ಪಂಜಾಬಿ ಪಿಂಡ್ ಎನ್ನುವ ಊರಿನವರಾದ ಸಿಂಗ್ ಅವರ ಪಾಲಿಗೆ ಟ್ರಾವೆಲ್ ಏಜೆಂಟ್ ನೆನಪು ಈಗಲೂ ದುಃಸ್ವಪ್ನದಂತೆ ಕಾಡುತ್ತದೆ.
ಆ ದಲ್ಲಾಳಿಗೆ (ಏಜೆಂಟ್) ಹಣ ನೀಡುವ ಸಲುವಾಗಿ ಸಿಂಗ್ (ಹೆಸರು ಬದಲಾಯಿಸಲಾಗಿದೆ) ತಮ್ಮ ಒಂದು ಕೃಷಿ ಭೂಮಿಯನ್ನು ಮಾರಿದ್ದರು. ಈ ಹಣಕ್ಕೆ ಪ್ರತಿಯಾಗಿ ಆ ದಲ್ಲಾಳಿ ಜಿತೇಂದರ್ ಸಿಂಗ್ ಅವರನ್ನು “ಏಕ್ ನಂಬರ್ [ಕಾನೂನು ಪ್ರಕಾರವಾಗಿ]” ಸರ್ಬಿಯಾ ಮೂಲಕ ಪೋರ್ಚುಗಲ್ ಕಳುಹಿಸುವುದಾಗಿ ಭರವಸೆ ನೀಡಿದ್ದ.”
ಆದರೆ ತನಗೆ ಜಿತೇಂದರ್ ಮೋಸ ಮಾಡಿ ಮಾನವ ಕಳ್ಳಸಾಗಣೆಯ ಮೂಲಕ ಅಂತರರಾಷ್ಟ್ರೀಯ ಗಡಿಗಳನ್ನು ದಾಟಿಸಿದ್ದಾನೆ ಎನ್ನುವುದು ಅರಿವಿಗೆ ಬಂತು. ಆಘಾತ ಮತ್ತು ದಿಗ್ಭ್ರಮೆಗೆ ಒಳಗಾಗಿದ್ದ ಸಿಂಗ್ ಅವರಿಗೆ ತನ್ನ ಪರಿಸ್ಥಿತಿಯ ಕುರಿತು ಕುಟುಂಬಕ್ಕೂ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.
ಯೂರೋಪ್ ಖಂಡದಲ್ಲಿನ ಹಲವು ದಟ್ಟವಾದ ಕಾಡು, ಪರ್ವತಗಳನ್ನು ಹತ್ತಿಳಿಯುತ್ತಾ ಅವರು ಮತ್ತು ಅವರ ಜತೆಯಲ್ಲಿದ್ದ ಇತರ ವಲಸಿಗರು ಮಳೆಗಾಲದ ಕೊಚ್ಚೆಗುಂಡಿಯ ನೀರು ಮತ್ತು ಬ್ರೆಡ್ ತಿಂದು ಜೀವ ಉಳಿಸಿಕೊಂಡಿದ್ದರು. ಅವರಿಗೆ ಬ್ರೆಡ್ ಕಂಡರೆ ಆಗುತ್ತಿರಲಿಲ್ಲ.
ಮೇರೆ ಫಾದರ್ ಸಾಬ್ ಹಾರ್ಟ್ ಪೇಷನ್ ಆ. ಇನ್ನಾ ಟೆನ್ಷನ್ ಓಹ್ ಲೇಹ್ ನಿ ಸಕ್ತೆ, ನಾಲೆ ಘರ್ ಮೇ ಜಾ ನಹೀ ಸಕ್ದಾ ಕ್ಯೂಂ ಕೇ ಮೇ ಸಾರಾ ಕುಚ್ ದಾ ತೇ ಲಾಕೆ ಆಯಾ ಸಿ [ನನ್ನ ತಂದೆಗೆ ಹೃದಯದ ಸಮಸ್ಯೆಯಿದೆ. ಅವರು ಆಘಾತಕಾರಿ ಸುದ್ದಿಗಳನ್ನು ತಡೆಯಲಾರರು. ಮನೆಯಲ್ಲಿದ್ದ ಎಲ್ಲವನ್ನೂ ಮಾರಿದ್ದ ಕಾರಣ ನಾನು ಊರಿಗೂ ಬರುವಂತಿರಲಿಲ್ಲ” ಎಂದು ಪೋರ್ಚುಗಲ್ ದೇಶದಲ್ಲಿ ತಾನು ಇತರ ಐದು ಜನರೊಂದಿಗೆ ಹಂಚಿಕೊಂಡಿದ್ದ ಕೋಣೆಯಲ್ಲಿ ಕುಳಿತು ನಮ್ಮೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡರು. ಪಂಜಾಬಿ ಭಾಷೆ ಮಾತನಾಡುವ ಸಿಂಗ್ ಅವರಿಗೆ 25 ವರ್ಷ.
ಹಲವು ವರ್ಷಗಳಿಂದ, ಪೋರ್ಚುಗಲ್ ದಕ್ಷಿಣ ಏಷ್ಯಾದ ದೇಶಗಳಾದ ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದ ಕಾರ್ಮಿಕರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.








