ಪ್ರಿಯ ಓದುಗರೇ,
www.ruralindiaonline.org ಪಾಲಿಗೆ ಈ ವರ್ಷ ಬಹಳ ಚಟುವಟಿಕೆಯಿಂದ ಕೂಡಿತ್ತು.
2023 ಕೊನೆಗೊಳ್ಳುತ್ತಿರುವ ಈ ಹೊತ್ತು ಪರಿ ತನ್ನ ವರ್ಷದ ಕೆಲಸಗಳ ಕುರಿತು ಪರಿಶೀಲಾನತ್ಮಕ ಲೇಖನಗಳ ಸರಣಿಯನ್ನು ಮುಂದಿನ ಒಂಬತ್ತು ದಿನಗಳ ಕಾಲ ನಿರಂತರವಾಗಿ ಪ್ರಕಟಿಸಲಿದೆ. ಈ ಸರಣಿಯಲ್ಲಿ ಸಂಪಾದಕರ ಆಯ್ಕೆಯಾಗಿ ವರದಿಗಳು, ಕವನಗಳು, ಸಂಗೀತ, ಸಿನೆಮಾಫೋಟೊಗಳು, ಅನುವಾದಗಳು, ಲೈಬ್ರರಿ, ಫೇಸಸ್, ಸಾಮಾಜಿಕ ಜಾಲತಾಣ ಮತ್ತು ವಿದ್ಯಾರ್ಥಿಗಳೊಂದಿಗಿನ ನಮ್ಮ ಕೆಲಸಗಳ ಕುರಿತು ವಿವರಣಾತ್ಮಕ ಲೇಖನಗಳಿರಲಿವೆ.
ನಾವು ದೇಶದ ಮೂಲೆ ಮೂಲೆಯಿಂದ ವರದಿ ಮಾಡುವ ಕೆಲಸವನ್ನು ಈ ವರ್ಷವೂ ಮುಂದುವರೆಸಿದ್ದೇವೆ. ಜೊತೆಗೆ ಈ ಬಾರಿ ಹಲವು ಹೊಸ ಪ್ರದೇಶಗಳನ್ನು ಒಳಗೊಂಡಿದ್ದೇವೆ. ಇದರಲ್ಲಿ ದೇಶದ ಈಶಾನ್ಯ ಭಾಗವೂ ಸೇರಿದೆ. ಕೃಷಿ ವಿಭಾಗದಲ್ಲಿ ಅಪರ್ಣಾ ಕಾರ್ತಿಕೇಯನ್ ಅವರ ಸೂಕ್ಷ್ಮ ಸಂಶೋಧಿತ ವರದಿಗಳು ಅದ್ಭುತ ಸೇರ್ಪಡೆಯಾಗಿದ್ದು, ಈ ವರದಿಗಳಲ್ಲಿ ಮಲ್ಲಿಗೆ, ಎಳ್ಳು, ಒಣಮೀನು ಮತ್ತು ಇನ್ನೂ ಹಲವು ಆಹಾರ ಪಧಾರ್ಥಗಳು ಸೇರಿವೆ. ಜೈದೀಪ್ ಹರ್ಡಿಕರ್ ಅವರು ಮಾನವ-ಪ್ರಾಣಿ ಸಂಘರ್ಚದ ಕುರಿತು ಹಲವು ಸೂಕ್ಷ್ಮ ವರದಿಗಳನ್ನು ನೀಡಿದ್ದಾರೆ. ಈ ಸಂಘರ್ಷವನ್ನು ಒಂದು ಹೊಸ ಬಗೆಯ ಬರವೆಂದೇ ಪರಿಗಣಿಸಬಹುದು. ಈ ಸರಣಿಯಲ್ಲಿ ಹಲವು ಮನ ಕಲಕುವ ವರದಿಗಳು ಈ ಬಾರಿ ಪರಿಯಲ್ಲಿ ಪ್ರಕಟವಾಗಿವೆ.
ಪರಿಯ ಛಾಯಾಗ್ರಾಹಕ ಪಳನಿಕುಮಾರ್ ಅವರು ವಿಗ್ರಹ ತಯಾರಕರು, ಟ್ರಾನ್ಸ್ ನಟರು ಮತ್ತು ಮೀನುಗಾರರ ಬದುಕಿನ ವಿವರಗಳನ್ನು ದಾಖಲಿಸುವ ಹತ್ತು ಹಲವು ಚಿತ್ರಗಳನ್ನು ದಾಖಲಿಸಿದ್ದಾರೆ. ಇದರೊಂದಿಗೆ ರಿತಾಯನ್ ಮುಖರ್ಜಿ ಮತ್ತು ಮುಜಮ್ಮಿಲ್ ಭಟ್ ಅವರು ಕಾಶ್ಮೀರ ಮತ್ತು ಲದಾಖ್ ಕಣಿವೆಗಳಲ್ಲಿ ಅಲೆಮಾರಿ ಪಶುಪಾಲಕರೊಂದಿಗೆ ಸಂಚರಿಸಿ ಎತ್ತರದ ಪ್ರದೇಶಗಳಲ್ಲಿ ಅವರೊಂದಿಗೆ ನೆಲೆಸಿ ಹವಾಮಾನ ವೈಪರೀತ್ಯ ಅವರ ಬದುಕಿನ ಮೇಲೆ ಬೀರಿರುವ ಪರಿಣಾಮಗಳನ್ನು ತಮ್ಮ ಫೋಟೊಗಳ ಮೂಲಕ ದಾಖಲಿಸಿದ್ದಾರೆ. ಜ್ಯೋತಿ ಶಿನೋಲಿಯವರು ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿನ ಯುವ ಕ್ರೀಡಾಪಟುಗಳು, ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆ ಮತ್ತು ಮುಟ್ಟಿನ ಕುರಿತಾದ ಮೂಢನಂಬಿಕೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ವರದಿ ಮಾಡಿದ್ದಾರೆ. ಜೊತೆಗೆ ನಮ್ಮ ಪರಿ ಫೆಲೋ ಉಮೇಶ್ ಕೆ ರೇ ಮುಸಹರ್ ಸಮುದಾಯ ಮತ್ತು ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಹಲವು ಪರಿಣಾಮಕಾರಿ ವರದಿಗಳನ್ನು ಮಾಡಿದ್ದಾರೆ.
ಸಮುದಾಯಗಳು ಮತ್ತು ಸಂರಕ್ಷಣೆಗಳ ವಿಷಯದಲ್ಲಿ ನಾವು ಹೊಸ ಕ್ಷೇತ್ರಗಳಿಂದ ವರದಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ವಿಶಾಕಾ ಜಾರ್ಜ್ ಅವರು ಪೂರ್ವ ಹಿಮಾಲಯದ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಹಕ್ಕಿಯಾದ ಬುಗುನ್ ಲಿಯೋಸ್ಲಿಕಾ ಕುರಿತು ಹತ್ತು ಹಲವು ವಿಷಯಗಳನ್ನು ವರದಿ ಮಾಡಿದರು. ಇದರೊಂದಿಗೆ ಈ ಹಕ್ಕಿಯನ್ನು ಉಳಿಸುವಲ್ಲಿ ಅರಣ್ಯ ಇಲಾಖೆಯೊಂದಿಗೆ ಸ್ಥಳೀಯರು ಹೇಗೆ ಕೈಜೋಡಿಸುತ್ತಿದ್ದಾರೆನ್ನುವುದನ್ನು ಸಹ ಈ ವರದಿ ಒಳಗೊಂಡಿತ್ತು. ಇಂತಹದ್ದೇ ಇನ್ನೊಂದು ವರದಿಯನ್ನು ಪ್ರೀತಿ ಡೇವಿಡ್ ಅವರು ರಾಜಸ್ಥಾನದಿಂದ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯ ಕುರಿತು ಬರೆಯುವುದರೊಂದಿಗೆ, ನವೀಕರಿಸಬಹುದಾದ ಇಂಧನ ಸ್ಥಾವರಗಳಿಗಾಗಿ ಪವಿತ್ರ ತೋಪುಗಳನ್ನು ಸರ್ಕಾರ ವಶಪಡಿಸಿಕೊಂಡ ಬಗ್ಗೆಯೂ ಬರೆದಿದ್ದರು.
ಮೇಲಿನ ವರದಿಗಳೊಂದಿಗೆ ನಾವು ಕೆಲವು ಪ್ರಸ್ತುತ ಸಮಸ್ಯೆಗಳ ಕುರಿತಾದ ಹೋರಾಟಗಳನ್ನೂ ವರದಿ ಮಾಡಿದೆವು. ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರೊಂದಿಗೆ ನಾವೂ ಹೆಜ್ಜೆ ಹಾಕಿ ಆ ಹೋರಾಟವನ್ನು ವರದಿ ಮಾಡಿದೆವು. ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆದಿವಾಸಿ ಹೋರಾಟಗಾರರನ್ನೂ ಮಾತನಾಡಿಸಿ ಅವರ ಕುರಿತು ವರದಿ ಮಾಡಿದೆವು. ಜೊತಗೆ ಮುಷ್ಕರ ನಿರತ ಅಂಗನವಾಡ ಕಾರ್ಯಕರ್ತರ ಹೋರಾಟವನ್ನು ನಾವು ವರದಿ ಮಾಡಿದ್ದೇವೆ. ಇದರ ನಂತರ 2023ರ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶ, ಚತ್ತೀಸಗಢ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಥ್ ಎಮ್ ಎನ್ ಅವರು ಅಲ್ಲಿನ ಬುಲ್ಡೋಜರ್ ನ್ಯಾಯ, ಆದಿವಾಸಿ ಜನಾಂಗದವರ ಮೇಲಿನ ದೌರ್ಜನ್ಯ ಮತ್ತು ಕಸ್ಟಡಿ ಸಾವುಗಳಿಗೆ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಜನರ ಬದುಕಿನ ಜೀವಂತ ವಾಸ್ತವಗಳ ಕುರಿತು ವರದಿ ಮಾಡಿದ್ದರು.
ಸ್ಮಿತಾ ಖಾಟೋರ್ ಅವರು ಮುರ್ಷಿದಾಬಾದ್ ಜಿಲ್ಲೆಯಿಂದ ಬೀಡಿ ಕಾರ್ಮಿಕರ ಕುರಿತಾಗಿ ವರದಿ ಮಾಡಿದ್ದರು. ಈ ವರದಿಗಳೊಂದಿಗೆ ಅವರು ಕೆಲವು ಕಾರ್ಮಿಕ ಮಹಿಳೆಯರ ಹೋರಾಟದ ಹಾಡುಗಳು ಮತ್ತು ಮಕ್ಕಳ ನಾಟಕದ ಕುರಿತಾದ ಕೆಲವು ಬರಹಗಳನ್ನು ಮುಸಾಫಿಸರ್ ವಿಭಾಗದಡಿ ನೀಡಿದ್ದಾರೆ. ಶಿಕ್ಷಕರೂ ಆಗಿರುವ ಮೇದಾ ಕಾಳೆ ಈ ಬಾರಿ ವಿಶೇಷ ಶಿಕ್ಷಕರ ಕುರಿತಾದ ಲೇಖನವೊಂದನ್ನು ವೈಯಕ್ತಿಕ ಸ್ಪರ್ಶದೊಂದಿಗೆ ಮನದುಂಬಿ ಬರುವಂತೆ ಬರೆದಿದ್ದಾರೆ. ನಮ್ಮ ವರದಿಗಾರರು ಗ್ರಾಮೀಣ ಭಾರತದ ಕೆಲವು ಹಬ್ಬಗಳನ್ನು ನೋಡಿ ಆ ಕುರಿತು ವರದಿಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಮಾ ಬೊನ್‌ಬೀಬಿ, ಶೈಲ ನೃತ್ಯ, ಚಾದರ್ ಬಾದನಿ, ಪಿಲಿವೇಷ ಪ್ರದರ್ಶನ ಕೆಲವು. ಇದರೊಂದಿಗೆ ʼಇದು ಕಡೆಗೂ ಯಾರ ಮಂದಿರ?ʼ ಎನ್ನುವ ವರದಿಯನ್ನೂ ಪ್ರಕಟಿಸಿದ್ದೆವು.
ಪರಿಯ ಜೊತೆಗಾರರ ತಂಡ ಭಾರತದ ಮೂಲೆಮೂಲೆಗೂ ಹಬ್ಬಿದೆ. ಈ ಅನುಕೂಲವನ್ನು ಬಳಸಿಕೊಂಡು ಕೆಲವು ಭಾರತ ಮಟ್ಟದ ವರದಿಗಳನ್ನು ಸಹ ಪ್ರಕಟಿಸಿದ್ದೇವೆ. ಇಂತಹ ಸಹಯೋಗದೊಂದಿಗೆ ಗಿಗ್ ವರ್ಕರ್ಸ್, ವಲಸೆ ಕಾರ್ಮಿಕರೊಂದಿಗೆ ವಲಸೆ ಹೋಗುವ ಪದಗಳ ಕುರಿತಾಗಿ ವರದಿ ಮಾಡಿದ್ದೇವೆ. ಜೊತೆಗೆ ವಿರಾಮದ ಘಳಿಗೆಯಲ್ಲಿ ಗ್ರಾಮೀಣ ಭಾರತದ ಮಹಿಳೆಯರು ಏನು ಮಾಡುತ್ತಾರೆನ್ನುವ ಕುತೂಹಲದ ವರದಿಯನ್ನೂ ಇದೇ ರೀತಿ ಸಹಯೋಗದೊಂದಿಗೆ ಮಾಡಿದ್ದೇವೆ. ಮುಂದಿನ ವರ್ಷ ಇಂತಹ ಹಲವು ವರದಿಗಳನ್ನು ಮಾಡುವ ನಿರೀಕ್ಷೆಯಲ್ಲಿ ನಾವಿದ್ದೇವೆ.






