“ಅಲ್ಲಿ, ಇಲ್ಲಿ ಎಲ್ಲ ಕಡೆ ಇತ್ತು” ಎಂದು ಸಣ್ಣಗೆ ನಕ್ಕು ದೂರದವರೆಗೂ ಕೈ ತೋರಿಸುತ್ತಾ ಸುರೇಂದ್ರ ನಾಥ ಅವಸ್ಥಿ ತಮ್ಮ ನೆನಪಿನಲ್ಲಿರುವ ಚಿತ್ರವನ್ನು ತೋರಿಸಲು ಪ್ರಯತ್ನಿಸುತ್ತಿದ್ದರು.
“ನಾವು ಅವಳನ್ನು ಬಹಳ ಪ್ರೀತಿಸುತ್ತಿದ್ದೆವು. ಅವಳಿಂದಾಗಿಯೇ ನಮ್ಮೂರಿನಲ್ಲಿ ಹತ್ತು ಅಡಿ ತೋಡಿದರೂ ಬಾವಿಯಲ್ಲಿ ಸಿಹಿ ನೀರು ಸಿಗುತ್ತಿತ್ತು. ಮಳೆಗಾಲದಲ್ಲಿ ಅವಳು ಮನೆಗೇ ನುಗ್ಗಿ ಬರುತ್ತಿದ್ದಳು. ಪ್ರತೀ ಮೂರು ವರ್ಷಕ್ಕೊಮ್ಮೆ ಅವಳು ಸಣ್ಣ ಪುಟ್ಟ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದಳು. ಒಮ್ಮೆ ನನ್ನ ಸಹೋದರ ಸಂಬಂಧಿಯೊಬ್ಬನನ್ನು ಕೊಂಡೊಯ್ದಾಗ ನನಗೆ ಅವಳ ಮೇಲೆ ಬಹಳ ದಿನಗಳವರೆಗೆ ಸಿಟ್ಟಿತ್ತು” ಎನ್ನುತ್ತಾರವರು. “ಆದರೆ ಈಗ ಅವಳು ಹಲವು ವರ್ಷಗಳಿಂದ ನಮ್ಮ ಮೇಲೆ ಮುನಿಸಿಕೊಂಡಿದ್ದಾಳೆ… ಬಹುಶಃ ಇದಕ್ಕೆ ಈ ಸೇತುವೆ ಕಾರಣ” ಅವರು ವಿಷಾದದ ದನಿಯಲ್ಲಿ ಹೇಳಿದರು.
ಅವಸ್ಥಿಯವರು 67 ಮೀಟರ ಉದ್ದದ ಸೇತುವೆಯ ಮೇಲೆ ನಿಂತು ಮಾತನಾಡುತ್ತಿದ್ದರು. ಇದೇ ಸೇತುವೆಯ ಕೆಳಗೆ ಸಈ ನದಿ ಹರಿಯುತ್ತದೆ. ಈಗ ಈ ಊರಿನ ಮೇಲೆ ಮುನಿಸಿಕೊಂಡಿರುವ ʼಅವಳುʼ ಇದೇ ಸಈ ನದಿ. ಸೇತುವೆಯ ಕೆಳಗೆ ಕೃಷಿ ಭೂಮಿಯಿದ್ದು ಅಲ್ಲಿ ಗೋಧಿ ಬೆಳೆದ ಕುರುಹುಗಳಿದ್ದ ಹೊಲಗಳಿದ್ದವು. ಅವುಗಳ ಬದಿಯಲ್ಲಿ ನೀಲಗಿರಿ ಮರಗಳು ತೂಗಾಡುತ್ತಿದ್ದವು.
ಅವಸ್ಥಿಯವರ ಸ್ನೇಹಿತ ಮತ್ತು ಸಹವರ್ತಿ ನಿವೃತ್ತ ಶಾಲಾ ಶಿಕ್ಷಕ ಜಗದೀಶ್ ಪ್ರಸಾದ್ ತ್ಯಾಗಿ ಒಂದು ಕಾಲದಲ್ಲಿ ಸಈ “ಸುಂದರ ನದಿ”ಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ಅವರು ಆ ದಿನಗಳಲ್ಲಿ ಆ ನೀರಿನಲ್ಲಿ ಆಡುತ್ತಾ ನೆಗೆಯುತ್ತಿದ್ದ ಮೀನುಗಳ ಕುರಿತು ಮಾತನಾಡುತ್ತಿದ್ದಾರೆ. ಆ ಹೊಳೆಯಲ್ಲಿ ದೊಡ್ಡ ದೊಡ್ಡ ಮೀನುಗಳು ಚಿನ್ನಾಟವಾಡುತ್ತಿದ್ದವು. ರೋಹು, ಈಲ್ ಇತ್ಯಾದಿ ಮೀನುಗಳಿದ್ದವು ಅಲ್ಲಿ. “ನೀರು ಒಣಗತೊಡಗಿದಂತೆ ಮೀನುಗಳು ಕಾಣೆಯಾದವು” ಎನ್ನುತ್ತಾರವರು.
2007-12ರವರೆಗೆ ಗ್ರಾಮದ ಸರಪಂಚ್ ಆಗಿದ್ದ 74 ವರ್ಷದ ಮಾಲತಿ ಅವಸ್ಥಿಯವರೂ ಈ ಹೊಳೆಯ ಒಂದಷ್ಟು ಸುಂದರ ನೆನಪುಗಳನ್ನು ತಮ್ಮೊಡನೆ ಕಾಪಿಟ್ಟುಕೊಂಡಿದ್ದಾರೆ. ನದಿಯ ದಡದಿಂದ ಸುಮಾರು 100 ಮೀಟರ್ ದೂರದಲ್ಲಿರುವ ತನ್ನ ಮನೆಯ ಅಂಗಳಕ್ಕೆ ಸಈ ಹರಿದು ಬಂದ ದಿನವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅದೇ ಅಂಗಳದಲ್ಲಿ ಅವರು ಪ್ರತಿ ವರ್ಷ ನದಿ ಕೋಪಕ್ಕೆ ತಮ್ಮ ಬೆಳೆಗಳನ್ನು ಕಳೆದುಕೊಂಡ ಊರ ಜನರಿಗಾಗಿ “ಅನ್ನ್ ಪರ್ವತ್ ದಾನ್ ಎನ್ನುವ ಸಾಮಾಜಿಕ ಧಾನ್ಯವಿತರಣೆ ಕಾರ್ಯಕ್ರಮ ನಡೆಸುತ್ತಿದ್ದರು.
“ಈಗ ಸೌಹಾರ್ದ ಭಾವನೆ ಇಲ್ಲವಾಗಿದೆ. ಕಾಳುಗಳಿದ್ದ ಆ ರುಚಿಯೂ ಹೋಗಿದೆ. ಬಾವಿಗಳಲ್ಲಿನ ನೀರು ಬತ್ತಿದೆ. ಜಾನುವಾರುಗಳು ಸಹ ನಮ್ಮಂತೆ ಬಳಲುತ್ತಿವೆ. ಒಟ್ಟಾರೆ ಬದುಕು ರುಚಿ ಕಳೆದುಕೊಂಡಿದೆ” ಎಂದು ಅವರು ನೋವಿನಿಂದ ನುಡಿಯುತ್ತಾರೆ.























