ಕೊಚ್ರೆ ಗ್ರಾಮದ ಸಂತೋಷ್ ಹಲ್ದಂಕರ್ ಅವರ 500 ಹಪೂಸ್ ಮಾವಿನ ಮರಗಳನ್ನು ಹೊಂದಿರುವ ತೋಟವು ಒಂದು ಕಾಲದಲ್ಲಿ ಹಣ್ಣುಗಳಿಂದ ತುಂಬಿರುತ್ತಿತ್ತು. ಆದರೆ ಈಗ ಅದು ಮುಗಿದ ಕತೆ.
ಅಕಾಲಿಕ ಮಳೆ ಮತ್ತು ತಾಪಮಾನದಲ್ಲಿನ ಹಠಾತ್ ಏರಿಳಿತಗಳು ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಅಲ್ಫೋನ್ಸೊ (ಮ್ಯಾಂಗಿಫೆರಾ ಇಂಡಿಕಾ ಎಲ್) ರೈತರಿಗೆ ಮಾವಿನ ಸಣ್ಣ ಇಳುವರಿಗಳನ್ನಷ್ಟೇ ನೀಡುತ್ತಿವೆ. ಕೊಲ್ಹಾಪುರ ಮತ್ತು ಸಾಂಗ್ಲಿ ಮಾರುಕಟ್ಟೆಗಳ ಮಾವಿನ ಹಣ್ಣುಗಳ ಆವಕದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.
"ಕಳೆದ 3 ವರ್ಷಗಳು ತುಂಬಾ ಕಷ್ಟದಿಂದ ಕೂಡಿದ್ದವು. ಅದಕ್ಕೂ ಮೊದಲು 7-8 ವರ್ಷಗಳ ಹಿಂದೆ ಹಳ್ಳಿಯಿಂದ 10-12 ಗಾಡಿ ಮಾವು ಮಾರುಕಟ್ಟೆಗೆ ಹೋಗುತ್ತಿತ್ತು, ಆದರೆ ಈಗ ಇಡೀ ಹಳ್ಳಿಯಿಂದ 1 ಗಾಡಿ ತುಂಬುವುದು ಕಷ್ಟ’’ ಎನ್ನುತ್ತಾರೆ ಕಳೆದ 10 ವರ್ಷಗಳಿಂದ ಮಾವು ವ್ಯಾಪಾರ ಮಾಡುತ್ತಿರುವ ಸಂತೋಷ ಹಲ್ದಂಕರ್.
ಸಿಂಧುದುರ್ಗ್ ಜಿಲ್ಲೆಯ ವೆಂಗುರ್ಲಾ ತಾಲ್ಲೂಕಿನ ಮೂರು ಪ್ರಮುಖ ಉತ್ಪನ್ನಗಳಲ್ಲಿ ಮಾವು ಒಂದಾಗಿದೆ (ಜನಗಣತಿ 2011). ಆದರೆ ಇಲ್ಲಿನ ಹವಾಮಾನವು ಎಷ್ಟು ಅನಿಯಮಿತವಾಗಿದೆಯೆಂದರೆ ಮಾವು ಉತ್ಪಾದನೆಯು ಕಳೆದ ವರ್ಷದ ಸರಾಸರಿಗಿಂತ ಶೇಕಡಾ 10ಕ್ಕೆ ಇಳಿದಿದೆ ಎಂದು ಹಲ್ದಂಕರ್ ಹೇಳುತ್ತಾರೆ.
"2-3 ವರ್ಷಗಳಲ್ಲಿ, ಪ್ರಕೃತಿಯಲ್ಲಿನ ಬದಲಾವಣೆಯು ಸಾಕಷ್ಟು ಹಾನಿಯನ್ನುಂಟು ಮಾಡಿದೆ" ಎಂದು ಸ್ವರಾ ಹಲ್ದಂಕರ್ ಹೇಳುತ್ತಾರೆ. ಹವಾಮಾನ ಬದಲಾದಂತೆ, ಮಾವಿನ ಹಣ್ಣಿಗೆ ಹೊಸ ಕೀಟಗಳು ಬರಲು ಪ್ರಾರಂಭಿಸಿವೆ ಎಂದು ಮಾವಿನಹಣ್ಣುಗಳನ್ನು ಬೆಳೆಯುವ ಸ್ವರಾ ಹೇಳುತ್ತಾರೆ. ಮಿಡತೆಗಳು ಮತ್ತು ಥ್ರಿಪ್‌ಗಳಂತಹ ಕೀಟಗಳು ಮಾವು ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.
ರೈತ ಮತ್ತು ಕೃಷಿ ಪದವೀಧರ ನಿಲೇಶ್ ಪರಬ್, ಮಾವಿನ ಹಣ್ಣಿನ ಮೇಲೆ ಥ್ರಿಪ್ಸ್ ಕೀಟದ ಪರಿಣಾಮವನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು "ಪ್ರಸ್ತುತ ಯಾವುದೇ ಕೀಟನಾಶಕಗಳು ಅದರ ಮೇಲೆ ಕೆಲಸ ಮಾಡುವುದಿಲ್ಲ" ಎಂದು ಅವರ ಅಧ್ಯಯನ ಹೇಳುತ್ತದೆ.
ಹಣ್ಣಿನ ಇಳುವರಿಯಲ್ಲಿ ಕುಸಿತ ಮತ್ತು ಲಾಭಾಂಶ ಕಡಿತದ ಕಾರಣ ಸಂತೋಷ್ ಮತ್ತು ಸ್ವರಾ ಅವರಂತಹ ಮಾವು ಬೆಳೆಗಾರರು ತಮ್ಮ ನಂತರ ಅವರ ಮಕ್ಕಳು ಈ ಕೃಷಿಯಲ್ಲಿ ತೊಡಗುವುದನ್ನು ಬಯಸುವುದಿಲ್ಲ. "ಮಾವಿನಹಣ್ಣಿಗೆ ಬೆಲೆ ಇಲ್ಲ, ಮಧ್ಯವರ್ತಿಗಳು ಮೋಸ ಮಾಡುತ್ತಾರೆ. ಬಹಳಷ್ಟು ಕಠಿಣ ಪರಿಶ್ರಮದ ನಂತರ, ದುಡಿದ ಅಷ್ಟೂ ಹಣ ಕೀಟನಾಶಕ ಹಾಗೂ ಕೂಲಿ ನೀಡಲು ಖರ್ಚಾಗುತ್ತದೆ" ಎಂದು ಸ್ವರಾ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು