ಚಿಕ್ಕ ಬಿದಿರಿನ ಶೆಡ್ ಒಂದರೊಳಗಿದ್ದ ಮಂಚದ ಮೇಲೆ ಮೋಹಿನಿ ಕೌರ್ ಅವರು ಹೊಲಿಯಬೇಕಿದ್ದ ಅಥವಾ ಸರಿಪಡಿಸಬೇಕಿದ್ದ ಬಟ್ಟೆಗಳ ರಾಶಿ ಬಿದ್ದಿತ್ತು. "ನನಗೆ ಹೊಲಿಗೆಯಲ್ಲಿ ಅಷ್ಟೊಂದು ಪರಿಣಿತಿಯಿಲ್ಲ, ಆದರೂ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ." ಎನ್ನುತ್ತಾರೆ ನವೆಂಬರ್ 2020ರಲ್ಲಿ ಸಿಂಘು ಪ್ರತಿಭಟನಾ ಸ್ಥಳಕ್ಕೆ ಬಂದ ನವ ದೆಹಲಿಯ ಸ್ವರೂಪ್ ನಗರದ 61 ವರ್ಷದ ಮೋಹಿನಿ ಕೌರ್. "ಪ್ರತಿಭಟನಾ ನಿರತ ರೈತರಿಗೆ ನನ್ನಿಂದ ಸಾಧ್ಯವಿರುವಷ್ಟು ಸೇವೆಯನ್ನು ಸಲ್ಲಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ನಮಗಾಗಿ ಅನ್ನ ಬೆಳೆದು ಕೊಡುವ ರೈತರಿಗೆ ನನ್ನ ಕೈಲಾದ ಸಹಾಯ ಮಾಡುವ ಹಂಬಲ ನನ್ನದು." ಅಂದಿನಿಂದ ಇಂದಿನವರೆಗೂ ಮೋಹಿನಿಯವರು ಒಮ್ಮೆಯೂ ಮನೆಗೆ ಮರಳಿಲ್ಲ. ಡಿಸೆಂಬರ್ 9, 2021ರಂದು ರೈತ ಸಂಘಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ನಂತರವೇ ಅವರು ಮನೆಯನ್ನು ನೆನಪಿಸಿಕೊಂಡಿದ್ದು.
ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘುವಿನಲ್ಲಿ ಮೋಹಿನಿಯವರು ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿರುವ ಸುದ್ದಿ ಪಂಜಾಬಿ ಪತ್ರಿಕೆ ಅಜಿತ್ ದೈನಿಕದಲ್ಲಿ ಸುದ್ದಿಯಾಗಿ ಬಂದಾಗ, ಅದು ಪಂಜಾಬಿನ ಓದುಗರೊಬ್ಬರನ್ನು ಮೋಹಿನಿಯವರಿಗೆ ಸಹಾಯಕನಾಗಿ ಒದಗಲು ಪ್ರೇರೇಪಿಸಿತು. ಈ ವರ್ಷದ ಜುಲೈನಲ್ಲಿ, 22 ವರ್ಷದ ಹರ್ಜೀತ್ ಸಿಂಗ್ ಎಂಬ ಯುವಕ ಅವರೊಡನೆ ಸಹಾಯಕರಾಗಿ ಸೇರಿಕೊಂಡರು.
ಹರ್ಜೀತ್ ಪಂಜಾಬಿನ ಲುಧಿಯಾನ ಜಿಲ್ಲೆಯ ಖನ್ನಾ ಎಂಬಲ್ಲಿ ಟೈಲರಿಂಗ್ ಅಂಗಡಿಯನ್ನು ಹೊಂದಿದ್ದಾರೆ. ಅವರ ತಂದೆ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳ ಬೆಳೆಯುವ ರೈತ. "ನಾನು ನನ್ನ ಇಬ್ಬರು ಕರಿಗಾರ್‌ಗಳ (ಕುಶಲಕರ್ಮಿ ಕಾರ್ಮಿಕರ) ಉಸ್ತುವಾರಿಯಲ್ಲಿ ನನ್ನ ಅಂಗಡಿಯನ್ನು ಬಿಟ್ಟು ಈ ವರ್ಷದ ಜುಲೈ ತಿಂಗಳಿನಲ್ಲಿ ಮೋಹಿನಿ ಜೀಯವರಿಗೆ ಸಹಾಯ ಮಾಡಲು ಸಿಂಘುವಿಗೆ ಬಂದೆ. ಇಲ್ಲಿ ತುಂಬಾ ಕೆಲಸವಿದೆ; ಅವರೊಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ."
ಮಂಚ ಮತ್ತು ಕೆಲಸದ ಮೇಜಿನ ಜೊತೆಗೆ ಎರಡು ಹೊಲಿಗೆ ಯಂತ್ರಗಳು ಮತ್ತು ಒಂದು ಸ್ಟ್ಯಾಂಡ್ ಹೊಂದಿರುವ ಫ್ಯಾನ್ ಕೂಡಾ ಅವರ ಶೆಡ್ಡಿನಲ್ಲಿತ್ತು, ನೆಲದ ಮೇಲೆ ಹಾಲು ಕಾಯಿಸಲೆಂದು ಸಣ್ಣ ಸಿಲಿಂಡರ್ ಮತ್ತು ಸ್ಟೌ ಒಟ್ಟಿಗಿರುವ ʼಒಲೆಯೊಂದನ್ನುʼ ಇರಿಸಲಾಗಿತ್ತು. ಅಲ್ಲಿ ಓಡಾಡಲು ಸ್ವಲ್ಪವೇ ಸ್ವಲ್ಪ ಜಾಗವಿತ್ತು. ಮೋಹಿನಿ ಅಥವಾ ಹರ್ಜೀತ್ ಅವರನ್ನು ಯಾರಾದರೂ ಮಾತನಾಡಿಸಲು ಬಯಸಿದಲ್ಲಿ ಒಬ್ಬರಷ್ಟೇ ಒಳಗೆ ಹೋಗಲು ಸಾಧ್ಯ. ಅಲ್ಲಿಯ ʼಗ್ರಾಹಕʼರಾದ ಪ್ರತಿಭಟನಾ ನಿರತ ರೈತರು ಈ ʼಅಂಗಡಿʼಯ ಬಾಗಿಲಿನಲ್ಲೇ ನಿಲ್ಲಬೇಕು.







