ಆ ಊರಿನಲ್ಲಿ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ದೇವತೆ ಧರೆಗಿಳಿಯಬಹುದು. ಉಡುಪು ಧರಿಸುವ ಅವಕಾಶ ಸಿಗಬೇಕಷ್ಟೇ, “ಈಗಾಗಲೇ ಏಳು ಗಂಟೆಯಾಗಿದೆ. ರಜತ್ ಜುಬಿಲಿ ಗ್ರಾಮದ ನಿವಾಸಿಗಳೇ, ದಯವಿಟ್ಟು ಬೆಡ್ ಕವರ್‌ಗಳು, ಸೀರೆ ಇತ್ಯಾದಿ ಬಟ್ಟೆಗಳನ್ನು ತನ್ನಿ. ನಮಗೆ ಚೌಕಿ ನಿರ್ಮಿಸಿಕೊಳ್ಳಬೇಕಿದೆ. ʼಪಾಲಾ ಗಾನ್ʼ - ಮಾನೊಷ ಎಲೋ ಮೊರ್ಟೆ [ಧರೆಗೆ ದೇವಿಯ ಆಗಮನ] ಇನ್ನೇನು ಆರಂಭಗೊಳ್ಳಲಿದೆ.” ಪ್ರದರ್ಶನಕ್ಕೂ ಮೊದಲು ಪ್ರದರ್ಶನ ಘೋಷಣೆ ಊರಿನ ಬೀದಿಗಳಲ್ಲಿ ಮೊಳಗುತ್ತಿತ್ತು. ಇದು ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಬ್ಲಾಕಿನಲ್ಲಿರುವ ಈ ಹಳ್ಳಿಯ ಗಲ್ಲಿಗಳಲ್ಲಿನ ಸಂಜೆಯನ್ನು ಜೀವಂತಗೊಳಿಸುತ್ತದೆ. ಅಂದಿನ ರಾತ್ರಿ ಜನರಿಗೆ ಮನರಂಜನೆಯ ಖಾತರಿ ನೀಡುತ್ತದೆ,
ಒಂದು ಗಂಟೆಯೊಳಗೆ, ತಾತ್ಕಾಲಿಕ ಚೌಕಿ(ಗ್ರೀನ್ ರೂಮ್) ತಯಾರಾಗಿದೆ ಮತ್ತು ಅದು ಮೇಕಪ್ ಅನ್ನು ಹಚ್ಚಿಕೊಳ್ಳುತ್ತಿರುವ ಪಳ-ಪಳ ಹೊಳೆಯುವ ಉಡುಪಿನಲ್ಲಿರುವ ಕಲಾವಿದರಿಂದ ಗಿಜಿಗುಡುತ್ತಿದೆ, ವೇಷ ಬರೆದಾದ ನಂತರ ಆಭರಣಗಳಿಂದ ತಮ್ಮನ್ನು ಅಲಂಕರಿಸಿಕೊಂಡು ಮೌಖಿಕ ಸ್ಕ್ರಿಪ್ಟ್ ಅನ್ನು ಬಾಯಿಪಾಠ ಮಾಡಿಕೊಳ್ಳುತ್ತಾರೆ. ತಂಡವನ್ನು ಮುನ್ನಡೆಸುವ ನಿತ್ಯಾನಂದ ಸರ್ಕಾರ್, ಹಿರಣ್ಮೊಯ್ ಮತ್ತು ಪ್ರಿಯಾಂಕಾ ಅವರ ಮದುವೆಯ ಸಮಯದಲ್ಲಿ ನಾನು ಮೊದಲು ಭೇಟಿಯಾದ ಉಲ್ಲಾಸ ತುಂಬಿದ ನರ್ತಕಿಗಿಂತ ಭಿನ್ನವಾಗಿ ಉಗ್ರ ವೇಷ ಧರಿಸಿದ್ದರು. ಇಂದು ಅವರು ಹಾವಿನ ದೇವತೆಯಾದ ಮಾನೊಷ ಎನ್ನುವ ಪಾತ್ರವನ್ನು ನಟಿಸಲಿದ್ದಾರೆ. ಅವರು ನನ್ನನ್ನು ಈ ಸಂಜೆಯ ಪಾಲಾ ಗಾನದಲ್ಲಿ ಭಾಗವಹಿಸಲಿರುವ ಇತರ ಕಲಾವಿದರಿಗೆ ಪರಿಚಯಿಸಿದರು.
ಪಾಲಾ ಗಾನ್ ಎಂಬುದು ಮಂಗಲಕಾವ್ಯವನ್ನು ಆಧರಿಸಿದ ಸಂಗೀತ ನಾಟಕ, ಇದು ಜನಪ್ರಿಯ ದೇವತೆ ಅಥವಾ ದೇವರನ್ನು ಹೊಗಳಿ ಹಾಡುವ ಮಹಾಕಾವ್ಯದ ನಿರೂಪಣೆಯಾಗಿದೆ. ಈ ನಿರೂಪಣಾ ಕವಿತೆಗಳಲ್ಲಿ ಆಗಾಗ ಶಿವನಂತಹ ಭಾರತದೆಲ್ಲೆಡೆ ಕಂಡುಬರುವ ದೇವರುಗಳನ್ನು ಕುರಿತು ಹೊಗಳಲಾಗುತ್ತದೆ ಅಥವಾ ಹಾಡಲಾಗುತ್ತದೆ, ಆದರೆ ಹೆಚ್ಚಾಗಿ ಧರ್ಮ ಠಾಕೂರ್, ಮಾ ಮಾನೊಷ - ಹಾವಿನ ದೇವತೆ, ಶೀತಲಾ - ಸಿಡುಬಿನ ದೇವತೆ ಮತ್ತು ಬಾನ್ ಬೀಬಿ - ಕಾಡಿನ ದೇವತೆಗಳನ್ನು ಕುರಿತು ಹಾಡಲಾಗುತ್ತದೆ. ಪ್ರೇಕ್ಷಕರನ್ನು ಆಕರ್ಷಿಸುವ ಮೊದಲು ಈ ಸಂಗೀತ ನಾಟಕಗಳನ್ನು ಪ್ರದರ್ಶಿಸಲು ಕಲಾವಿದರ ತಂಡಗಳು ವರ್ಷವಿಡೀ ಸುಂದರ್ ಬನ್ ದ್ವೀಪಗಳಾದ್ಯಂತ ಚಲಿಸುತ್ತವೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಪ್ರದರ್ಶಿಸಲಾಗುವ ಈ ಮಾನೊಷ ಪಾಲಾ ಗಾನ್, ಮಾನಸ ಮಂಗಲ ಕಾವ್ಯವನ್ನು ಆಧರಿಸಿದೆ, ಇದು ಒಂದು ಅಂದಾಜಿನ ಪ್ರಕಾರ, 13ನೇ ಶತಮಾನದಷ್ಟು ಹಿಂದಿನದು, ಮತ್ತು ಇದು ಪ್ರಾಚೀನ ಜಾನಪದ ಪುರಾಣಗಳನ್ನು ಆಧರಿಸಿದೆಯೆಂದು ಹೇಳಲಾಗುತ್ತದೆ. ಬಂಗಾಳದಲ್ಲಿ, ದಕ್ಷಿಣ 24 ಪರಗಣ ಮತ್ತು ಬಂಕುರಾ, ಬಿರ್ಭುಮ್ ಮತ್ತು ಪುರುಲಿಯಾ ಜಿಲ್ಲೆಗಳ ದಲಿತರ ನಡುವೆ ಮಾನೊಷ ಜನಪ್ರಿಯ ದೇವತೆಯಾಗಿದೆ. ಪ್ರತಿ ವರ್ಷ, ವಿಶ್ವಕರ್ಮ ಪೂಜೆಯ ದಿನದಂದು (ಈ ವರ್ಷದ ಸೆಪ್ಟೆಂಬರ್ 17) ಸುಂದರಬನದ ಭಾರತದ ಪ್ರದೇಶಗಳಲ್ಲಿನ ದೂರದ ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ಹಾವಿನ ದೇವತೆಯನ್ನು ಪೂಜಿಸುತ್ತವೆ ಮತ್ತು ಪಾಲಾ ಗಾನ್ ಪ್ರದರ್ಶನವನ್ನು ಏರ್ಪಡಿಸುತ್ತವೆ.

























