ದೀಪಿಕಾ ಕಮನ್ ಅವರ ಅನುಭವಿ ಕಣ್ಣುಗಳು ಬಹತೇಕ ಒಂದೇ ರೀತಿ ಕಾಣುವ ಗಂಡು ಮತ್ತು ಹೆಣ್ಣು ಪತಂಗಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲವು. “ಅವು ನೋಡಲು ಒಂದೇ ರೀತಿ ಕಾಣುತ್ತವೆ. ಆದರೆ ಅವುಗಳ ಉದ್ದದಲ್ಲಿ ವ್ಯತ್ಯಾಸವಿರುತ್ತದೆ. ಉದ್ದಕ್ಕಿರುವುದೇ ಗಂಡು” ಎಂದು ಅವರು ಸುಮಾರು 13 ಸೆಂಟಿಮೀಟರ್ ರೆಕ್ಕೆಗಳನ್ನು ಹೊಂದಿರುವ ಕಂದು ಮತ್ತುಬೀಜ್ ಬಣ್ಣದ ಜೀವಿಗಳನ್ನು ತೋರಿಸುತ್ತಾ “ಕುಳ್ಳಗಿರುವುದು ಹೆಣ್ಣು” ಹೇಳಿದರು.
ದೀಪಿಕಾ ಅಸ್ಸಾಂನ ಮಜುಲಿ ಜಿಲ್ಲೆಯ ಬೊರುನ್ ಚಿತಾದಾರ್ ಚುಕ್ ಗ್ರಾಮದ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ಎರಿ ರೇಷ್ಮೆ ಹುಳಗಳ (ಸಮಿಯಾ ರಿಸಿನಿ) ಸಾಕಣೆಯನ್ನು ಪ್ರಾರಂಭಿಸಿದರು. ಅವರು ಅದನ್ನು ತನ್ನ ತಾಯಿ ಮತ್ತು ಅಜ್ಜಿಯಿಂದ ಕಲಿತಿದ್ದರು.
ಎರಿ ಎನ್ನುವುದು ಅಸ್ಸಾಂನ ಬ್ರಹ್ಮಪುತ್ರ ಕಣಿವೆ ಮತ್ತು ನೆರೆಯ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬೆಳೆಯುವ ರೇಷ್ಮೆ ತಳಿ. ಮಿಸಿಂಗ್ (ಮಿಶಿಂಗ್ ಎಂದೂ ಕರೆಯಲಾಗುತ್ತದೆ) ಸಮುದಾಯವು ಸಾಂಪ್ರದಾಯಿಕವಾಗಿ ಸ್ವಂತ ಬಳಕೆಗಾಗಿ ಎರಿ ರೇಷ್ಮೆ ಸಾಕಣೆ ಮಾಡಿ ರೇಷ್ಮೆಯನ್ನು ನೇಯುತ್ತಿತ್ತು. ಆದರೆ ಒಂದು ವ್ಯವಹಾರವಾಗಿ ರೇಷ್ಮೆ ನೇಯ್ಗೆ ಸಮುದಾಯದ ಮಟ್ಟಿಗೆ ತುಲನಾತ್ಮಕವಾಗಿ ಹೊಸದು.
"ಈಗ ಕಾಲ ಬದಲಾಗಿದೆ" ಎಂದು 28 ವರ್ಷದ ದೀಪಿಕಾ ಹೇಳುತ್ತಾರೆ. "ಇತ್ತೀಚಿನ ದಿನಗಳಲ್ಲಿ ಯುವತಿಯರು ಸಹ ರೇಷ್ಮೆ ಹುಳು ಸಾಕಾಣಿಕೆಯನ್ನು ಕಲಿತು ಅದರಲ್ಲೇ ಮುಂದುವರೆಯುತ್ತಿದ್ದಾರೆ."
![](/media/images/02-_PRK2276-PB-Along_the_Majuli_silk_route.max-1400x1120.jpg)
ದೀಪಿಕಾ ಕಮನ್ ರೇಷ್ಮೆ ವ್ಯವಸಾಯ ಮಾಡುತ್ತಾರೆ . ಇಲ್ಲಿ ಅವರು ಎರಿ ರೇಷ್ಮೆ ಹುಳುಗಳ ಆಹಾರವಾದ ಪಾಟ್ ಎಲೆಯನ್ನು ಹಾಕಿಡುವ ಟ್ರೇಯನ್ನು ಸ್ವಚ್ಛಗೊಳಿಸಿ ಹೊಸ ಎಲೆಗಳನ್ನು ಅದರಲ್ಲಿ ತುಂಬುತ್ತಿದ್ದಾರೆ
ರೇಷ್ಮೆ ಬೇಸಾಯ ಆರಂಭಿಸಲು ಇಚ್ಛಿಸುವ ಜನರು ಜನರು ಮಜುಲಿಯ ರೇಷ್ಮೆ ಇಲಾಖೆಯಿಂದ ಮೊಟ್ಟೆಗಳನ್ನು ಖರೀದಿಸಬಹುದು – ಕೆಲವು ಪ್ರಭೇದಗಳ ಪ್ಯಾಕೇಟ್ ಒಂದಕ್ಕೆ 400 ರೂಪಾಯಿಗಳಷ್ಟಿರುತ್ತದೆ – ಅಥವಾ ಊರಿನಲ್ಲಿ ಈಗಾಗಲೇ ಈ ವೃತ್ತಿಯಲ್ಲಿ ತೊಡಗಿರುವವರಿಂದಲೂ ಪಡೆಯಬಹುದು. ದೀಪಿಕಾ ಮತ್ತು ಅವರ ಪತಿ ಉದಯ್ ಸಾಮಾನ್ಯವಾಗಿ ಎರಡನೆಯದನ್ನು ಆಯ್ದುಕೊಳ್ಳುತ್ತಾರೆ. ಏಕೆಂದರೆ ಎರಡನೇ ಆಯ್ಕೆಯಲ್ಲಿ ಅವರಿಗೆ ಮೊಟ್ಟೆಗಳು ಉಚಿತವಾಗಿ ಸಿಗುತ್ತದೆ. ಈ ದಂಪತಿ ಒಂದು ಸಮಯದಲ್ಲಿ ಮೂರು ಜೋಡಿಗಳಿಗಿಂತ ಹೆಚ್ಚು ಪತಂಗಗಳನ್ನು ಇಟ್ಟುಕೊಳ್ಳುವುದಿಲ್ಲ ಏಕೆಂದರೆ ಮೊಟ್ಟೆಯಿಟ್ಟ ಲಾರ್ವಾಗಳಿಗೆ ಆಹಾರ ನೀಡಲು ಹೆಚ್ಚು ಎರಾ ಪಾಟ್ (ಹರಳು ಗಿಡದ ಎಲೆ) ಬೇಕಾಗುತ್ತದೆ. ಅವರ ಬಳಿ ಎರಾ ಬಾರಿ (ತೋಟ) ಇಲ್ಲದ ಕಾರಣ ಅವರು ಅದನ್ನು ಹೊರಗಿನಿಂದ ತರಬೇಕು.
“ಇದು ಬಹಳಷ್ಟು ಶ್ರಮ ಬೇಡುತ್ತದೆ. ಇದನ್ನು (ಹರಳು ಗಿಡ) ಣ್ಣ ತುಂಡು ಭೂಮಿಯಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಲ್ಲದೆ ಗಿಡಗಳ ರಕ್ಷಣೆಗೆ ಬಿದಿರಿನ ಬೇಲಿ ಮಾಡಬೇಕು ಮತ್ತು ಬೆಳೆಗೆ ಆಡುಗಳು ನುಗ್ಗದಂತೆ ನೋಡಿಕೊಳ್ಳಬೇಕು” ಎಂದು ಅವರು ಹೇಳುತ್ತಾರೆ.
ಮರಿಹುಳುಗಳು ಬಹಳಷ್ಟು ತಿನ್ನುತ್ತವೆಯಾದ ಕಾರಣ ಅವುಗಳಿಗೆ ಸಾಕಾಗುವಷ್ಟು ಎಲೆಯನ್ನು ಹೊಂದಿಸುವುದು ಕಷ್ಟವಾಗುತ್ತದೆ. “ರಾತ್ರಿ ಹೊತ್ತು ಎಚ್ಚರವಿದ್ದು ಅವುಗಳಿಗೆ ಎಲೆಯನ್ನು ಹಾಕಬೇಕಿರುತ್ತದೆ. ಅವು ಹೆಚ್ಚು ಎಲೆ ತಿನ್ನುವುದರಿಂದ ಹೆಚ್ಚು ಹೆಚ್ಚು ರೇಷ್ಮೆಯನ್ನು ಉತ್ಪಾದಿಸುತ್ತವೆ.” “ಅವು ಕೆಸೆರು (ಹೆಟೆರೊಪನಾಕ್ಸ್ ಫ್ರಾಗ್ರಾನ್ಸ್) ಎಲೆಯನ್ನು ಸಹ ತಿನ್ನುತ್ತವೆ” ಎಂದು ಉದಯ್ ಹೇಳುತ್ತಾರೆ. ಆದರೆ ಈ ಹುಳುಗಳು ಅದು ಅಥವಾ ಇದು ಒಂದನ್ನು ಮಾತ್ರ ತಿನ್ನುತ್ತವೆ: “ಅವು ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಜಾತಿಯ ಎಲೆಯನ್ನಷ್ಟೇ ತಿನ್ನುತ್ತವೆ.”
ಗೂಡು ಕಟ್ಟಲು ಸಿದ್ಧವಾಗುತ್ತಿದ್ದಂತೆ ಪೋಕಾ ಪೋಲು (ಮರಿಹುಳುಗಳು) ಸೂಕ್ತ ಸ್ಥಳಗಳನ್ನು ಹುಡುಕುತ್ತಾ ತೆವಳಲು ಪ್ರಾರಂಭಿಸುತ್ತವೆ. ಹುಳುಗಳ ರೂಪಾಂತರಕ್ಕಾಗಿ ಕಾಯಲು ಅವುಗಳನ್ನು ಬಾಳೆ ಎಲೆಗಳು ಮತ್ತು ಹುಲ್ಲಿನ ಮೇಲೆ ಹರಡಲಾಗುತ್ತದೆ. “ಅವು ಒಮ್ಮೆ ನೂಲಿನ ಗೂಡು ಕಟ್ಟಲು ಆರಂಭಿಸಿದ ನಂತರ ಮುಂದಿನ ಎರಡು ದಿನಗಳ ತನಕವಷ್ಟೇ ನಮಗೆ ಕಾಣುತ್ತವೆ. ನಂತರ ಅವು ಗೂಡಿನೊಳಗೆ ಕಣ್ಮರೆಯಾಗುತ್ತವೆ" ಎಂದು ದೀಪಿಕಾ ಹೇಳುತ್ತಾರೆ.
![](/media/images/03a-_DSC7730-PB-Along_the_Majuli_silk_rout.max-1400x1120.jpg)
![](/media/images/03b-_DSC6981-PB-Along_the_Majuli_silk_rout.max-1400x1120.jpg)
ಎಡಕ್ಕೆ : ದೀಪಿಕಾ ಮತ್ತು ಉದಯ್ ಅವರ ಮನೆಯ ಗೋಡೆಯ ಮೇಲೆ ನೇತಾಡುತ್ತಿರುವ ಎರಿ ರೇಷ್ಮೆ ಗೂಡುಗಳು . ಹೆಣ್ಣು ಪತಂಗಗಳ ಗೂಡುಗಳು ಗಂಡು ಪತಂಗಗಳ ಗೂಡಿ ಗಿಂತ ದೊಡ್ಡದಾಗಿರುತ್ತವೆ . ಬಲ : ರೇಷ್ಮೆ ಹುಳುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ ಅವುಗಳಿಗೆ ಆಹಾರ ನೀಡಲಾಗುತ್ತದೆ
*****
ರೇಷ್ಮೆ ಎಳೆಗಳನ್ನು ಹೊರತೆಗೆಯುವ ಪ್ರಕ್ರಿಯೆಯು ರೇಷ್ಮೆಗೂಡು ಕಟ್ಟುವ ಪ್ರಕ್ರಿಯೆ ಪ್ರಾರಂಭಗೊಂಡ ಸುಮಾರು 10 ದಿನಗಳ ನಂತರ ಪ್ರಾರಂಭವಾಗುತ್ತದೆ. "ನಾವು ಅವುಗಳನ್ನು ಅದಕ್ಕಿಂತ ಹೆಚ್ಚು ಕಾಲ ಇಟ್ಟುಕೊಂಡರೆ, ಮರಿಹುಳು ಪತಂಗವಾಗಿ ಬದಲಾಗಿ ಹಾರಿಹೋಗುತ್ತದೆ" ಎಂದು ದೀಪಿಕಾ ಹೇಳುತ್ತಾರೆ.
ರೇಷ್ಮೆ ಕೊಯ್ಲು ಮಾಡಲು ಎರಡು ವಿಧಾನಗಳಿವೆ: ರೂಪಾಂತರ ಪೂರ್ಣಗೊಂಡು ಪತಂಗವು ನಾರುಗಳನ್ನು ಬಿಟ್ಟು ಹಾರಿಹೋಗುವ ತನಕ ಕಾಯುವುದು ಅಥವಾ ಗೂಡನ್ನು ಕುದಿಸುವ ಸಾಂಪ್ರದಾಯಿಕ ಮಿಸಿಂಗ್ ವಿಧಾನ.
ಗೂಡನ್ನು ಕುದಿಸದೆ ಕೈಯಿಂದ ಎಳೆಯನ್ನು ಹೊರತೆಗೆಯುವುದು ಕಷ್ಟ ಎಂದು ದೀಪಿಕಾ ಹೇಳುತ್ತಾರೆ. ಹುಳುವು ಪತಂಗವಾಗಿ ಹೊರಹೊಮ್ಮಿದ ನಂತರ ಗೂಡು ಬೇಗನೆ ಕೊಳೆಯತೊಡಗುತ್ತದೆ. "ಗೂಡು ಕುದಿಯುವಾಗ, ಮೃದುವಾಗಿವೆಯೇ ಎಂದು ನೋಡಲು ಗಮನಿಸುತ್ತಲೇ ಇರುತ್ತೇವೆ" ಎಂದು ಉದಯ್ ಹೇಳುತ್ತಾರೆ. "ಗೂಡು ಬೇಯಲು ಸುಮಾರು ಅರ್ಧ ಗಂಟೆ ಬೇಕಾಗುತ್ತದೆ."
ಪೋಲು ಪೋಕಾ (ಮರಿಹುಳು) ಒಂದು ರುಚಿಕರವಾದ ಆಹಾರವಾಗಿದ್ದು, ಬೇಯಿಸಿದ ಗೂಡಿನಿಂದ ಹೊರತೆಗೆದ ನಂತರ ಅವುಗಳನ್ನು ತಿನ್ನಲಾಗುತ್ತದೆ. "ಇದರ ರುಚಿ ಮಾಂಸದಂತೆ ಇರುತ್ತದೆ" ಎಂದು ದೀಪಿಕಾ ಹೇಳುತ್ತಾರೆ. "ಇದನ್ನು ಹುರಿಯಬಹುದು ಅಥವಾ ಪಟೋಟ್ ದಿಯಾ (ಯಾವುದೇ ತರಕಾರಿ, ಮಾಂಸ ಅಥವಾ ಮೀನನ್ನು ಬಾಳೆ ಎಲೆಯಲ್ಲಿ ಸುತ್ತಿ ಒಲೆಯ ಹೊಗೆಯಲ್ಲಿ ಬೇಯಿಸುವ ವಿಧಾನ) ವಿಧಾನದಲ್ಲಿ ತಯಾರಿಸಿ ತಿನ್ನಬಹುದು."
ಹೊರತೆಗೆದ ಎಳೆಗಳನ್ನು ತೊಳೆದು, ಬಟ್ಟೆಯಲ್ಲಿ ಸುತ್ತಿ ನೆರಳಿನಲ್ಲಿ ಒಣಗಿಸಲಾಗುತ್ತದೆ. ನಂತರ ದಾರಗಳನ್ನು ಟಕುರಿ ಅಥವಾ ಪೋಪಿ (ಸ್ಪಿಂಡಲ್/ಕದಿರು) ಬಳಸಿ ಸುತ್ತಲಾಗುತ್ತದೆ. "250 ಗ್ರಾಂ ಎರಿ ದಾರವನ್ನು ತಯಾರಿಸಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ" ಎಂದು ದೀಪಿಕಾ ಹೇಳುತ್ತಾರೆ, ಅವರು ತಮ್ಮ ದೈನಂದಿನ ಮನೆಕೆಲಸ ಮುಗಿದ ನಂತರ ದಾರ ಸುತ್ತುವ ಕೆಲಸಕ್ಕೆ ಕೂರುತ್ತಾರೆ. ಒಂದು ಜೊತೆ ಸಾಂಪ್ರದಾಯಿಕ ಸಾಡೋರ್-ಮೆಖೇಲಾ (ಎರಡು-ತುಂಡುಗಳ ಉಡುಗೆ) ತಯಾರಿಸಲು ಸುಮಾರು ಒಂದು ಕಿಲೋಗ್ರಾಂ ನೂಲು ಬೇಕಾಗುತ್ತದೆ.
![](/media/images/04a-_PRK0659-PB-Along_the_Majuli_silk_rout.max-1400x1120.jpg)
![](/media/images/04b-_PRK2272-PB-Along_the_Majuli_silk_rout.max-1400x1120.jpg)
ಎಡ: ಹೆಣ್ಣು ಪತಂಗಗಳು ಮೊಟ್ಟೆ ಇಡುತ್ತಿರುವುದು. ಪತಂಗಗಳು ಗೂಡಿನಿಂದ ಹೊರಬರುವಾಗ ಅವು ಪ್ರಬುದ್ಧವಾಗಿರುತ್ತವೆ, ನಂತರ ಅವು ಸಂಗಾತಿಯನ್ನು ಹುಡುಕಿಕೊಂಡು ಸಂತಾನೋತ್ಪತ್ತಿ ಮಾಡುತ್ತವೆ. ಬಲ: ಎರಿ ರೇಷ್ಮೆ ಗೂಡಿನಿಂದ ಪತಂಗಗಳು ಹೊರಬರುತ್ತಿರುವುದು. ಎರಿ ರೇಷ್ಮೆ ಹುಳು ಮೊಟ್ಟೆಯಿಟ್ಟ ಸುಮಾರು 3-4 ವಾರಗಳಲ್ಲಿ ಗೂಡನ್ನು ತಯಾರಿಸಲು ಪ್ರಾರಂಭಿಸುತ್ತದೆ. ಈ ಹೊತ್ತಿಗೆ ರೇಷ್ಮೆ ಹುಳುಗಳು ತಮ್ಮ ನಾಲ್ಕನೇ ಮತ್ತು ಕೊನೆಯ ಚಕ್ರವನ್ನು ಪೂರ್ಣಗೊಳಿಸಿ ಪತಂಗಗಳಾಗಿ ರೂಪಾಂತರಗೊಳ್ಳಲು ಸಿದ್ಧವಾಗುತ್ತವೆ. ಈ ಪ್ರಕ್ರಿಯೆಗಾಗಿ ರೇಷ್ಮೆ ಹುಳು ಎಳೆಗಳನ್ನು ಸ್ರವಿಸುವ ಮೂಲಕ ತನ್ನ ಸುತ್ತಲೂ ಗೂಡನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ಗೂಡನ್ನು ಕಟ್ಟಲು ಸುಮಾರು 2-3 ದಿನಗಳು ಬೇಕಾಗುತ್ತದೆ. ರೇಷ್ಮೆ ಹುಳು ಮುಂದಿನ 3 ವಾರಗಳವರೆಗೆ ಗೂಡಿನೊಳಗೆ ಉಳಿಯುತ್ತದೆ, ಇದರಲ್ಲಿ ಅದು ಪೂರ್ಣ ಪ್ರಮಾಣದ ಪತಂಗವಾಗಿ ರೂಪಾಂತರಗೊಳ್ಳುತ್ತದೆ
![](/media/images/05a-_PRK8846-PB-Along_the_Majuli_silk_rout.max-1400x1120.jpg)
![](/media/images/05b-IMG-20240307-WA0026-PB-Along_the_Majul.max-1400x1120.jpg)
ಎಡ: ರೇಷ್ಮೆ ಗೂಡಿನ ಎರಿ ರೇಷ್ಮೆ ಎಳೆಗಳನ್ನು ನೂಲಲು, ಈ ಸಾಂಪ್ರದಾಯಿಕ ಸಲಕರಣೆಗಳನ್ನು ಬಳಸಲಾಗುತ್ತದೆ: ಎರಿ ರೇಷ್ಮೆ ದಾರಗಳನ್ನು ತಿರುಗಿಸಲು ಟಕುರಿಯನ್ನು ಬಳಸಲಾಗುತ್ತದೆ ಮತ್ತು ಬುಗುರಿಯಾಕಾರದ ಉಪಕರಣವನ್ನು ನೂಲುವ ತೂಕವಾಗಿ ಬಳಸಲಾಗುತ್ತದೆ. ಇದು ಸೂಕ್ಷ್ಮ ಎರಿ ರೇಷ್ಮೆಯ ಹಲವಾರು ಎಳೆಗಳನ್ನು ಒಂದೇ ದಾರದಲ್ಲಿ ತಿರುಗಿಸುವ ಮೂಲಕ ದಾರವನ್ನು ತಯಾರಿಸಲು ಸಹಾಯ ಮಾಡುತ್ತದೆ. ಬಲ: ಹುರಿದ ರೇಷ್ಮೆ ಹುಳುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿಡಲಾಗಿದೆ. ಮಿಶಿಂಗ್ ಮತ್ತು ಈಶಾನ್ಯ ಭಾರತದ ಇತರ ಅನೇಕ ಸಮುದಾಯಗಳಲ್ಲಿ ರೇಷ್ಮೆ ಹುಳು ಒಂದು ರುಚಿಕರ ಆಹಾರವಾಗಿ ಜನಪ್ರಿಯ
ಎರಿ ನೂಲುವ ಮೊದಲಿಗೆ ಎಳೆಗಳು ಬಿಳಿಯಾಗಿರುತ್ತವೆ, ಆದರೆ ನಂತರ ಮತ್ತೆ ಮತ್ತೆ ತೊಳೆಯಲ್ಪಡುವ ಕಾರಣ ಅದು ವಿಶಿಷ್ಟ ಹಳದಿ ಬಣ್ಣಕ್ಕೆ ತಿರುಗುತ್ತದೆ.
"ನಾವು ಬೆಳಿಗ್ಗೆ ಕೆಲಸ ಮಾಡಲು ಪ್ರಾರಂಭಿಸಿ ದಿನವಿಡೀ ಅದರಲ್ಲೇ ತೊಡಗಿಕೊಂಡಿದ್ದರೆ ದಿನವೊಂದಕ್ಕೆ ಒಂದು ಮೀಟರ್ ಎರಿ ರೇಷ್ಮೆಯನ್ನು ನೇಯಬಹುದು" ಎಂದು ಅವರು ಹೇಳುತ್ತಾರೆ.
ರೇಷ್ಮೆ ಎಳೆಗಳನ್ನು ಹತ್ತಿ ದಾರದೊಂದಿಗೆ ಬೆರೆಸಿ ನೇಯಲಾಗುತ್ತದೆ. ಅಸ್ಸಾಮಿ ಮಹಿಳೆಯರು ಧರಿಸುವ ಅಂಗಿಗಳು, ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ತಯಾರಿಸಲು ಈ ಬಟ್ಟೆಯನ್ನು ಬಳಸಲಾಗುತ್ತದೆ ಎಂದು ದೀಪಿಕಾ ಹೇಳುತ್ತಾರೆ. ಈಗ ಹೊಸ ಟ್ರೆಂಡ್ ಆಗಿ ಎರಿ ಬಳಸಿ ಸೀರೆಗಳನ್ನು ಸಹ ತಯಾರಿಸಲಾಗುತ್ತಿದೆ.
ಹೊಸ ಪ್ರವೃತ್ತಿಗಳ ಹೊರತಾಗಿಯೂ, ರೇಷ್ಮೆ ವ್ಯವಹಾರವನ್ನು ನಿರ್ವಹಿಸುವುದು ಬಹಳ ಕಷ್ಟ. "ರೇಷ್ಮೆ ಹುಳುಗಳನ್ನು ಸಾಕಲು ಮತ್ತು ನಂತರ ಬಟ್ಟೆಗಳನ್ನು ನೇಯಲು ಸಾಕಷ್ಟು ಸಮಯ ಹಿಡಿಯುತ್ತದೆ" ಎಂದು ರೇಷ್ಮೆ ಕೃಷಿಯಿಂದ ವಿರಾಮ ತೆಗೆದುಕೊಂಡಿರುವ ದೀಪಿಕಾ ಹೇಳುತ್ತಾರೆ. ಮನೆಕೆಲಸಗಳು, ಕಾಲೋಚಿತ ಕೃಷಿ ಕೆಲಸಗಳು ಮತ್ತು ತನ್ನ ನಾಲ್ಕು ವರ್ಷದ ಮಗನ ಲಾಲನೆ ಪಾಲನೆಯಿಂದಾಗಿ ಅದಕ್ಕೆ ಸಮಯ ಸಿಗುತ್ತಿಲ್ಲ.
*****
ಜಾಮಿನಿ ಪಯೆಂಗ್ ಅವರಿಗೀಗ ನಲವತ್ತರ ಪ್ರಾಯ. ಅವರೊಬ್ಬ ಅನುಭವಿ ನೇಕಾರನಾಗಿದ್ದು, ಅವರನ್ನು ಕ್ರಾಫ್ಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಗುರುತಿಸಿದೆ. ಅವರು ಸುಮಾರು ಒಂದು ದಶಕದಿಂದ ಎರಿ ರೇಷ್ಮೆ ಬಟ್ಟೆಯನ್ನು ನೇಯುತ್ತಿದ್ದಾರೆ. ಈ ಕರಕೌಶಲದ ಕುರಿತು ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದರ ಕುರಿತು ಅವರು ಕಳವಳ ವ್ಯಕ್ತಪಡಿಸುತ್ತಾರೆ. “ಈಗಿನ ದಿನಗಳಲ್ಲಿ ತಮ್ಮ ಬದುಕಿನಲ್ಲಿ ಒಮ್ಮೆಯೂ ಮಗ್ಗವನ್ನು ಮುಟ್ಟದ ಜನರು ನಮ್ಮ ನಡುವೆ ಇದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ ಅವರಿಂದ ನಿಜವಾದ ಎರಿ ಯಾವುದೆನ್ನುವುದನ್ನು ಗುರುತಿಸುವುದು ಸಹ ಸಾಧ್ಯವಿಲ್ಲ.”
10ನೇ ತರಗತಿಯಲ್ಲಿದ್ದಾಗ, ಜಾಮಿನಿ ಜವಳಿ ಮತ್ತು ನೇಯ್ಗೆಗೆ ಸಂಬಂಧಿಸಿದ ಕೋರ್ಸ್ ತೆಗೆದುಕೊಂಡರು. ನಂತರ ಕಾಲೇಜಿಗೆ ಸೇರುವ ಮೊದಲು ಅವರು ಒಂದೆರಡು ವರ್ಷಗಳ ಕಾಲ ನೇಯ್ಗೆಯನ್ನು ಅಭ್ಯಾಸ ಮಾಡಿದ್ದರು. ಪದವಿಯ ನಂತರ, ಸರ್ಕಾರೇತರ ಸಂಸ್ಥೆಗೆ ಸೇರಿದ ಅವರು ಸಾಂಪ್ರದಾಯಿಕ ರೇಷ್ಮೆ ನೇಯ್ಗೆಯನ್ನು ವೀಕ್ಷಿಸಲು ಮಜುಲಿಯ ಹಳ್ಳಿಗಳಿಗೆ ಭೇಟಿ ನೀಡತೊಡಗಿದರು.
![](/media/images/06a-_DSC8726-PB-Along_the_Majuli_silk_rout.max-1400x1120.jpg)
![](/media/images/06b-_DSC8723-PB-Along_the_Majuli_silk_rout.max-1400x1120.jpg)
ಎಡ : ಜಾಮಿನಿ ಪಯೆಂಗ್ ಅಸ್ಸಾಂನ ಮಜುಲಿಯ ಕಮಲಬಾರಿಯಲ್ಲಿರುವ ತನ್ನ ಅಂಗಡಿಯಲ್ಲಿ . ಬಲ : ಪಿತ್ರಾರ್ಜಿತ ಎರಿ ಶಾಲು
![](/media/images/07a-_DSC8720-PB-Along_the_Majuli_silk_rout.max-1400x1120.jpg)
![](/media/images/07b-_DSC8721-PB-Along_the_Majuli_silk_rout.max-1400x1120.jpg)
ಜಾಮಿನಿ ಪಯೆಂಗ್ ಅವರ ವರ್ಕ್ ಶಾಪಿನಲ್ಲಿನ ನೇಯ್ಗೆ ಉಪಕರಣಗಳು
"ಎರಿ ಸಾಕುವ ಮನೆಗಳಲ್ಲಿ, ಮಕ್ಕಳು ತಮ್ಮ ತಾಯಂದಿರಿಂದ ಕಲಿಯುತ್ತಾರೆ" ಎಂದು ಮಜುಲಿಯ ಜಾಮಿನಿ ಹೇಳುತ್ತಾರೆ. "ನನಗೆ ತಾತ್-ಬಾತಿ (ನೇಯ್ಗೆ) ಮಾಡಲು ಅಥವಾ ಬಾಬಿನ್ ಸುತ್ತಲು ಕಲಿಸಲಾಗಿಲ್ಲ. ನನ್ನ ತಾಯಿ ಕೆಲಸ ಮಾಡುವುದನ್ನು ನೋಡಿ ನಾನು ಕಲಿತೆ."
ಹಿಂದೆ ಹೆಚ್ಚಿನ ಮಹಿಳೆಯರು ತಮ್ಮ ಕೈಮಗ್ಗದಲ್ಲಿ ಸ್ವತಃ ತಯಾರಿಸಿದ ರೇಷ್ಮೆ ಬಟ್ಟೆಗಳನ್ನು ಧರಿಸುತ್ತಿದ್ದಾರೆ, ಏಕೆಂದರೆ ಆಗ ಕ್ಯಾಶುಯಲ್ ಯಂತ್ರದಿಂದ ತಯಾರಿಸಿದ ಬಟ್ಟೆಗಳು ಇಂದಿನಂತೆ ಹೇರಳವಾಗಿ ಲಭ್ಯವಿರಲಿಲ್ಲ ಎಂದು ಅವರು ಹೇಳುತ್ತಾರೆ. ಮಹಿಳೆಯರು ಎರಿ, ನೂನಿ ಮತ್ತು ಮುಗಾ ರೇಷ್ಮೆಯಿಂದ ಮಾಡಿದ ಸಡೋರ್-ಮೆಖೇಲಾ ಧರಿಸುತ್ತಿದ್ದರು. "ಮಹಿಳೆಯರು ಹೋದಲ್ಲೆಲ್ಲಾ ತಮ್ಮ ಟಕುರಿ [ಕದಿರು] ಯನ್ನು ಒಯ್ಯುತ್ತಿದ್ದರು."
ಇದರಿಂದ ಜಾಮಿನಿ ಸ್ಫೂರ್ತಿ ಪಡೆದರು. "ನಾನು ಎರಿ ರೇಷ್ಮೆ ಹುಳುಗಳನ್ನು ಸಾಕಲು ಮತ್ತು ಅದನ್ನು ಇತರರಿಗೂ ಕಲಿಸಲು ನಿರ್ಧರಿಸಿದೆ." ಪ್ರಸ್ತುತ, ಅವರು ಮಜುಲಿಯ ಸುಮಾರು 25 ಮಹಿಳೆಯರಿಗೆ ನೇಯ್ಗೆ ಮತ್ತು ಜವಳಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಬ್ರಿಟಿಷ್ ಮ್ಯೂಸಿಯಂನಲ್ಲಿನ ಒಂದು ತುಂಡು ಸೇರಿದಂತೆ ಅವರ ನೇಯ್ಗೆಯ ಕೌಶಲವನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಲಾಗಿದೆ.
"ಎರಿ ಬಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ, ಆದರೆ ನಾವು ಅದನ್ನು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ತಯಾರಿಸುತ್ತೇವೆ" ಎಂದು ಜಾಮಿನಿ ಹೇಳುತ್ತಾರೆ. ಬೇರೆಡೆ, ಎರಿ ಬಟ್ಟೆಯನ್ನು ಯಂತ್ರಗಳನ್ನು ಬಳಸಿ ನೇಯಲಾಗುತ್ತದೆ; ಮತ್ತು ಬಿಹಾರದ ಭಾಗಲ್ಪುರದ ರೇಷ್ಮೆ ಅಸ್ಸಾಮಿನ ಮಾರುಕಟ್ಟೆಗಳ ಮೇಲೆ ದಾಳಿ ಮಾಡುತ್ತಿದೆ.
ಕೈಯಿಂದ ತಯಾರಿಸಿದ ವಸ್ತ್ರಗಳಿಗೆ ಬೆಲೆಯು ಅವುಗಳಿಗೆ ಬಳಸಿದ ದಾರಗಳು ಮತ್ತು ತಂತ್ರಗಳ ಪ್ರಕಾರಗಳು ಮತ್ತು ವಿನ್ಯಾಸದ ಜಟಿಲತೆಯನ್ನು ಅವಲಂಬಿಸಿರುತ್ತದೆ. ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಕೈಯಿಂದ ನೇಯ್ದ ಎರಿ ಶಾಲು 3,500 ರೂಪಾಯಿಗಳಿಗಿಂತಲೂ ಹೆಚ್ಚಿನ ಬೆಲೆಗೆ ಸಿಗುತ್ತದೆ. ಕೈಯಿಂದ ನೇಯ್ದ ಸಾಡೋರ್-ಮೇಖೇಲಾದ ಮಾರುಕಟ್ಟೆ ಬೆಲೆ ಸುಮಾರು 8,000 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ 15,000ರಿಂದ 20,000 ರೂ.ಗಳವರೆಗೆ ಇದೆ.
"ಈ ಹಿಂದೆ, ಅಸ್ಸಾಮಿ ಹುಡುಗಿಯರು ತಮ್ಮ ಪ್ರೇಮಿಗಳಿಗಾಗಿ ಗಮುಸಾ, ರುಮಾಲ್ ಮತ್ತು ದಿಂಬಿನ ಚೀಲಗಳನ್ನು ನೇಯುತ್ತಿದ್ದರು ಮತ್ತು ನಮ್ಮ ಮಿಸಿಂಗ್ ಹುಡುಗಿಯರು ಸಹ ಗಲಕ್ ಎನ್ನುವ ವಸ್ತ್ರವನ್ನು ನೇಯುತ್ತಿದ್ದರು" ಎಂದು ಅವರು ಹೇಳುತ್ತಾರೆ. ಜನರು ಸಾಂಪ್ರದಾಯಿಕ ವಿಧಾನಗಳನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸದಿದ್ದರೆ, ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕಣ್ಮರೆಯಾಗುತ್ತದೆ ಎನ್ನುವುದು ಜಾಮಿನಿಯವರ ಅಭಿಪ್ರಾಯ. "ಇದೇ ಕಾರಣಕ್ಕಾಗಿ ನಾನು ಇದನ್ನು ಹೆಚ್ಚು ಕಡಿಮೆ ನನ್ನಿಂದ ಸಾಧ್ಯವಿರುವಷ್ಟು ಮಾಡುತ್ತಿದ್ದೇನೆ, ಅದನ್ನೊಂದು ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತಿದ್ದೇನೆ."
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು