ಡಿಸೆಂಬರ್ 11ರ ಬೆಳಿಗ್ಗೆ ಅವರು ವಿದ್ಯುತ್ ಕೇಬಲ್ ಗಳನ್ನು ತೆಗೆಯಲು ಆರಂಭಿಸಿದಾಗ, ಹತ್ತಿರದ ಅಂಗಡಿಯವರು ಅಳಲು ಪ್ರಾರಂಭಿಸಿದರು. "ಅವರಿಗೆ ನಮ್ಮ ನೆನಪು ಕಾಡಲಿದೆ. ನಮಗೂ ಅವರ ನೆನಪು ಕಾಡಲಿದೆ. ಆದರೆ ಈ ರೈತರ ಗೆಲುವು ನಿಜಕ್ಕೂ ಸಂಭ್ರಮಿಸುವಂತಹದ್ದು" ಎಂದು ಗುರ್ವಿಂದರ್ ಸಿಂಗ್ ಹೇಳಿದರು.
ಗುರ್ವಿಂದರ್ ಮತ್ತು ಅವರ ಹಳ್ಳಿಯ ಇತರ ರೈತರು ಪಶ್ಚಿಮ ದೆಹಲಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ತಮ್ಮ ತಾತ್ಕಾಲಿಕ ಡೇರೆಗಳನ್ನು ತೆಗೆಯಲು ಪ್ರಾರಂಭಿಸಿದಾಗ ಸುಮಾರು ಬೆಳಗಿನ 8:15 ಗಂಟೆಯಾಗಿತ್ತು. ಕೆಲವೊಮ್ಮೆ, ಅವರು ಬಿದಿರಿನ ಕೀಲುಗಳನ್ನು ಮುರಿಯಲು ಮರದ ತುಂಡನ್ನು ಬಳಸುತ್ತಿದ್ದರು, ಕೆಲವೊಮ್ಮೆ ಅವರು ರಚನೆಗಳ ತಳವನ್ನು ಒಡೆಯಲು ಇಟ್ಟಿಗೆಗಳನ್ನು ಬಳಸುತ್ತಿದ್ದರು. 20 ನಿಮಿಷಗಳಲ್ಲಿ ಎಲ್ಲವೂ ರಾಶಿಯಾಗಿ ನಿಂತಿತು, ಮತ್ತು ಅವರು ಚಹಾ ಮತ್ತು ಪಕೋಡಾ ವಿರಾಮಕ್ಕಾಗಿ ಕೆಲಸ ನಿಲ್ಲಿಸಿದರು.
"ನಾವು ಈ ಡೇರೆಗಳನ್ನು ನಮ್ಮ ಕೈಯಾರೆ ನಿರ್ಮಿಸಿದ್ದೇವೆ, ಮತ್ತು ಈಗ ನಮ್ಮ ಕೈಗಳಿಂದಲೇ ಅವುಗಳನ್ನು ಕೀಳುತ್ತಿದ್ದೇವೆ" ಎಂದು 34 ವರ್ಷದ ಗುರ್ವಿಂದರ್ ಹೇಳಿದರು, ಅವರ ಕುಟುಂಬವು ಪಂಜಾಬ್ ನ ಲುಧಿಯಾನ ಜಿಲ್ಲೆಯ ಡಾಂಜಿಯನ್ ಗ್ರಾಮದಲ್ಲಿ ಆರು ಎಕರೆಯಲ್ಲಿ ಗೋಧಿ, ಭತ್ತ ಮತ್ತು ಆಲೂಗಡ್ಡೆಯನ್ನು ಕೃಷಿ ಮಾಡುತ್ತದೆ. "ನಾವು ವಿಜಯಶಾಲಿಗಳಾಗಿ ಮನೆಗೆ ಮರಳುತ್ತಿರುವುದು ಸಂತಸ ತಂದಿದೆ, ಆದರೆ ನಾವು ಇಲ್ಲಿ ಬೆಳೆಸಿಕೊಂಡಿದ್ದ ಸಂಬಂಧಗಳನ್ನು ತೊರೆದು ಹೋಗುತ್ತಿರುವ ಕುರಿತು ದುಃಖವೂ ಇದೆ."
"ಪ್ರತಿಭಟನೆಯ ಆರಂಭದಲ್ಲಿ ಇಲ್ಲಿ ಏನೂ ಇದ್ದಿರಲಿಲ್ಲ. ನಾವೆಲ್ಲರೂ ರಸ್ತೆಗಳಲ್ಲಿ ಮಲಗುತ್ತಿದ್ದೆವು, ನಂತರ ದಿನಗಳಲ್ಲಿ ನಾವು ಈ ಮನೆಗಳನ್ನು ಮಾಡಿದೆವು" ಎಂದು ಲೂಧಿಯಾನ ಜಿಲ್ಲೆಯ ಅದೇ ಗ್ರಾಮದ 35 ವರ್ಷದ ದೀದಾರ್ ಸಿಂಗ್ ಹೇಳಿದರು, ಅಲ್ಲಿ ಅವರು ಗೋಧಿ, ಭತ್ತ, ಆಲೂಗಡ್ಡೆ ಮತ್ತು ಹಸಿರು ತರಕಾರಿಗಳನ್ನು ತಮ್ಮ ಏಳು ಎಕರೆ ಕೃಷಿಭೂಮಿಯಲ್ಲಿ ಬೆಳೆಯುತ್ತಾರೆ. "ನಾವು ಇಲ್ಲಿ ಬಹಳಷ್ಟು ಕಲಿತಿದ್ದೇವೆ, ವಿಶೇಷವಾಗಿ ನಾವು ಇಲ್ಲಿದ್ದಾಗ ನಮ್ಮೆಲ್ಲರ ನಡುವೆ ಸಹೋದರತ್ವದ ಭಾವನೆಯನ್ನು ಹೊಂದಿದ್ದೆವು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ನಾವೆಲ್ಲರೂ ಇಲ್ಲಿ ಸೇರಿದ ಸಮಯದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿತುಕೊಂಡೆವು. ಎಲ್ಲಾ ಸರ್ಕಾರಗಳೂ ನಮ್ಮನ್ನು ಹೋರಾಡುವಂತೆ ಮಾಡುತ್ತವೆ."
"ಸದ್ಯದಲ್ಲೇ ಪಂಜಾಬಿನಲ್ಲಿ ಚುನಾವಣೆಯಿದೆ. ಈ ಬಾರಿ ನಾವು ಸರಿಯಾದ ವ್ಯಕ್ತಿಗೆ ಮತ ಚಲಾಯಿಸುತ್ತೇವೆ" ಎಂದು ಗುರ್ವಿಂದರ್ ಹೇಳಿದರು. "ನಮ್ಮ ಕೈಹಿಡಿದವರಿಗೆ (ನಮ್ಮನ್ನು ಬೆಂಬಲಿಸುವವರಿಗೆ) ನಾವು ಮತ ಚಲಾಯಿಸುತ್ತೇವೆ. ನಮಗೆ ದ್ರೋಹ ಬಗೆಯುವವರನ್ನು ನಾವು ಅಧಿಕಾರಕ್ಕೆ ಬರಲು ಬಿಡುವುದಿಲ್ಲ" ಎಂದು ದೀದಾರ್ ಹೇಳಿದರು.

































