ ಇವರನ್ನೇ ಅವಲಂಬಿಸಿವೆ. ಪುರಸಭೆಯ ದಾಖಲೆಗಳಲ್ಲಿ, ಅವರ ಕೆಲಸವು ತ್ಯಾಜ್ಯವನ್ನು ಸಂಗ್ರಹಿಸುವುದು, ಆದರೆ ನಿಜ ಜೀವನದಲ್ಲಿ, ಅವರ ಕೆಲಸವು ಕಾನೂನುಬಾಹಿರವಾದದ್ದು.
ತೆರೆದ ಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಲು ಸಹಾಯ ಮಾಡುವ ಒಳಚರಂಡಿ 'ಜೆಟ್ಟಿಂಗ್' ಯಂತ್ರವನ್ನು ಸಹ ಅವರು ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ, ಯಂತ್ರದ ಪೈಪ್ ಅರೆ-ಘನ ಪದಾರ್ಥವನ್ನು ಹೀರುವುದಿಲ್ಲ, ಆದ್ದರಿಂದ ಪುಟ್ಟಣ್ಣ ಚರಂಡಿಗೆ ಇಳಿದು ತಮ್ಮ ದೇಹವನ್ನು ಉಪಯೋಗಿಸಿ ಕಸವನ್ನು ಕಲಕುತ್ತಾರೆ, ಇದರಿಂದ ತ್ಯಾಜ್ಯವು ಹೆಚ್ಚು ಕರಗುತ್ತದೆ ಹಾಗು ಯಂತ್ರವು ಕಸವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪುಟ್ಟಣ್ಣ ಮತ್ತು ಮಂಜುನಾಥ್ ಈ ಕೆಲಸವನ್ನು ಪ್ರಾರಂಭಿಸಲು ಮಧ್ಯವು ಸಹಾಯ ಮಾಡುತ್ತದೆ. "ನಾನು ಇಂದು ಬೆಳಿಗ್ಗೆ 6 ಗಂಟೆಗೆ ಕುಡಿಯಲು ಪ್ರಾರಂಭಿಸಿದೆ" ಎಂದು ಪುಟ್ಟಣ್ಣ ಹೇಳುತ್ತಾರೆ. "ಒಮ್ಮೆ ಮತ್ತಿನಲ್ಲಿದ್ದರೆ ನಾನು ಏನನ್ನೂ ಸಹಿಸಿಕೊಳ್ಳಬಲ್ಲೆ."
ಹಾಗಾದರೆ ಕಳೆದ ಐದು ವರ್ಷಗಳಲ್ಲಿ ಇವರಂತಹ ಕಾರ್ಮಿಕರಿಗೆ ಸ್ವಚ್ಛ ಭಾರತ್ ಮಿಷನ್ ಯಾವುದೇ ರೀತಿಯಲ್ಲಿ ಸಹಾಯ ಮಾಡಿದೆಯೇ? "ಸ್ವಚ್ಛ ಭಾರತವು ನಮ್ಮ ಊರಿನ ಸಾಮಾನ್ಯ ಶುಚಿತ್ವವನ್ನು ಸುಧಾರಿಸಿದೆ" ಎಂದು ಮಂಜುನಾಥ್ ಹೇಳುತ್ತಾರೆ. ಸುತ್ತಲಿನ ಇತರ ಕಾರ್ಮಿಕರು ಇದನ್ನು ಒಪ್ಪುತ್ತಾರೆ. “ಐದು ವರ್ಷಗಳ ಹಿಂದೆ ಹುರುಪಿನ ಪ್ರಚಾರದ ನಂತರ, ಇಂದು ಜನರು ಹೆಚ್ಚು ಜಾಗೃತರಾಗಿದ್ದಾರೆ. ಅವರು ತಮ್ಮ ಕಸವನ್ನು ಪ್ರತ್ಯೇಕಿಸುತ್ತಾರೆ, ಇದು ನಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.
ಅವರು ಯೋಜನೆಯ ಯಶಸ್ಸನ್ನು ಒಬ್ಬ ವ್ಯಕ್ತಿಗೆ ಸಲ್ಲಿಸುತ್ತಾರೆ. “ಮೋದಿ ಅವರು ಅತ್ಯುತ್ತಮ. ಅವರು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಬೇಕಾದ ಭಾರತದ ಏಕೈಕ ಪ್ರಧಾನಿ," ಎಂದು ಮಂಜುನಾಥ್ ಹೇಳುತ್ತಾರೆ. "ವಾಸ್ತವವೆಂದರೆ ಮೋದಿ ನಮಗಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ, ಆದರೆ ಸಮಸ್ಯೆಯೆಂದರೆ ಅನೇಕ ಭಾರತೀಯರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ."
ಕಳೆದ ಐದು ವರ್ಷಗಳಲ್ಲಿ ತುಮಕೂರಿನ ಸ್ವಚ್ಛತಾ ಕಾರ್ಮಿಕರ ಬದುಕು ಗಣನೀಯವಾಗಿ ಬದಲಾಗದಿದ್ದರೂ ಅವರಿಗೆ ಪ್ರಧಾನಿಯ ಮೇಲೆ ನಂಬಿಕೆ ಇದೆ. “ಮೋದಿ ಅವರು ಸ್ವಲ್ಪ ಹೆಚ್ಚು ಸಫಾಯಿ ಕರ್ಮಚಾರಿಗಳನ್ನು ನೋಡಿದರೆ, ಅವರು ಆದರ್ಶಪ್ರಾಯರಾಗುವರು. ಆದರೂ ನಮಗೆ ಅವರ ಬಗ್ಗೆ ಸಂತೋಷವಿದೆ”, ಎನ್ನುತ್ತಾರೆ ಸರೋಜಮ್ಮ.
ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಸಫಾಯಿ ಕರ್ಮಚಾರಿಗಳ ಪಾದಗಳನ್ನು ತೊಳೆಯುವ ವೀಡಿಯೊವನ್ನು ಪೋಸ್ಟ್ ಮಾಡಲಾಗಿತ್ತು: “ಈ ಕ್ಷಣಗಳನ್ನು ನನ್ನ ಇಡೀ ಜೀವನ ಸ್ಮರಿಸುತ್ತೇನೆ!” ಮತ್ತು "ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ವಂದಿಸುತ್ತೇನೆ."
ಆದರೆ ಅಂಕಿ ಸಂಖ್ಯೆ ಮಾಹಿತಿಯು ಈ ತೋರಿಕೆಯ ವಿರುದ್ಧವಾಗಿದೆ. ಮಾರ್ಚ್ 2018ರಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿ ಹಾಗೂ ಸ್ವಯಂ ಉದ್ಯೋಗ ಯೋಜನೆಗೆ ನಿಗದಿಪಡಿಸಿದ ನಿಧಿಯಲ್ಲಿ ಕುಸಿತವನ್ನು ತೋರಿಸುವ ಅಂಕಿ ಸಂಖ್ಯೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಯೋಜನೆಗಾಗಿ 2014-15ರಲ್ಲಿ 448 ಕೋಟಿ ರೂ. ಮತ್ತು 2015-16ರಲ್ಲಿ 470 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು , 2016-17ರಲ್ಲಿ ಕೇವಲ 10 ಕೋಟಿ ರೂ. ಮತ್ತು 2017-18ರಲ್ಲಿ 5 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಸಚಿವಾಲಯದ ಪ್ರಕಾರ ಬಜೆಟ್‌ನಲ್ಲಿನ ಈ ಕಡಿತವು ಯೋಜನೆಯನ್ನು ನಡೆಸುತ್ತಿರುವ ರಾಷ್ಟ್ರೀಯ ಸಫಾಯಿ ಕರಮ್‌ಚಾರಿಸ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಶನ್ನಿನ ಈಗಾಗಲೇ ಲಭ್ಯವಿರುವ ಅಧಿಕ ನಿಧಿಯೇ ಕಾರಣ ಎಂದು ಹೇಳಲಾಗಿದೆ. ನಿಗಮವು ಅದೇ ಸಚಿವಾಲಯದ ಅಡಿಯಲ್ಲಿರುವ ಲಾಭರಹಿತ ಕಂಪನಿಯಾಗಿದೆ.
ತುಮಕೂರಿನಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜ್ ಮತ್ತು ಕಾಂಗ್ರೆಸ್-ಜೆಡಿಎಸ್ ಪಕ್ಷದ ದೇವೇಗೌಡರ ನಡುವಿನ ಈ ಚುನಾವಣಾ ಕದನವು ನೈರ್ಮಲ್ಯ ಕಾರ್ಮಿಕರನ್ನು ಉಲ್ಲೇಖಿಸುವುದಿಲ್ಲ. ಇದು ಕಾವೇರಿ ನದಿಯ ಉಪನದಿ ಹೇಮಾವತಿ ವಿವಾದದ ಮೇಲೆ ಕೇಂದ್ರೀಕೃತವಾಗಿದೆ... ಆದರೂ, ನೈರ್ಮಲ್ಯ ಕಾರ್ಯಕರ್ತರು ಉತ್ತಮ ಜೀವನದ ಭರವಸೆಯಲ್ಲಿದ್ದಾರೆ
"ಕಳೆದ ಐದು ವರ್ಷಗಳಲ್ಲಿ, ಜಾಗೃತಿ ಮೂಡಿಸಲು [ಸ್ವಚ್ಛ ಭಾರತ್ ಮಿಷನ್‌ನಂತೆ] ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಿವೆ" ಎಂದು ಬೆಂಗಳೂರಿನ ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರದ ಸಹಾಯಕ ನಿರ್ದೇಶಕ ಚೇತನ್ ಸಿಂಘೈ ಹೇಳುತ್ತಾರೆ. “ಯುಪಿಎ [ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್] ಅಧಿಕಾರಾವಧಿಯಲ್ಲಿ ಇದ್ದಕ್ಕಿಂತ ಹೆಚ್ಚು. ಆದರೆ ಅವರು ಜೀವನವನ್ನು ಪುನರ್ವಸತಿ ಮಾಡಲು ನಿಜವಾದ ಹಣದ ವಿತರಣೆಯಷ್ಟು ವೆಚ್ಚವಾಗುವುದಿಲ್ಲ. ಹಸ್ತಚಾಲಿತ ಸ್ಕ್ಯಾವೆಂಜರ್‌ಗಳಿಗೆ ಖರ್ಚು ಮಾಡಿದ ವೆಚ್ಚ ಅಥವಾ ನಿಜವಾದ ಮೊತ್ತದ ವಿಷಯದಲ್ಲಿ, ಎನ್‌ಡಿಎ [ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್] ಗಣನೀಯವಾಗಿ ಕಡಿಮೆ ಖರ್ಚು ಮಾಡಿದೆ.
ತುಮಕೂರಿನಲ್ಲಿ, ಬಿಜೆಪಿಯ ಬಸವರಾಜ್ ಹಾಗೂ ಕಾಂಗ್ರೆಸ್-ಜೆಡಿಎಸ್‌ನ ದೇವೇಗೌಡರ ನಡುವಿನ ಈ ಚುನಾವಣಾ ಕದನದಲ್ಲಿ ಸ್ವಚ್ಛತಾ ಕಾರ್ಯಕರ್ತರ ಹೆಸರೇ ಇಲ್ಲ. ಇದು ಕಾವೇರಿ ನದಿಯ ಉಪನದಿಯಾದ ಹೇಮಾವತಿ ವಿವಾದದ ಮೇಲೆ ಕೇಂದ್ರೀಕೃತವಾಗಿದೆ. (ಉಪನದಿಯನ್ನು ಅವಲಂಬಿಸಿರುವ ಪಕ್ಕದ ಕ್ಷೇತ್ರವಾದ ಹಾಸನದ ಸಂಸದರಾಗಿದ್ದಾಗ ತುಮಕೂರಿಗೆ ನೀರು ನಿರಾಕರಿಸಲು ದೇವೇಗೌಡರೇ ಕಾರಣ ಎಂದು ನೈರ್ಮಲ್ಯ ಕಾರ್ಯಕರ್ತರು ಭಾವಿಸುತ್ತಾರೆ.) ಹೆಚ್ಚುವರಿಯಾಗಿ, ಇದು ಎರಡು ಪ್ರತಿಸ್ಪರ್ಧಿ ಸಮುದಾಯಗಳ - ಬಸವರಾಜು ಅವರು ಸೇರಿದ ಲಿಂಗಾಯತ ಸಮಾಜ ಹಾಗೂ ಗೌಡರ ಸಮುದಾಯವಾದ ಒಕ್ಕಲಿಗ ಸಮುದಾಯ - ನಡುವಿನ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲಾದ ಜಗಳವಾಗಿದೆ.
ಬಸವರಾಜ್ ಮತ್ತು ಗೌಡರ ಚುನಾವಣಾ ಸಂಘರ್ಷದಲ್ಲಿ ಎಲ್ಲಿಯೂ ಸ್ಥಾನವಿಲ್ಲದಿದ್ದರೂ, ನೈರ್ಮಲ್ಯ ಕಾರ್ಮಿಕರು ಉತ್ತಮ ಜೀವನದ ಭರವಸೆಯಲ್ಲಿದ್ದಾರೆ - ಘನತೆಯುಳ್ಳ ಶಾಶ್ವತ ಉದ್ಯೋಗಗಳು, ಉನ್ನತ ವೇತನ, ಸ್ವಂತ ಮನೆಗಳು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಾವಕಾಶಗಳು. ಮುಂದೊಂದು ದಿನ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಆಶಿಸುತ್ತಾರೆ. ಇದರ ಜೊತೆಗೆ, ನರೇಂದ್ರ ಮೋದಿಯವರ ಭರವಸೆಗಳ ಮೇಲಿನ ಅವರ ಅಚಲ ನಂಬಿಕೆಯು ಏಪ್ರಿಲ್ 18 ರಂದು ಅವರು ಹೇಗೆ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
"ಇಲ್ಲಿ ಏನೂ ಬದಲಾಗಿಲ್ಲವೆಂದು ನಮಗೆ ಅನ್ನಿಸಬಹುದು, ಆದರೆ ಬದಲಾವಣೆ ಸಾಧ್ಯ, ಆದ್ದರಿಂದ ನಾವು ಮತದಾನ ಮಾಡಬೇಕು" ಎಂದು ಪುಟ್ಟಣ್ಣ ಹೇಳುತ್ತಾರೆ. “ಮತ ಚಲಾಯಿಸುವುದು ನನ್ನ ಹಕ್ಕು. ನಾನು ಅದನ್ನು ಏಕೆ ವ್ಯರ್ಥ ಮಾಡಬೇಕು? ”
ಲೇಖಕರು ಪ್ರೀತಿ ಡೇವಿಡ್ ಅವರ ಸಹಾಯಕ್ಕಾಗಿ ಮತ್ತು ನವೀನ್ ತೇಜಸ್ವಿ ಅವರ ಅನುವಾದದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ .
ಅನುವಾದ: ಚೇತನ ವಾಗೀಶ್