1998ರ ಹಿಟ್ ಸಿನೆಮಾ ಎ ಬಗ್ಸ್ ಲೈಫ್‌ನ ಎರಡನೇ ಭಾಗದಂತಿದೆ ಈ ಕಥೆ. ಮೂಲ ಹಾಲಿವುಡ್ ಚಲನಚಿತ್ರದಲ್ಲಿ, ಫ್ಲಿಕ್ ಎನ್ನುವ ಇರುವೆ ಇರುವೆ ದ್ವೀಪದಲ್ಲಿ ತನ್ನ ಸಾವಿರಾರು ರಕ್ತಸಂಬಂಧಿಗಳನ್ನು ಕೆಟ್ಟ ವ್ಯಕ್ತಿಗಳಿಂದ ರಕ್ಷಿಸಲು ಕಠಿಣ ಯೋಧರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ - ಆ ಕೆಟ್ಟ ವ್ಯಕ್ತಿಗಳೆಂದರೆ ಮಿಡತೆಗಳು.
ಭಾರತದಲ್ಲಿ ತೆರೆದುಕೊಳ್ಳುತ್ತಿರುವ ಈ ಕತೆಯ ನಿಜ ಜೀವನದ ಮುಂದಿನ ಭಾಗದಲ್ಲಿ ಪಾತ್ರವರ್ಗವು ಲಕ್ಷಾಂತರ ಕೋಟಿಗಳಷ್ಟಿದೆ, ಅವರಲ್ಲಿ 130 ಕೋಟಿ ಮಾನವರು. ಲೊಕಸ್ಟ್ ಎಂದು ಎಲ್ಲರಿಗೂ ಪರಿಚಿತವಾಗಿರುವ ಸಣ್ಣ-ಕೊಂಬಿನ ದಾಳಿಕೋರ ಮಿಡತೆ ಈ ವರ್ಷದ ಮೇನಲ್ಲಿ ಆಗಮಿಸಿದವು, ಇವುಗಳ ಪ್ರತಿ ಸಮೂಹವು ಲಕ್ಷಾಂತರ ಸಂಖ್ಯೆಯಲ್ಲಿ ಚಲಿಸುತ್ತದೆ. ಅವು ಬಿಹಾರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಸುಮಾರು ಒಂದು ಮಿಲಿಯನ್ ಎಕರೆ ಪ್ರದೇಶದಲ್ಲಿ ನಿಂತಿರುವ ಬೆಳೆಗಳನ್ನು ಧ್ವಂಸ ಮಾಡಿವೆಯೆಂದು ದೇಶದ ಕೃಷಿ ಆಯುಕ್ತರು ಹೇಳುತ್ತಾರೆ.
ಈ ವಾಯುಗಾಮಿ ಆಕ್ರಮಣಕಾರರಿಗೆ ರಾಷ್ಟ್ರೀಯ ಗಡಿಗಳು ಲೆಕ್ಕಕ್ಕಿಲ್ಲ. ವಿಶ್ವಸಂಸ್ಥೆಯ ಫುಡ್ ಎಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ (ಎಫ್‌ಎಒ) ಪ್ರಕಾರ, ಈ ಮಿಡತೆಗಳು 30 ದೇಶಗಳಲ್ಲಿ ಮತ್ತು ಪಶ್ಚಿಮ ಆಫ್ರಿಕಾದಿಂದ ಭಾರತದವರೆಗೆ 16 ದಶಲಕ್ಷ ಚದರ ಕಿಲೋಮೀಟರ್‌ಗಳಲ್ಲಿ ಅಸ್ತಿತ್ವದಲ್ಲಿವೆ. ಮತ್ತು ಸುಮಾರು 40 ಮಿಲಿಯನ್ ಸದಸ್ಯರನ್ನು ಹೊಂದಿರುವ ಒಂದು ಸಣ್ಣ ಮಿಡತೆ ಸಮೂಹ 1 ಚದರ ಕಿಲೋಮೀಟರ್ ವ್ಯಾಪ್ತಿಯಷ್ಟಿರುತ್ತದೆ - ಇವು ಒಂದು ದಿನದಲ್ಲಿ 35,000 ಜನರು, 20 ಒಂಟೆಗಳು ಅಥವಾ ಆರು ಆನೆಗಳು ತಿನ್ನಬಲ್ಲ ಆಹಾರವನ್ನು ಸೇವಿಸಬಲ್ಲವು.
ರಾಷ್ಟ್ರೀಯ ಮಿಡತೆ ಎಚ್ಚರಿಕೆ ಸಂಸ್ಥೆ, ಕೃಷಿ, ಗೃಹ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಯುಯಾನ ಮತ್ತು ದೂರಸಂಪರ್ಕ ಸಚಿವಾಲಯಗಳ ಸದಸ್ಯರನ್ನು ಮಿಡತೆಗಳನ್ನು ನಿಯಂತ್ರಿಸಲು ಸಹಾಯಕ್ಕಾಗಿ ವಿನಂತಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.
ಈ ಹೊಸ ಕತೆಯಲ್ಲಿ ಮಿಡತೆಗಳು ಮಾತ್ರ ಖಳನಾಯಕರಲ್ಲ, ಏಕೆಂದರೆ ಇಲ್ಲಿ ಲಕ್ಷಾಂತರ ಕೀಟಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಅಪಾಯಕ್ಕೆ ಈಡುಮಾಡಲಾಗಿದೆ. ಭಾರತದಲ್ಲಿನ, ಕೀಟಶಾಸ್ತ್ರಜ್ಞರು, ಬುಡಕಟ್ಟು ಜನರು ಮತ್ತು ರೈತರು ಅವುಗಳ ಹೆಸರನ್ನು ಪಟ್ಟಿ ಮಾಡುತ್ತಾರೆ ಮತ್ತು ಇವುಗಳಲ್ಲದೆ ಕೆಲವೊಮ್ಮೆ ಹೊಸ ಪ್ರಭೇದಗಳು ಕೂಡ ಕಂಡುಬರುತ್ತವೆಯೆಂದು ಅವರು ಹೇಳುತ್ತಾರೆ. ಉತ್ತಮರಾದ - ಆಹಾರ ಉತ್ಪಾದನೆಗೆ ‘ಪ್ರಯೋಜನಕಾರಿ ಕೀಟಗಳು’ ಕೂಡ ಹವಾಮಾನ ಬದಲಾವಣೆಯಿಂದ ಅವುಗಳ ಆವಾಸಸ್ಥಾನವನ್ನು ಬದಲಿಸಿದಾಗ ಹಾನಿಕಾರಕ ಕೀಟಗಳಾಗಿ ಬದಲಾಗುತ್ತವೆ.










