“ಒಂದು ದಿನ ನಾನು ದೇಶಕ್ಕಾಗಿ ಒಲಂಪಿಕ್ ಮೆಡಲ್ ಗೆಲ್ಲಬಯಸುತ್ತೇನೆ” ಎನ್ನುತ್ತಾ ತನ್ನ ಸ್ಪೋರ್ಟ್ಸ್ ಅಕಾಡೆಮಿಯ ತರಬೇತಿಯ ಅಂಗವಾಗಿ ತಾರ್ ರಸ್ತೆಯಲ್ಲಿ ಬಹಳ ದೂರದವರೆಗಿನ ಓಟ ಮುಗಿಸಿ ಬಂದ ಆಕೆ ಏದುಸಿರು ಬಿಡುತ್ತಾ ಹೇಳಿದಳು. ಆಕೆಯ ದಣಿದ ಮತ್ತು ಗಾಯಗೊಂಡ ಪಾದಗಳು ನಾಲ್ಕು ಗಂಟೆಗಳ ಕಾಲದ ಕಠಿಣ ಪರಿಶ್ರಮದ ನಂತರ ವಿಶ್ರಾಂತಿ ಪಡೆಯುತ್ತಿದ್ದವು.
ಈ 13 ವರ್ಷದ ಬಾಲಕಿ ಯಾವುದೋ ಆಧುನಿಕತೆಯ ಕಾರಣಕ್ಕಾಗಿ ಬರಿಗಾಲಿನಲ್ಲಿ ಓಡುತ್ತಿಲ್ಲ. “ನನ್ನ ಅಪ್ಪ-ಅಮ್ಮನಿಗೆ ದುಬಾರಿ ಸ್ಪೋರ್ಟ್ಸ್ ಶೂ ಕೊಡಿಸುವಷ್ಟು ಶಕ್ತಿಯಿಲ್ಲ” ಎನ್ನುತ್ತಾಳಾಕೆ.
ಕ್ರೀಡೆಯಲ್ಲಿ ಮಹತ್ವವಾದದ್ದನ್ನು ಸಾಧಿಸುವ ಕನಸನ್ನು ಹೊತ್ತಿರುವ ವರ್ಷಾ ಕದಮ್, ಮರಾಠವಾಡ ಪ್ರಾಂತ್ಯದ ಬಡ ಜಿಲ್ಲೆಗಳಲ್ಲಿ ಒಂದಾದ ಪರ್ಭಾನಿಯ ಕೃಷಿ ಕೂಲಿ ದಂಪತಿಗಳಾದ ವಿಷ್ಣು ಮತ್ತು ದೇವಶಾಲಾ ದಂಪತಿಗಳ ಪುತ್ರಿ. ಅವರ ಕುಟುಂಬವು ಮಹಾರಾಷ್ಟ್ರದ ಪರಿಶಿಷ್ಟ ಜಾತಿಗೆ ಸೇರಿದ ಮಾತಂಗ್ ಸಮುದಾಯಕ್ಕೆ ಸೇರಿದೆ.
“ನನಗೆ ರನ್ನಿಂಗ್ ಎಂದರೆ ಇಷ್ಟ” ಎನ್ನುವಾಗ ಆಕೆಯ ಕಣ್ಣುಗಳು ಹೊಳೆಯುತ್ತವೆ. “ಐದು ಕಿಲೋಮೀಟರ್ ಬುಲ್ಡಾನಾ ಅರ್ಬನ್ ಫಾರೆಸ್ಟ್ ಮ್ಯಾರಥಾನ್ 2021ರಲ್ಲಿ ಓಡಿದ್ದು ನನ್ನ ಮೊದಲ ಓಟವಾಗಿತ್ತು. ಅದರಲ್ಲಿ ಎರಡನೇ ಸ್ಥಾನ ಪಡೆದು ಪದಕ ಗೆದ್ದ ಸಂದರ್ಭದಲ್ಲಿ ನನ್ನ ಸಂತೋಷಕ್ಕೆ ಪಾರವೇ ಇದ್ದಿರಲಿಲ್ಲ. ನನಗೆ ಇನ್ನಷ್ಟು ಸ್ಪರ್ಧೆಗಳಲ್ಲಿ ಗೆಲ್ಲುವ ಬಯಕೆಯಿದೆ” ಎಂದು ಆಕೆ ದೃಢನಿಶ್ಚಯದಿಂದ ಹೇಳುತ್ತಾಳೆ.
ವರ್ಷಾ ಎಂಟು ವರ್ಷದವಳಿರುವಾಗಲೇ ಅವಳ ಪೋಷಕರು ಆಕೆಯಲ್ಲಿನ ಕ್ರೀಡಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಿದ್ದರು. “ನನ್ನ ಮಾಮಾ (ತಾಯಿಯ ಸಹೋದರ) ಪರಾಜಿ ಗಾಯಕ್ವಾಡ್ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದರು. ಅವರೀಗ ಸೈನ್ಯದಲ್ಲಿದ್ದಾರೆ. ಅವರನ್ನು ನೋಡಿ ನಾನು ಓಟ ಆರಂಭಿಸಿದೆ” ಎನ್ನುತ್ತಾಳಾಕೆ. 2019ರಲ್ಲಿ ಅಂತರ ಶಾಲಾ ರಾಜ್ಯ ಮಟ್ಟದ ನಾಲ್ಕು ಕಿಲೋಮೀಟರ್ ಕ್ರಾಸ್ ಕಂಟ್ರಿ ಓಟದಲ್ಲಿ ಎರಡನೇ ಸ್ಥಾನವನ್ನು ಪಡೆದಳು ಮತ್ತು "ಅದು ಓಟವನ್ನು ಮುಂದುವರಿಸಲು ನನಗೆ ಹೆಚ್ಚಿನ ವಿಶ್ವಾಸವನ್ನು ನೀಡಿತು."
















