ಸಮೀರುದ್ದೀನ್ ಶೇಖ್ ಪ್ರಾಚೀನ ಅಹಮದಾಬಾದ್ ನಗರದ ಜನನಿಬಿಡ ಇಕ್ಕಟ್ಟಿನ ರಸ್ತೆಗಳಲ್ಲಿ ದಿನಕ್ಕೆ ಎರಡು ತನ್ನ ಬೈಸಿಕಲ್ ನಲ್ಲಿ ಓಡಾಡುತ್ತಾರೆ. ಜುಹಾಪುರದ ಫತೇವಾಡಿಯಲ್ಲಿರುವ ಅವರ ಮನೆಯಿಂದ ಅವರು ಕೆಲಸ ಮಾಡುವ ತಾಜ್ ಎನ್ವಲಪ್ಸ್ ಗೆ ಹೋಗಲು 13 ಕಿಲೋಮೀಟರ್ ದೂರ ಸೈಕಲ್ ತುಳಿಯುತ್ತಾರೆ. ಅವರು ಪ್ರತಿ ದಾರಿಯಲ್ಲಿ ಬೈಸಿಕಲ್ ಓಡಿಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳಬೇಕು. “બાઇક હૈ પર નહીં લે જાતા, ક્યોંકિ પેટ્રોલ નહીં પોસાતા ( ಪೆಟ್ರೋಲ್ ಖರೀದಿಸಲು ಸಾಧ್ಯವಿಲ್ಲದ ಕಾರಣ ನನ್ನಲ್ಲಿರುವ ಮೋಟಾರ್ ಬೈಕನ್ನು ನಾನು ಬಳಸುವುದೇ ಇಲ್ಲ],” ಎನ್ನುತ್ತಾ ಮೆದು ಮಾತಿನ 36 ವರ್ಷ ವಯಸ್ಸಿನ ಸಮೀರುದ್ದೀನ್ ತನ್ನ ಬೈಸಿಕಲ್ ನಿಲ್ಲಿಸುತ್ತಾರೆ.
ಅವರ ದಿನಗೆಲಸ ಖಾಡಿಯಾ ಎಂಬ ಹಳೆಯ ಪಟ್ಟಣದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಒಂದರ ನೆಲಮಾಳಿಗೆಯಲ್ಲಿರುವ 10 x 20 ಕೋಣೆಯಲ್ಲಿ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಅವರು ತನ್ನಂತೆಯೇ ಇರುವ ಸುಮಾರು 10 ಮಂದಿಯೊಂದಿಗೆ ಲಕೋಟೆಗಳನ್ನು ತಯಾರಿಸುತ್ತಾರೆ. ಒಂದೇ ದಿನದಲ್ಲಿ 6,000 ರಿಂದ 7,000 ಲಕೋಟೆ ತಯಾರಿಸುವುದು ವೈಯಕ್ತಿಕವಾಗಿ ಅವರ ದೊಡ್ಡ ಸಾಧನೆಯಾಗಿದೆ.
ಈ ಎನ್ವಲಪ್ ಲಕೋಟೆ ತಯಾರಿಕೆಯು ಹೇಳುವಷ್ಟು ಸುಲಭವಲ್ಲ. "ಈ ಕೌಶಲ್ಯವನ್ನು ಕಲಿಯಲು ಒಂದೂವರೆಯಿಂದ ಎರಡು ವರ್ಷಗಳು ಬೇಕಾಗುತ್ತದೆ" ಎಂದು ಸಮೀರುದ್ದೀನ್ ಹೇಳುತ್ತಾರೆ. "ಉಸ್ತಾದ್ (ಹಿರಿಯ ಕುಶಲಕರ್ಮಿ ಮತ್ತು ಮಾರ್ಗದರ್ಶಕ) ನಿಮ್ಮ ಕೆಲಸದ ಗುಣಮಟ್ಟವನ್ನು ಅನುಮೋದಿಸುವವರೆಗೆ ಮತ್ತು ಅದರ ಮೇಲೆ ಅವರ ಮುದ್ರೆಯನ್ನು ಬೀಳುವವರೆಗೆ ಸ್ವತಂತ್ರ ವೇತನಕ್ಕೆ ಅರ್ಹರಾಗಿರುವ ಸ್ವಉದ್ಯೋಗಿಯಾಗಲು ನೀವು ಅರ್ಹರಲ್ಲ" ಎಂದು ಅವರು ವಿವರಿಸುತ್ತಾರೆ.
ಇಲ್ಲಿ ಗುಣಮಟ್ಟದ ಜೊತೆಗೆ ವೇಗ, ನಿಖರತೆ, ಕೌಶಲ್ಯ ಮತ್ತು ಪರಿಕರಗಳ ಬಗ್ಗೆ ಇರುವ ಅರಿವು ಕೂಡ ಸೇರಿಕೊಳ್ಳುತ್ತದೆ. ಪ್ರತೀ ವರ್ಕ್‌ಶಾಪ್‌ನಲ್ಲಿ ಕತ್ತರಿಸಲು ಮತ್ತು ಪಂಚಿಂಗ್ ಮಾಡಲು ಎರಡು ಯಂತ್ರಗಳನ್ನು ಬಳಸುವುದರ ಹೊರತಾಗಿ, ಎಲ್ಲಾ ಕೆಲಸಗಳನ್ನು ಕೈಯಿಂದಲೇ ಮಾಡಲಾಗುತ್ತದೆ.
ಈ ಯಂತ್ರಗಳನ್ನು ಹೆಚ್ಚಾಗಿ ವರ್ಕ್‌ಶಾಪ್‌ನ ಮಾಲೀಕರು ನಿರ್ವಹಿಸುತ್ತಾರೆ. ಇವನ್ನು ಬಳಸಿ ಕಾಗದದ ದೊಡ್ಡ ಹಾಳೆಗಳನ್ನು ಚಿಕ್ಕದಾದ ಪೂರ್ವ-ನಿರ್ಧರಿತ ಗಾತ್ರಗಳಿಗೆ ಕತ್ತರಿಸಲಾಗುತ್ತದೆ ಮತ್ತು ಎನ್ವಲಪ್ ಕಾಗದಗಳನ್ನು ವಿವಿಧ ಗಾತ್ರಗಳಲ್ಲಿ ಅಚ್ಚು ಹಾಕಲು ವಿಶೇಷ ಡೈಯೊಂದನ್ನು ಬಳಸಲಾಗುತ್ತದೆ. ಕೆಲಸಗಾರರು ಕಾಗದಗಳನ್ನು ಎಣಿಸುತ್ತಾ ಮಡಚುವುದು, ಅಂಟಿಸುವುದು, ಸೀಲಿಂಗ್ ಮತ್ತು ಪ್ಯಾಕಿಂಗ್ ಸೇರಿದಂತೆ ಒಂದೇ ಬಾರಿಗೆ ನೂರು ಕೆಲಸಗಳನ್ನು ಮಾಡುತ್ತಾರೆ.
































