ಡಮ್-ಡಮ್-ಡಮ್…‌ ಡಮ್‌-ಡಮ್-ಡಮ್‌…! ಇದು ನೀವು ಶಾಂತಿ ನಗರ ಬಸ್ತಿಯ ಯಾವ ಗಲ್ಲಿಯಲ್ಲಿ ಹೋದರೂ ಈ ಮೋಹಕ ಸದ್ದು ನಿಮ್ಮನ್ನು ಹಿಂಬಾಲಿಸುತ್ತದೆ. ಈ ಗಲ್ಲಿಗಳಲ್ಲಿ ಢೋಲಕ್‌ ವಾದ್ಯವನ್ನು ತಯಾರಿಸಿ ಅವುಗಳ ನಾದವನ್ನು ಹದಕ್ಕೆ ತರುವ ಕೆಲಸ ನಡೆಯುತ್ತಿರುತ್ತದೆ. ನಾವು 37 ಇರ್ಫಾನ್‌ ಶೇಖ್‌ ಎನ್ನುವವರೊಂದಿಗೆ ನಡೆದು ಹೋಗುತ್ತಿದ್ದೆವು. ಮುಂಬಯಿ ನಗರದ ಉತ್ತರ ಉಪನಗರದಲ್ಲಿರುವ ಈ ವಲಸೆಗಾರರ ಬಸ್ತಿಯಲ್ಲಿನ ಇತರ ಕುಶಲಕರ್ಮಿಗಳನ್ನು ಅವರು ನಮಗೆ ಪರಿಚಯಿಸಲಿದ್ದರು.

ಇಲ್ಲಿನ ಬಹುತೇಕ ಕುಶಲಕರ್ಮಿಗಳು ತಮ್ಮ ಬೇರುಗಳು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವುದಾಗಿ ಹೇಳುತ್ತಾರೆ. ಅವರಲ್ಲಿ ಸುಮಾರು 50 ಜನರು ಇಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. “ನೀವು ಎಲ್ಲಿ ನೋಡಿದರೂ ನಮ್ಮ ಬಿರದಾರಿ [ಸಮುದಾಯದವರು] ಈ ವಾದ್ಯಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿರುವುದನ್ನು ಕಾಣುತ್ತೀರಿ” ಎಂದು ಅವರು ಹೆಮ್ಮೆಯಿಂದ ಹೇಳಿದರು. “ಇಲ್ಲಿ ತಯಾರಾದ ಢೋಲಕ್‌ಗಳು ಮುಂಬಯಿ ಮತ್ತು ರಾಜ್ಯದ ಇತರ ಭಾಗಗಳಿಗೆ ಹೋಗುತ್ತವೆ” ಎನ್ನುವಾಗ ಅವರ ಮುಖದಲ್ಲಿ ಹೆಮ್ಮೆಯ ಗೆರೆಗಳು ಮೂಡಿ ಮರೆಯಾದವು. (ಬಿರದಾರಿ ಎನ್ನು ಪದಕ್ಕೆ ʼಸಹೋದರತ್ವʼ ಎನ್ನುವ ಅಕ್ಷರಶಃ ಅರ್ಥವಿದೆ; ಆದರೆ ಇದನ್ನು ಸಾಮಾನ್ಯವಾಗಿ ಕುಲ, ಸಮುದಾಯ ಅಥವಾ ಸಹೋದರತ್ವವ್ನನು ಸೂಚಿಸಲು ಬಳಸಲಾಗುತ್ತದೆ).

ಢೋಲಕ್‌ ಎಂಜಿನಿಯರ್‌ಗಳ ವಿಡಿಯೋ ನೋಡಿ

ಇರ್ಫಾನ್‌ ಬಾಲ್ಯದಿಂದಲೂ ವ್ಯವಹಾರದೊಡನೆ ಬೆಳೆದವರು. ಈ ಮಧ್ಯಮ ಗಾತ್ರದ ಮದ್ದಳೆ ರೀತಿಯ ಢೋಲಕ್‌ ವಾದ್ಯವನ್ನು ತಯಾರಿಸುವ ಈ ಕಲೆಗೆ ತಲೆಮಾರುಗಳ ಇತಿಹಾಸವಿದೆ. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಇರ್ಫಾನ್‌ ಮತ್ತು ಅವರ ಸಮುದಾಯವು ಉತ್ತರ ಪ್ರದೇಶದಿಂದ ತರಿಸುತ್ತದೆ. ಮರದಿಂದ ಹಿಡಿದು, ಹಗ್ಗಗಳು ಮತ್ತು ಬಣ್ಣದ ತನಕ ಅಲ್ಲಿಂದಲೇ ತರಿಸಲಾಗುತ್ತದೆ. “ಅದನ್ನು ನಾವೇ ತಯಾರಿಸುತ್ತೇವೆ ಮತ್ತು ರಿಪೇರಿ ಮಾಡುತ್ತೇವೆ… ನಾವು ಎಂಜಿನಿಯರ್‌ಗಳು” ಎನ್ನುವಾಗ ಅವರ ದನಿಯಲ್ಲಿದ್ದ ಹೆಮ್ಮೆಯನ್ನು ಗುರುತಿಸಬಹುದಿತ್ತು.

ಇರ್ಫಾನ್‌ ಅವರದು ಬಹಳ ಸಂಶೋಧನಾಶೀಲ ವ್ಯಕ್ತಿತ್ವ. ಅವರು ಗೋವಾದಲ್ಲಿ ಒಮ್ಮೆ ಆಫ್ರಿಕನ್‌ ವ್ಯಕ್ತಿಯೊಬ್ಬ ಜಂಬೆ ಎನ್ನುವ ವಾದ್ಯವನ್ನು ಬಾರಿಸುವುದನ್ನು ನೋಡಿದ್ದರು. ಇದೀಗ ಅವರು ಅದನ್ನು ಕೂಡಾ ತಯಾರಿಸುತ್ತಿದ್ದಾರೆ. ಆ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸಿದ್ದಾರೆ. “ಅದೊಂದು ಅದ್ಭುತ ವಾದ್ಯ, ಅದನ್ನು ಇಲ್ಲಿನ ಜನರು ನೋಡಿರಲಿಲ್ಲ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಸಂಶೋಧನಾಶೀಲ ಮನೋಭಾವ ಮತ್ತು ಕೌಶಲವನ್ನು ಹೊಂದಿದ್ದರೂ ಈ ವೃತ್ತಿ ತನಗೆ ಅರ್ಹ ಗೌರವವನ್ನು ತಂದುಕೊಟ್ಟಿಲ್ಲ ಎಂದು ಅವರು ಹೇಳುತ್ತಾರೆ. ಜೊತೆಗೆ ಅದು ಒಂದು ವ್ಯವಹಾರವಾಗಿ ಹೆಚ್ಚಿನ ಲಾಭವನ್ನೂ ತಂದುಕೊಟ್ಟಿಲ್ಲ. ಪ್ರಸ್ತುತ ಮುಂಬಯಿಯ ಢೋಲಕ್‌ ತಯಾರಕರು ಆನ್ಲೈನ್‌ ಮಾರಾಟ ವ್ಯವಸ್ಥೆಯಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಗ್ರಾಹಕರು ಚೌಕಾಶಿ ಮಾಡುವುದಲ್ಲದೆ, ಆನ್ಲೈನಿನಲ್ಲಿ ಸಿಗುವ ಅಗ್ಗದ ಪರ್ಯಾಯಗಳನ್ನು ನಮಗೆ ತೋರಿಸುತ್ತಾರೆ ಎಂದು ಅವರು ಹೇಳುತ್ತಾರೆ.

“ಢೋಲಕ್‌ ನುಡಿಸುವವರದೇ ಒಂದು ಪರಂಪರೆಯಿದೆ. ನಮ್ಮ ಸಮುದಾಯದಲ್ಲಿ ಅದನ್ನು ನುಡಿಸುವ ಪದ್ಧತಿಯಿಲ್ಲ. ನಾವು ಕೇವಲ ಅದನ್ನು ತಯಾರಿಸುವ ಕೆಲಸವನ್ನಷ್ಟೇ ಮಾಡುತ್ತೇವೆ” ಎನ್ನುತ್ತಾರೆ ಇರ್ಫಾನ್.‌ ಧಾರ್ಮಿಕ ನಿರ್ಬಂಧಗಳ ಕಾರಣದಿಂದಾಗಿ ಈ ವಾದ್ಯವನ್ನು ತಯಾರಿಸುವ ಸಮುದಾಯ ಅದನ್ನು ನುಡಿಸುವುದಿಲ್ಲ. ಆದರೂ, ಅವರು ದುರ್ಗಾ ಪೂಜೆ ಮತ್ತು ಗಣೇಶ ಹಬ್ಬದ ಸಮಯದಲ್ಲಿ ಇದನ್ನು ನುಡಿಸುವ ಗ್ರಾಹಕರಿಗಾಗಿ ಅವರು ಅದನ್ನು ತಯಾರಿಸುತ್ತಾರೆ.

PHOTO • Aayna
PHOTO • Aayna

ಇರ್ಫಾನ್ ಶೇಖ್ ( ಎಡ ) ಮತ್ತು ಅವರ ಬಸ್ತಿಯ ಜನರು , ಉತ್ತರ ಪ್ರದೇಶದಿಂದ ವಲಸೆ ಬಂದವರು , ಈಗ ತಲೆಮಾರುಗಳಿಂದ ಢೋಲಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ . ಇರ್ಫಾನ್ ತನ್ನದೇ ಆದ ಜಂಬೆ ವಾದ್ಯವನ್ನು ರೂಪಿಸುವ ಮೂಲಕ ವ್ಯಾಪಾರಕ್ಕೆ ಹೊಸತನವನ್ನು ತಂದಿದ್ದಾರೆ

PHOTO • Aayna
PHOTO • Aayna

ಇರ್ಫಾನ್‌ ಬಾಲ್ಯದಿಂದಲೂ ಢೋಲಕ್‌ಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ವ್ಯವಹಾರದಲ್ಲಿನ ಲಾಭದ ಕೊರತೆ ಅವರಲ್ಲಿ ನೋವು ಮತ್ತು ಆತಂಕವನ್ನು ಹುಟ್ಟಿಸುತ್ತಿದೆ

ಬಸ್ತಿಯಲ್ಲಿ ಢೋಲಕ್‌ ನುಡಿಸುತ್ತಾ ಹಾಡುವ ಆಸೆಯನ್ನು ಹೊಂದಿರುವ ಮಹಿಳೆಯರಿದ್ದಾರೆ. ಆದರೆ ಧಾರ್ಮಿಕ ಕಟ್ಟುಪಾಡಿನ ಮೇಲಿನ ಗೌರವದ ಕಾರಣದಿಂದಾಗಿ ಅವರು ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಅವರು ವೃತ್ತಿಪರ ಢೋಲಕ್‌ ತಯಾರಿಕೆ, ಮಾರಾಟದಿಂದಲೂ ದೂರವಿದ್ದಾರೆ.

“ಈ ಕೆಲಸ ಒಳ್ಳೆಯದೇ ಆದರೆ ವ್ಯಾಪಾರ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಆಸಕ್ತಿದಾಯಕವಾಗಿ ಉಳಿದಿಲ್ಲ. ಲಾಭವೇ ಇಲ್ಲ. ಇವತ್ತು ಏನೂ ಸಿಕ್ಕಿಲ್ಲ. ನಿನ್ನೆಯೂ ನಾನು ರಸ್ತೆಯಲ್ಲಿದ್ದೆ. ಇಂದು ಕೂಡಾ ರಸ್ತೆಯಲ್ಲಿದ್ದೇನೆ” ಎನ್ನುತ್ತಾರೆ ಇರ್ಫಾನ್.‌

ಅನುವಾದ: ಶಂಕರ. ಎನ್. ಕೆಂಚನೂರು

ਆਈਨਾ ਇੱਕ ਵਿਜ਼ੂਅਲ ਅਤੇ ਸਟਿਲ ਫੋਟੋਗ੍ਰਾਫਰ ਹਨ।

Other stories by Aayna
Editor : Pratishtha Pandya

ਪ੍ਰਤਿਸ਼ਠਾ ਪਾਂਡਿਆ PARI ਵਿੱਚ ਇੱਕ ਸੀਨੀਅਰ ਸੰਪਾਦਕ ਹਨ ਜਿੱਥੇ ਉਹ PARI ਦੇ ਰਚਨਾਤਮਕ ਲੇਖਣ ਭਾਗ ਦੀ ਅਗਵਾਈ ਕਰਦੀ ਹਨ। ਉਹ ਪਾਰੀਭਾਸ਼ਾ ਟੀਮ ਦੀ ਮੈਂਬਰ ਵੀ ਹਨ ਅਤੇ ਗੁਜਰਾਤੀ ਵਿੱਚ ਕਹਾਣੀਆਂ ਦਾ ਅਨੁਵਾਦ ਅਤੇ ਸੰਪਾਦਨ ਵੀ ਕਰਦੀ ਹਨ। ਪ੍ਰਤਿਸ਼ਠਾ ਦੀਆਂ ਕਵਿਤਾਵਾਂ ਗੁਜਰਾਤੀ ਅਤੇ ਅੰਗਰੇਜ਼ੀ ਵਿੱਚ ਪ੍ਰਕਾਸ਼ਿਤ ਹੋ ਚੁੱਕਿਆਂ ਹਨ।

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru