``ಹುಡುಗರು ಡೊಳ್ಳುಕುಣಿತದಲ್ಲಿ ಹೇಳಿಕೊಳ್ಳುವಷ್ಟೇನೂ ಚೆನ್ನಾಗಿಲ್ಲ. ಅವರಿಗಿಂತ ನಾವೇ ಒಂದು ಕೈ ಮೇಲು'', 15 ರ ಹರೆಯದ ವಿಜಯಲಕ್ಷ್ಮಿ ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದಾಳೆ.
ಇವರುಗಳು ಹಾಗಿದ್ದಾರೆ ಅನ್ನುವುದೂ ಕೂಡ ಸತ್ಯವೇ. ಭಾರವಾದ ಡೋಲುಗಳನ್ನು ತಮ್ಮ ಬಳುಕುವ ಸೊಂಟಗಳಿಗೆ ಕಟ್ಟಿಕೊಂಡು, ನುರಿತ ನೃತ್ಯಗಾರರ ನಿಖರತೆಯೊಂದಿಗೆ ಗಿರ್ರನೆ ತಿರುಗುತ್ತಾ, ದೊಂಬರ ಚುರುಕುತನವನ್ನು ಹೊಂದಿರುವ ತೆಳ್ಳನೆಯ ಹೆಣ್ಣುಮಕ್ಕಳಿವರು. ಪ್ರತೀಬಾರಿಯೂ ತಮ್ಮ ಕಲೆಯನ್ನು ಲಯಬದ್ಧವಾಗಿ ಪ್ರಸ್ತುತಪಡಿಸುವ ಪ್ರತಿಭಾವಂತರೂ ಹೌದು.
ಹಾಗೆ ನೋಡಿದರೆ ಇವರೆಲ್ಲಾ ಎಳೆಯ ಬಾಲಕಿಯರು. ಇದ್ದವರಲ್ಲೇ ಹಿರಿಯಳಾದ ಬಾಲಕಿಯು ಇನ್ನೂ ವಯಸ್ಕರ ವಯಸ್ಸನ್ನು ತಲುಪಿಲ್ಲ. ಆದರೆ ಮಹತ್ತರವಾದ ದೈಹಿಕ ಬಲವನ್ನು ಬೇಡುವ ಅಷ್ಟು ಭಾರದ ಡೋಲನ್ನು ಇವರುಗಳು ಸಂಭಾಳಿಸುವ ಪರಿ ಮತ್ತು ನೃತ್ಯವನ್ನು ಅಷ್ಟು ಅದ್ಭುತವಾಗಿ ಪ್ರಸ್ತುತಪಡಿಸುವ ರೀತಿಯು ನಿಜಕ್ಕೂ ಮೈನವಿರೇಳಿಸುವಂಥದ್ದು. ಡೊಳ್ಳುಕುಣಿತವು ಕರ್ನಾಟಕದ ಜನಪ್ರಿಯ ಜಾನಪದ ಕುಣಿತ. ಕನ್ನಡದಲ್ಲಿ `ಡೊಳ್ಳು' ಎಂಬ ಪದಕ್ಕೆ ಡೋಲು ಎಂಬ ಅರ್ಥವಿದ್ದರೆ `ಕುಣಿತ' ಎಂದರೆ ಕುಣಿಯುವುದು ಎಂದಾಗುತ್ತದೆ. ಇದನ್ನು `ಗಂಡು ಕಲೆ' ಎಂದು ಕರೆಯುವುದೂ ಇದೆ. ದೈಹಿಕವಾಗಿ ಬಲಿಷ್ಠರಾಗಿರುವ ಗಂಡಸರು ಸುಮಾರು ಹತ್ತು ಕಿಲೋಗಳಷ್ಟು ಭಾರವಾಗಿರುವ ಡೋಲನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಚುರುಕಾಗಿ, ಲವಲವಿಕೆಯಿಂದ ಕುಣಿಯುತ್ತಾರೆ. ಈ ಡೊಳ್ಳುಕುಣಿತಕ್ಕಾಗಿ ಹೆಚ್ಚಿನ ದೈಹಿಕ ಬಲ ಮತ್ತು ಶಕ್ತಿಯುಳ್ಳ ಒಳ್ಳೆಯ ಮೈಕಟ್ಟುಳ್ಳ ಗಂಡಸರೇ ಬೇಕು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಒಂದು ವಿಷಯ.
ಆದರೆ ಇಂಥಾ ನಂಬಿಕೆಗಳು ತಮ್ಮ ನೆಲೆಯನ್ನು ಕಳೆದುಕೊಳ್ಳತೊಡಗಿದ್ದು ಕೆಲ ಉತ್ಸಾಹಿ ಬಾಲಕಿಯರು ಡೊಳ್ಳುಕುಣಿತಕ್ಕೊಂದು ಹೊಸ ಭಾಷ್ಯವನ್ನು ಬರೆಯುವ ಪ್ರಯತ್ನವನ್ನು ಮಾಡಿದಾಗಲೇ. ಬೆಂಗಳೂರು ನಗರದ ಹೃದಯಭಾಗದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ, ಭತ್ತದ ಗದ್ದೆಗಳು ಸಮೃದ್ಧವಾಗಿರುವ ಮತ್ತು ತೆಂಗಿನಮರಗಳಿಂದ ಬೆಂಗಳೂರಿನ ಅಂಚನ್ನು ಚಂದಗಾಣಿಸಿರುವ ಹೇಸರಘಟ್ಟದಲ್ಲಿದ್ದಾರೆ ಈ ಬಾಲಕಿಯರು. ಹೀಗೆ ನಗರದ ಹೊರಭಾಗದಲ್ಲಿ ಹಸಿರಿನಿಂದ ಆವೃತಗೊಂಡಿರುವ ಈ ಪ್ರದೇಶದಲ್ಲಿ ಕೆಲ ಬಾಲಕಿಯರು ಈ ಜನಪದ ಕಲೆಗೆ ಹೊಸ ರೂಪವನ್ನು ಕೊಡುವ ಪ್ರಯತ್ನದಲ್ಲಿದ್ದಾರೆ. ಡೊಳ್ಳುಕುಣಿತವು ಹೆಣ್ಣುಮಕ್ಕಳಿಗಲ್ಲ ಎಂಬ ಮನೋಭಾವಕ್ಕೇ ಸವಾಲು ಹಾಕುತ್ತಿದ್ದಾರೆ ಇವರುಗಳು. ಈ ನಿಟ್ಟಿನಲ್ಲಿ ಹಳತಾಗಿ ಹೋದ ನಂಬಿಕೆಗಳಿಗೆ ತಿಲಾಂಜಲಿಯಿಟ್ಟು ಇವರುಗಳು ಡೋಲನ್ನು ಅಪ್ಪಿಕೊಂಡಾಗಿದೆ.
ಈ ಬಾಲಕಿಯರು ದಕ್ಷಿಣಭಾರತದ ಮೂಲೆಮೂಲೆಗಳಿಂದ ಬಂದವರಾಗಿದ್ದಾರೆ. ವಿವಿಧ ರಾಜ್ಯ ಮತ್ತು ಪ್ರದೇಶಗಳಲ್ಲಿ ಬೀದಿಗೆ ಬಿದ್ದು ನಲುಗಿಹೋಗಿದ್ದ ಹೆಣ್ಣುಮಕ್ಕಳನ್ನು ಕರೆತಂದು `ಸ್ಪರ್ಶ'ವು ಅವರಿಗೆ ತಲೆಯ ಮೇಲೊಂದು ಸೂರನ್ನೂ, ಜೀವನವನ್ನು ಹೊಸದಾಗಿ ಬದುಕಲು ಒಂದು ಅವಕಾಶವನ್ನೂ ಕೊಟ್ಟಿದೆ. ಲಾಭರಹಿತ ಟ್ರಸ್ಟ್ ಆದ ಸ್ಪರ್ಶವು ಈ ಎಲ್ಲಾ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನೂ ಕೂಡ ಒದಗಿಸುತ್ತಿದೆ. ಇನ್ನು ಕಲಿಕೆಯ ಜೊತೆಗೆ ಸಂಗೀತ ಮತ್ತು ನೃತ್ಯಗಳಲ್ಲೂ ಈ ಬಾಲಕಿಯರು ತೊಡಗಿಸಿಕೊಂಡಿದ್ದಾರೆ. ವಾರಾಂತ್ಯದ ದಿನಗಳಲ್ಲಿ ತಮ್ಮದೇ ಡೋಲಿನ ಸದ್ದಿಗೆ ಲಯಬದ್ಧವಾಗಿ ಹೆಜ್ಜೆಹಾಕಿದರೆ ವಾರದ ಉಳಿದ ದಿನಗಳಲ್ಲಿ ಪಠ್ಯಪುಸ್ತಕಗಳ ಗುಂಗಿನಲ್ಲಿ ಮುಳುಗಿಹೋಗುತ್ತಾರೆ ಇವರುಗಳು.
ಇವರೆಲ್ಲರೂ ವಾಸಿಸುತ್ತಿದ್ದ ಹಾಸ್ಟೆಲ್ಲಿನಲ್ಲೇ ನಾನು ಇವರಿಗಾಗಿ ಕಾಯುತ್ತಿದ್ದೆ. ಇಡೀ ದಿನ ಶಾಲೆಯಲ್ಲಿ ಕಳೆದ ಹೊರತಾಗಿಯೂ ನಗುಮುಖದೊಂದಿಗೆ ಗುಂಪುಗುಂಪಾಗಿ ಹೊರಬರುತ್ತಿದ್ದ ಅವರನ್ನು ನೋಡಿ ನನಗೋ ಅಚ್ಚರಿಯೋ ಅಚ್ಚರಿ!
ಡೋಲು, ಶಾಲೆ, ಕನಸುಗಳ ಬಗ್ಗೆ ಮಾತನಾಡುವ ಮೊದಲೇ ``ಭೌತಶಾಸ್ತ್ರ ತುಂಬಾ ಸುಲಭ'' ಎನ್ನುತ್ತಿದ್ದಾಳೆ ಕನಕ ವಿ. ಹದಿನೇಳರ ಹರೆಯದ ಕನಕ ತಮಿಳುನಾಡು ಮೂಲದವಳು. ಜೀವಶಾಸ್ತ್ರದಲ್ಲಿ ಇಂಗ್ಲಿಷ್ ಪರಿಭಾಷೆಗಳು ಹೆಚ್ಚಿರುವುದರಿಂದ ಅವಳಿಗೆ ಜೀವಶಾಸ್ತ್ರ ಎಂದರೆ ಕಬ್ಬಿಣದ ಕಡಲೆಯಂತೆ. ``ಭೌತಶಾಸ್ತ್ರವು ನಮ್ಮ ದೈನಂದಿನ ಜೀವನದ ಬಗ್ಗೆಯೇ ಕಲಿಯುವ ವಿಷಯವಾಗಿರುವುದರಿಂದ ಭೌತಶಾಸ್ತ್ರ ನನಗಿಷ್ಟ'' ಎನ್ನುವ ಕನಕಳಿಗೆ ವಿಜ್ಞಾನದ ವಿಷಯದಲ್ಲಿ ಆಸಕ್ತಿಯಿದೆ. ಆದರೂ ಅವಳಿಗೆ ದೀರ್ಘಾವಧಿಯ ಗುರಿಗಳೇನೂ ಇಲ್ಲವಂತೆ. ``ಯಾರಿಗೆ ತಮ್ಮ ಜೀವನದಲ್ಲಿ ಮುಂದೆ ಏನಾಗಬೇಕೆಂದು ಗುರಿಯೇ ಇರುವುದಿಲ್ಲವೋ ಅವರೇ ದೊಡ್ಡ ಸಾಧಕರಾಗುತ್ತಾರೆ ಎಂಬುದನ್ನು ನಾನು ಕೇಳುತ್ತಾ ಬಂದಿದ್ದೇನೆ'', ಎಂದು ನಗುತ್ತಾ ಹೇಳುತ್ತಿದ್ದಾಳೆ ಕನಕ.
``ನನಗೆ ಕಲೆ ಎಂದರೆ ಇಷ್ಟ. ವಿನ್ಯಾಸ ಮತ್ತು ಚಿತ್ರಕಲೆಗಳನ್ನೂ ಕೂಡ ಹವ್ಯಾಸವಾಗಿ ಬೆಳೆಸಿಕೊಂಡಿದ್ದೇನೆ. ಸಾಮಾನ್ಯವಾಗಿ ನಾನು ಪರ್ವತಗಳನ್ನು ಮತ್ತು ನದಿಗಳನ್ನು ನನ್ನ ಚಿತ್ರಗಳಲ್ಲಿ ತೋರಿಸುತ್ತೇನೆ. ನಾನು ದೊಡ್ಡವಳಾಗುವ ಸಮಯದಲ್ಲಿ ಹೆತ್ತವರು ನನ್ನೊಂದಿಗಿರಲಿಲ್ಲ. ಆಗ ನಾನು ಕೊಳಚೆ ಎತ್ತುವ ಕೆಲಸವನ್ನು ಮಾಡಿಕೊಂಡಿದ್ದೆ. ಹೀಗಾಗಿ ಪ್ರಕೃತಿಯ ಚಿತ್ರವನ್ನು ಬಿಡಿಸಿದಾಗಲೆಲ್ಲಾ ಅದೆಂಥದ್ದೋ ಮನಃಶಾಂತಿ ಸಿಕ್ಕಿದಂತಾಗುತ್ತದೆ. ಹೀಗೆ ಮಾಡುತ್ತಾ ನಾನು ನನ್ನ ಕಳೆದುಹೋದ ದಿನಗಳನ್ನು ಮರೆಯುತ್ತೇನೆ'', ಎನ್ನುತ್ತಾಳೆ 17 ರ ಹರೆಯದ ನರ್ಸಮ್ಮ ಎಸ್.
ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕೊಳಚೆಗಳನ್ನು ಹೆಕ್ಕಿ ವಿಂಗಡಿಸುತ್ತಿದ್ದ ನರ್ಸಮ್ಮಳನ್ನು ಅಲ್ಲಿಂದ ಕರೆತಂದಾಗ ಅವಳಿಗೆ ಒಂಭತ್ತರ ಪ್ರಾಯ. ತನ್ನ ಕನಸುಗಳ ಬಗ್ಗೆ ಕೆಲ ಮಾತುಗಳನ್ನು ಹಂಚಿಕೊಳ್ಳಲು ಅವಳನ್ನು ಹೆಚ್ಚು ಒಪ್ಪಿಸಬೇಕಾದ ಅಗತ್ಯವೇನೂ ಇಲ್ಲ. ಫ್ಯಾಷನ್ ಡಿಸೈನಿಂಗ್, ನರ್ಸಿಂಗ್ ಮತ್ತು ನಟನೆ ಅವುಗಳಲ್ಲಿ ಕೆಲವು. ಅವಳ ಹೊಸ ಜೀವನದ ಹಿತವಾದ ನೆನಪಿನ ಬಗ್ಗೆ ಕೇಳಿದರೆ ನಾಟಕವೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಹೋರಾಡುತ್ತಿದ್ದ ಅಮ್ಮನ ಪಾತ್ರ ಎಂದು ಹೆಮ್ಮೆಯಿಂದ ಹೇಳುತ್ತಾಳೆ ಆಕೆ. ``ಪೋಷಕರು ಯಾಕಾದರೂ ಹೀಗೆ ಮಾಡುತ್ತಾರೆ? ಹೂವೊಂದು ಅರಳುವ ಮುನ್ನವೇ ಕಿತ್ತು ತೆಗೆದಂತೆ ಇದು'', ಎಂದು ಹೇಳುತ್ತಾಳೆ ನರ್ಸಮ್ಮ.
ಹೀಗೆ ಮಾತಿನ ಮಧ್ಯದಲ್ಲೇ ಇವರುಗಳು ಡೊಳ್ಳುಕುಣಿತಕ್ಕಾಗಿ ತಯಾರಾಗುತ್ತಲೂ ಇದ್ದಾರೆ. ಬ್ಯಾರೆಲ್ ಆಕಾರದ ದೊಡ್ಡ ಡೋಲುಗಳನ್ನು ಈ ಬಾಲಕಿಯರ ಸಣ್ಣ ಸೊಂಟಕ್ಕೆ ಕಟ್ಟಲಾಗುತ್ತಿದೆ. ಈ ಡೋಲುಗಳು ಇವರುಗಳ ದೇಹದ ಗಾತ್ರಕ್ಕಿಂತ ಸುಮಾರು ಒಂದೂವರೆ ಪಟ್ಟು ದೊಡ್ಡದಾಗಿವೆ.
ನಂತರ ಆಗುವುದೇ ಶಕ್ತಿಯ ಆಸ್ಫೋಟ. ಅಂಥಾ ದೈಹಿಕ ಬಲವನ್ನು ಬೇಡುವ ಡೊಳ್ಳುಕುಣಿತವನ್ನು ಅಷ್ಟು ಸಲೀಸಾಗಿ ಮಾಡುತ್ತಿರುವ ಈ ಬಾಲಕಿಯರನ್ನು ನೋಡುವುದೇ ಒಂದು ಆಹ್ಲಾದಕರ ನೋಟ. ಅವರ ಉತ್ಸಾಹದ ಶಕ್ತಿಯು ಅದೆಷ್ಟಿದೆಯೆಂದರೆ ಇವರನ್ನು ಎವೆಯಿಕ್ಕದೆ ನೋಡುತ್ತಿದ್ದ ನನ್ನ ಪಾದಗಳೂ ಕೂಡ ಮೆಲ್ಲನೆ ಆ ಲಯಕ್ಕೆ ಸರಿಯಾಗಿ ನೆಲವನ್ನು ತಟ್ಟುತ್ತಿದೆ.
ಕೊನೆಗೂ ಅವರು ನೃತ್ಯವನ್ನು ಕೊನೆಗಾಣಿಸಿದಾಗ, ಕೇವಲ ನೋಡುಗಳಾಗಿದ್ದ ನನಗೇ ಆ ಕುಣಿತದ ಭಾರೀ ಹೆಜ್ಜೆಗಳನ್ನು ಕಂಡು ಕೊಂಚ ಸುಸ್ತಾಗಿಬಿಟ್ಟಿದೆ. ಆದರೆ ಆಯಾಸದ ಲವಲೇಶವೂ ಅವರಲ್ಲಿ ನನಗೆ ಕಾಣುತ್ತಿಲ್ಲ. ಅವರುಗಳು ಆಗಲೇ ಸಂಜೆಯ ಸೆಷನ್ನಿಗೆಂದು ಉದ್ಯಾನದಲ್ಲಿ ವಿಹಾರಕ್ಕೆ ಹೋದಂತೆ ಹೊರಟಾಗಿದೆ. ಡೊಳ್ಳುಕುಣಿತವನ್ನು ಇಲ್ಲಿ ಮನರಂಜನೆ ಮತ್ತು ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಈ ಬಾಲಕಿಯರಿಗೆ ಪರಿಚಯಿಸಲಾಗಿದೆ. ಈವರೆಗಂತೂ ಈ ಬಾಲಕಿಯರು ಸಾರ್ವಜನಿಕ ವೇದಿಕೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸಿಲ್ಲ ಅಥವಾ ತಮ್ಮ ಪ್ರದರ್ಶನ ಮಾತ್ರದಿಂದಲೇ ಆದಾಯವನ್ನು ಗಳಿಸಿಲ್ಲ. ಆದರೆ ಹಾಗೇನಾದರೂ ಮಾಡುವುದೇ ಆದರೆ ಇವರು ಅನಾಯಾಸವಾಗಿ ಇದನ್ನು ಸಾಧಿಸಬಲ್ಲರು ಎಂಬುದು ಸತ್ಯ.