"ನಾನು ಹುಟ್ಟಿದಾಗಿನಿಂದಲೂ ಇದಾ ರೀ; ಮೊದಲಿನಿಂದಲೂ ಕೂಲಿ ಮಾಡ್ಕೊಂಡು ಬಂದೀವಿ," ಎಂದು ರತ್ನವ್ವ ಎಸ್. ಹರಿಜನ್ ಹೇಳುತ್ತಾರೆ, ಅವರು ಆಗಸ್ಟ್ ತಿಂಗಳ ಮಂಜು ಮಸುಕಿದ ಬೆಳಗಿನಲ್ಲಿ ತಾನು ಕೆಲಸ ಮಾಡುವ ಹೊಲದೆಡೆಗೆ ಚುರುಕಿನಿಂದ ನಡೆದು ಹೋಗುತ್ತಿದ್ದರು. ವಯಸ್ಸಿನ ಕಾರಣಕ್ಕೆ ಬಾಗಿದ ದೇಹ ಮತ್ತು ಕಾಲಿನ ತೊಂದರೆಯ ನಡುವೆಯೂ ಅವರು ಚುರುಕಾಗಿ ಯುವತಿಯಂತೆ ನಡೆಯುತ್ತಿದ್ದರು.
ಹೊಲ ತಲುಪಿದ ಅವರು ತನ್ನೊಂದಿಗೆ ತಂದಿರುವ ಕೆಲಸದ ಬಟ್ಟೆಗಳನ್ನು ಹೊರತೆಗೆದು ಮೊದಲಿಗೆ ಅದರಲ್ಲಿ ನೀಲಿ ಅಂಗಿಯನ್ನು ಹಾಕಿಕೊಂಡರು. ನಂತರ ತನ್ನ ಸೀರೆಗೆ ಪರಾಗ ಕಣಗಳು ಅಂಟದ ಹಾಗೆ ನೋಡಿಕೊಳ್ಳಲು ಹಳದಿ ಬಣ್ಣದ ಉದ್ದನೆಯ ಪ್ರಿಂಟೆಡ್ ನೈಟಿಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡರು. ನಂತರ ಒಂದಷ್ಟು ಬೆಂಡೆ ಗಿಡದ ಗಂಡು ಹೂವನ್ನು ತುಂಬಿಕೊಳ್ಳಲು ಹಳದಿ ಬಟ್ಟೆಯೊಂದರಿಂದ ಮಡಿಲುಚೀಲ ಮಾಡಿಕೊಂಡರು. ತಲೆಗೆ ಬಿಳಿ ಶಾಲಿನ ರುಮಾಲು ಕಟ್ಟಿಕೊಂಡ 45 ವರ್ಷದ ರತ್ನವ್ವ ಎಡಗೈಯಲ್ಲಿ ಒಂದಷ್ಟು ದಾರದ ಎಳೆಗಳನ್ನು ಹಿಡಿದು ತಮ್ಮ ಕೆಲಸ ಪ್ರಾರಂಭಿಸಿದರು.
ಹೀಗೆ ಕೆಲಸಕ್ಕೆ ತಯಾರಾದ ನಂತರ ಅವರು ಹೂವಿನ ದಳವೊಂದನ್ನು ನಿಧಾನವಾಗಿ ಬಾಗಿಸಿ ಅದರೊಳಗಿನ ಪ್ರತಿಯೊಂದು ಶಲಾಕೆಗೂ ಗಂಡು ಹೂವಿನ ಕೊಳವೆಯೊಳಗಿನಿಂದ ಪರಾಗ ಕಣಗಳನ್ನು ತೆಗೆದು ಲೇಪಿಸುತ್ತಾರೆ. ಅದರ ಸುತ್ತಲೂ ದಾರವನ್ನು ಅದರಲ್ಲಿರುವ ಶಲಾಕೆಗಳನ್ನು ಗುರುತಿಸುತ್ತಾರೆ. ಇದೇ ಪ್ರಕ್ರಿಯೆಯನ್ನು ಸಾಲಿನಲ್ಲಿರುವ ಪ್ರತಿ ಹೂವಿಗೂ ಮಾಡುತ್ತಾರೆ. ಅವರು ಕೈಯಿಂದ ಪರಾಗ ಸ್ಪರ್ಶ ಮಾಡಿಸುವುದರಲ್ಲಿ ಪರಿಣಿತರು. ಅವರು ಈ ಕೆಲಸವನ್ನು ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಮಾಡುತ್ತಿದ್ದಾರೆ.
ರತ್ನವ್ವ ಕರ್ನಾಟಕದ ಮಾದಿಗ ಸಮುದಾಯಕ್ಕೆ ಸೇರಿದವರು. ಕರ್ನಾಟಕದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕೋಣನತಲಿ ಗ್ರಾಮದ ಮಾದಿಗರ ಕೇರಿಯಲ್ಲಿ ವಾಸಿಸುತ್ತಿದ್ದಾರೆ.












