ವರು ಮಾತನಾಡುವಾಗ ಹಣೆ ಸುಕ್ಕುಗಟ್ಟುತ್ತದೆ, ಕಾಯಿಲೆ ಬಿದ್ದಂತೆ ಕಾಣುವ ಮುಖದಲ್ಲಿ ಗೆರೆಗಳು ಮೂಡುತ್ತವೆ. ಮೆಲ್ಲನೆ ಹೆಜ್ಜೆ ಕುಂಟುತ್ತಾ ಕೆಲವು ನೂರು ಮೀಟರುಗಳ ದೂರ ನಡೆದ ಆಕೆ ಒಂದಷ್ಟು ಸುಧಾರಿಸಿಕೊಳ್ಳಲು ನಿಲ್ಲುತ್ತಾರೆ. ಬೀಸಿ ಬಂದ ತಂಗಾಳಿ ಅವರ ಮುಖದ ಮೇಲೆ ಬಿಳಿಯ ಕೂದಲನ್ನುಮುಖದ ಮೇಲೆ ತರುತ್ತದೆ.
ಇಂದ್ರಾವತಿ ಜಾಧವ್ ಅವರನ್ನು ನೋಡಿದರೆ ಅವರಿಗೆ ಕೇವಲ 31 ವರ್ಷ ಎನ್ನುವುದನ್ನು ನಂಬಲು ಕಷ್ಟ.
ಮಹಾರಾಷ್ಟ್ರದ ನಾಗ್ಪುರ ನಗರದ ಹೊರವಲಯದಲ್ಲಿನ ಕೊಳೆಗೇರಿಯ ನಿವಾಸಿಯಾಗಿರುವ ಜಾಧವ್, ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಯಿಂದ ಬಳಲುತ್ತಿದ್ದಾರೆ, ಇದೊಂದು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಸೀಮಿತಗೊಳಿಸುವ ಮಾರಣಾಂತಿಕ ಸ್ಥಿತಿಯಾಗಿದ್ದು, ಇದರಿಂದ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಒಮ್ಮೊಮ್ಮೆ ದೀರ್ಘಕಾಲದ ಕೆಮ್ಮು ಅಂತಿಮವಾಗಿ ಶ್ವಾಸಕೋಶಗಳ ಹಾನಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ʼಧೂಮಪಾನಿಗಳ ಕಾಯಿಲೆʼ ಎಂದು ಕರೆಯಲ್ಪಡುವ ಈ ಕಾಯಿಲೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸುಮಾರು 30 ಪ್ರತಿಶತದಿಂದ 40 ಪ್ರತಿಶತದಷ್ಟು ಸಿಒಪಿಡಿ ಪ್ರಕರಣಗಳು ತಂಬಾಕು-ಧೂಮಪಾನದ ಇತಿಹಾಸವನ್ನು ಹೊಂದಿರುವ ರೋಗಿಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳುತ್ತದೆ.
ಇಂದ್ರಾವತಿಯವರು ತಮ್ಮ ಜೀವಮಾನದಲ್ಲಿ ಎಂದೂ ಸಿಗರೇಟ್ ಮುಟ್ಟಿದವರಲ್ಲ. ಆದರೆ ಅವರ ಎಡಬದಿಯ ಶ್ವಾಸಕೋಶ ತೀವ್ರ ಹಾನಿಗೀಡಾಗಿದೆ. ಕಲ್ಲಿದ್ದಲು ಅಥವಾ ಸೌದೆ ಬಳಸಿ ಉರಿಸುವ ಒಲೆಯಿಂದ ಮನೆಯಲ್ಲಿ ನೇರ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ಡಬ್ಲ್ಯುಎಚ್ಒ ಹೇಳುತ್ತದೆ.
ಇಂದ್ರಾವತಿಯವರಿಗೆ ಎಂದೂ ಶುದ್ಧ ಇಂಧನ ಬಳಸುವ ಅವಕಾಶ ದೊರೆತಿಲ್ಲ. “ನಾವು ಯಾವಾಗಲೂ ತೆರೆದ ಒಲೆಯಲ್ಲಿ ಉರುವಲು ಸೌದೆ ಅಥವಾ ಕಲ್ಲಿದ್ದಲು ಬಳಸಿ ಅಡುಗೆ ಮಾಡುವುದು, ನೀರು ಬಿಸಿ ಮಾಡುವುದು ಇತ್ಯಾದಿ ಮಾಡುತ್ತೇವೆ. ಚೂಲಿವರ್ ಜೇವಾಣ್ ಬನ್ವುನ್ ಮಾಝಿ ಫುಪ್ಪುಸಾ ನಿಕಾಮಿ ಝಾಲಿ ಆಹೆತ್ [ತೆರೆದ ಒಲೆ ಬಳಸಿ ಅಡುಗೆ ಮಾಡುವುದರಿಂದಾಗಿ ನನ್ನ ಶ್ವಾಸಕೋಶಗಳು ನಿಷ್ಪ್ರಯೋಜಕವಾಗಿವೆ]" ಎಂದು ಅವರು ವೈದ್ಯರು ತಮಗೆ ಹೇಳಿದ್ದನ್ನು ನಮ್ಮೆದುರು ಪುನರಾವರ್ತಿಸುತ್ತಾರೆ. ಅವರು ಬಳಸುವ ಜೈವಿಕರಾಶಿ ಉರುವಲು ಒಲೆಯಿಂದ ಉಂಟಾಗುವ ಮಾಲಿನ್ಯವು ಅವರ ಶ್ವಾಸಕೋಶವನ್ನು ಹಾನಿಗೊಳಿಸಿದೆ.
ವಾಯು ಮಾಲಿನ್ಯದಿಂದಾಗಿ ಪ್ರತಿ ವರ್ಷ ಸುಮಾರು ಆರು ಲಕ್ಷ ಭಾರತೀಯರು ಅಕಾಲಿಕವಾಗಿ ಸಾಯುತ್ತಾರೆಂದು 2019ರ ಲ್ಯಾನ್ಸೆಟ್ ಅಧ್ಯಯನವು ಅಂದಾಜಿಸಿದೆ ಮತ್ತು ಮನೆಗಳಿಂದ ಉಂಟಾಗುವ ವಾಯು ಮಾಲಿನ್ಯವು ಸುತ್ತಲಿನ ಗಾಳಿಯ ಗುಣಮಟ್ಟದ ಕುಸಿತಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತದೆ.
ಚಿಖಾಲಿ ಕೊಳೆಗೇರಿಯ ಪಾಂಗುಲ್ ಮೊಹಲ್ಲಾದಲ್ಲಿನ ತನ್ನ ಒಂದೇ ಕೋಣೆಯ ಗುಡಿಸಲಿನ ಹೊರಗೆ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ತನ್ನ ಆರೋಗ್ಯದ ಕುರಿತು ನಮ್ಮೊಡನೆ ಇಂದ್ರಾವತಿ ಚರ್ಚಿಸುತ್ತಿದ್ದರು.
ಅವರೀಗ ತಮ್ಮ ಸಮಸ್ಯೆಯಿಂದ ಹೊರಬರಲು ಆಶಿಸಿದಲ್ಲಿ ಸರ್ಜರಿ ಮಾಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಆದರೆ ಅದೂ ಕೂಡ ಅಪಾಯಕಾರಿ. ಅವರ ಪತಿ ಮದ್ಯ ವ್ಯಸನಿಯಾಗಿದ್ದು. 10-15 ದಿನಗಳಿಗೊಮ್ಮೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಇಂದ್ರಾವತಿಯವರಿಗೆ ತಮ್ಮ ಮಕ್ಕಳದೇ ಚಿಂತೆಯಾಗಿದೆ. ಅವರಿಗೆ 13 ವರ್ಷದ ಕಾರ್ತಿಕ್ 12 ವರ್ಷದ ಅನು ಎನ್ನುವ ಮಕ್ಕಳಿದ್ದಾರೆ. ನನ್ನ ಗಂಡ ಏನು ಮಾಡುತ್ತಾರೆನ್ನುವುದರ ಕುರಿತು ನನಗೆ ಏನೂ ತಿಳಿದಿಲ್ಲ. ಮನೆಯಲ್ಲಿ ಇಲ್ಲದ ವೇಳೆ ಅವರು ಎಲ್ಲಿ ತಿನ್ನುತ್ತಾರೆ, ಎಲ್ಲಿ ಮಲಗುತ್ತಾರೆನ್ನುವುದು ಸಹ ನನಗೆ ತಿಳಿದಿಲ್ಲ” ಎನ್ನುತ್ತಾರವರು. ಇಷ್ಟು ಹೇಳುವದರಲ್ಲಿ ಉಸಿರು ಕಟ್ಟಿದ ಅನುಭವಕ್ಕೊಳಗಾದ ಅವರು ದೀರ್ಘ ಉಸಿರು ತೆಗೆದುಕೊಂಡು ನಿರಾಳರಾಗಲು ಪ್ರಯತ್ನಿಸಿದರು. ಅದೊಂದು ನಿಟ್ಟುಸಿರಿನಂತಿತ್ತು. “ನನಗೆ ಮಕ್ಕಳು ಶಾಲೆಗೆ ಹೋಗುತ್ತಿವೆಯೇ ಇಲ್ಲವೇ ಎಂದು ನೋಡಲು ಕೂಡಾ ಶಕ್ತಿಯಿಲ್ಲ. ನನಗೇನಾದರೂ ಹೆಚ್ಚು-ಕಡಿಮೆಯಾದರೆ ಮಕ್ಕಳು ಅನಾಥರಾಗುತ್ತಾರೆನ್ನುವ ಕಾರಣಕ್ಕಾಗಿ ಸರ್ಜರಿ ಮಾಡಿಸಿಕೊಳ್ಳುವುದನ್ನು ಮುಂದೂಡುತ್ತಿದ್ದೇವೆ.”
ಇಂದ್ರಾವತಿ ಈ ಮೊದಲು ಕಸದ ರಾಶಿಯಲ್ಲಿ ಸಿಗುವ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಆಯುವ ಕೆಲಸ ಮಾಡುತ್ತಿದ್ದರು. ಹೀಗೆ ಆಯ್ದ ವಸ್ತುಗಳನ್ನು ಮಾರುವ ಮೂಲಕ ತಿಂಗಳಿಗೆ ಸುಮಾರು 2,500 ರೂಪಾಯಿಗಳ ಸಂಪಾದನೆ ಮಾಡುತ್ತಿದ್ದರು. ಈಗ ಒಂದು ವರ್ಷದಿಂದೀಚೆಗೆ ಅವರ ಆರೋಗ್ಯವು ತೀರಾ ಹದಗೆಟ್ಟ ಕಾರಣ ಈ ಕನಿಷ್ಟ ಆದಾಯವನ್ನೂ ಸಂಪಾದಿಸದಂತಾದರು.
“ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡಿಸುವುದು ನನ್ನ ಪಾಲಿಗೆ ಎಂದೂ ಸಾಧ್ಯವಿರಲಿಲ್ಲ” ಎನ್ನುತ್ತಾರಾಕೆ. ಸಾಮಾನ್ಯವಾಗಿ ಬಳಸುವ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಗೃಹಬಳಕೆಯ ಸಿಲಿಂಡರಿನ ಪ್ರತಿ ಮರುಪೂರಣಕ್ಕೆ 1,000 ರೂ. ಬೆಲೆಯಿದೆ. “ಒಂದು ಸಿಲಿಂಡರ್ ಕೊಳ್ಳಲು ನನ್ನ ತಿಂಗಳ ಸಂಪಾದನೆಯ ಅರ್ಧದಷ್ಟನ್ನು ಖರ್ಚು ಮಾಡಬೇಕು. ಇನ್ನು ಉಳಿದ ಹಣದಲ್ಲಿ ಹೇಗೆ ಮನೆ ನಡೆಸಲಿ ನಾನು?”
ಇಂಟರ್‌ನ್ಯಾಷನಲ್ ಎನರ್ಜಿ ಏಜನ್ಸಿಯ 2021ರ ವರದಿಯಂತೆ ಅಭಿವೃದ್ಧಿಶೀಲ ಏಷ್ಯಾದ ದೇಶಗಳ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇಕಡಾ 60ರಷ್ಟಿದ್ದು, ಆರ್ಥಿಕ ಕಾರಣಗಳಿಂದಾಗಿ ಇವರಿಗೆ ಶುದ್ಧ ಅಡುಗೆ ಅನಿಲ ಸೌಲಭ್ಯ ಪಡೆಯಲಾಗುತ್ತಿಲ್ಲ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಏಷ್ಯಾದಲ್ಲಿನ 1.5 ಶತಕೋಟಿ ಜನರ ಮನೆಗಳಲ್ಲಿ ಬಯೋಮಾಸ್ ಸುಡುವಿಕೆಯಿಂದಾಗಿ ಮನೆಯ ಗಾಳಿಯಲ್ಲಿ ಹೆಚ್ಚಿನ ಮಟ್ಟದ ವಿಷಕಾರಿ ಮಾಲಿನ್ಯಕಾರಕಗಳು ಸೇರಿಕೊಳ್ಳುತ್ತದೆ. ಇದನ್ನು ಉಸಿರಾಡುವ ಅವರು ಸಿಒಪಿಡಿ, ಶ್ವಾಸಕೋಶದ ಕ್ಯಾನ್ಸರ್, ಕ್ಷಯ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಗುರಿಯಾಗುತ್ತಾರೆ.
*****
ಮಧ್ಯ ಭಾರತದ ನಾಗ್ಪುರ ನಗರದ ಹೊರವಲಯದಲ್ಲಿರುವ ಚಿಖಾಲಿ ಕೊಳೆಗೇರಿ ಈ ನಿರಂತರ ದುರಂತದ ಸೂಕ್ಷ್ಮರೂಪವಾಗಿದೆ. ಇಲ್ಲಿ ಬಹುತೇಕ ಎಲ್ಲ ಮಹಿಳೆಯರು ಕಣ್ಣುಗಳಲ್ಲಿ ನೀರು, ಉಸಿರಾಟದ ತೊಂದರೆ ಮತ್ತು ಕೆಮ್ಮಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಸಿಮೆಂಟ್ ಶೀಟ್ ಮತ್ತು ಟಿನ್ ಶೀಟುಗಳ ಹೊದಿಕೆಯ ಗುಡಿಸಲಿನಂತಹ ಮನೆಗಳಿರುವ ಈ ಕೊಳಗೇರಿಯಲ್ಲಿ ಪ್ರತಿ ಮೆನಯ ಮುಂದೆಯೂ C ಆಕಾರದಲ್ಲಿ ಜೋಡಿಸಿಟ್ಟ ಮೂರು ಇಟ್ಟಿಗೆಗಳ ಒಲೆಗಳಿವೆ. ಈ ಒಲೆಗೆ ಸೌದೆ ಅಥವಾ ಹುಲ್ಲನ್ನು ಅಚ್ಚುಕಟ್ಟಾಗಿ ತುಂಬಲಾಗುತ್ತದೆ.
ಇದರಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಒಲೆ ಹೊತ್ತಿಸುವುದು. ಬೆಂಕಿ ಕಡ್ಡಿಯಿಂದಾಗಲೀ, ಒಂದಿಷ್ಟು ಸೀಮೆಯೆಣ್ಣೆಯಿಂದಾಗಲೀ ಕೆಲಸ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಊದುಕೊಳವೆ ಬಳಸಿ ನಿಮಿಷಗಳ ಕಾಲ ನಿರಂತರ ಊದಬೇಕು. ಇದಕ್ಕೆ ಸಶಕ್ತ ಶ್ವಾಸಕೋಶವಿರುವುದು ಅತ್ಯವಶ್ಯಕ.
ಇಂದ್ರಾವತಿಯವರಿಗೆ ಅವರಿರುವ ಪರಿಸ್ಥಿತಿಯಲ್ಲಿ ಊದುಗೊಳವೆ ಊದಿ ಒಲೆ ಹೊತ್ತಿಸುವುದು ಸಾಧ್ಯವಿಲ್ಲ. ಅವರು ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ, ಇದು 800 ದಶಲಕ್ಷಕ್ಕೂ ಹೆಚ್ಚು ಬಡ ಭಾರತೀಯರನ್ನು ತಲುಪುತ್ತದೆ. ಅವರು ಅಡುಗೆ ಮಾಡುವ ಸಲುವಾಗಿ ಒಲೆ ಹೊತ್ತಿಸಲು ಅಕ್ಕಪಕ್ಕದವರ ಸಹಾಯ ಬೇಡಬೇಕಾಗುತ್ತದೆ. “ಕೆಲವೊಮ್ಮೆ ನನ್ನ ಸಹೋದರರು ಅವರ ಮನೆಯಲ್ಲೇ ಅಡುಗೆ ಮಾಡಿ ನನಗೆ ತಂದುಕೊಡುತ್ತಾರೆ” ಎನ್ನುತ್ತಾರವರು.
ಏಷ್ಯಾದಲ್ಲಿನ 1.5 ಶತಕೋಟಿ ಜನರ ಮನೆಗಳಲ್ಲಿ ಬಯೋಮಾಸ್ ಸುಡುವಿಕೆಯಿಂದಾಗಿ ಮನೆಯ ಗಾಳಿಯಲ್ಲಿ ಹೆಚ್ಚಿನ ಮಟ್ಟದ ವಿಷಕಾರಿ ಮಾಲಿನ್ಯಕಾರಕಗಳು ಸೇರಿಕೊಳ್ಳುತ್ತದೆ. ಇದನ್ನು ಉಸಿರಾಡುವ ಅವರು ಸಿಒಪಿಡಿ, ಶ್ವಾಸಕೋಶದ ಕ್ಯಾನ್ಸರ್, ಕ್ಷಯ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಗುರಿಯಾಗುತ್ತಾರೆ
ಒಲೆಯನ್ನು ಉರಿಸುವ ಈ ಪ್ರಕ್ರಿಯೆಯೇ ಸಿಒಪಿಡಿ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಪ್ರಮುಖ ಕೊಡುಗೆ ನೀಡುತ್ತದೆ ಎಂದು ನಾಗ್ಪುರ ಮೂಲದ ಶ್ವಾಸಕೋಶಶಾಸ್ತ್ರಜ್ಞ ಡಾ. ಸಮೀರ್ ಅರ್ಬತ್ ಹೇಳುತ್ತಾರೆ. “ಊದುಗೊಳವೆಯನ್ನು ಬಲ ಹಾಕಿ ಊದಿ ಶಕ್ತಿ ಮುಗಿದಿದ್ದರೂ ಮತ್ತೆ ಮತ್ತೆ ಊದಬೇಕಿರುತ್ತದೆ. ಹೀಗೆ ಊದುವಾಗ ಕೊಳವೆಯ ಇನ್ನೊಂದು ಬದಿಯಲ್ಲಿನ ಮಸಿ ಮತ್ತು ಇಂಗಾಲವನ್ನು ನಮಗೆ ಇಷ್ಟವಿಲ್ಲದಿದ್ದರೂ ಉಸಿರಾಡಿರುತ್ತೇವೆ.” ಎಂದು ಅವರು ಹೇಳುತ್ತಾರೆ.
2004ರಲ್ಲಿ, ಡಬ್ಲ್ಯುಎಚ್ಒ 2030ರ ವೇಳೆಗೆ ಸಿಒಪಿಡಿ ಜಾಗತಿಕವಾಗಿ ಸಾವಿಗೆ ಮೂರನೇ ಪ್ರಮುಖ ಕಾರಣವಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಈ ರೋಗವು 2019ರಲ್ಲಿಯೇ ಆ ಮೈಲಿಗಲ್ಲನ್ನು ತಲುಪಿತು .
“ವಾಯುಮಾಲಿನ್ಯವೆನ್ನುವುದು ನಾವು ಈಗಾಗಲೇ ಹೊಂದಿರುವ ವಿನಾಶಕಾರಿ ಪಿಡುಗು (pandemic). ಕಳೆದ 10 ವರ್ಷಗಳಲ್ಲಿ, ನಾವು ನೋಡಿದ ಸಿಒಪಿಡಿ ರೋಗಿಗಳಲ್ಲಿ ಅರ್ಧದಷ್ಟು ಜನರು ಧೂಮಪಾನಿಗಳಲ್ಲದವರು" ಎಂದು ಡಾ ಅರ್ಬತ್ ಹೇಳುತ್ತಾರೆ. "ಇದು ಹೆಚ್ಚಾಗಿ ನಗರಗಳ ಮತ್ತು ಸುತ್ತಮುತ್ತಲಿನ ಕೊಳೆಗೇರಿಗಳಲ್ಲಿನ ಒಳಾಂಗಣ ಮಾಲಿನ್ಯದಿಂದಾಗಿ ಉಂಟಾಗುತ್ತದೆ, ಅಲ್ಲಿ ಹೆಚ್ಚು ವಾತಾಯನವಿಲ್ಲದ ಮನೆಯೊಳಗೆ ಅಡುಗೆ ಮಾಡಲು ಉರುವಲು ಸುಡಲಾಗುತ್ತದೆ. ಇದು ದೊಡ್ಡದಾಗಿ ಪರಿಣಾಮ ಬೀರುವುದು ಮಹಿಳೆಯರ ಮೇಲೆ. ಏಕೆಂದರೆ ಕುಟುಂಬಕ್ಕಾಗಿ ಅಡುಗೆ ಮಾಡುವವರು ಅವರೇ ಆಗಿರುತ್ತಾರೆ.”
ವಾಕ್ ದೌರ್ಬಲ್ಯದಿಂದ ಬಳಲುತ್ತಿರುವ 65 ವರ್ಷದ ಶಕುಂತಲಾ ಲೋಂಧೆ, ದಿನಕ್ಕೆ ಎರಡು ಗಂಟೆಗಳ ಕಾಲವನ್ನು ಒಲೆಯಿಂದ ಉತ್ಪತ್ತಿಯಾಗುವ ಹೊಗೆಯ ನಡುವೆ ಕಳೆಯುವುದಾಗಿ ಹೇಳುತ್ತಾರೆ. "ನನಗೆ ಮತ್ತು ನನ್ನ ಮೊಮ್ಮಗನಿಗೆ ನಾನು ದಿನಕ್ಕೆ ಎರಡು ಬಾರಿ ಅಡುಗೆ ಮಾಡಬೇಕಾಗಿದೆ" ಎಂದು ಅವರು ಹೇಳುತ್ತಾರೆ. "ನಾನು ಸ್ನಾನ ಮಾಡಲು ನೀರನ್ನು ಬಿಸಿ ಮಾಡಬೇಕು. ನಮ್ಮ ಬಳಿ ಗ್ಯಾಸ್ ಸಂಪರ್ಕವಿಲ್ಲ.”
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಲೋಂಧೆಯವರ ಮಗ 15 ವರ್ಷಗಳ ಹಿಂದೆ ನಿಧನರಾದರು. ಅವರ ಸೊಸೆ ಅದಾಗಿ ಕೆಲವೇ ಮನೆಯಿಂದ ಹೊರನಡೆದವಳು ಮತ್ತೆ ಹಿಂತಿರುಗಲಿಲ್ಲ.
ಲೊಂಧೆ ಅವರ ಮೊಮ್ಮಗ 18 ವರ್ಷದ ಸುಮಿತ್ ಡ್ರಮ್ ವಾಷರ್ ಆಗಿ ಕೆಲಸ ಮಾಡುತ್ತಿದ್ದು, ವಾರಕ್ಕೆ 1,800 ರೂ ಸಂಪಾದಿಸುತ್ತಿದ್ದಾರೆ. ಆದರೆ ಈ ಮೊಮ್ಮಗ ತನ್ನ ಅಜ್ಜಿಗೆ ಒಂದು ರೂಪಾಯಿಯನ್ನೂ ಕೊಡುವುದಿಲ್ಲ. "ನನಗೆ ಹಣದ ಅಗತ್ಯವಿದ್ದಾಗಲೆಲ್ಲಾ ಬೀದಿಗಳಲ್ಲಿ ಭಿಕ್ಷೆ ಬೇಡುತ್ತೇನೆ" ಎಂದು ಅವರು ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾ ಅವರು ಅನಿಲ ಸಂಪರ್ಕ ಪಡೆಯುವ ಸಾಧ್ಯತೆಗಳು ಶೂನ್ಯ.
ಅವರ ಮನೆಯ ಅಕ್ಕಪಕ್ಕದವರು ಹತ್ತಿರದ ಹಳ್ಳಿಗಳಿಂದ ಸೌದೆ ಮತ್ತು ಚಕ್ಕೆಗಳನ್ನು ಮೈಲುಗಳ ದೂರ ತಲೆ ಮೇಲೆ ಹೊತ್ತು ತಂದು ಇವರಿಗೆ ಕೊಟ್ಟು ಸಹಾಯ ಮಾಡುತ್ತಾರೆ.
ಲೋಂಧೆಯವರಿಗೆ ಪ್ರತಿ ಸಲ ಒಲೆ ಹಚ್ಚುವಾಗಲೂ ತಲೆತಿರುಕು ಕಾಣಿಸಿಕೊಳ್ಳುವುದು, ನಿದ್ರೆ ಬರುವಂತಾಗುವ ಅನುಭವವನ್ನು ಎದುರಿಸುತ್ತಾರೆ. ಆದರೆ ಅವರು ಅದಕ್ಕೆ ಎಂದೂ ನಿರಂತರ ಔಷಧಿ ಮಾಡಿಲ್ಲ. “ಡಾಕ್ಟರ್ ಹತ್ರ ಹೋಗಿ ಆ ಕ್ಷಣಕ್ಕೆ ಸರಿಯಾಗುವಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇನೆ.” ಎನ್ನುತ್ತಾರೆ.
ಆಗಸ್ಟ್ 2022 ರಲ್ಲಿ, ವಾರಿಯರ್ ಮಾಮ್ಸ್ ಎನ್ನುವ ಶುದ್ಧ ಗಾಳಿಯನ್ನು ಉಸಿರಾಡುವ ಮಕ್ಕಳ ಹಕ್ಕಿಗಾಗಿ ಹೋರಾಡುತ್ತಿರುವ ತಾಯಂದಿರ ಪ್ಯಾನ್-ಇಂಡಿಯಾ ಗುಂಪು; ಸೆಂಟರ್ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್, ನಾಗ್ಪುರ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆ; ಮತ್ತು ನಾಗ್ಪುರ ಮುನ್ಸಿಪಲ್ ಕಾರ್ಪೋರೇಶನ್ ಸಮೀಕ್ಷೆ ಮತ್ತು ಆರೋಗ್ಯ ಶಿಬಿರಕ್ಕೆ ಸಹಕರಿಸಿದವು. ಚಿಖಾಲಿಯಲ್ಲಿ, ಅವರು ಶ್ವಾಸಕೋಶದ ಆರೋಗ್ಯದ ಅಳತೆಯಾದ ಪೀಕ್ ಎಕ್ಸ್‌ಪಿರೇಟರಿ ಫ್ಲೋ ರೇಟ್‌ಗಳನ್ನು (ಪಿಇಎಫ್‌ಆರ್) ಪರಿಶೀಲಿಸಿದರು.
ಈ ಪರೀಕ್ಷೆಯಲ್ಲಿ 350 ಅಥವಾ ಅದಕ್ಕಿಂತಲೂ ಹೆಚ್ಚು ಅಂಕಗಳು ಬಂದಲ್ಲಿ ಅದು ಆರೋಗ್ಯವಂತ ಶ್ವಾಸಕೋಸವಾಗಿರುತ್ತದೆ. ಚಿಖಾಲಿಯಲ್ಲಿ 41 ಮಹಿಳೆಯರಲ್ಲಿ 34 ಮಹಿಳೆಯರು 350ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. ಹನ್ನೊಂದು ಮಂದಿ 200ಕ್ಕಿಂತಲೂ ಕಡಿಮೆ ಅಂಕಗಳನ್ನು ಹೊಂದಿದ್ದರು, ಇದು ಶ್ವಾಸಕೋಶದ ದುರ್ಬಲತೆಯನ್ನು ಸೂಚಿಸುತ್ತದೆ.
ಲೋಂಧೆ ಈ ಪರೀಕ್ಷೆಯಲ್ಲಿ 150 ಅಂಕ ಗಳಿಸಿದ್ದರು. ಎಂದರೆ ನಿಗದಿತ ಮಟ್ಟದ ಅರ್ಧಕ್ಕಿಂತಲೂ ಕಡಿಮೆ.
ನಾಗ್ಪುರ ನಗರದಾದ್ಯಂತ ಕೊಳೆಗೇರಿಗಳ 1,500 ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ, ಅವರಲ್ಲಿ 43 ಪ್ರತಿಶತದಷ್ಟು ಜನರು ಉರುವಲು ಒಲೆಗಳನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ. ಮನೆಯೊಳಗಿನ ಮಕ್ಕಳನ್ನು ರಕ್ಷಿಸಲು ಅನೇಕರು ಬಯಲಿನಲ್ಲಿ ಅಡುಗೆ ಮಾಡುತ್ತಾರೆ. ಆದಾಗ್ಯೂ, ಒಲೆಗಳಿಂದ ಉಂಟಾಗುವ ವಾಯುಮಾಲಿನ್ಯವು ಇಡೀ ಕೊಳೆಗೇರಿಯ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಗುಡಿಸಲುಗಳು ಪರಸ್ಪರ ಹತ್ತಿರದಲ್ಲಿವೆ.
ಬಡ ಭಾರತೀಯರಿಗೆ ಶುದ್ಧ ಅಡುಗೆ ಇಂಧನದ ಲಭ್ಯತೆಯ ಕೊರತೆಯಿಂದ ಉಂಟಾಗುವ ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಕಾಳಜಿಗಳನ್ನು ನಿಭಾಯಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿಯವರು ಮೇ 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ ಬಡ ಕುಟುಂಬಗಳಿಗೆ ಎಲ್ಪಿಜಿ ಸಿಲಿಂಡರ್ ಸಂಪರ್ಕಗಳನ್ನು ನೀಡಲಾಯಿತು. ಯೋಜನೆಯ ವೆಬ್ಸೈಟ್ ಪ್ರಕಾರ, ಈ ಯೋಜನೆಯು 8 ಕೋಟಿ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಗುರಿಯನ್ನು ಸೆಪ್ಟೆಂಬರ್ 2019ರಲ್ಲಿ ಸಾಧಿಸಲಾಗಿದೆ.
ಆದಾಗ್ಯೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ಭಾರತದ 41 ಪ್ರತಿಶತಕ್ಕೂ ಹೆಚ್ಚು ಜನರಿಗೆ ಈಗಲೂ ಶುದ್ಧ ಅಡುಗೆ ಇಂಧನದ ಲಭ್ಯತೆಯಿಲ್ಲ ಎಂದು ಹೇಳಿದೆ.
ಇದರೊಂದಿಗೆ ಗ್ಯಾಸ್ ಹೊಂದಿರುವವರು ಕೂಡಾ ಎಲ್‌ಪಿಜಿಯನ್ನು ತಮ್ಮ ಪ್ರಾಥಮಿಕ ಇಂಧನ ಆಯ್ಕೆಯನ್ನಾಗಿ ಬಳಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಒಂದು 14.2 ಕಿಲೋ ತೂಕದ ಸಿಲಿಂಡರ್ ರೀಫಿಲ್ ಬೆಲೆ 1,100 ರಿಂದ 1,120 ರೂ.ಗಳವರೆಗೆ ಇದೆ. ಮತ್ತು 93.4 ಮಿಲಿಯನ್ ಪಿಎಂಯುವೈ ಫಲಾನುಭವಿಗಳಲ್ಲಿ ಸಣ್ಣ ಸಂಖ್ಯೆಯ ಜನರಿಗಷ್ಟೇ ನಿಯಮಿತವಾಗಿ ಸಿಲಿಂಡರ್ ಖರೀದಿಸಲು ಸಾಧ್ಯವಾಗುತ್ತಿದೆ ಎಂದು ವ್ಯಾಪಕವಾಗಿ ವರದಿಯಾಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಸರ್ಕಾರಿ ಯೋಜನೆಯಡಿ ಚಿಖಾಲಿಯಲ್ಲಿ ಎಲ್ಪಿಜಿ ಸಂಪರ್ಕ ಪಡೆದ 55 ವರ್ಷದ ಪಾರ್ವತಿ ಕಾಕಡೆ ಇದ್ದಾರೆ. ಅವರು ಹೇಳುವಂತೆ, “ನಾನು ಒಲೆ ಉರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಗ್ಯಾಸ್ ಬಳಸಲು ಆರಂಭಿಸಿದರೆ ತಿಂಗಳಿಗೊಂದು ಸಿಲಿಂಡರ್ ಬೇಕಾಗುತ್ತದೆ. ನನಗೆ ಅಷ್ಟು ಹಣ ಭರಿಸುವುದು ಕಷ್ಟ. ಈ ಕಾರಣಕ್ಕಾಗಿ ಅತಿಥಿಗಳು ಬಂದಾಗ ಮತ್ತು ಮೆಳೆ ಬರುವ ಸಮಯದಲ್ಲಿ ಮಾತ್ರವೇ ಗ್ಯಾಸ್ ಬಳಸುವ ಮೂಲಕ ಒಂದು ಸಿಲಿಂಡರ್ ಆರು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಬರುವಂತೆ ನೋಡಿಕೊಳ್ಳುತ್ತೇನೆ.”
ಮಳೆಗಾಲದಲ್ಲಿ ಸೌದೆ ಒದ್ದೆಯಿರುತ್ತದೆಯಾದ್ದರಿಂದ ಆ ಸಮಯದಲ್ಲಿ ಒಲೆ ಹೊತ್ತಿಸುವುದು ಇನ್ನಷ್ಟು ಕಷ್ಟ. ಮತ್ತು ಬೆಂಕಿ ಹೊತ್ತಿಸಲು ಇನ್ನಷ್ಟು ಹೆಚ್ಚು ಊದಬೇಕಾಗುತ್ತದೆ. ಒಲೆ ಉರಿಯತೊಡಗುತ್ತಿದ್ದಂತೆ ಅವರ ಮೊಮ್ಮಕ್ಕಳು ತಮ್ಮ ಕಣ್ಣು ತಿಕ್ಕಿಕೊಳ್ಳುತ್ತಾ ಅಳತೊಡಗುತ್ತಾರೆ. ಕಾಕಡೆಯವರಿಗೂ ಇದರಿಂದ ಉಂಟಾಗುವ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದಿದೆ. ಆದರೆ ಅವರು ಅಸಹಾಯಕರು.
“ಆದರೆ ಈ ಕುರಿತು ಏನನ್ನೂ ಮಾಡು ಪರಿಸ್ಥಿತಿಯಲ್ಲಿಲ್ಲ ನಾನು. ಬದುಕು ಸಾಗಿಸುವುದೇ ಕಷ್ಟ ನಮಗೆ” ಎನ್ನುತ್ತಾರೆ ಪಾರ್ವತಿ ಕಾಕಡೆ.
ಕಾಕಡೆಯವರ ಕುಟುಂಬದಲ್ಲಿನ ಏಕೈಕ ದುಡಿಯುವ ವ್ಯಕ್ತಿಯೆಂದರೆ ಅವರ ಅಳಿಯ 35 ವರ್ಷದ ಬಲಿರಾಮ್. ಅವರು ಚಿಂದಿ ಆಯುವ ಕೆಲಸದ ಮೂಲಕ ತಿಂಗಳಿಗೆ 2,500 ರೂ. ಗಳಿಸುತ್ತಾರೆ. ಉರುವಲನ್ನು ತಮ್ಮ ಪ್ರಾಥಮಿಕ ಅಡುಗೆ ಇಂಧನವಾಗಿ ಬಳಸುವುದನ್ನು ಮುಂದುವರಿಸಿರುವ ಈ ಕುಟುಂಬವು ಅಸ್ತಮಾ, ದುರ್ಬಲಗೊಂಡ ಶ್ವಾಸಕೋಶಗಳು, ರಾಜಿ ಮಾಡಿಕೊಂಡ ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ಸೋಂಕಿನಿಂದ ಬಳಲುವ ಸಾಧ್ಯತೆಗಳನ್ನು ಎದುರು ನೋಡುತ್ತಾ ಬದುಕುತ್ತಿದೆ.
"ಯಾವುದೇ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯು ಸ್ನಾಯು ಕ್ಷೀಣತೆ ಮತ್ತು ಸ್ನಾಯು ವ್ಯರ್ಥಕ್ಕೆ ಕಾರಣವಾಗುತ್ತದೆ, ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ" ಎಂದು ಡಾ ಅರ್ಬತ್ ಹೇಳುತ್ತಾರೆ. "ರೋಗಿಗಳು ಕುಗ್ಗುತ್ತಾರೆ ... ಉಸಿರಾಟದ ತೊಂದರೆಗಳಿಂದಾಗಿ, ಅವರು ಮನೆಯೊಳಗೆ ಇರಲು ಬಯಸುತ್ತಾರೆ ಮತ್ತು ಅದು ಆತ್ಮವಿಶ್ವಾಸದ ಕುಸಿತಕ್ಕೆ ಮತ್ತು ಖಿನ್ನತೆಗೆ ಕಾರಣವಾಗಬಹುದು.”
ಅರ್ಬತ್ ಅವರ ಮಾತುಗಳು ಇಂದ್ರಾವತಿಯವರ ಪರಿಸ್ಥಿಯನ್ನು ಪರಿಪೂರ್ಣವಾಗಿ ವಿವರಿಸುತ್ತವೆ.
ಮಾತನಾಡುವಾಗ ಅವರ ಧ್ವನಿ ಅನಿಶ್ಚಿತವಾಗಿರುತ್ತದೆ. ಅಲ್ಲದೆ ಅವರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ನಾವು ಭೇಟಿಗೆ ಹೋಗಿದ್ದಾಗ ಅವರ ಸಹೋದರರು ಮತ್ತುಅವರ ಪತ್ನಿಯರು ಬೇರೊಂದು ರಾಜ್ಯದಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ಉಳಿದವರಿಗೆ ತನ್ನನ್ನು ನೋಡಿಕೊಳ್ಳುವುದೇ ಒಂದು ಕೆಲಸವಾಗುವುದು ಬೇಡವೆನ್ನುವ ಕಾರಣಕ್ಕಾಗಿ ಅವರು ಮದುವೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. “ಯಾರೂ ಬಾಯಿ ಬಿಟ್ಟು ಹೇಳಿಲ್ಲವಾದರೂ, ಯಾರಾದರೂ ನನ್ನಂತವಳಿಗಾಗಿ ಯಾರು ಟಿಕೆಟ್ ಹಣವನ್ನು ವ್ಯರ್ಥ ಮಾಡುತ್ತಾರೆ ಹೇಳಿ? ನಾನೀಗ ಕೆಲಸಕ್ಕೆ ಬಾರದವಳು.” ಎಂದು ಅವರು ನೋವಿನಿಂದ ನುಡಿಯುತ್ತಾರೆ.
ಠಾಕೂರ್ ಫ್ಯಾಮಿಲಿ ಫೌಂಡೇಶನ್ ನೀಡುವ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಪಾರ್ಥ್ ಎಂ.ಎನ್ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.
ಅನುವಾದ : ಶಂಕರ . ಎನ್ . ಕೆಂಚನೂರು