“ನನ್ನ ತಾಯಿ ಹಾಡುತ್ತಿದ್ದಾಗ ಕೇಳಿಸಿಕೊಂಡಿದ್ದ ಎರಡು-ಮೂರು ಪದಗಳಷ್ಟೇ ನನಗೆ ನೆನಪಿದೆ” ಎಂದು ಹೌಸಾಬಾಯಿ ದಿಘೆ ಹೇಳಿದರು. ಅದು 1995ನೇ ಇಸವಿ. ಅವರು ಅಂದು ಹೇಮಾ ರಾಯ್ಕರ್ ಮತ್ತು ಗಯ್ ಪೊಯಿಟೆವಿನ್ ಅವರೊಂದಿಗೆ ಮಾತನಾಡುತ್ತಿದ್ದರು. 1980ರ ದಶಕದ ಉತ್ತರಾರ್ಧದಲ್ಲಿ ಗ್ರೈಂಡ್ ಮಿಲ್ ಸಾಂಗ್ಸ್ ಯೋಜನೆ ಆರಂಭಿಸಿದ್ದ ಪುಣೆಯ ಸಾಮಾಜಿಕ ವಿಜ್ಞಾನಿಗಳು ಮತ್ತು ಕಾರ್ಯಕರ್ತರು ಅದರ ಭಾಗವಾಗಿ ತಮ್ಮ ತಂಡದೊಂದಿಗೆ ಮುಲ್ಶಿ ತಾಲ್ಲೂಕಿನ ಭಂಬಾರ್ಡೆ ಗ್ರಾಮದಲ್ಲಿನ ಬೀಸುಕಲ್ಲಿನ ಪದಗಳನ್ನು ಹಾಡುವ ಮಹಿಳೆಯರನ್ನು ಮಾತನಾಡಿಸಲು ಬಂದಿದ್ದರು.
ಮುಂದುವರೆದು ಮಾತನಾಡಿದ ಹೌಸಾಬಾಯಿ, “ನಾನು ಹೊಲದ ಕೆಲಸ ಮುಗಿಸಿ ಬಂದು ಹಿಟ್ಟು ಇಲ್ಲದಿದ್ದರೆ ಬೀಸುಕಲ್ಲಿನೆದುರು ಕುಳಿತು ಹಿಟ್ಟು ಬೀಸುತ್ತಾ ಒಂದಷ್ಟು ಹಾಡು ಹಾಡುತ್ತೇನೆ. ಹಾಡು ಇಲ್ಲದ ದಿನ ನನ್ನ ಪಾಲಿಗೆ ಅಪೂರ್ಣವೆನ್ನಿಸುತ್ತದೆ. ಹಾಡಲು ಆರಂಭಿಸುತ್ತಿದ್ದಂತೆ ಪದಗಳು ತಾನಾಗಿಯೇ ನೆನಪಾಗತೊಡಗುತ್ತವೆ. ಈ ಹಾಡುವಿಕೆ ನಿಲ್ಲುವುದು ನನ್ನ ಉಸಿರು ನಿಂತಾಗಲೇ. ಅಲ್ಲಿಯವರೆಗೂ ಅವು ನನ್ನ ನೆನಪಿನ ಕೋಶದಲ್ಲೇ ಇರುತ್ತವೆ.” ಅವರ ಮಾತುಗಳು ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಕುಂಬಾರರು ಮತ್ತು ತೋಟಗಾರ ಸಮುದಾಯಗಳಿಗೆ ಸೇರಿದ ಹಲವು ಗ್ರಾಮೀಣ ಮಹಿಳಾ ಗಾಯಕರನ್ನು ಪ್ರತಿನಿಧಿಸುತ್ತವೆ. ಅವರು ಬೆಳಗಿನ ಜಾವದಲ್ಲೇ ಎದ್ದು ಮನೆಗೆಲಸಗಳನ್ನು ಮುಗಿಸಿ ಹೊಲಗಳಲ್ಲೂ ದುಡಿಯುತ್ತಾರೆ. ಅವರ ದಿನದ ಬಹುಪಾಲು ಸಮಯ ದುಡಿಮೆಯಲ್ಲೇ ಕಳೆಯುತ್ತದೆ.
ಈ ಮಹಿಳೆಯರ ದಿನದ ಮೊದಲ ಕೆಲಸವೆಂದರೆ ಬೀಸುಕಲ್ಲಿನೆದುರು ಕುಳಿತು ಧಾನ್ಯ ಬೀಸುವುದು. ಅವರು ಧಾನ್ಯ ಬೀಸುತ್ತಲೇ ಹಾಡುತ್ತಾರೆ. ಅಡುಗೆಮನೆ ಅಥವಾ ಜಗಲಿಯ ಮೂಲೆಯೆನ್ನುವುದು ಅವರ ಪಾಲಿನ ಆರಾಮ ವಲಯ. ಅದು ಅವರು ತಮ್ಮ ಬದುಕಿನ ಸಂಕಷ್ಟಗಳು, ನೋವು, ನಲಿವು ಮತ್ತು ಸಾಧನೆಗಳನ್ನು ತಮ್ಮ ಆಪ್ತ ವಲಯದೊಡನೆ ಹಂಚಿಕೊಳ್ಳಲು ಇರುವ ತಾಣ.
ಈ ಸಮಯದಲ್ಲಿ ಅವರು ಪ್ರಪಂಚ, ತಮ್ಮ ಹಳ್ಳಿ ಮತ್ತು ಸಮುದಾಯದ ಜೀವನ, ಕುಟುಂಬ ಸಂಬಂಧಗಳು, ಧರ್ಮ ಮತ್ತು ತೀರ್ಥಯಾತ್ರೆಗಳು, ಜಾತಿ ಮತ್ತು ಪಿತೃಪ್ರಭುತ್ವದ ದಬ್ಬಾಳಿಕೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೆಲಸ ಇತ್ಯಾದಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ, ಪುಣೆಯ ಮುಲ್ಶಿ ತಾಲ್ಲೂಕಿನ ಖಡಕ್ವಾಡಿ ಕುಗ್ರಾಮದ ತಾರಾಬಾಯಿ ಉಬೆ ಈ ಸಂಗತಿಗಳ ಕುರಿತು ಮಾತನಾಡಿದ್ದಾರೆ.
ಪರಿಯ ಈ ಸಾಕ್ಷ್ಯಚಿತ್ರವು ಬೀಸುಕಲ್ಲಿನ ಪದಗಳನ್ನು ರೆಕಾರ್ಡ್ ಮಾಡಿದ ಹಾಗೂ ಅವುಗಳ ಡೇಟಾಬೇಸ್ ತಯಾರಿಸಿದ ಸಂಗೀತಶಾಸ್ತ್ರಜ್ಞ ಮತ್ತು ತಂತ್ರಜ್ಞ ಬರ್ನಾರ್ಡ್ ಬೆಲ್, ಮರಾಠಿಯಲ್ಲಿ ಹಾಡುಗಳನ್ನು ಅನುವಾದಿಸಿದ ಸಂಶೋಧಕ ಜಿತೇಂದ್ರ ಮೈದ್ ಮತ್ತು ಹಾಡುಗಳನ್ನು ಮರಾಠಿಯಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಆಶಾ ಒಗಲೆ ಅವರ ಸಂದರ್ಶನಗಳನ್ನು ಒಳಗೊಂಡಿದೆ.
ಈ ಜಿಎಸ್‌ಪಿ 2016ರಲ್ಲಿ ಪರಿಯನ್ನು ತಲುಪಿತು. ನಾವು 2017ರ ಮಾರ್ಚ್ ತಿಂಗಳ 6ನೇ ತಾರೀಖಿನಿಂದ ಅವುಗಳನ್ನು ಪರಿಯಲ್ಲಿ ಪ್ರಕಟಿಸತೊಡಗಿದೆವು. ಓದಿ: 'ಗ್ರೈಂಡ್‌ಮಿಲ್ ಸಾಂಗ್ಸ್': ರಾಷ್ಟ್ರೀಯ ಆಸ್ತಿಯೊಂದರ ದಾಖಲೀಕರಣ
ಇದೆಲ್ಲ ಆಗಿ, ಈಗ ಏಳು ವರ್ಷಗಳ ನಂತರ ಪರಿ ಮತ್ತೆ ಈ ಹಾಡುಗಳನ್ನು ಹಾಡಿರುವ ಮಹಿಳೆಯರ ಊರುಗಳಿಗೆ ತೆರಳಿ ಅವರ ಬದುಕಿನ ಕತೆಗಳನ್ನು ಸಂಗ್ರಹಿಸಿ ಅದನ್ನು ಅವರ ಹಾಡುಗಳೊಂದಿಗೆ ಪ್ರಕಟಿಸುತ್ತಿದೆ. ನಮ್ಮ ಸಂಗ್ರಹವನ್ನು ನೀವು ಇಲ್ಲಿ ಗಮನಿಸಬಹುದು: ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್: ಇದುವರೆಗಿನ ವರದಿಗಳು
ಜಾತ್ಯಾವರ್ಚ್ಯ ಓವ್ಯಾ ಅಥವಾ ಬೀಸುಕಲ್ಲಿನ ಪದಗಳು ಎನ್ನುವ ಈ ಸಾಕ್ಷ್ಯಚಿತ್ರದಲ್ಲಿ ಮಹಾರಾಷ್ಟ್ರದ 1,107 ಹಳ್ಳಿಗಳು ಮತ್ತು ಕರ್ನಾಟಕದ 11 ಹಳ್ಳಿಗಳ 3,302 ಹಾಡುಗಾರರಲ್ಲಿ ಕೆಲವರಷ್ಟೇ ಕಾಣಿಸಿಕೊಂಡಿದ್ದಾರೆ.
ಈ ಹಾಡುಗಳನ್ನು ಅಕ್ಷರಕ್ಕಿಳಿಸುವ ದೊಡ್ಡ ಹೊಣೆ ಜಿತೇಂದ್ರ ಮೈದ್ ಮತ್ತು ಇನ್ನೂ ಕೆಲವರ ಹೆಗಲಿಗೇರಿತು. ರಜನಿ ಖಲಾಡ್ಕರ್ ಅವರು ಈ ಅಕ್ಷರ ರೂಪದ ಹಾಡುಗಳನ್ನು ದೊಡ್ಡ ಮರಾಠಿ ಸಂಗ್ರಹಕ್ಕೆ ಸೇರಿಸತೊಡಗಿದರು. ಹೇಮಾ ರಾಯಿರ್ಕರ್ ಅವರು ಮೊದಲಿಗೆ ಒಂದಷ್ಟು ಹಾಡುಗಳನ್ನು ಅನುವಾದಿಸಿದರು. ಪ್ರಸ್ತುತ ಆಶಾ ಒಗಲೆಯವರು ಜಿತೇಂದ್ರ ಮೈದ್ ಅವರೊಂದಿಗೆ ಅನುವಾದ ಕಾರ್ಯವನ್ನು ಮುಂದುವರೆಸಿದ್ದಾರೆ. ಈಗ ಅನುವಾದಿಸಲು 30,000ದಷ್ಟು ಹಾಡುಗಳು ಉಳಿದಿವೆ.
ಈ ಕಿರುಚಿತ್ರವು ಗ್ರೈಂಡ್ ಮಿಲ್ ಸಾಂಗ್ಸ್ ಯೋಜನೆಯ ಪರಿಚಯ ಮತ್ತು ಸಂಗೀತಶಾಸ್ತ್ರಜ್ಞ ಮತ್ತು ತಂತ್ರಜ್ಞ ಬರ್ನಾರ್ಡ್ ಬೆಲ್ ಮತ್ತು ಅವರೊಂದಿಗಿದ್ದ ಸಂಶೋಧಕರು ಮತ್ತು ಕಾರ್ಯಕರ್ತರ ತಂಡವು 1990ರ ದಶಕದಲ್ಲಿ ರೆಕಾರ್ಡ್ ಮಾಡಿದ ವೀಡಿಯೊ ತುಣುಕನ್ನು ಒಳಗೊಂಡಿದೆ.
ಬೆಲ್ ಅವರು 1995ರಿಂದ 2003ರವರೆಗೆ ಸುಮಾರು 4,500 ಹಾಡುಗಳನ್ನು ಆಗಿನ ರೆಕಾರ್ಡಿಂಗ್ ಟೇಪ್ ಬಳಸಿ ರೆಕಾರ್ಡ್ ಮಾಡಿದ್ದರು, ಆದರೆ ಈ ಬೃಹತ್ ಯೋಜನೆಗೆ ಅಡಿಪಾಯವನ್ನು ಬಹಳ ಹಿಂದೆಯೇ ಹಾಕಲಾಗಿತ್ತು. 1980ರ ದಶಕದಲ್ಲಿ ಗೀ ಬಾಬಾ ಮತ್ತು ಹೇಮತಾಯಿ (ಈ ಯೋಜನೆಯ ಸ್ಥಾಪಕರ ಮೇಲಿನ ಗೌರವ ಮತ್ತು ಪ್ರೀತಿಯಿಂದ ಕರೆಯುತ್ತಿದ್ದ ಹೆಸರುಗಳು) ಪುಣೆ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಪ್ರಯಾಣಿಸಿದ್ದರು. ಅವರು ಮೊದಲಿಗೆ ಈ ಮಹಿಳೆಯರೊಂದಿಗೆ ಕೆಲಸ ಮಾಡಲು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಹೋರಾಟದಲ್ಲಿ ಅವರೊಂದಿಗೆ ಬೆಂಬಲವಾಗಿ ನಿಲ್ಲಲು ಮತ್ತು ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದಂತಹ ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ಹೋರಾಡಲು ಹೊರಟಿದ್ದರು. ಆ ಸಂದರ್ಭದಲ್ಲಿ ಈ ಮಹಿಳೆಯರು ತಮ್ಮ ಆಲೋಚನೆಗಳನ್ನು ಮತ್ತು ತಮ್ಮ ಜೀವನದ ಕಥೆಗಳನ್ನು ಹಾಡುಗಳ ಮೂಲಕ ಹಂಚಿಕೊಂಡರು. ಅವು ಗ್ರಾಮೀಣ ಭಾರತದ ಈ ಭಾಗದ ಮಹಿಳೆಯರ ನೋವು-ನಲಿವಿನ ದಾಖಲೆಯಾಗಿದ್ದವು.
ಜಿಎಸ್‌ಪಿ ಯೋಜನೆಯಡಿ ಸಂಗ್ರಹಿಸಲಾದ ಸಂಗೀತ ದೂರ ದೇಶಗಳಿಗೂ ತಲುಪಿದೆ. ಅದು 2021ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 13 ನೇ ಗ್ವಾಂಗ್ಜು ಬಿನಾಲೆಯ ಭಾಗವಾಗಿತ್ತು. ಜೊತೆಗೆ 2022ರಲ್ಲಿ ಬರ್ಲಿನ್ ನಗರದ ಗ್ರೋಪಿಯಸ್ ಬಾವ್ ವಸ್ತುಸಂಗ್ರಹಾಲಯದಲ್ಲಿ ಮತ್ತು 2023 ರಲ್ಲಿ ಲಂಡನ್ ಬಾರ್ಬಿಕನ್ ನಲ್ಲಿ ಪ್ರದರ್ಶನದ ಭಾಗವಾಗಿತ್ತು. ಈ ಯೋಜನೆಯ ಕುರಿತು ಇಂಡಿಯನ್ ಎಕ್ಸ್ಪ್ರೆಸ್, Scroll.in, ದಿ ಹಿಂದೂ ಬಿಸಿನೆಸ್ ಲೈನ್ ಸೇರಿದಂತೆ ಹಲವು ಮಾಧ್ಯಮಗಳು ಹಲವಾರು ಲೇಖನಗಳನ್ನು ಪ್ರಕಟಿಸಿವೆ.
ನಾಸಿಕ್ ಮೂಲದ ಡಾಕ್ಟರೇಟ್ ಸಂಶೋಧಕರೊಬ್ಬರು ತಮ್ಮ ಪ್ರಬಂಧದಲ್ಲಿ ಈ ಸಂಗ್ರಹದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಹಾಡುಗಳನ್ನು ಬಳಸುತ್ತಿದ್ದಾರೆ; ಯುಎಸ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಜಿಎಸ್‌ಪಿ ಡೇಟಾಬೇಸ್ ಮತ್ತು ಇತರ ಜಾನಪದ ಸಂಗೀತ ಮೂಲಗಳಲ್ಲಿನ ದ್ವಿಪದಿಗಳನ್ನು ಉಲ್ಲೇಖಿಸುತ್ತಿದ್ದಾರೆ, ಇದರಲ್ಲಿ ಪುಣೆ ಜಿಲ್ಲೆಯ ಸುತ್ತಮುತ್ತಲಿನ ಬೋರಿ (ಜುಜುಬೆ), ಬಭುಲ್ (ಅಕೇಶಿಯಾ), ಖೈರ್ (ಕಾಚು) ಮತ್ತು ಇತರ ಮುಳ್ಳಿನ ಮರಗಳ ಹೆಸರುಗಳು ಸೇರಿವೆ. ವರ್ಷವಿಡೀ, ಅನೇಕ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಪರಿಯ ಈ ಸಂಗ್ರಹವನ್ನು ತಲುಪುತ್ತಲೇ ಇದ್ದಾರೆ.
ಅನೇಕ ಜನರನ್ನು ಒಟ್ಟುಗೂಡಿಸಿದ ಮತ್ತು ಸಂಶೋಧಕರು, ಸಾರ್ವಜನಿಕರು ಮತ್ತು ಜಾನಪದ ಸಂಗೀತ ಮತ್ತು ಕಾವ್ಯದ ಅಭಿಮಾನಿಗಳಿಗೆ ದಾರಿಯನ್ನು ಬೆಳಗಿಸಿದ ಈ ಬೃಹತ್ ಯೋಜನೆಯನ್ನು ವೀಕ್ಷಿಸಿ.
ಈ ಸಾಕ್ಷ್ಯಚಿತ್ರದಲ್ಲಿ ಬರ್ನಾರ್ಡ್ ಬೆಲ್ ಅವರ ಆರ್ಕೈವಲ್ ವೀಡಿಯೊ ʼಅನ್‌ಫೆಟರೆಡ್ ವಾಯ್ಸಸ್ (ಅನಿರ್ಬಂಧಿತ ಧ್ವನಿಗಳು)' ಮತ್ತು 2017ರಿಂದ ಇಲ್ಲಿಯವರೆಗೆ ಪರಿಯಲ್ಲಿ ಪ್ರಕಟವಾದ ಜಿಎಸ್‌ಪಿ ಲೇಖನಗಳ ತುಣುಕುಗಳು ಮತ್ತು ಛಾಯಾಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು