ನೆಲದ ಮೇಲೆ ಕುಳಿತ ನಿಶಾ ಒಮ್ಮೆ ಗಾಳಿ ಬೀಸಿಕೊಳ್ಳುತ್ತಾರೆ. ಜೂನ್ ತಿಂಗಳ ಬಿಸಿಲು ಸೆಕೆಯನ್ನು ಹೆಚ್ಚಿಸುತ್ತಿದ್ದರೆ ಅಲ್ಲೇ ಇದ್ದ ತಂಬಾಕು ಮತ್ತು ಒಣ ಎಲೆಯ ವಾಸನೆ ಗಾಳಿಯನ್ನು ಗಾಢಗೊಳಿಸುತ್ತಿದ್ದವು. “ಈ ವಾರ ಇಷ್ಟೇ ಬೀಡಿ ಕಟ್ಟಲು ಸಾಧ್ಯವಾಗಿದ್ದು” ಎನ್ನುತ್ತಾ ತಲಾ 17 ಬೀಡಿಗಳಿರುವ ಕಟ್ಟುಗಳಲ್ಲಿದ್ದ ಸುಮಾರು 700 ಬೀಡಿಗಳತ್ತ ಬೆರಳು ತೋರಿಸಿದರು. “ಇಷ್ಟಕ್ಕೆ ಬಹುಶಃ 100 ರೂಪಾಯಿ ಸಿಗುವುದು ಕೂಡಾ ಅನುಮಾನ” ಎಂದು ಈ 32 ವರ್ಷ ಪ್ರಾಯದ ಬೀಡಿ ಕಾರ್ಮಿಕ ಮಹಿಳೆ ಹೇಳುತ್ತಾರೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಕೊಟಟಾಲಾದಲ್ಲಿ ಒಂದು ಸಾವಿರ ಬೀಡಿಗಳಿಗೆ 150 ರೂಪಾಯಿ ಸಿಗುತ್ತದೆ.
ಪ್ರತಿ ಬುಧವಾರ ಮತ್ತು ಶುಕ್ರವಾರ, ಬೀಡಿ ಕಟ್ಟುವವರು ತಾವು ಕಟ್ಟಿದ ಬೀಡಿಗಳನ್ನು ಒಪ್ಪಿಸಲು ಮತ್ತು ಮುಂದಿನ ಸುತ್ತಿಗೆ ಕಚ್ಚಾ ವಸ್ತುಗಳನ್ನು ಪಡೆಯಲು ಈ ಕಾರ್ಖಾನೆಗಳಿಗೆ ಬರುತ್ತಾರೆ. ಬಹುತೇಕ ಈ ಬೀಡಿ ಕಾರ್ಖಾನೆಗಳು ದಮೋ ಪಟ್ಟಣದ ಹೊರವಲಯದಲ್ಲಿವೆ. ಕಾರ್ಖಾನೆಗಳು ಠೇಕೇದಾರರನ್ನು (ಗುತ್ತಿಗೆದಾರರು) ನೇಮಿಸಿಕೊಂಡಿರುತ್ತವೆ, ಅವರು ಬೀಡಿ ಕಾರ್ಮಿಕರಿಗೆ, ಮುಖ್ಯವಾಗಿ ಮಹಿಳೆಯರಿಗೆ ಕೆಲಸವನ್ನು ಗುತ್ತಿಗೆ ನೀಡುತ್ತಾರೆ.
ಈ ಮಹಿಳೆಯರು ತಾವು ತಂದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ವಾರವಿಡೀ ತೆಂದು ಎಲೆಯನ್ನು ಮಡಚಿ ಅದರಲ್ಲಿ ತಂಬಾಕಿನ ಪುಡಿಯನ್ನು ತುಂಬಿ ದಾರದಿಂದ ಕಟ್ಟುವ ಮೂಲಕ ಬೀಡಿ ತಯಾರಿಸುತ್ತಾರೆ. ನಂತರ ಅವುಗಳನ್ನು ಕಟ್ಟಾಗಳನ್ನಾಗಿ (ಕಟ್ಟು) ಕಟ್ಟುತ್ತಾರೆ. ಅವರು ಈ ಕೆಲಸಕ್ಕೂ ಮೊದಲು ತಮ್ಮ ಮನೆಗೆಲಸಗಳನ್ನು ಮುಗಿಸಿಕೊಂಡಿರುತ್ತಾರೆ. ಇವರಲ್ಲಿ ಹೆಚ್ಚಿನ ಕುಟುಂಬಗಳ ಸರಾಸರಿ ಆದಾಯ 20,000 ರೂ. ಅದರಲ್ಲೇ 8-10 ಜನರ ಕುಟುಂಬ ನಡೆಯಬೇಕಿರುತ್ತದೆ. ಅವರಲ್ಲಿ ಹೆಚ್ಚಿನ ಮಹಿಳೆಯರು ಕೃಷಿ ಕಾರ್ಮಿಕರು ಮತ್ತು ಕೆಲವರು ಸಣ್ಣ ಹಿಡುವಳಿಗಳನ್ನು ಹೊಂದಿದ್ದಾರೆ.
“ಒಣಗಿದ ತೆಂಡು ಎಲೆಗಳನ್ನು ಅವುಗಳಲ್ಲಿನ ದಂಟು ಹೊರಬರುವ ತನಕ ನೀರಿನಲ್ಲಿ ನೆನೆಸಿಡಬೇಕು. ನಂತರ, ಎಲೆಗಳನ್ನು ಫರ್ಮಾ [ಕಬ್ಬಿಣದ ಸ್ಟೆನ್ಸಿಲ್] ಬಳಸಿ ಸಣ್ಣ ಆಯತಾಕಾರದಲ್ಲಿ ಕತ್ತರಿಸಲಾಗುತ್ತದೆ. ನಂತರ ಅದನ್ನು ಸುರುಳಿ ಮಾಡಿ ಅದರೊಳಗೆ ಜರ್ದಾ [ಪರಿಮಳಯುಕ್ತ ತಂಬಾಕು] ಸುರಿದು ನಂತರ ಕಟ್ಟಲಾಗುತ್ತದೆ” ಎಂದು ನಿಶಾ ವಿವರಿಸುತ್ತಾರೆ. ಪ್ರತಿ ಬೀಡಿಯನ್ನು ಬಣ್ಣದ ದಾರದಿಂದ ಕಟ್ಟಬೇಕು, ಈ ದಾರವು ಬ್ರಾಂಡ್ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತದೆ, ಒಂದು ಬೀಡಿ ಕಂಪನಿಯನ್ನು ಇನ್ನೊಂದರಿಂದ ಪ್ರತ್ಯೇಕಿಸುತ್ತದೆ.
ನಂತರ ಆ ಬೀಡಿಗಳನ್ನು ಬೀಡಿ ʼಕಾರ್ಖಾನೆಗೆʼ ತರಲಾಗುತ್ತದೆ. ಒಂದು ಬೀಡಿ ಕಾರ್ಖಾನೆಯೆನ್ನುವುದು ಬೀಡಿ ತಯಾರಿಸುವ ಬ್ರಾಂಡ್ ನ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಘಟಕ ಮತ್ತು ಉಗ್ರಾಣವಾಗಿ ಕೆಲಸ ಮಾಡುತ್ತದೆ. ಬೀಡಿ ಕಟ್ಟುವವರು ತಾವು ಕಟ್ಟಿದ ಬೀಡಿಯನ್ನು ಗುತ್ತಿಗೆದಾರರಿಗೆ ನೀಡುತ್ತಾರೆ. ಅವರು ಈ ಕಾರ್ಮಿಕರಿಗೆ ಕೂಲಿಯನ್ನು ನೀಡಿ ಬೀಡಿಯನ್ನು ಕಾರ್ಖಾನೆಗೆ ತಲುಪಿಸುತ್ತಾರೆ. ಕಾರ್ಖಾನೆಯೊಳಗೆ, ಬೀಡಿಗಳನ್ನು ವಿಂಗಡಿಸಿ, ಹುರಿದು, ಪ್ಯಾಕ್ ಮಾಡಿ ಸಂಗ್ರಹಿಸಲಾಗುತ್ತದೆ.









