ಹಲವು ಮೊಮ್ಮಕ್ಕಳ ಅಜ್ಜಿಯಾಗಿರುವ ಬೂಟೆ ಮಾಝಿಯವರಿಗೆ ಈಗ ತನ್ನ ಮಗ ಬಿಟ್ಟು ಹೋಗಿರುವ ಆರು ಹೆಣ್ಣು ಮತ್ತು ಎರಡು ಗಂಡು ಮಕ್ಕಳನ್ನು – ಅವರಲ್ಲಿ ಕೊನೆಯವಳಾದ ಜಾನಕಿ ಆರು ವರ್ಷದವಳು – ನೋಡಿಕೊಳ್ಳುವುದು ಹೇಗೆನ್ನುವ ಚಿಂತೆ ಕಾಡುತ್ತಿದೆ. “ಅವರನ್ನೆಲ್ಲ ಹೇಗೆ ಬೆಳೆಸುವುದೋ ಗೊತ್ತಾಗುತ್ತಿಲ್ಲ” ಎನ್ನುತ್ತಾರೆ ಈ 70 ವರ್ಷದ ಗೊಂಡ್ ಆದಿವಾಸಿ ಮಹಿಳೆ. ಇವರು ಒಡಿಶಾದ ಬಾಲಂಗೀರ್ ಜಿಲ್ಲೆಯ ಹಿಯಾಲ್ ಎನ್ನುವ ಊರಿನವರು.
ಅವರ ಮಗ ನೃಪ ಮಾಝಿ (50) ಮೂತ್ರಪಿಂಡ ವೈಫಲ್ಯದಿಂದ ಎರಡು ವರ್ಷಗಳ ಕೆಳಗೆ ತೀರಿಕೊಂಡರು. ವಲಸೆ ಕಾರ್ಮಿಕರಾಗಿರುವ ಅವರು ಮತ್ತು ಅವರ ಪತ್ನಿ 47 ವರ್ಷದ ನಮನಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು.
"ನವೆಂಬರ್ 2019ರಲ್ಲಿ, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲೆಂದು ನಾವು ಚೆನ್ನೈಗೆ ಹೋದೆವು" ಎಂದು ನಮನಿ ಹೇಳುತ್ತಾರೆ. ಪತಿ ನೃಪ (50), ಅವರ ಹಿರಿಯ ಮಗ ಜುಧಿಷ್ಠಿರ್ (24), ಪತ್ನಿ ಪರ್ಮಿಲಾ (21), ಪೂರ್ನಮಿ (19), ಸಜ್ನೆ (16), ಕುಮಾರಿ (15) ಮತ್ತು ಅವರ ಪತಿ ದಿನೇಶ್ (21) ಸೇರಿದಂತೆ ಕುಟುಂಬದಿಂದ 10 ಜನರು ಹೋಗಿದ್ದಾರೆ. "ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ಥಳೀಯ ಸರ್ದಾರ್ [ಗುತ್ತಿಗೆದಾರರು] 25,000 ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದರು." ಎಂದು ಅವರು ಹೇಳುತ್ತಾರೆ. ಕುಟುಂಬದೊಂದಿಗೆ 10 ವರ್ಷದ ಸಾವಿತ್ರಿ ಮತ್ತು 6 ವರ್ಷದ ಜಾನಕಿ ಇದ್ದರು. ಇವರಿಗೆ ಯಾವುದೇ ಮುಂಗಡ ನೀಡಿರಲಿಲ್ಲ.
ಜೂನ್ 2020ರ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರೆಲ್ಲರೂ ತಮ್ಮ ಗ್ರಾಮಕ್ಕೆ ಮರಳಿದರು. ಒಡಿಶಾ ಸರ್ಕಾರವು ಹಿಂದಿರುಗಿದ ವಲಸಿಗರಿಗೆ ಶಾಲೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಮತ್ತು ಕ್ವಾರಂಟೈನ್ ಪ್ರದೇಶಗಳಿಗೆ ವ್ಯವಸ್ಥೆ ಮಾಡಿತ್ತು. "ನಾವು ಹಳ್ಳಿಯ ಶಾಲೆಯಲ್ಲಿ 14 ದಿನಗಳ ಕಾಲ ಇದ್ದೆವು. ಅಲ್ಲಿ ಉಳಿಯಲು ನನ್ನ ಪತಿ ಮತ್ತು ನನಗೆ [ಒಡಿಶಾ ಸರ್ಕಾರದಿಂದ] ತಲಾ 2,000 ರೂಪಾಯಿಗಳು ದೊರೆತವು" ಎಂದು ನಮನಿ ನೆನಪಿಸಿಕೊಳ್ಳುತ್ತಾರೆ.












