“ಕುಮಾರ್ ನಾನು ಈ ಮೀನಿನ ಬುಟ್ಟಿ ಎತ್ತಿಕೊಳ್ಳದೆ ಹೋಗಿದ್ದರೆ, ನಾವು ಇಷ್ಟು ದೂರ ಬರುವುದು ಸಾಧ್ಯವೇ ಇದ್ದಿರಲಿಲ್ಲ.” ಇದು ನನ್ನಮ್ಮ ಆಗಾಗ ಹೇಳುವ ಮಾತು. ನಾನು ಹುಟ್ಟಿದ ಒಂದು ವರ್ಷದ ನಂತರ ಅಮ್ಮ ಮೀನು ಮಾರಲು ಪ್ರಾರಂಭಿಸಿದರು. ಅಂದಿನಿಂದ ಮೀನು ನನ್ನ ಬದುಕಿನ ಭಾಗವಾಗಿ ಹೋಗಿದೆ.
ಮೀನಿನ ವಾಸನೆಯೆನ್ನುವುದು ನಮ್ಮ ಮನೆಯ ಒಂದು ಭಾಗವಾಗಿಯೇ ಇತ್ತು. ಆ ದಿನಗಳಲ್ಲಿ ಮನೆಯ ಮೂಲೆಯಲ್ಲಿ ಒಣ ಮೀನಿನ ಚೀಲ ನೇತಾಡುತ್ತಿರುತ್ತಿತ್ತು. ಮೊದಲ ಮಳೆ ಹೊತ್ತು ತರುವ ಕಾಟ್ಲಾ ಮೀನನ್ನು ಅಮ್ಮ ಸಾರು ಮಾಡುತ್ತಿದ್ದರು. ಈ ಮೀನಿನ ಸಾರು ಬಹಳ ರುಚಿಕರ ಮತ್ತು ಆ ದಿನಗಳಲ್ಲಿ ಕಾಡುವ ನೆಗಡಿ ಮತ್ತು ಶೀತಕ್ಕೆ ಔಷಧಿಯಂತೆ ಕೆಲಸ ಮಾಡುತ್ತಿತ್ತು. ಅಮ್ಮ ಕ್ಯಾಟ್ ಫಿಶ್, ಕೊರವ ಮೀನುಗಳ ಸಾರು ಮಾಡಿದಾಗ ಅದರ ಸಾರಿನ ಪರಿಮಳ ಮನೆ ತುಂಬಾ ಹರಡಿಕೊಳ್ಳುತ್ತಿತ್ತು.
ನಾನು ಸಣ್ಣವನಿದ್ದಾಗ ಮೀನು ಹಿಡಿಯುವ ಸಲುವಾಗಿ ಆಗಾಗ ಶಾಲೆಗೆ ಚಕ್ಕರ್ ಹಾಕುತ್ತಿದ್ದೆ. ಆಗ ಮಧುರೈಯ ಜವಹರಲಾಲ್ ಪುರಂನ ಎಲ್ಲೆಡೆ ನೀರು ತುಂಬಿರುತ್ತಿತ್ತು. ಜಿಲ್ಲೆಯ ತುಂಬಾ ಆಗ ಕೆರೆ, ಕೊಳ, ಬಾವಿ ನದಿಗಳಿದ್ದವು. ನಾನು ನಮ್ಮ ಅಜ್ಜನೊಡನೆ ಮೀನು ಹಿಡಿಯುವ ಬುಟ್ಟಿಯೊಡನೆ (ಗೂಳಿ) ಕೆರೆಗಳಿಗೆ ಹೋಗುತ್ತಿದ್ದೆ. ಹೊಳೆಗೆ ಮೀನು ಹಿಡಿಯಲು ಹೋಗುವಾಗ ಗಾಳ ತೆಗೆದುಕೊಂಡು ಹೋಗುತ್ತಿದ್ದೆವು.
ಅಮ್ಮ ನಾವು ಹೊಳೆಗೆ ಹೋಗದ ಹಾಗೆ ಸದಾ ದೆವ್ವದ ಕತೆಗಳನ್ನು ಹೇಳಿ ಹೆದಿರಿಸಿಟ್ಟಿದ್ದರು. ಹೀಗಾಗಿ ನಾವು ಹೆಚ್ಚಾಗಿ ಕೆರೆ, ಕೊಳಗಳಿಗೆ ಹೋಗುತ್ತಿದ್ದೆವು. ಆಗ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ನಮ್ಮ ಬಾಲ್ಯದಲ್ಲಿ ನಮ್ಮ ಸುತ್ತಲೂ ನೀರೇ ತುಂಬಿತ್ತು. ನಾನು 10ನೇ ತರಗತಿ ಪಾಸ್ ಆದ ವರ್ಷ ಊರಿನಲ್ಲಿ ನೀರಿನ ಕೊರತೆಯುಂಟಾಗಿ ಕೆರಗಳ ನೀರಿನ ಮಟ್ಟ ಕಡಿಮೆಯಾಯಿತು. ಇದು ಕೃಷಿಯ ಮೇಲೂ ಪರಿಣಾಮ ಬೀರಿತು.
ನಮ್ಮ ಹಳ್ಳಿ ಜವಾಹರಲಾಲ್ ಪುರಂನಲ್ಲಿ ಮೂರು ಕೆರೆಗಳಿದ್ದವು - ದೊಡ್ಡ ಕೆರೆ, ಸಣ್ಣ ಕೆರೆ ಮತ್ತು ಮಾರುತಂಕುಳಂ ಕೆರೆ. ನನ್ನ ಮನೆಯ ಸಮೀಪದ ದೊಡ್ಡ ಕೆರೆ ಹಾಗೂ ಚಿಕ್ಕ ಕೆರೆಯನ್ನು ಹರಾಜಿನಡಿ ಗ್ರಾಮದ ಜನರಿಗೆ ಗುತ್ತಿಗೆ ನೀಡಲಾಗಿತ್ತು. ಆ ಜನರು ಅದರಲ್ಲಿ ಮೀನು ಸಾಕುತ್ತಿದ್ದರು ಮತ್ತು ಅವರ ಮನೆ ಇದರಿಂದ ನಡೆಯುತ್ತಿತ್ತು. ಎರಡೂ ಕೆರೆಗಳು ಥಾಯ್ ತಿಂಗಳಿನಲ್ಲಿ (ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ) ಮೀನುಗಳನ್ನು ನೀಡುತ್ತವೆ. ಇದನ್ನು ಮೀನುಗಾರಿಕೆ ಕಾಲವೆಂದು ಪರಿಗಣಿಸಲಾಗುತ್ತದೆ.
ಅಪ್ಪ ಕೆರೆಗೆ ಮೀನು ಕೊಳ್ಳಲು ಹೋಗುವಾಗ ನಾನೂ ಅವರ ಜೊತೆ ಹೋಗುತ್ತಿದ್ದೆ. ಅವರ ಸೈಕಲ್ಲಿನ ಹಿಂಬದಿಯಲ್ಲಿ ಒಂದು ಪೆಟ್ಟಿಗೆಯನ್ನು ಕಟ್ಟಲಾಗಿತ್ತು ಮತ್ತು ನಾವು ಮೀನು ಖರೀದಿಸಲು ಹಲವಾರು ಹಳ್ಳಿಗಳಿಗೆ, ಕೆಲವೊಮ್ಮೆ 20 ರಿಂದ 30 ಕಿ.ಮೀ. ದೂರದವರೆಗೂ ಪ್ರಯಾಣಿಸುತ್ತಿದ್ದೆವು.


































