“ನಾನು ಸುಮಾರು 450 ಹಕ್ಕಿ ಕೂಗುಗಳನ್ನು ಗುರುತಿಸಬಲ್ಲೆ.”
ಅಪರೂಪದ ಪ್ರಾಣಿ ಪಕ್ಷಿಗಳ ಫೋಟೊ ತೆಗೆಯಲು ಗಂಟೆಗಟ್ಟಲೆ ಕಾಯಬೇಕಿರುತ್ತದೆ. ಅರಣ್ಯ ಛಾಯಾಗ್ರಾಹಕರಾದ ಮೀಕಾ ರೇ ಪಾಲಿಗೆ ಈ ಸದ್ದುಗಳನ್ನು ಗುರುತಿಸುವ ಕೌಶಲ ಬಹಳ ನಿರ್ಣಾಯಕ.
ಸುಂದರ ಗರಿಗಳ ಹಕ್ಕಿಗಳಿಂದ ಹಿಡಿದು ಮುದ್ದಾದ ಸಸ್ತನಿಗಳ ತನಕ ಮೀಕಾ ತಮ್ಮ ಹಲವು ವರ್ಷಗಳ ಫೋಟೊಗ್ರಫಿ ಪ್ರಯಾಣದಲ್ಲಿ 300 ವಿವಿಧ ಪ್ರಭೇದದ ಜೀವಿಗಳ ಚಿತ್ರಿಸಿದ್ದಾರೆ. ಅಪರೂಪಕ್ಕೆ ಕಾಣಸಿಗುವ ಬ್ಲೈತ್ಸ್ ಟ್ರಾಗೋಪಾನ್ (ಟ್ರಾಗೋಪಾನ್ ಬ್ಲೈತೀ) ಹಕ್ಕಿಯ ಫೋಟೊ ತೆಗೆದಿದ್ದು ಬಹಳ ಅನನ್ಯ ಅನುಭವ ಎನ್ನುತ್ತಾರೆ.
2020ನೇ ಇಸವಿಯಲ್ಲಿ ಮೀಕಾ ಅವರ ಕೈಗೆ ಸಿಗ್ಮಾ 150 ಎಂಎಂ-600 ಎಂಎಂ ಟೆಲಿಫೋಟೋ ಜೂಮ್ ಲೆನ್ಸ್ ಬಂದು ಸೇರಿತು. ಅವರು ಈ ಶಕ್ತಿಯುತ ಜೂಮ್ ಲೆನ್ಸ್ ಬಳಸಿ ಟ್ರಾಗೋಪನ್ ಹಕ್ಕಿಯ ಚಿತ್ರ ಸೆರೆಹಿಡಿಯಲು ನಿರ್ಧರಿಸಿದರು. ಅಂದಿನಿಂದ ಅವರು ಅದರ ಚಲನವಲನದ ಮೇಲೆ ಕಣ್ಣಿಡಲು ಆರಂಭಿಸಿದರು. "ಕಾಫಿ ದಿನ್ ಸೆ ಆವಾಜ್ ತೋ ಸುನಾಯಿ ದೇ ರಹಾ ಥಾ [ಬಹಳ ದಿನಗಳಿಂದ ಅದರ ಕೂಗು ಕೇಳುತ್ತಿತ್ತು]." ಆದರೆ ಅದರ ಫೋಟೊ ತೆಗೆಯಲು ಸಾಧ್ಯವಾಗಲಿಲ್ಲ.
ಕೊನೆಗೂ 2021ರ ಮೇ ತಿಂಗಳಿನಲ್ಲಿ ಮೀಕಾ ಅಂತಿಮವಾಗಿ, ಮೇ 2021 ರಲ್ಲಿ, ಮೀಕಾ ಮತ್ತೊಮ್ಮೆ ಅರುಣಾಚಲ ಪ್ರದೇಶದ ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯದ ದಟ್ಟ ಕಾಡುಗಳ ನಡುವೆ ಬ್ಲೈಥ್ಸ್ ಟ್ರಾಗೋಪನ್ ಜಾಡನ್ನು ಹುಡುಕುತ್ತಿರುವಾಗ ಕಣ್ಣುಮುಚ್ಚಾಲೆಯಾಡುತ್ತಿದ್ದ ಆ ಹಕ್ಕಿ ಕಣ್ಣಿಗೆ ಬಿತ್ತು. ಆದರೆ ಅಂದು ಅವರು ತಮ್ಮ ನಿಕಾನ್ ಡಿ 7200 ಕೆಮೆರಾದಲ್ಲಿ ಸಿಗ್ಮಾ 150 ಎಂಎಂ-600 ಎಂಎಂ ಟೆಲಿಫೋಟೋ ಜೂಮ್ ಲೆನ್ಸ್ ಹೊಂದಿದ್ದರು. ಅವರ ಆತಂಕ ಅಂದು ನಿಜವಾಯಿತು. “ಬಹಳ ಮಸುಕಾದ ಫೋಟೊ ಸಿಕ್ಕಿತು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಮತ್ತೆ ಎರಡು ವರ್ಷಗಳ ಕಾಲ ಆಟ ಆಡಿಸಿದ ಆ ಹಕ್ಕಿ ಪಶ್ಚಿಮ ಕಾಮೆಂಗ್ ಪ್ರದೇಶದ ಬೊಂಪು ಶಿಬಿರದ ಬಳಿ ಕಾಣಿಸಿಕೊಂಡಿತು. ಹಕ್ಕಿಯ ಹಿಂಭಾಗದಲ್ಲಿ ಕಂದು ಬಣ್ಣದ ಮೇಲೆ ಸಣ್ಣ ಹೊಳಪಿನ ಬಿಳಿ ಚುಕ್ಕಿಗಳನ್ನು ಹೊಂದಿತ್ತು. ಆದರೆ ಹಕ್ಕಿ ಭಾಗಶಃ ಎಲೆಗಳ ನಡುವೆ ಮರೆಯಾಗಿತ್ತು. ಆದರೆ ಮೀಕಾ ಈ ಬಾರಿ ಅವಕಾಶವನ್ನು ಕೈಚೆಲ್ಲಲಿಲ್ಲ. ಅವರು ಒಮ್ಮೆಲೆ ಸುಮಾರು 30-40 ಶಾಟ್‌ಗಳನ್ನು ತೆಗೆದರು. ಅದರಲ್ಲಿ 1-2 ಒಳ್ಳೆಯ ಫೋಟೊ ಸಿಕ್ಕಿತು. ಇದನ್ನು ಮೊದಲ ಬಾರಿಗೆ ಪರಿಯಲ್ಲಿ ಅರುಣಾಚಲದ ಹಕ್ಕಿಗಳು: ಕಲ್ಲಿದ್ದಲು ಗಣಿಯಲ್ಲಿನ ಕ್ಯಾನರಿ ಹಕ್ಕಿ ಎನ್ನುವ ವರದಿಯೊಂದಿಗೆ ಪ್ರಕಟಿಸಲಾಯಿತು.
ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಪೂರ್ವ ಹಿಮಾಲಯ ಪರ್ವತಗಳಲ್ಲಿನ ಪಕ್ಷಿಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅಧ್ಯಯನದ ಭಾಗವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳಿಗೆ ಸಹಾಯ ಮಾಡುವ ಸ್ಥಳೀಯರ ತಂಡದ ಭಾಗವಾಗಿ ಮೀಕಾ ಗುರುತಿಸಿಕೊಂಡಿದ್ದಾರೆ.
“ಈಗಲ್ ನೆಸ್ಟ್ ಅಭಯಾರಣ್ಯದಲ್ಲಿ ನಾವು ಮಾಡುತ್ತಿರುವ ಕೆಲಸಕ್ಕೆ ಮೀಕಾ ಅವರಂತಹ ಮೀಕಾ ಅವರಂತಹ ಜನರೇ ಬೆನ್ನೆಲುಬು. ಅವರಿಲ್ಲದೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದು ಮತ್ತು [ಅವರಿಲ್ಲದೆ] ನಮಗೆ ಅಗತ್ಯವಿರುವ ವಿವರಗಳನ್ನು ಸಂಗ್ರಹಿಸುವುದು ಅಸಾಧ್ಯವಾಗಿತ್ತು" ಎಂದು ಪಕ್ಷಿಶಾಸ್ತ್ರಜ್ಞ ಡಾ. ಉಮೇಶ್ ಶ್ರೀನಿವಾಸನ್ ಹೇಳುತ್ತಾರೆ.
ಹಕ್ಕಿಗಳ ಕುರಿತಾದ ಮೀಕಾ ಅವರ ಉತ್ಸಾಹ ವಿಜ್ಞಾನವನ್ನು ಮೀರಿದ್ದು. ಅವರು ನೇಪಾಳದ ಬ್ಲೆಸ್ಸಿಂಗ್ ಬರ್ಡ್ ಎನ್ನುವ ಹಕ್ಕಿಯ ಕತೆಯೊಂದನ್ನು ಹೇಳುತ್ತಾ, "ಕಾಡಿನಲ್ಲಿ, ಮಲತಾಯಿಯ ಕ್ರೌರ್ಯದಿಂದ ಪೀಡಿತನಾದ ಮನುಷ್ಯನೊಬ್ಬ ಕಾಡುಬಾಳೆಹಣ್ಣು ತಿನ್ನುತ್ತಾ ಕಾಡಿನಲ್ಲೇ ಆಶ್ರಯ ಪಡೆಯುತ್ತಾನೆ. ನಂತರ ಅವನು ಹಕ್ಕಿಯಾಗಿ ಮಾರ್ಪಡುತ್ತಾನೆ. ಈ ವರ್ಣರಂಜಿತ ನಿಶಾಚರಿ ಜೀವಿ ನೇಪಾಳಿ ಸಂಪ್ರದಾಯದಲ್ಲಿನ ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಶಾಶ್ವತ ಮತ್ತು ನಿಗೂಢ ಬಂಧವನ್ನು ಸಂಕೇತಿಸುತ್ತದೆ” ಎಂದರು. ಆ ಹಕ್ಕಿಯ ನಿಜವಾದ ಹೆಸರು ಮೌಂಟೇನ್ ಸ್ಕೋಪ್ಸ್ ಔಲ್. ಇದು ದೇಶದ ಈಶಾನ್ಯ ಭಾಗಗಳಲ್ಲಿ ಕಂಡುಬರುತ್ತದೆ. ನೇಪಾಳಿಗರು ಇದನ್ನು ಆಶೀರ್ವಾದ ನೀಡುವ ಹಕ್ಕಿಯೆಂದು ನಂಬುತ್ತಾರೆಂದು ಮೀಕಾ ಹೇಳುತ್ತಾರೆ. ಈ ಹಕ್ಕಿ ಕಾಣಲು ಸಿಗುವುದು ಅಪರೂಪವಾಗಿರುವುದರಿಂದ ಅದರ ದರ್ಶನವನ್ನು ಆಶೀರ್ವಾದವೆಂದು ನಂಬಲಾಗುತ್ತದೆ.
ಈ ಕಾಡಿನಲ್ಲಿ ಪಕ್ಷಿಗಳನ್ನು ಬೆನ್ನಟ್ಟಿ ಹೋದ ಮೀಕಾ ಮತ್ತಿತರರು ಆಗಾಗ ನಾಲ್ಕು ಕಾಲಿನ ಜೀವಿಗಳೊಂದಿಗೂ ಮುಖಾಮುಖಿಯಾಗುತ್ತಾರೆ, ನಿರ್ದಿಷ್ಟವಾಗಿ ವೈಲ್ಡ್ ಗೌರ್. ಇದೊಂದು ವಿಶ್ವದ ಅತಿದೊಡ್ಡ, ಎತ್ತರದ ಮತ್ತು ಭಾರದ ಗೋ ಜಾತಿ (ಬಾಸ್ ಗೌರಸ್/ಕಾಡೆಮ್ಮೆ/ಕೋಣ), ಇದನ್ನು ಇಂಡಿಯನ್ ಬೈಸನ್ ಎಂದೂ ಕರೆಯಲಾಗುತ್ತದೆ.
ಅಂದು ಮೀಕಾ ಮತ್ತು ಅವರ ಇಬ್ಬರು ಗೆಳೆಯರು ಮಳೆಯ ನಂತರ ರಸ್ತೆಯ ಮೇಲೆ ಬಿದ್ದಿದ್ದ ಅವಶೇಷಗಳನ್ನು ತೆರವುಗೊಳಿಸಲೆಂದು ಹೋಗಿದ್ದರು. ಈ ಮೂವರು ತಮ್ಮಿಂದ ಕೇವಲ 20 ಮೀಟರ್ ದೂರದಲ್ಲಿ ಪ್ರಬಲ ಕಾಡೆಮ್ಮೆಯೊಂದನ್ನು ನೋಡಿದರು. “ಮಿಥುನ್ [ಗೌರ್] ನೋಡಿ ನಾನು ಕಿರುಚುತ್ತಿದ್ದ ಹಾಗೆ ಅದು ನಮ್ಮತ್ತ ವೇಗವಾಗಿ ಓಡಿ ಬರತೊಡಗಿತು” ಎಂದು ಮೀಕಾ ಅಂದಿನ ಘಟನೆಯನ್ನು ನೆನಪಿಸಿಕೊಂಡು ನಗುತ್ತಾರೆ. ಕೊನೆಗೆ ಅಂದು ಅವರ ಒಬ್ಬ ಸ್ನೇಹಿತ ಮರ ಹತ್ತಿ ತಪ್ಪಿಸಿಕೊಂಡರೆ ಉಳಿದಿಬ್ಬರು ಓಡಿಹೋಗುವ ಮೂಲಕ ತಪ್ಪಿಸಿಕೊಂಡರು.
ಈಗಲ್ನೆಸ್ಟ್ ಕಾಡುಗಳಲ್ಲಿನ ಜೀವಿಗಳಲ್ಲಿ ತನ್ನ ನೆಚ್ಚಿನ ಪ್ರಾಣಿ ಏಷ್ಯನ್ ಗೋಲ್ಡನ್ ಕ್ಯಾಟ್ (ಕ್ಯಾಟೊಪುಮಾ ಟೆಮ್ಮಿಂಕಿ) ಎಂದು ಕರೆಯಲ್ಪಡುವ ಮಧ್ಯಮ ಗಾತ್ರದ ಕಾಡು ಬೆಕ್ಕು ಎಂದು ಅವರು ಹೇಳುತ್ತಾರೆ, ಇದು ಈಗಲ್ನೆಸ್ಟ್ ಪ್ರದೇಶದ ಕಾಡುಗಳಲ್ಲಿ ಕಂಡುಬರುತ್ತದೆ. ಸಂಜೆ ವೇಳೆ ಬೊಂಪು ಶಿಬಿರಕ್ಕೆ ಹಿಂದಿರುಗುವಾಗ ಅವರು ಈ ಬೆಕ್ಕನ್ನು ನೋಡಿದ್ದರು. "ನನ್ನ ಬಳಿ ಕ್ಯಾಮೆರಾ [ನಿಕಾನ್ ಡಿ 7200] ಇತ್ತು ಹೀಗಾಗಿ ಫೋಟೊ ತೆಗೆಯಲು ಸಾಧ್ಯವಾಯಿತು" ಎಂದು ಅವರು ಸಂತೋಷದಿಂದ ಹೇಳುತ್ತಾರೆ. "ಆದರೆ ನಾನು ಅದನ್ನು ಮತ್ತೆಂದೂ ನೋಡಲಿಲ್ಲ."
*****
ಪಶ್ಚಿಮ ಕಾಮೆಂಗ್ ಪ್ರದೇಶದ ದಿರಾಂಗ್ ಎನ್ನುವಲ್ಲಿ ಜನಿಸಿದ ಮೀಕಾ ತನ್ನ ಕುಟುಂಬದೊಂದಿಗೆ ಅದೇ ಜಿಲ್ಲೆಯ ರಾಮಲಿಂಗಂ ಗ್ರಾಮಕ್ಕೆ ತೆರಳಿದರು. "ಎಲ್ಲರೂ ನನ್ನನ್ನು ಮೀಕಾ ರೇ ಎಂದು ಕರೆಯುತ್ತಾರೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ಕಿನಲ್ಲೂ ನನ್ನ ಹೆಸರು ಮೀಕಾ ರೇ. ದಾಖಲೆಗಳಲ್ಲಿ 'ಶಂಭು ರೈ' ಎಂದು ದಾಖಲಿಸಲಾಗಿದೆ” ಎಂದು 5ನೇ ತರಗತಿಯ ನಂತರ ಶಾಲೆಯನ್ನು ತೊರೆದ 29 ವರ್ಷದ ಅವರು ಹೇಳುತ್ತಾರೆ. "ಆ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆಯಿತ್ತು. ನನ್ನ ಒಡಹುಟ್ಟಿದವರೂ ಓದಬೇಕಿತ್ತು" ಎಂದು ತಾನು ಶಾಲೆ ಕೊನೆಗಳಿಸಿದ್ದಕ್ಕೆ ಅವರು ಕಾರಣ ನೀಡುತ್ತಾರೆ.
ಅವರ ಬದುಕಿನ ಮುಂದಿನ ಕೆಲವು ವರ್ಷಗಳು ಕಠಿಣ ಪರಿಶ್ರಮದ ಮಸುಕಿನಲ್ಲಿ ಕಳೆದವು. ಆ ಸಮಯದಲ್ಲಿ ಅವರು ದಿರಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮತ್ತು ಈಗಲ್ನೆಸ್ಟ್ ಅಭಯಾರಣ್ಯದ ಬೊಂಪು ಶಿಬಿರದಲ್ಲಿ ಮತ್ತು ಸಿಂಗ್ಚುಂಗ್ ಬುಗುನ್ ಗ್ರಾಮ ಸಮುದಾಯ ಮೀಸಲು (ಎಸ್‌ಬಿವಿಸಿಆರ್) ಶಿಬಿರದಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡಿದರು.
ತನ್ನ ಹದಿಹರೆಯದ ಮಧ್ಯದಲ್ಲಿ ಮೀಕಾ ಮತ್ತೆ ರಾಮಲಿಂಗಂಗೆ ಮರಳಿದರು. "ನಾನು ನನ್ನ ಹೆತ್ತವರೊಂದಿಗೆ ಮನೆಯಲ್ಲಿದ್ದು ಹೊಲಗಳಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೆ." ಅವರ ಕುಟುಂಬವು ನೇಪಾಳಿ ಮೂಲದವರಾಗಿದ್ದು, ಬುಗುನ್ ಸಮುದಾಯದಿಂದ 4-5 ಬಿಘಾ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದಾರೆ, ಅದರಲ್ಲಿ ಅವರು ಎಲೆಕೋಸು ಮತ್ತು ಆಲೂಗಡ್ಡೆಯನ್ನು ಬೆಳೆಯುತ್ತಾರೆ. ತಾವು ಪಡೆದ ಇಳುವರಿಯನ್ನು ಅಸ್ಸಾಂನ ತೇಜ್ಪುರದಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿಗೆ ಇಲ್ಲಿಂದ ನಾಲ್ಕು ಗಂಟೆಗಳ ರಸ್ತೆ ಪ್ರಯಾಣದ ದೂರವಿದೆ.
ಪಕ್ಷಿವಿಜ್ಞಾನಿ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ ಪರಿಸರ ವಿಜ್ಞಾನ ಸಹಾಯಕ ಪ್ರಾಧ್ಯಾಪಕ ಡಾ.ಉಮೇಶ್ ಶ್ರೀನಿವಾಸನ್ ಅವರು ಪಕ್ಷಿಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಅಧ್ಯಯನ ಮಾಡಲು ರಾಮಲಿಂಗಂಗೆ ಬಂದಾಗ, ಅವರು 2-3 ಹುಡುಗರನ್ನು ಕ್ಷೇತ್ರ ಸಿಬ್ಬಂದಿಯಾಗಿ ನೇಮಿಸಿಕೊಂಡರು. ಸ್ಥಿರವಾದ ಆದಾಯವನ್ನು ಗಳಿಸುವ ಅವಕಾಶವನ್ನು ಕಂಡು ಮೀಕಾ ಕೂಡಾ ಈ ಕೆಲಸಕ್ಕೆ ಇಳಿದರು. ಜನವರಿ 2011ರಲ್ಲಿ, 16 ವರ್ಷದ ಮೀಕಾ ಶ್ರೀನಿವಾಸನ್ ಅವರ ತಂಡದೊಂದಿಗೆ ಕ್ಷೇತ್ರ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ತನ್ನ ಪಾಲಿನ ನಿಜವಾದ ಶಿಕ್ಷಣ ಅರುಣಾಚಲ ಪ್ರದೇಶದ ಕಾಡುಗಳಲ್ಲಿ ಪ್ರಾರಂಭವಾಯಿತು ಎಂದು ಅವರು ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. "ಪಶ್ಚಿಮ ಕಾಮೆಂಗ್ ಜಿಲ್ಲೆಯ ಹಕ್ಕಿಗಳ ಕೂಗನ್ನು ನಾನು ಹೆಚ್ಚು ಸುಲಭವಾಗಿ ಗುರುತಿಸಬಲ್ಲೆ" ಎಂದು ಅವರು ಹೇಳುತ್ತಾರೆ. ಅವರ ನೆಚ್ಚಿನ ಪಕ್ಷಿ "ಸಿಕ್ಕಿಂ ವೆಡ್ಜ್-ಬಿಲ್ಡ್ ಬ್ಯಾಬ್ಲರ್. ನೋಡಲು ಅದೇನೂ ಹೆಚ್ಚುಸುಂದರವಲ್ಲ ಆದರೆ ನನಗೆ ಅದರ ಶೈಲಿ ಇಷ್ಟ" ಎಂದು ಅವರು ಹಕ್ಕಿಯ ವಿಶಿಷ್ಟ ಕೊಕ್ಕು ಮತ್ತು ಅದರ ಕಣ್ಣುಗಳ ಸುತ್ತಲಿ ಬಿಳಿ ಬಣ್ಣದ ಉಂಗುರವನ್ನು ಉಲ್ಲೇಖಿಸಿ ಹೇಳುತ್ತಾರೆ. ಅಪರೂಪದ ಜೀವಿಯಾದ ಇದು ಅರುಣಾಚಲ ಪ್ರದೇಶ, ದೂರದ ಪೂರ್ವ ನೇಪಾಳ, ಸಿಕ್ಕಿಂ ಮತ್ತು ಪೂರ್ವ ಭೂತಾನ್ ದೇಶದ ಕೆಲವೇ ಸ್ಥಳಗಳಲ್ಲಿ ಕಂಡುಬರುತ್ತದೆ.
"ಇತ್ತೀಚೆಗೆ ನಾನು ಬಿಳಿ ಪೃಷ್ಟದ ಶಾಮಾ [ಕೊಪ್ಸಿಕಸ್ ಮಲಬಾರಿಕಸ್] ಹಕ್ಕಿಯ ಚಿತ್ರವನ್ನು 2,000 ಮೀಟರ್ ಎತ್ತರದಲ್ಲಿ ಚಿತ್ರೀಕರಿಸಿದೆ. ಇದು ವಿಚಿತ್ರ ವಿಷಯ ಏಕೆಂದರೆ ಪಕ್ಷಿ ಸಾಮಾನ್ಯವಾಗಿ 900 ಮೀಟರ್ ಮತ್ತು ಅದಕ್ಕಿಂತ ಕಡಿಮೆ ಎತ್ತರದಲ್ಲಿ ವಾಸಿಸುತ್ತದೆ. ವಾತಾವರಣದಲ್ಲಿನ ಶಾಖದಿಂದಾಗಿ, ಹಕ್ಕಿ ತನ್ನ ಸ್ಥಳವನ್ನು ಬದಲಾಯಿಸುತ್ತಿದೆ" ಎಂದು ಮೀಕಾ ಹೇಳುತ್ತಾರೆ.
ವಿಜ್ಞಾನಿ ಶ್ರೀನಿವಾಸನ್ ಹೇಳುತ್ತಾರೆ, "ಪೂರ್ವ ಹಿಮಾಲಯವು ಈ ಗ್ರಹದ ಎರಡನೇ ಅತ್ಯಂತ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿರುವ ಪ್ರದೇಶ, ಮತ್ತು ಇಲ್ಲಿ ಕಂಡುಬರುವ ಅನೇಕ ಪ್ರಭೇದಗಳು ತಾಪಮಾನಕ್ಕೆ ಹೆಚ್ಚು ಸೂಕ್ಷ್ಮವಾಗಿವೆ. ಇಲ್ಲಿನ ಹವಾಮಾನ ವೈಪರೀತ್ಯವು ಭೂಮಿಯ ಪ್ರಭೇದಗಳ ಗಮನಾರ್ಹ ಭಾಗಕ್ಕೆ ಬೆದರಿಕೆ ಹಾಕುವ ಸಾಮರ್ಥ್ಯವನ್ನು ಹೊಂದಿದೆ.” ಒಂದು ನಿರ್ದಿಷ್ಟ ಎತ್ತರದಲ್ಲಿ ವಾಸಿಸುವ ನಿವಾಸಿ ಪಕ್ಷಿಗಳು ಈಗ ನಿಧಾನವಾಗಿ ತಮ್ಮ ವ್ಯಾಪ್ತಿಯನ್ನು ಎತ್ತರದ ಪ್ರದೇಶಗಳಿಗೆ ಬದಲಾಯಿಸುತ್ತಿವೆ ಎಂದು ಅವರ ಸಂಶೋಧನೆ ಹೇಳುತ್ತದೆ ಎಂದು ಅವರು ಹೇಳುತ್ತಾರೆ. ಓದಿ: ಅರುಣಾಚಲದ ಹಕ್ಕಿಗಳು: ಕಲ್ಲಿದ್ದಲು ಗಣಿಯಲ್ಲಿನ ಕ್ಯಾನರಿ ಹಕ್ಕಿ
ಹವಾಮಾನ ವೈಪರೀತ್ಯದ ಕುರಿತು ಆಸಕ್ತಿ ಹೊಂದಿರುವ ಸಹ ಫೋಟೊಗ್ರಾಫರ್ ಆಗಿ ನಾನು ಮೀಕಾ ತನ್ನ ಫೋನಿನಲ್ಲಿ ಹಕ್ಕಿಗಳ ಚಿತ್ರವನ್ನು ಸ್ವೈಪ್ ಮಾಡುತ್ತಿರುವುದನ್ನು ಆಸಕ್ತಿಯಿಂದ ಗಮನಿಸಿದೆ. ಅವರು ಹಲವು ವರ್ಷಗಳಿಂದ ತಾನು ತೆಗೆದ ಚಿತ್ರಗಳನ್ನು ಒಂದೊಂದಾಗಿ ತೋರಿಸಿದರು. ಅವರು ಅದೇನೋ ಬಹಳ ಸುಲಭದ ಕೆಲಸ ಎನ್ನುವ ಹಾಗೆ ಮಾತನಾಡುತ್ತಿದ್ದರು. ಆದರೆ ನನ್ನ ಅನುಭವದ ಪ್ರಕಾರ ಸರಿಯಾದ ಚಿತ್ರವನ್ನು ಸೆರೆಹಿಡಿಯಲು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕೊನೆಯಿಲ್ಲದ ತಾಳ್ಮೆ ಬೇಕು.
*****
ಬೊಂಪು ಶಿಬಿರದಲ್ಲಿರುವ ತಂಡದ ಕ್ಯಾಂಪ್ ಸೈಟ್, ಈಗಲ್ನೆಸ್ಟ್ ಅಭಯಾರಣ್ಯದೊಳಗೆ ಇದೆ, ಜಾಗತಿಕವಾಗಿ ಪಕ್ಷಿವೀಕ್ಷಕರ ಹಾಟ್‌ಸ್ಪಾಟ್. ಇದೊಂದು ಒಡಕು ಕಾಂಕ್ರೀಟ್ ರಚನೆಯ ಸುತ್ತಲೂ ಬಿಗಿಯಾಗಿ ಸುತ್ತಿದ ಮರದ ಜಾಲರಿಗಳು ಮತ್ತು ಟಾರ್ಪಾಲಿನ್ ಬಳಸಿ ಮಾಡಿದ ತಾತ್ಕಾಲಿಕ ಮನೆ. ಸಂಶೋಧನಾ ತಂಡವು ಪಶ್ಚಿಮ ಕಾಮೆಂಗ್ ಜಿಲ್ಲೆಯ ವಿಜ್ಞಾನಿಗಳು, ಇಂಟರ್ನ್ ಮತ್ತು ಕ್ಷೇತ್ರ ಸಿಬ್ಬಂದಿಯನ್ನು ಹೊಂದಿದೆ. ಡಾ.ಉಮೇಶ್ ಶ್ರೀನಿವಾಸನ್ ನೇತೃತ್ವದ ಈ ತಂಡದ ಅವಿಭಾಜ್ಯ ಅಂಗವೇ ಮೀಕಾ.
ಮೀಕಾ ಮತ್ತು ನಾನು ಸಂಶೋಧನಾ ಗುಡಿಸಲಿನ ಹೊರಗೆ ನಿಂತಿರುವಾಗ ಒಂದೇ ಸಮನೆ ಗಾಳಿ ಬೀಸುತ್ತಿತ್ತು. ಸುತ್ತಮುತ್ತಲಿನ ಶಿಖರಗಳ ತುದಿಗಳು ಬೂದು ಬಣ್ಣ ಮೋಡದ ದಪ್ಪದ ಹಾರಗಳ ಕೆಳಗೆ ಇಣುಕಿ ನೋಡುತ್ತಿದ್ದವು. ಬದಲಾಗುತ್ತಿರುವ ಹವಾಮಾನ ಸಂಬಂಧಿ ಅನುಭವಗಳ ಬಗ್ಗೆ ಅವರು ಮಾತನಾಡುವುದನ್ನು ಕೇಳಲು ನಾನು ಉತ್ಸುಕಳಾಗಿದ್ದೆ.
"ಕಡಿಮೆ ಎತ್ತರದ ಪ್ರದೇಶದಲ್ಲಿ ಸಾಕಷ್ಟು ಉಷ್ಣತೆಯಿದ್ದಾಗ ಪರ್ವತ ಪ್ರದೇಶದಲ್ಲಿ ಅದು ವೇಗವಾಗಿ ಹೆಚ್ಚಾಗುತ್ತದೆ. ಇಲ್ಲಿನ ಪರ್ವತಗಳಲ್ಲಿ ಶಾಖ ಹೆಚ್ಚುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ಮಾನ್ಸೂನ್ ತಲೆಕೆಳಗಾಗಿದೆ ಎನ್ನುವುದು ನಮಗೆ ತಿಳಿದಿದೆ" ಎಂದು ಅವರು ನನಗೆ ಹೇಳುತ್ತಾರೆ. "ಈ ಹಿಂದೆ, ಜನರು ಹವಾಮಾನದ ಮಾದರಿಗಳನ್ನು ತಿಳಿದಿರುತ್ತಿದ್ದರು. ಹಿರಿಯರು ಫೆಬ್ರವರಿಯೆಂದರೆ ಶೀತಲ ಮತ್ತು ಮೋಡ ಕವಿದ ತಿಂಗಳು ಎಂದು ನೆನಪಿಸಿಕೊಳ್ಳುತ್ತಾರೆ." ಈಗ ಫೆಬ್ರವರಿಯಲ್ಲಿ, ಅಕಾಲಿಕ ಮಳೆಯಾಗಿ ರೈತರಿಗೆ ಮತ್ತು ಅವರ ಬೆಳೆಗಳಿಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈಗಲ್ನೆಸ್ಟ್ ಅಭಯಾರಣ್ಯದ ಸೊಂಪಾದ ಕಾಡುಗಳಲ್ಲಿ ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಊಹಿಸುವುದು ಕಷ್ಟ, ಇದು ಪಕ್ಷಿಗಳ ಗುಂಪುಗಳಿಂದ ಸುತ್ತುವರೆದಿದೆ, ಎತ್ತರದ ಆಲ್ಡರ್, ಮೇಪಲ್ ಮತ್ತು ಓಕ್ ಮರಗಳಿಂದ ಕೂಡಿದೆ. ಭಾರತದ ಈ ಪೂರ್ವ ಅಂಚಿನಲ್ಲಿ ಸೂರ್ಯನು ಬೇಗನೆ ಉದಯಿಸುತ್ತಾನೆ ಮತ್ತು ಸಿಬ್ಬಂದಿ ಮುಂಜಾನೆ 3: 30ಕ್ಕೆಲ್ಲ ಎದ್ದು ಪ್ರಕಾಶಮಾನವಾದ ನೀಲಿ ಆಕಾಶದ ಅಡಿಯಲ್ಲಿ ಕೆಲಸ ಆರಂಭಿಸುತ್ತಾರೆ. ದೊಡ್ಡ ಗಾತ್ರದ ಬಿಳಿ ಮೋಡಗಳು ಆಗಸದಲ್ಲಿ ನಿಧಾನವಾಗಿ ಚಲಿಸುತ್ತವೆ.
ಶ್ರೀನಿವಾಸನ್ ಅವರ ಮಾರ್ಗದರ್ಶನದಲ್ಲಿ, ಮೀಕಾ 'ಮಂಜು ಬಲೆ' ಹಾಕುವುದನ್ನು ಕಲಿತಿದ್ದಾರೆ - ಮಣ್ಣಿನಲ್ಲಿ ಜೋಡಿಸಲಾದ ಎರಡು ಬಿದಿರಿನ ಕಂಬಗಳ ನಡುವೆ ನೈಲಾನ್ ಅಥವಾ ಪಾಲಿಯೆಸ್ಟರ್ ಬಳಸಿ ಮಾಡಿದ ಸೂಕ್ಷ್ಮ ಬಲೆಯನ್ನು ಹರಡುವ ಮೂಲಕ ಹಕ್ಕಿಗಳನ್ನು ಹಿಡಿಯುವ ಪ್ರಕ್ರಿಯೆ. ಸಿಕ್ಕ ಹಕ್ಕಿಗಳನ್ನು ಚೀಲದೊಳಗೆ ಹಾಕಿಡಲಾಗುತ್ತದೆ. ಮೀಕಾ ಸಣ್ಣ ಹಸಿರು ಚೀಲದಿಂದ ಹಕ್ಕಿಯನ್ನು ನಿಧಾನವಾಗಿ ಹೊರತೆಗೆದು ಶ್ರೀನಿವಾಸನ್ ಅವರಿಗೆ ಹಸ್ತಾಂತರಿಸುತ್ತಾರೆ.
ವೇಗವಾಗಿ ಕೆಲಸ ಮಾಡುವ ಮೂಲಕ ಹಕ್ಕಿಯ ತೂಕ, ರೆಕ್ಕೆಗಳ ಅಗಲ, ಅದರ ಕಾಲುಗಳ ಉದ್ದವನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಅಳೆಯಲಾಗುತ್ತದೆ. ಅದರ ಕಾಲಿಗೆ ಗುರುತಿನ ಉಂಗುರವನ್ನು ಟ್ಯಾಗ್ ಮಾಡಿದ ನಂತರ ಹಕ್ಕಿಯನ್ನು ಬಿಡುಗಡೆ ಮಾಡಲಾಗುತ್ತದೆ. ಮಂಜಿನ ಬಲೆಯಲ್ಲಿ ಹಕ್ಕಿಯನ್ನು ಹಿಡಿಯುವುದು, ಅದನ್ನು ತಾತ್ಕಾಲಿಕ ಮೇಜಿನ ಬಳಿಗೆ ತರುವುದು, ಅಳತೆ ತೆಗೆದುಕೊಳ್ಳುವುದು ಮತ್ತು ನಂತರ ಅದನ್ನು ಮುಕ್ತಗೊಳಿಸುವ ಈ ಸಂಪೂರ್ಣ ಪ್ರಕ್ರಿಯೆಯು ಸುಮಾರು 15-20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹವಾಮಾನವನ್ನು ಅವಲಂಬಿಸಿ ತಂಡವು ಪ್ರತಿ 20 ನಿಮಿಷಗಳಿಂದ ಅರ್ಧ ಗಂಟೆಯವರೆಗೆ ಕನಿಷ್ಠ ಎಂಟು ಗಂಟೆಗಳ ಕಾಲ ಈ ಚಟುವಟಿಕೆಯನ್ನು ನಡೆಸುತ್ತದೆ. ಮತ್ತು ಮೀಕಾ ಸುಮಾರು 13 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.
“ಹಕ್ಕಿ ಹಿಡಿಯಲು ಆರಂಭಿಸಿದ ಸಂದರ್ಭದಲ್ಲಿ ವೈಟ್ ಸ್ಪೆಕ್ಟಾಕ್ಲಡ್ ವಾರ್ಬ್ಲರ್ (ಸೀಸರ್ಕಸ್ ಅಫಿನಿಸ್) ನಂತಹ ಹೆಸರುಗಳನ್ನು ಉಚ್ಚರಿಸುವುದು ಕಷ್ಟವಾಗುತ್ತಿತ್ತು. ನಮಗೆ ಇಂಗ್ಲಿಷಿನಲ್ಲಿ ಮಾತನಾಡಿ ಅಭ್ಯಾಸವಿಲ್ಲದ ಕಾರಣ ಕಷ್ಟವಾಗುತ್ತಿತ್ತು. ಮೊದಲು ಇಂತಹ ಪದಗಳನ್ನೆಲ್ಲ ನಾವು ಕೇಳಿದವರಲ್ಲ” ಎಂದು ಮೀಕಾ ಹೇಳುತ್ತಾರೆ.
ಈಗಲ್‌ನೆಸ್ಟ್ ಅಭಯಾರಣ್ಯದಲ್ಲಿ ತನ್ನ ಪಕ್ಷಿವೀಕ್ಷಣಾ ಕೌಶಲ್ಯವನ್ನು ತೀವ್ರಗೊಳಿಸಿಕೊಂಡ ಮೀಕಾ ಅವರಿಗೆ ನೆರೆಯ ಮೇಘಾಲಯಕ್ಕೆ ಪ್ರಯಾಣಿಸಲು ಅವಕಾಶ ಸಿಕ್ಕಿತು, ಅಲ್ಲಿ ಅವರು ಕಾಡಿನ ಪ್ರದೇಶಗಳನ್ನು ನಾಶಗೊಳಿಸಲಾಗಿದೆ ಎನ್ನುತ್ತಾರೆ. "ನಾವು ಚಿರಾಪುಂಜಿಯಲ್ಲಿ [2012ರಲ್ಲಿ] 10 ದಿನಗಳ ಕಾಲ ಸುತ್ತಾಡಿದರೂ 20 ಜಾತಿಯ ಪಕ್ಷಿಗಳನ್ನು ಸಹ ನೋಡಲಾಗಲಿಲ್ಲ. ಕೊನೆಗೆ ನನಗೆ ಮತ್ತೆ ಈಗಲ್‌ನೆಸ್ಟ್ ಅರಣ್ಯಕ್ಕೆ ಮರಳಬೇಕು ಎನ್ನಿಸಿತು. ಅಲ್ಲಿ ಬಹಳಷ್ಟು ಪ್ರಭೇದಗಳಿದ್ದವು. ಬೊಂಪುವಿನಲ್ಲಿ ಬಹಳ ಹಕ್ಕಿಗಳು ಕೂರುವುದನ್ನು ನೋಡಿದ್ದೆವು.”
“ಕೆಮೆರಾ ಕಾ ಇಂಟರೆಸ್ಟ್ 2012 ಸೆ ಶುರು ಹುವಾ [2012ರಲ್ಲಿ ಕೆಮೆರಾ ಕುರಿತು ಆಸಕ್ತಿ ಮೂಡಿತು]” ಎಂದು ಮೀಕಾ ಹೇಳುತ್ತಾರೆ. ಮೊದಲಿಗೆ ಅವರು ಸಂದರ್ಶಕ ವಿಜ್ಞಾನಿಯಾದ ನಂದಿನಿ ವೆಲ್ಹೊ ಅವರಿಂದ ಕೆಮೆರಾ ಎರವಲು ಪಡೆದುಕೊಳ್ಳುತ್ತಿದ್ದರು: "ಹಸಿರು ಬಾಲದ ಸೂರಕ್ಕಿ (ಎಥೊಪೈಗಾ ನಿಪಲೆನ್ಸಿಸ್) ಇಲ್ಲಿ ಹೆಚ್ಚಾಗಿ ಕಂಡುಬರುವ ಹಕ್ಕಿ. ನಾನು ಅದನ್ನೇ ಸೆರೆಹಿಡಿಯುವ ಮೂಲಜ ಫೋಟೊಗ್ರಫಿ ಕಲಿಯತೊಡಗಿದೆ.”
ಒಂದೆರಡು ವರ್ಷಗಳ ನಂತರ, ಮೀಕಾ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಮತ್ತು ಪಕ್ಷಿ ವೀಕ್ಷಣೆಗೆ ಕರೆದೊಯ್ಯಲು ಪ್ರಾರಂಭಿಸಿದರಿ. 2018ರಲ್ಲಿ, ಮುಂಬಯಿಯಿಂದ- ಬಿಎನ್ಎಚ್ಎಸ್ (ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ) ಯ ಒಂದು ಗುಂಪು ಬಂದಿತು. ಅವರು ಮೀಕಾ ಅವರ ಬಳಿ ಫೋಟೋ ತೆಗೆದುಕೊಡುವಂತೆ ಕೇಳಿಕೊಂಡರು. ಫೋಟೋ ತೆಗೆದ ನಂತರ ಮೀಕಾ ಅವರ ಫೋಟೊಗ್ರಫಿ ಕುರಿತಾದ ಆಸಕ್ತಿಯನ್ನು ಕಂಡು ತಂಡದ ಸದಸ್ಯರೊಬ್ಬರು ಅವರಿಗೆ ನಿಕಾನ್ ಪಿ 9000 ಕೆಮೆರಾ ನೀಡಿದರು. "ಸರ್, ನಾನು ಡಿಎಸ್ಎಲ್ಆರ್ (ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್) ಮಾದರಿಯನ್ನು ಖರೀದಿಸಲು ಬಯಸುತ್ತೇನೆ. ನೀವು ನನಗೆ ನೀಡುತ್ತಿರುವ ಕ್ಯಾಮೆರಾ ನನಗೆ ಬೇಡ" ಎಂದು ತಾನು ಹೇಳಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಅದೇ ಗುಂಪಿನ ನಾಲ್ಕು ಸದಸ್ಯರು ಉದಾರವಾಗಿ ನೀಡಿದ ದೇಣಿಗೆ, ಕ್ಷೇತ್ರಕಾರ್ಯ ಮತ್ತು ಪಕ್ಷಿ ಮಾರ್ಗದರ್ಶನದಿಂದ ಬಂದ ಹಣದ ಉಳಿತಾಯವನ್ನು ಸೇರಿಸಿ, "ನಾನು 50,000 ರೂಪಾಯಿಗಳನ್ನು ಸಂಗ್ರಹಿಸಿದೆ ಆದರೆ ಕೆಮೆರಾ ಬೆಲೆ 55,000 ಆಗಿತ್ತು. ಆಗ, ನನ್ನ ಬಾಸ್ [ಉಮೇಶ್] ಬಾಕಿ ಹಣವನ್ನು ನೀಡುವುದಾಗಿ ಹೇಳಿದರು. ಕೊನೆಗೂ 2018ರಲ್ಲಿ, ಮೀಕಾ ತನ್ನ ಮೊದಲ ಡಿಎಸ್ಎಲ್ಆರ್, 18-55 ಎಂಎಂ ಜೂಮ್ ಲೆನ್ಸ್ ಹೊಂದಿರುವ ನಿಕಾನ್ ಡಿ 7200 ಕೆಮೆರಾ ಖರೀದಿಸಿದರು.
"2-3 ವರ್ಷಗಳ ಕಾಲ ಸಣ್ಣ 18-55 ಎಂಎಂ ಜೂಮ್ ಲೆನ್ಸ್ ಬಳಸಿ ನಾನು ಮನೆಯ ಸುತ್ತಲಿನ ಹೂವುಗಳ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೆ." ದೂರದಲ್ಲಿರುವ ಪಕ್ಷಿಗಳ ಕ್ಲೋಸ್-ಅಪ್ ಶಾಟ್ ತೆಗೆದುಕೊಳ್ಳಲು ಬಹಳ ಉದ್ದವಾದ ಮತ್ತು ಶಕ್ತಿಯುತ ಟೆಲಿಫೋಟೋ ಲೆನ್ಸ್ ಬೇಕಾಗುತ್ತವೆ. "ಕೆಲವು ವರ್ಷಗಳ ನಂತರ ನಾನು 150-600 ಎಂಎಂ ಸಿಗ್ಮಾ ಲೆನ್ಸ್ ಖರೀದಿಸಬೇಕೆಂದು ಯೋಚಿಸಿದೆ." ಆದರೆ ಲೆನ್ಸ್ ಬಳಸುವುದು ಮೀಕಾ ಅವರಿಗೆ ಕಷ್ಟವಾಯಿತು. ಕ್ಯಾಮೆರಾದಲ್ಲಿ ಅಪರ್ಚರ್, ಶಟರ್ ವೇಗ ಮತ್ತು ಐಎಸ್ಒ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. "ನಾನು ಮೊದಲು ಕೆಟ್ಟ ಚಿತ್ರಗಳನ್ನು ಕ್ಲಿಕ್ ಮಾಡಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಮೀಕಾ ಅವರ ಉತ್ತಮ ಸ್ನೇಹಿತರಾದ ಛಾಯಾಗ್ರಾಹಕ ರಾಮ್ ಅಲ್ಲೂರಿ ಡಿಎಸ್ಎಲ್ಆರ್ ಕ್ಯಾಮೆರಾವನ್ನು ಬಳಸುವುದನ್ನು ಕಲಿಸಿದರು. "ಸೆಟ್ಟಿಂಗ್ಸ್‌ಗಳನ್ನು ಹೇಗೆ ಬಳಸುವುದೆಂದು ನನಗೆ ಕಲಿಸಿದರು. ಈಗ ನಾನು ಮ್ಯಾನುವಲ್ [ಸೆಟ್ಟಿಂಗ್ಸ್] ಮಾತ್ರ ಬಳಸುತ್ತೇನೆ" ಎಂದು ಅವರು ಹೇಳುತ್ತಾರೆ.
ಆದರೆ ಪಕ್ಷಿಗಳ ಅದ್ಭುತ ಚಿತ್ರಗಳನ್ನು ತೆಗೆದರೆ ಮಾತ್ರ ಸಾಕಾಗುವುದಿಲ್ಲ. ಅದರ ಮುಂದಿನ ಹಂತವೆಂದರೆ ಫೋಟೋಶಾಪ್ ಸಾಫ್ಟ್‌ವೇರ್ ಬಳಸಿ ಚಿತ್ರಗಳನ್ನು ಹೇಗೆ ಸಂಪಾದಿಸುವುದು ಎಂದು ಕಲಿಯುವುದು. 2021ರಲ್ಲಿ, ಮೀಕಾ ಸ್ನಾತಕೋತ್ತರ ವಿದ್ಯಾರ್ಥಿ ಸಿದ್ಧಾರ್ಥ್ ಶ್ರೀನಿವಾಸನ್ ಅವರೊಂದಿಗೆ ಕುಳಿತು ಫೋಟೋಶಾಪ್ ಬಳಸಿ ಚಿತ್ರಗಳನ್ನು ಸಂಪಾದಿಸುವುದನ್ನು ಕಲಿತರು.
ಬಹಳ ಬೇಗನೆ ಒಬ್ಬ ಫೋಟೊಗ್ರಾಫರ್ ಆಗಿ ಅವರು ಹೊಂದಿರುವ ಕೌಶಲದ ಕುರಿತು ಸುತ್ತಮುತ್ತ ಸುದ್ದಿಯಾಯಿತು. ಹಿಮಾಲಯದ ಕುರಿತಾದ ವರದಿಗಳಿಗೆ ಮೀಸಲಾಗಿರುವ ವೆಬ್ಸೈಟ್ ದಿ ಥರ್ಡ್ ಪೋಲ್ ಪತ್ರಿಕೆಯಲ್ಲಿ ʼಲಾಕ್ ಡೌನ್ ಬ್ರಿಂಗ್ಸ್ ಹಾರ್ಡ್‌ಶಿಪ್ ಟು ಬರ್ಡರ್ʼ ಎನ್ನುವ ಲೇಖನದಲ್ಲಿ ಅವರ ಚಿತ್ರಗಳನ್ನು ಬಳಸಿಕೊಳ್ಳಲಾಯಿತು. “ಅವರು ನಾನು ತೆಗೆದ ಏಳು ಚಿತ್ರಗಳನ್ನು ತೆಗೆದುಕೊಂಡರು [ಲೇಖನದಲ್ಲಿ ಬಳಸಿಕೊಳ್ಳಲು]. ಮತ್ತು ಅಷ್ಟೂ ಚಿತ್ರಗಳಿಗೆ ಹಣವೂ ದೊರಕಿತು, ಇದರಿಂದ ನನಗೆ ಸಂತೋಷವಾಯಿತು” ಎಂದು ಅವರು ಹೇಳುತ್ತಾರೆ. ಕ್ಷೇತ್ರಕಾರ್ಯಕ್ಕೆ ಅವರು ನೀಡಿದ ದೃಢವಾದ ಕೊಡುಗೆ ಕಾರಣಕ್ಕಾಗಿ ಅವರನ್ನು ಹಲವು ವೈಜ್ಞಾನಿಕ ಪ್ರಬಂಧಗಳಲ್ಲಿ ಸಹ ಲೇಖಕನನ್ನಾಗಿ ಗುರುತಿಸಲಾಗಿದೆ.
ಮೀಕಾ ಅನೇಕ ಪ್ರತಿಭೆಗಳ ಸಂಗಮ. ನಿಖರ ಮಾಹಿತಿಯುಳ್ಳ ಕ್ಷೇತ್ರ ಸಿಬ್ಬಂದಿ, ಸಮರ್ಪಿತ ಛಾಯಾಗ್ರಾಹಕ ಮತ್ತು ಪಕ್ಷಿ ಮಾರ್ಗದರ್ಶಿಯಲ್ಲದೆ, ಅವರು ಗಿಟಾರ್ ವಾದಕರೂ ಹೌದು. ಚಿತ್ರೆ ಬಸ್ತಿಯಲ್ಲಿರುವ (ತ್ಸೆರಿಂಗ್ ಪಾಮ್ ಎಂದೂ ಕರೆಯುತ್ತಾರೆ) ಚರ್ಚಿನಲ್ಲಿ ನಾನು ಮೀಕಾ ಅವರನ್ನು ಸಂಗೀತಗಾರನ ಅವತಾರದಲ್ಲಿ ನಾನು ನೋಡಿದೆ. ನಾದಕ್ಕೆ ತಲೆದೂಗುತ್ತಿದ್ದ ಮೂವರು ಮಹಿಳೆಯರ ನಡುವೆ ಅವರು ಗಿಟಾರನ್ನು ಹಿತವಾಗಿ ನುಡಿಸುತ್ತಿದ್ದರು. ಅಂದು ಅವರು ತನ್ನ ಸ್ನೇಹಿತ, ಸ್ಥಳೀಯ ಪಾದ್ರಿಯ ಮಗಳ ಮದುವೆ ಸಮಾರಂಭಕ್ಕಾಗಿ ಹಾಡನ್ನು ಪೂರ್ವಾಭ್ಯಾಸ ಮಾಡುತ್ತಿದ್ದರು. ಅವರ ಬೆರಳುಗಳು ಗಿಟಾರ್ ತಂತಿಗಳ ಮೇಲೆ ಚಲಿಸುತ್ತಿರುವಾಗ, ಕಾಡಿನಲ್ಲಿ ಮಂಜಿನ ಬಲೆಯಿಂದ ಹಗುರ ಹಕ್ಕಿಗಳನ್ನು ನಿಧಾನವಾಗಿ ಹೊರತೆಗೆಯುವ ಅವರ ಚಾಣಾಕ್ಷತೆ ನನಗೆ ನೆನಪಾಯಿತು.
ಅವರು ಕಳೆದ ನಾಲ್ಕು ದಿನಗಳಲ್ಲಿ ಟ್ಯಾಗ್ ಮಾಡಿದ, ಅಳತೆ ಮಾಡಿದ ಹಕ್ಕಿಗಳೆಲ್ಲ ತೆರದುಕೊಳ್ಳುತ್ತಿರುವ ಹವಾಮಾನ ವೈಪರೀತ್ಯಕ್ಕೆ ಬೆದರಿ ಮತ್ತಷ್ಟು ಎತ್ತರಕ್ಕೆ ಹಾರಿ ಹೋಗಿವೆ.
ಅನುವಾದ: ಶಂಕರ. ಎನ್. ಕೆಂಚನೂರು