ಒಬ್ಬರು ಜೀವಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ್ದಾರೆ, ಒಬ್ಬರು ಸೇನೆಯಲ್ಲಿ ಸೈನಿಕ, ಒಬ್ಬರು ಮನೆಯನ್ನು ನೋಡಿಕೊಳ್ಳುವ ಮಹಿಳೆ ಮತ್ತು ಮತ್ತೊಬ್ಬರು ಭೂಗೋಳಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಅದು ಬೇಸಗೆ ಕಾಲ ಮತ್ತು ರಾಂಚಿಯ ಜನನಿಬಿಡ ಪ್ರದೇಶದವೊಂದರಲ್ಲಿ ಒಂದು ಗುಂಪು, ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯಗಳಿಗೆ (ಪಿವಿಟಿಜಿ) ಸೇರಿದವರ ಗುಂಪು, ಜಾರ್ಖಂಡ್ ಬುಡಕಟ್ಟು ಸಂಶೋಧನಾ ಕೇಂದ್ರದಲ್ಲಿ (ಟಿಆರ್‌ಐ) ಪ್ರಾಚೀನ ಬುಡಕಟ್ಟು ಜನಾಂಗಗಳ ಭಾಷೆಗಳ ಕುರಿತಾದ ಬರವಣಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಬಂದಿದ್ದರು.
"ನಮ್ಮ ಮನೆಗಳಲ್ಲಿನ ಮಕ್ಕಳು ತಮ್ಮದೇ ಭಾಷೆಯಲ್ಲಿ ಶಿಕ್ಷಣ ಕಲಿಯಬೇಕೆನ್ನುವುದು ನಮ್ಮ ಬಯಕೆ" ಎಂದು ಮಾಲ್ ಪಹಾಡಿಯಾ ಎನ್ನುವ ಪ್ರಾಚೀನ ಬುಡಕಟ್ಟು ಜನಾಂಗಕ್ಕೆ ಸೇರಿದ 24 ವರ್ಷದ ಮಾವ್ಣೋ ಭಾಷೆ ಮಾತನಾಡುವ ಜಗನ್ನಾಥ್ ಗಿರಹಿ ಹೇಳುತ್ತಾರೆ. ಈ ಭಾಷೆಯನ್ನು ಅಳಿವಿನಂಚಿನಲ್ಲಿರುವ ಭಾಷೆ ಎಂದು ಪರಿಗಣಿಸಲಾಗಿದೆ.
“ನಮ್ಮ ಭಾಷೆಯಲ್ಲಿ ಪುಸ್ತಕ ಪ್ರಕಟವಾಗಬೇಕು ಎಂದು ನಮಗೂ ಅನ್ನಿಸುತ್ತದೆ” ಎನ್ನುತ್ತಾರೆ ಜಗನ್ನಾಥ್. ಅವರು ತನ್ನ ಊರಿನಲ್ಲಿ ಜೀವಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ಏಕೈಕ ವ್ಯಕ್ತಿ. ಅವರು ವಿವರಿಸುತ್ತಾರೆ, “ವಿಶ್ವವಿದ್ಯಾನಿಲಯದಲ್ಲಿ ಬಹುಸಂಖ್ಯಾತ ಸಮುದಾಯಗಳ ಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಜೆಎಸ್‌ಎಸ್‌ಸಿ) ಪಠ್ಯಕ್ರಮವು ಖೋರ್ತಾ, ಸಂತಾಲಿ ಮುಂತಾದ ಭಾಷೆಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ನಮ್ಮ [ಮಾವ್ಣೋ] ಭಾಷೆಯಲ್ಲಿ ಸಿಗುವುದಿಲ್ಲ.”
“ಈ ನಿರ್ಲಕ್ಷ್ಯ ಮುಂದುವರೆದರೆ ನಿಧಾನವಾಗಿ ನನ್ನ ಭಾಷೆ ಕಣ್ಮರೆಯಾಗುತ್ತದೆ.” ಮಾಲ್ ಪಹಾಡಿಯಾ ಭಾಷಿಕರಲ್ಲಿ ಸುಮಾರು 15 ಪ್ರತಿಶತದಷ್ಟು ಜನರು ಜಾರ್ಖಂಡ್ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ; ಉಳಿದವರು ನೆರೆಯ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ.
ಅವರ ಭಾಷೆ, ಮಾವ್ಣೋ, ದ್ರಾವಿಡ ಪ್ರಭಾವವನ್ನು ಹೊಂದಿರುವ ಇಂಡೋ-ಆರ್ಯನ್ ಭಾಷೆ, ಇದನ್ನು 4,000ಕ್ಕಿಂತಲೂ ಕಡಿಮೆ ಜನರು ಮಾತನಾಡುತ್ತಾರೆ. ಹೀಗಾಗಿ ಇದನ್ನು ಅಳಿವಿನಂಚಿನಲ್ಲಿರುವ ಭಾಷೆ ಎಂದು ಪರಿಗಣಿಸಲಾಗಿದೆ. ಇದು ಅಧಿಕೃತ ಭಾಷೆಯ ಸ್ಥಾನಮಾನವನ್ನು ಹೊಂದಿಲ್ಲ. ಜಾರ್ಖಂಡ್‌ನಲ್ಲಿ ನಡೆಸಿದ ಭಾರತೀಯ ಭಾಷಾ ಸಮೀಕ್ಷೆ (ಎಲ್‌ಎಸ್‌ಐ) ಪ್ರಕಾರ, ಶಾಲೆಗಳಲ್ಲಿ ಬೋಧನೆಗಾಗಿ ಮಾವ್ಣೋ ಭಾಷೆಯನ್ನು ಬಳಸಲಾಗುವುದಿಲ್ಲ. ಮತ್ತು ಅದು ತನ್ನದೇ ಆದ ವಿಶಿಷ್ಟ ಲಿಪಿಯನ್ನು ಹೊಂದಿಲ್ಲ.
ಮಾಲ್ ಪಹಾಡಿಯಾ ಸಮುದಾಯವು ಮುಖ್ಯವಾಗಿ ಜೀವನೋಪಾಯಕ್ಕಾಗಿ ಕೃಷಿ ಮತ್ತು ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದೆ. ಜಾರ್ಖಂಡ್‌ನಲ್ಲಿ, ಈ ಸಮುದಾಯವನ್ನು ಪಿವಿಟಿಜಿ ಪಟ್ಟಿಯಡಿ ಗುರುತಿಸಲಾಗಿದೆ ಮತ್ತು ಅವರ ಜನಸಂಖ್ಯೆಯ ಹೆಚ್ಚಿನವರು ದುಮ್ಕಾ, ಗೊಡ್ಡಾ, ಸಾಹಿಬ್‌ಗಂಜ್ ಮತ್ತು ಪಕುರ್ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಸಮುದಾಯದ ಜನರು ತಮ್ಮ ಮನೆಗಳಲ್ಲಿ ಮಾತ್ರವೇ ಮಾವ್ಣೋ ಭಾಷೆಯಲ್ಲಿ ಮಾತನಾಡಬಹುದು, ಮತ್ತು ಅವರ ಪ್ರಕಾರ, ಹಿಂದಿ ಮತ್ತು ಬಂಗಾಳಿಯಂತಹ ಭಾಷೆಗಳು ಮನೆಯ ಹೊರಗೆ ಮತ್ತು ಅಧಿಕೃತವಾಗಿ ಪ್ರಬಲವಾಗಿವೆ, ಆದ್ದರಿಂದ ಅವರ ಭಾಷೆ ಅಳಿವಿನ ಅಪಾಯದಲ್ಲಿದೆ.
ಕಾರ್ಯಾಗಾರದಲ್ಲಿ ಇನ್ನೊಬ್ಬ ಮಾವ್ಣೋ-ಭಾಷಿಗ ಮನೋಜ್ ಕುಮಾರ್ ದೆಹ್ರಿ ಕೂಡ ಇದ್ದರು, ಅವರು ಜಗನ್ನಾಥ್ ಅವರ ಮಾತನ್ನು ಒಪ್ಪುತ್ತಾರೆ. ಪಕುರ್ ಜಿಲ್ಲೆಯ ಸಹರಪುರ ಗ್ರಾಮದ ನಿವಾಸಿ ಮನೋಜ್ (23) ಭೂಗೋಳಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. "ಶಾಲೆಗಳಲ್ಲಿ, ನಮಗೆ ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಕಲಿಸಲಾಗುತ್ತದೆ, ಇದರಿಂದಾಗಿ ನಾವು ನಮ್ಮ ಭಾಷೆಯನ್ನು ಮರೆಯುತ್ತಿದ್ದೇವೆ. ಜೊತೆಗೆ ಶಿಕ್ಷಕರು ಸಹ ಹಿಂದಿಯಲ್ಲಿ ಮಾತನಾಡುತ್ತಾರೆ" ಎಂದು ಅವರು ಹೇಳುತ್ತಾರೆ.
ಈ ಪ್ರಬಲ ಭಾಷೆಗಳ ಹೊರತಾಗಿ, ಬುಡಕಟ್ಟು ಸಮುದಾಯಗಳು ಪರಸ್ಪರ ಸಂವಹನ ನಡೆಸಲು ಬಳಸುವ 'ಸಂಪರ್ಕ ಭಾಷೆಯ' ಸಮಸ್ಯೆಯೂ ಇದೆ. ಅವು ಕೆಲವೊಮ್ಮೆ ಪ್ರದೇಶದ ಪ್ರಬಲ ಭಾಷೆಗಳು ಮತ್ತು ಪ್ರಾಚೀನ ಭಾಷೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.
“ಮಕ್ಕಳು ಎಲ್ಲರಿಗೂ ಅರ್ಥವಾಗಬಹುದಾದ ಒಂದು ಸಂಪರ್ಕ ಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಮಾತೃಭಾಷೆಯಿಂದ ದೂರವಾಗುತ್ತಾರೆ” ಎಂದು ಪಿವಿಟಿಜಿ ಸಮುದಾಯಗಳಿಗೆ ಸಹಾಯ ಮಾಡಲು ಟಿಆರ್‌ಐ ನೇಮಿಸಿದ ನಿವೃತ್ತ ಶಿಕ್ಷಕ ಪ್ರಮೋದ್ ಕುಮಾರ್ ಶರ್ಮಾ ಹೇಳುತ್ತಾರೆ.
ಮಾವ್ಣೋ ಭಾಷೆಯ ವಿಷಯದಲ್ಲಿ ಖೋರ್ತಾ ಮತ್ತು ಖೇತ್ರಿ ಸಂಪರ್ಕ ಭಾಷೆಗಳು. ಇವು ಕಡಿಮೆ ಬಳಕೆಯ ಮಾವ್ಣೋ ಮಾತನಾಡುವವರ ಮೇಲೆ ಪ್ರಭಾವ ಬೀರುತ್ತಿವೆ. "ಬಲವಾದ ಸಮುದಾಯಗಳ ಭಾಷೆಗಳ ಪ್ರಭಾವದಿಂದ ನಾವು ನಮ್ಮ ಮಾತೃಭಾಷೆಯನ್ನು ಮರೆಯುತ್ತಿದ್ದೇವೆ" ಎಂದು ಮನೋಜ್ ಹೇಳುತ್ತಾರೆ.
ಎರಡು ತಿಂಗಳ ಕಾರ್ಯಾಗಾರದ ಕೊನೆಯಲ್ಲಿ, ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಮೂಲ ವ್ಯಾಕರಣವನ್ನು ಸಿದ್ಧಪಡಿಸಲಾಗುವುದು. ಇದು ಸಮುದಾಯದ ಜನರು ಸಿದ್ಧಪಡಿಸಿದ ಈ ರೀತಿಯ ಮೊದಲ ಪುಸ್ತಕವಾಗಿರುತ್ತದೆ. ಇವರ್ಯಾರೂ ಭಾಷಾ ವಿದ್ವಾಂಸರಲ್ಲ. ಅವರ ಪ್ರಯತ್ನಗಳಿಂದ, ಪರಿಸ್ಥಿತಿಯಲ್ಲಿ ಬದಲಾವಣೆ ಕಾಣಬಹುದು ಎನ್ನುವುದು ಅವರ ಆಶಯ.
"ಉಳಿದ [ಪಿವಿಟಿಜಿ ಅಲ್ಲದ] ಸಮುದಾಯಗಳು ತಮ್ಮದೇ ಭಾಷೆಯಲ್ಲಿ ಪುಸ್ತಕಗಳನ್ನು ಬರೆಯುತ್ತವೆ" ಎಂದು ಜಗನ್ನಾಥ್ ಹೇಳುತ್ತಾರೆ. ಆದರೆ ಅವರ ಸಮುದಾಯದ ಜನರು ತಮ್ಮ ಭಾಷೆಯನ್ನು ಮಾತನಾಡುವುದನ್ನು ಮುಂದುವರಿಸಿದರೆ ಮಾತ್ರ ಇದೆಲ್ಲ ಸಾಧ್ಯ. "ಹಳ್ಳಿಯಲ್ಲಿರುವ ಹಿರಿಯರು ಅಥವಾ ವಯಸ್ಸಾದ ಪೋಷಕರು ಮಾತ್ರ ನಮ್ಮ ಸ್ಥಳೀಯ ಭಾಷೆಯನ್ನು ಮಾತನಾಡುತ್ತಾರೆ. ಆಗ ಮಾತ್ರ ನಮ್ಮ ಮಕ್ಕಳು ಮನೆಯಲ್ಲಿ ಭಾಷೆಯನ್ನು ಕಲಿಯುತ್ತಾರೆ, ಆಗ ಮಾತ್ರ ಅವರು ಅದನ್ನು ಮಾತನಾಡಲು ಸಾಧ್ಯವಾಗುತ್ತದೆ.”
*****
2011ರ ಜನಗಣತಿ ಭಾರತದಲ್ಲಿ 19,000ಕ್ಕೂ ಹೆಚ್ಚು ವಿಭಿನ್ನ ಮಾತೃಭಾಷೆಗಳನ್ನು ಗುರುತಿಸಿದೆ. ಇವುಗಳಲ್ಲಿ ಕೇವಲ 22 ಭಾಷೆಗಳನ್ನು ಮಾತ್ರ ಅನುಸೂಚಿ 8ರ ಅಡಿಯಲ್ಲಿ ಅಧಿಕೃತವಾಗಿ ಗುರುತಿಸಲಾಗಿದೆ. ಲಿಪಿಯ ಕೊರತೆ ಅಥವಾ ನಿರರ್ಗಳವಾಗಿ ಮಾತನಾಡುವವರ ಕೊರತೆಯಿಂದಾಗಿ ಹಲವಾರು ಮಾತೃಭಾಷೆಗಳು 'ಭಾಷೆಯ' ಸ್ಥಾನಮಾನವನ್ನು ಪಡೆಯುವುದಿಲ್ಲ.
ಅಧಿಕೃತ ಭಾಷಾ ಸ್ಥಾನಮಾನವನ್ನು ಹೊಂದಿರದ 31 ಕ್ಕೂ ಹೆಚ್ಚು ಮಾತೃಭಾಷೆಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಅನುಸೂಚಿ 8ರ ಅಡಿಯಲ್ಲಿ ಎರಡು ಭಾಷೆಗಳನ್ನು ಗುರುತಿಸಲಾಗಿದೆ - ಹಿಂದಿ ಮತ್ತು ಬಂಗಾಳಿ – ಅವು ಇಂದು ಜಾರ್ಖಂಡ್‌ನ ಪ್ರಬಲ ಭಾಷೆಗಳಾಗಿ ಮುಂದುವರೆದಿವೆ - ಅವುಗಳನ್ನು ಶಾಲೆಗಳಲ್ಲಿ ಸಹ ಕಲಿಸಲಾಗುತ್ತದೆ ಮತ್ತು ರಾಜ್ಯವು ಔಪಚಾರಿಕ ಸಂವಹನದಲ್ಲಿ ಬಳಸುತ್ತದೆ. ಸಂತಾಲಿ ಜಾರ್ಖಂಡ್ ರಾಜ್ಯದ ಏಕೈಕ ಆದಿವಾಸಿ ಭಾಷೆಯಾಗಿದ್ದು, ಇದನ್ನು ಅನುಸೂಚಿ ಎಂಟರಡಿಯಲ್ಲಿ ಒಂದು ಭಾಷೆಯಾಗಿ ಪಟ್ಟಿ ಮಾಡಲಾಗಿದೆ.
ರಾಜ್ಯದ ಇತರ 31 ಭಾಷೆಗಳಿಗೆ ವಿಶೇಷವಾಗಿ ಪಿವಿಟಿಜಿ ಸಮುದಾಯಗಳು ಮಾತನಾಡುವ ಭಾಷೆಗಳು ಇಂದು ಅಳಿವಿನ ಅಪಾಯದಲ್ಲಿವೆ.
"ಹಮಾರಿ ಭಾಷಾ ಮಿಕ್ಸ್ ಹೋತಿ ಜಾ ರಾಹಿ ಹೈ [ನಮ್ಮ ಮಾತೃಭಾಷೆ ಕಲಬೆರಕೆಯಾಗುತ್ತಿದೆ]" ಎಂದು ಸಬರ್ ಸಮುದಾಯವನ್ನು ಪ್ರತಿನಿಧಿಸುವ ಸೇನೆಯಲ್ಲಿ ಜವಾನರಾಗಿರುವ ಮಹಾದೇವ್ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.
ಜಾರ್ಖಂಡ್ ರಾಜ್ಯದಲ್ಲಿ, 32 ವಿಭಿನ್ನ ಮಾತೃಭಾಷೆಗಳಿದ್ದರೂ ಸಂತಾಲಿಯನ್ನು ಮಾತ್ರ ಅನುಸೂಚಿ 8ರ ಅಡಿ ಅದನ್ನೊಂದು ಭಾಷೆಯಾಗಿ ಪಟ್ಟಿ ಮಾಡಲಾಗಿದೆ, ಆದರೆ ಹಿಂದಿ ಮತ್ತು ಬಂಗಾಳಿ ರಾಜ್ಯದಲ್ಲಿ ಪ್ರಬಲ ಭಾಷೆಗಳಾಗಿ ಮುಂದುವರೆದಿವೆ
ಗ್ರಾಮ ಪಂಚಾಯಿತಿಗಳಂತಹ ಸ್ಥಳಗಳಲ್ಲಿ ಸಮುದಾಯ ಪ್ರಾತಿನಿಧ್ಯದ ಕೊರತೆಯೂ ಅವರ ಭಾಷೆ ಅಳಿವಿನಂಚಿನಲ್ಲಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳುತ್ತಾರೆ. "ಸಬರ ಸಮುದಾಯ ಬಹಳವಾಗಿ ಚದುರಿಹೋಗಿದೆ. ನಾವು ವಾಸಿಸುವ ಹಳ್ಳಿಯಲ್ಲಿ [ಜೆಮ್ಷೆಡ್‌ಪುರ ಬಳಿ] ನಮ್ಮವು ಕೇವಲ 8-10 ಮನೆಗಳಿವೆ." ಉಳಿದವರು ಇತರ ಆದಿವಾಸಿ ಸಮುದಾಯಗಳ ಜನರು ಮತ್ತು ಕೆಲವರು ಆದಿವಾಸಿಗಳಲ್ಲದವರು. "ನನ್ನ ಭಾಷೆ ಸಾಯುವುದನ್ನು ನೋಡಲು ಬಹಳ ಕಷ್ಟವಾಗುತ್ತದೆ" ಎಂದು ಅವರು ಪರಿಗೆ ಹೇಳಿದರು.
ಮಹಾದೇವ್ ತನ್ನ ಮಾತೃಭಾಷೆ ಸಬರ್ ಭಾಷೆಯನ್ನು ಒಂದು ಭಾಷೆಯಾಗಿ ಗುರುತಿಸುವುದು ಬಹಳ ಅಪರೂಪ ಎನ್ನುತ್ತಾರೆ. “ಲಿಖಿತ ರೂಪದಲ್ಲಿರುವ ಭಾಷೆಗಳಿಗೇ ಯಾವಾಗಲೂ ಮೊದಲ ಪ್ರಾಶಸ್ತ್ಯ ಸಿಗುತ್ತದೆ” ಎಂದು ಅವರು ಹೇಳುತ್ತಾರೆ.
*****
ಬುಡಕಟ್ಟು ಸಮುದಾಯಗಳನ್ನು ಅವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಂಶಗಳನ್ನು ಸಂಶೋಧಿಸುವ ಮೂಲಕ ಇತರ ಸಮುದಾಯಗಳೊಂದಿಗೆ ಸಂಪರ್ಕಿಸುವ ಉದ್ದೇಶದಿಂದ 1953ರಲ್ಲಿ ಟಿಆರ್‌ಐ ಸಂಸ್ಥೆಯನ್ನು ಸ್ಥಾಪಿಸಲಾಯಿತು.
2018ರಿಂದ, ಟಿಆರ್ಐ ಅಸುರ್ ಮತ್ತು ಬಿರ್ಜಿಯಾ ಸೇರಿದಂತೆ ಹಲವಾರು ದುರ್ಬಲ ಆದಿವಾಸಿ ಗುಂಪುಗಳ ಭಾಷಾ ಅಕ್ಷರಮಾಲೆಗಳನ್ನು ಪ್ರಕಟಿಸಿದೆ. ಪುಸ್ತಕಗಳ ಸರಣಿಯು ಭಾಷೆಯ ಗಾದೆಗಳು, ನುಡಿಗಟ್ಟುಗಳು, ಜಾನಪದ ಕಥೆಗಳು ಮತ್ತು ಕವಿತೆಗಳನ್ನು ಪ್ರಕಟಿಸುವುದನ್ನು ಒಳಗೊಂಡಿದೆ.
ಈ ಉಪಕ್ರಮವು ಸಮುದಾಯ ಸ್ವತಃ ರೂಪಿಸಿದ ಭಾಷಾ ಪುಸ್ತಕಗಳನ್ನು ಪ್ರಕಟಿಸಿದ್ದರೂ, ಅದು ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ. "ಟಿಆರ್‌ಐ ಕಪಾಟುಗಳಲ್ಲಿನ ಪುಸ್ತಕಗಳು ಶಾಲೆಗಳಿಗೆ ತಲುಪಿದರೆ ಮಾತ್ರ ನಮ್ಮ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಓದಲು ಸಾಧ್ಯವಾಗುತ್ತದೆ" ಎಂದು ಜಗನ್ನಾಥ್ ಹೇಳುತ್ತಾರೆ.
ಈ ಕಾರ್ಯಾಗಾರಗಳನ್ನು ಮಾಜಿ ಟಿಆರ್‌ಐ ನಿರ್ದೇಶಕ ರಣೇಂದ್ರ ಕುಮಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದರು. ಅವರು ಕೂಡ ಜಗನ್ನಾಥ್ ಅವರ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತಾರೆ, "ಪಿವಿಟಿಜಿ ಶಾಲೆಗಳು ಇರುವ ಪ್ರದೇಶಗಳಲ್ಲಿ, ಅವುಗಳನ್ನು ಜಾರಿಗೆ ತರಬೇಕು. ಆಗ ಮಾತ್ರ ಈ ಕೆಲಸದ ನಿಜವಾದ ಉದ್ದೇಶ ಈಡೇರುತ್ತದೆ.”
ಈ ಕಾರ್ಯಾಗಾರಗಳನ್ನು ಆಯೋಜಿಸುವಲ್ಲಿ ಇರುವ ದೊಡ್ಡ ಸವಾಲೆಂದರೆ ಮೂಲ ಭಾಷೆಯನ್ನು ತಿಳಿದಿರುವವರನ್ನು ಹುಡುಕುವುದು. ಪ್ರಮೋದ್ ಕುಮಾರ್ ಶರ್ಮಾ ವಿವರಿಸುತ್ತಾರೆ, "ಮೂಲ ಭಾಷೆಯನ್ನು ತಿಳಿದಿರುವ ಹೆಚ್ಚಿನ ಜನರಿಗೆ ಬರೆಯಲು ಬರುವುದಿಲ್ಲ." ಹೀಗಾಗಿ ಭಾಷೆಯನ್ನು ತಕ್ಕಮಟ್ಟಿಗೆ ಬಲ್ಲವರು ಮತ್ತು ಬರೆಯಬಲ್ಲವರನ್ನು ಟಿಆರ್‌ಐ ಸಂಸ್ಥೆಗೆ ಕರೆಯಿಸಿ ವರ್ಣಮಾಲೆ ಪುಸ್ತಕವನ್ನು ಸಿದ್ಧಪಡಿಸಲಾಗುತ್ತದೆ.
"ಈ ಕೆಲಸದಲ್ಲಿ ಭಾಗವಹಿಸಲು ಭಾಷಾ ವಿದ್ವಾಂಸರಾಗಿರಬೇಕು ಎಂಬ ಷರತ್ತನ್ನು ನಾವು ಹಾಕಿಲ್ಲ. ಆಡುಮಾತಿನ ಭಾಷೆಯಲ್ಲಿ ವ್ಯಾಕರಣವನ್ನು ಸಿದ್ಧಪಡಿಸಿದರೆ, ಅದು ಹೆಚ್ಚು ಪ್ರಾಯೋಗಿಕವಾಗಿರುತ್ತದೆ ಎನ್ನುವುದು ನಮ್ಮ ನಂಬಿಕೆ" ಎಂದು ಜಾರ್ಖಂಡ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಸಂಸ್ಥೆಯ ಮಾಜಿ ಅಧ್ಯಾಪಕ ಸದಸ್ಯ ಪ್ರಮೋದ್ ಹೇಳುತ್ತಾರೆ.
ವಿಪರ್ಯಾಸವೆಂದರೆ, ಪಿವಿಟಿಜಿ ಭಾಷೆಗಳಲ್ಲಿ ವರ್ಣಮಾಲೆಗಳು, ವ್ಯಾಕರಣ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ತಯಾರಿಸಲು ದೇವನಾಗರಿ ಲಿಪಿಯನ್ನು ಬಳಸಲಾಗುತ್ತಿದೆ. ವ್ಯಾಕರಣವನ್ನು ತಯಾರಿಸಲು, ಹಿಂದಿ ವ್ಯಾಕರಣ ನೀಲನಕ್ಷೆಯನ್ನು ಬಳಸಲಾಗುತ್ತದೆ, ಮತ್ತು ಪ್ರಾಚೀನ ಭಾಷೆಗಳಲ್ಲಿ ಇಲ್ಲದ ಅಕ್ಷರಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಅವುಗಳ ಭಾಷೆಯಲ್ಲಿ ಇರುವ ಅಕ್ಷರಗಳ ಆಧಾರದ ಮೇಲೆ ವ್ಯಾಕರಣವನ್ನು ತಯಾರಿಸಲಾಗುತ್ತದೆ. "ಉದಾಹರಣೆಗೆ, 'ಣ' ಅಕ್ಷರವು ಮಾವ್ಣೋ ಭಾಷೆಯಲ್ಲಿದೆ ಮತ್ತು ಸಬರ್ ಭಾಷೆಯಲ್ಲಿಲ್ಲ. ಅಂತೆಯೇ, ಒಂದು ಸ್ವರ ಅಥವಾ ವ್ಯಂಜನವು ಹಿಂದಿಯಲ್ಲಿಲ್ಲದಿದ್ದು ಅದು ಬುಡಕಟ್ಟು ಭಾಷೆಯಲ್ಲಿ ಅಸ್ತಿತ್ವದಲ್ಲಿದ್ದರೆ, ಅದನ್ನು ಸೇರಿಸಲಾಗುತ್ತದೆ.
"ಆದರೆ ನಾವು ಲಿಪಿಯನ್ನು ಮಾತ್ರ ಎರವಲು ಪಡೆಯುತ್ತೇವೆ, ಅಕ್ಷರಗಳು ಮತ್ತು ಪದಗಳನ್ನು ಅಂತಿಮವಾಗಿ ಅವರ ಸ್ಥಳೀಯ ಭಾಷೆಯಲ್ಲಿ ಉಚ್ಚಾರಣೆಗೆ ಅನುಗುಣವಾಗಿ ಬರೆಯಲಾಗುತ್ತದೆ" ಎಂದು 60 ವರ್ಷದ ಪ್ರಮೋದ್ ಹೇಳುತ್ತಾರೆ.
*****
ಅದು ಸಂಜೆಯ ಹೊತ್ತು, ಜಗನ್ನಾಥ್, ಮನೋಜ್ ಮತ್ತು ಮಹದೇವ್ ಮೊರಾಬಾಡಿ ಚೌಕ್‌ನಲ್ಲಿ ಇತರ ಶಿಬಿರಾರ್ಥಿಗಳೊಂದಿಗೆ ಚಹಾ ಸೇವಿಸುತ್ತಿದ್ದರು. ಭಾಷೆಯ ಚರ್ಚೆಯು ಇತರ ವಿಷಯಗಳತ್ತ ಹೊರಳತೊಡಗಿತು ಮತ್ತು ವಿಷಯವು ವ್ಯಕ್ತಿಗೆ ಮಾತೃಭಾಷೆಯಲ್ಲಿ ಮಾತನಾಡಲು ಕಾಡುವ ಸಂಬಂಧಿಸಿದ ಹಿಂಜರಿಕೆ ಮತ್ತು ಸಂಕೋಚದ ಕುರಿತು ಮಾತು ಆರಂಭವಾಯಿತು.
ಆದಿಮ ಸಮುದಾಯಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ. ಪರಹಿಯಾ ಸಮುದಾಯಕ್ಕೆ ಸೇರಿದ ರಿಂಪು ಕುಮಾರಿ ಅವರಿಗೂ ಇದೇ ರೀತಿಯ ಅನುಭವವಾಗಿದೆ. ಅವರು ಇಡೀ ದಿನ ಶಾಂತವಾಗಿದ್ದರು ಮತ್ತು ಮಾತುಕತೆ ನಡುವೆ ಅವರು ಅಸೌಕರ್ಯ ಎದುರಿಸುತ್ತಿರುವುದು ಕಾಣುತ್ತಿತ್ತು. ನಂತರ ಅವರು ಬಹಳ ಸಂಕೋಚದಿಂದ ಮೌನ ಮುರಿದು, "ನಾನು ಪರಹಿಯಾ [ಭಾಷೆಯಲ್ಲಿ] ಮಾತನಾಡುವಾಗ, ಜನರು ಗೇಲಿ ಮಾಡುತ್ತಾರೆ" ಎಂದು ಹೇಳಿದರು. ರಿಂಪು (26) ಬೇರೆ ಸಮುದಾಯ ವ್ಯಕ್ತಿಯನ್ನು ಮದುವೆಯಾಗಿದ್ದು, “ಗಂಡನ ಮನೆಯಲ್ಲೇ ಗೇಲಿಗೆ ಒಳಗಾದರೆ, ಹೊರಗಿನ ಜನರೊಂದಿಗೆ ನಮ್ಮ ಭಾಷೆಯಲ್ಲಿ ಮಾತನಾಡಲು ಹೇಗೆ ಸಾಧ್ಯ?" ಎಂದು ಕೇಳುತ್ತಾರೆ.
ಅವರು ತಾನು ಮತ್ತು ತನ್ನ ಸಮುದಾಯದ ಜನರು ತಮ್ಮ ಸ್ವಂತ ಭಾಷೆಯಲ್ಲಿ ಮಾತನಾಡುವಾಗ ಅನುಭವಿಸುವ "ಅವಮಾನ"ವನ್ನು ನಿವಾರಿಸಲು ಬಯಸುತ್ತಾರೆ. ಅಷ್ಟು ಹೇಳಿದ ನಂತರ ಅವರು, “ನನಗೆ ಇಲ್ಲಿ ಮಾತನಾಡಲು ಇಷ್ಟವಿಲ್ಲ. ಈ ಕುರಿತು ನೀವು ಹೆಚ್ಚು ತಿಳಿದುಕೊಳ್ಳಲು ಬಯಸಿದಲ್ಲಿ ನಮ್ಮ ಊರಿಗೆ ಬನ್ನಿ” ಎಂದು ಹೇಳಿದರು.
ಈ ಕಥಾನಕವನ್ನು ವರದಿ ಮಾಡಲು ಸಹಾಯ ಮಾಡಿದ ರಣೇಂದ್ರ ಕುಮಾರ್ ಅವರಿಗೆ ವರದಿಗಾರರು ಧನ್ಯವಾದ ಅರ್ಪಿಸುತ್ತಾರೆ.
ಪರಿಯ ' ಅಳಿವಿನಂಚಿನಲ್ಲಿರುವ ಭಾಷಾ ಯೋಜನೆ ' ಭಾರತದ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಅದನ್ನು ಮಾತನಾಡುವ ಸಾಮಾನ್ಯ ಜನರ ಮೂಲಕ ಮತ್ತು ಅವರ ಜೀವನ ಅನುಭವಗಳ ಮೂಲಕ ದಾಖಲಿಸುವ ಗುರಿಯನ್ನು ಹೊಂದಿದೆ.
ಅನುವಾದಕರು: ಶಂಕರ ಎನ್ ಕೆಂಚನೂರು