“ಸಂಜೆ ಹೊತ್ತು ಎಲ್ಲಾ ಪ್ರಾಣಿಗಳು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತವೆ. ಇದು ಬಾರ್ಗಟ್ [ಆಲದ] ಮರ."
ಸುರೇಶ ಧುರ್ವೆ ಅವರು ತಾವು ಕೆಲಸ ಮಾಡುತ್ತಿರುವ ಪೋಸ್ಟರ್ ಗಾತ್ರದ ಕಾಗದದ ಮೇಲೆ ನಾಚೂಕಾದ ಬಣ್ಣದ ಗೆರೆಗಳನ್ನು ಎಳೆಯುತ್ತಾ ಮಾತನಾಡುತ್ತಿದ್ದರು. "ಇದು ಆಲದ ಮರ, ಹೆಚ್ಚಿನ ಪಕ್ಷಿಗಳು ಇಲ್ಲಿ ಬಂದು ಇದರ ಮೇಲೆ ಕುಳಿತುಕೊಳ್ಳುತ್ತವೆ," ಎಂದು ಅವರು ಪರಿಗೆ ಹೇಳುತ್ತಾ, ಸ್ವಾಗತ ಕೋರುತ್ತಿರುವ ದೊಡ್ಡದಾದ ಮರದ ಚಿತ್ರಕ್ಕೆ ಹೆಚ್ಚಿನ ಕೊಂಬೆಗಳನ್ನು ಬಿಡಿಸುತ್ತಿದ್ದರು.
49 ವರ್ಷ ಪ್ರಾಯದ ಈ ಗೊಂಡ ಕಲಾಕಾರರು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಮನೆಯ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಬೆಳಕು ಮರದ ಕೊಂಬೆಗಳ ನಡುವೆ ಹರಿಯುತ್ತಾ ಬಾಗಿಲು ಮತ್ತು ಕಿಟಕಿಗಳ ಮೂಲಕ ಮೇಲಿನ ಮಹಡಿಯಲ್ಲಿರುವ ಕೋಣೆಯ ಒಳಗೆ ಬರುತ್ತಿತ್ತು. ಅವರು ತಮ್ಮ ಪಕ್ಕದಲ್ಲೇ ನೆಲದ ಮೇಲೆ ಇಟ್ಟಿರುವ ಹಸಿರು ಬಣ್ಣದ ಸಣ್ಣ ಸೀಸೆಯ ಒಳಗೆ ಕುಂಚವನ್ನು ಅದ್ದುತ್ತಿದ್ದರು. “ಹಿಂದೆಲ್ಲಾ ನಾವು ಬಿದಿರಿನ ಕೋಲುಗಳನ್ನು [ಕುಂಚಗಳಾಗಿ] ಮತ್ತು ಘಿಲೇರಿ ಕೆ ಬಾಲ್ [ಅಳಿಲಿನ ಕೂದಲು] ಗಳನ್ನು ಬಳಸುತ್ತಿದ್ದೆವು. ಇದನ್ನು [ಅಳಿಲಿನ ಕೂದಲು] ಈಗ ನಿಷೇಧಿಸಲಾಗಿದೆ, ಅದೂ ಒಳ್ಳೆಯದೇ. ಹಾಗಾಗಿ ಈಗ ನಾವು ಪ್ಲಾಸ್ಟಿಕ್ ಬ್ರಷ್‌ಗಳನ್ನು ಬಳಸುತ್ತೇವೆ,” ಎಂದು ಅವರು ಹೇಳುತ್ತಾರೆ.
ಅವರು ಬಿಡಿಸುವ ಚಿತ್ರಗಳು ಕಥೆಗಳನ್ನು ಹೇಳುತ್ತವೆ ಎಂದು ಸುರೇಶ್ ಹೇಳುತ್ತಾರೆ. “ನಾನು ಪೇಂಟಿಂಗ್ ಮಾಡುವಾಗ ಏನು ಬಿಡಿಸಬೇಕೆಂಬ ಬಗ್ಗೆ ಸಾಕಷ್ಟು ಸಮಯದ ವರೆಗೆ ಯೋಚಿಸಬೇಕು. ಈಗ ದೀಪಾವಳಿ ಬರುತ್ತಿದೆ ಅಂತ ಅಂದುಕೊಳ್ಳೋಣ, ಆಗ ನಾನು ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹಸುಗಳು ಮತ್ತು ದೀಪಗಳಂತಹ ಎಲ್ಲಾ ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ,” ಎಂದು ಅವರು ಹೇಳುತ್ತಾರೆ. ಗೊಂಡ ಸಮುದಾಯದ ವರ್ಣಚಿತ್ರಕಾರರು ಜೀವಿಗಳು, ಕಾಡುಗಳು, ಆಕಾಶ, ದಂತಕಥೆಗಳು ಮತ್ತು ಜಾನಪದ ಕಥೆಗಳು, ಕೃಷಿ ಹಾಗೂ ಸಾಮಾಜಿಕ ಬದುಕನ್ನು ತಮ್ಮ ಕಲೆಯಲ್ಲಿ ಚಿತ್ರಿಸುತ್ತಾರೆ.






