MH34AB6880 ನೋಂದಣಿ ಹೊಂದಿರುವ ಮಾಡಿಫೈ ಮಾಡಲಾದ ಮಹೀಂದ್ರಾ ಸರಕು ವಾಹನವೊಂದು ಚಂದ್ರಾಪುರದ ಹೊರವಲಯದಲ್ಲಿರುವ 2920 ಮೆಗಾವ್ಯಾಟ್ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಬಳಿಯ ಕಲ್ಲಿದ್ದಲು ತೊಳೆಯುವ ಯಂತ್ರಗಳು, ಬೂದಿ ದಿಬ್ಬಗಳಿಂದ ಕೂಡಿದ ಪ್ರದೇಶದ ಬಳಿ ದಟ್ಟವಾದ ಪೊದೆ ಕಾಡಿನ ನಡುವೆ ಇರುವ ಹಳ್ಳಿಯ ಜನನಿಬಿಡ ಚೌಕದಲ್ಲಿ ಬಂದು ನಿಂತಿತು.
ಈ ವಾಹನದ ವಾಹನದ ಎರಡೂ ಬದಿಗಳಲ್ಲಿ ಘೋಷಣೆಗಳು ಮತ್ತು ಛಾಯಾಚಿತ್ರಗಳನ್ನು ಹೊಂದಿರುವ ವರ್ಣರಂಜಿತ ಮತ್ತು ಆಕರ್ಷಕ ಪೋಸ್ಟರುಗಳನ್ನು ಅಂಟಿಸಲಾಗಿತ್ತು. ಅದು 2023ರ ಅಕ್ಟೋಬರ್ ತಿಂಗಳ ಆರಂಭಿಕ ದಿನಗಳ ಅಷ್ಟೇನೂ ಚಟುವಟಿಕೆಯಿಲ್ಲದ ಭಾನುವಾರವಾಗಿತ್ತು. ಈ ಸಮಯದಲ್ಲಿ ಬಂದು ನಿಂತ ವಾಹನವು ಹಳ್ಳಿಯ ಮಕ್ಕಳು, ಪುರುಷರು ಮತ್ತು ಮಹಿಳೆಯರ ಗಮನವನ್ನು ಸೆಳೆಯಿತು. ಕೂಡಲೇ ಅವರೆಲ್ಲರೂ ಯಾರು ಬಂದಿದ್ದಾರೆಂದು ನೋಡಲು ಗಾಡಿಯತ್ತ ದೌಡಾಯಿಸಿದರು.
ಎಪ್ಪತ್ತರ ಹರೆಯದ ವಿಠ್ಠಲ್ ಬದ್ಕಲ್ ತನ್ನ ಒಂದು ಕೈಯಲ್ಲಿ ಮೈಕ್ರೊಫೋನ್ ಹಾಗೂ ಇನ್ನೊಂದು ಕೈಯಲ್ಲಿ ಕಂದು ಬಣ್ಣದ ಡೈರಿಯೊಂದನ್ನು ಹಿಡಿದು ಗಾಡಿಯಿಂದ ಇಳಿದರು. ಬಿಳಿ ಧೋತಿ, ಬಿಳಿ ಕುರ್ತಾ ಮತ್ತು ಬಿಳಿ ನೆಹರೂ ಟೋಪಿ ಧರಿಸಿದ ಅವರು ವಾಹನದ ಮುಂಭಾಗದ ಬಾಗಿಲಿಗೆ ಅಳವಡಿಸಲಾದ ಧ್ವನಿವರ್ಧಕಕ್ಕೆ ಆಳವಡಿಸಲಾಗಿದ್ದ ಮೈಕನ್ನು ಹಿಡಿದು ಮಾತನಾಡತೊಡಗಿದರು.
ಅವರು ತಾನು ಇಲ್ಲಿಗೆ ಬಂದ ಕಾರಣವನ್ನು ಮೈಕಿನಲ್ಲಿ ವಿವರಿಸತೊಡಗಿದರು. ಅವರ ದನಿ 5,000 ಜನಸಂಖ್ಯೆಯ ಈ ಹಳ್ಳಿಯ ಮೂಲೆ ಮೂಲೆಗಳಲ್ಲಿಮೊಳಗತೊಡಗಿತು. ಈ ಊರಿನ ಹೆಚ್ಚಿನ ಜನರು ರೈತರು, ಉಳಿದವರು ಹತ್ತಿರದ ಕಲ್ಲಿದ್ದಲು ಘಟಕಗಳು ಅಥವಾ ಸಣ್ಣ ಕೈಗಾರಿಕೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಐದು ನಿಮಿಷಗಳಲ್ಲಿ ಅವರ ಭಾಷಣ ಮುಗಿಯಿತು. ನಂತರ ಇಬ್ಬರು ಹಿರಿಯ ಗ್ರಾಮಸ್ಥರು ಅವರನ್ನು ಮುಗುಳ್ನಗೆಯೊಂದಿಗೆ ಊರಿಗೆ ಸ್ವಾಗತಿಸಿದರು.
“ಅರ್ರೆ ಮಾಮ, ನಮಸ್ಕಾರ್, ಯಾ ಬಸಾ [ನಮಸ್ಕಾರ ಮಾಮಾ, ಬನ್ನಿ, ಕೂತ್ಕೊಳ್ಳಿ]” ಎಂದು ಗ್ರಾಮದ ಮುಖ್ಯ ಚೌಕದಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ 65 ವರ್ಷದ ರೈತ ಹೇಮರಾಜ್ ಮಹಾದೇವ್ ದಿವಾಸೆ ಸ್ವಾಗತಿಸಿದರು.
“ನಮಸ್ಕಾರ್ ಜೀ” ಎನ್ನುತ್ತಾ ಬದ್ಖಲ್ ಮಾಮ ಎರಡೂ ಕೈ ಜೋಡಿಸಿ ನಮಸ್ಕರಿಸಿದರು.


















