ರೂಪೇಶ್ ಮೊಹರ್ಕರ್ ಅವರು 20ರ ಹರೆಯದ ಯುವಕ ಯುವತಿಯರನ್ನು ತಮ್ಮ ಸ್ಪೂರ್ತಿದಾಯಕ ಭಾಷಣದ ಮೂಲಕ ಪ್ರಚೋದಿಸಿ ಒಂದುಗೂಡಿಸುತ್ತಾರೆ.
ಯುವಕರು ಅವರ ಮಾತುಗಳನ್ನು ಕೇಳುತ್ತಿರುವಾಗ 31 ವರ್ಷ ವಯಸ್ಸಿನ ರೂಪೇಶ್ "ಗಮನದಲ್ಲಿ ಇಟ್ಟುಕೊಳ್ಳಿ" ಎಂದು ಎಚ್ಚರಿಸುತ್ತಾರೆ, ಈಗ ಮಾತ್ರವಲ್ಲ, ಎಂದೆಂದಿಗೂ "ಆಲಸ್ಯಕ್ಕೆ ಜಾಗವಿಲ್ಲ!" ಎಂದು ಯುವಕರಿಗೆ ನೆನಪಿಸುತ್ತಾರೆ.
ಒಪ್ಪಿಕೊಂಡಂತೆ ತಲೆಯಾಡಿಸುತ್ತಾ, ಮುಖಗಳು ಗಂಭೀರವಾಗಿಸಿಕೊಂಡು ಆ ಯುವ ಗುಂಪು ಗೆಲುವಿನ ಘೋಷಣೆ ಕೂಗುತ್ತದೆ. ಎಲ್ಲರನ್ನೂ ಉತ್ತೇಜಿಸಲಾಗಿದೆ. ನಂತರ ಆ ಗುಂಪು ತಾನು ಒಂದು ತಿಂಗಳಿಂದ ಮಾಡುತ್ತಿರುವ ದೈಹಿಕ-ತರಬೇತಿಯಾದ ಸ್ಪ್ರಿಂಟಿಂಗ್, ರನ್ನಿಂಗ್ ಮತ್ತು ಸ್ಟ್ರೆಚಿಂಗ್ ಮಾಡಲು ಹಿಂತಿರುಗಿತು.
ಇದು ಏಪ್ರಿಲ್ ತಿಂಗಳ ಆರಂಭ, ಬೆಳಿಗ್ಗೆ 6 ಗಂಟೆ. ನಗರದ ಏಕೈಕ ಸಾರ್ವಜನಿಕ ಮೈದಾನ - ಭಂಡಾರಾದ ಶಿವಾಜಿ ಕ್ರೀಡಾಂಗಣ ಯುವಕರ ಅಬ್ಬರದಿಂದ ತುಂಬಿಹೋಗಿದೆ.ಇ ಲ್ಲಿ ಬೆವರು ಸುರಿಸುತ್ತಾ 100 ಮೀಟರ್, 1,600 ಮೀಟರ್ ಓಡುತ್ತಾ, ಶಾರ್ಟ್‌ಪುಟ್ ಅಭ್ಯಾಸ ಮಾಡುತ್ತಿದ್ದಾರೆ. ಶಕ್ತಿ ಹೆಚ್ಚಲು ಇತರ ಡ್ರಿಲ್‌ಗಳನ್ನು ಮಾಡುತ್ತಿದ್ದಾರೆ.
ಅವರ ಮನಸ್ಸಿನಲ್ಲಿರುವ ಅತ್ಯಂತ ಕೊನೆಯ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಲೋಕಸಭಾ ಚುನಾವಣೆ. ಭಂಡಾರಾ-ಗೊಂಡಿಯಾ ಸಂಸದೀಯ ಕ್ಷೇತ್ರದಲ್ಲಿ ಏಪ್ರಿಲ್ 19, 2024 ರಂದು ಮೊದಲ ಹಂತದಲ್ಲಿ ದೀರ್ಘವಾದ, ಬೆವರಿಳಿಸುವ ಮತದಾನ ನಡೆಯಲಿದೆ.
ಚುನಾವಣೆಯ ಈ ಕದನದಿಂದ ದೂರ ಉಳಿದಿರುವ, ಈ ಯುವಕ-ಯುವತಿಯರು ಮುಂದಿನ ರಾಜ್ಯ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದಾರೆ, ಅರ್ಜಿಗಳು ಏಪ್ರಿಲ್ 15ರಂದು ಕೊನೆಗೊಳ್ಳುತ್ತವೆ. ಪರೀಕ್ಷೆಯಲ್ಲಿ ದೈಹಿಕ ಮತ್ತು ಲಿಖಿತ ಪರೀಕ್ಷೆ- ಇವೆರಡೂ ಸೇರಿವೆ. ಈ ಪರೀಕ್ಷೆಗಳು ಪೊಲೀಸ್ ಕಾನ್ಸ್‌ಟೇಬಲ್‌ಗಳು, ಕಾನ್‌ಸ್ಟೆಬಲ್ ಚಾಲಕರು, ರಾಜ್ಯ ಮೀಸಲು ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್‌ಮನ್‌ಗಳು ಮತ್ತು ಜೈಲು ಕಾನ್‌ಸ್ಟೆಬಲ್‌ಗಳ ಖಾಲಿ ಹುದ್ದೆಗಳನ್ನು ತುಂಬಲು ಒಂದೆರಡು ತಿಂಗಳುಗಳಲ್ಲಿ ನಡೆಯಲಿವೆ.













