"ನಾನು ಯಾವುದೇ ಕೃಷಿಭೂಮಿಯನ್ನು ಹೊಂದಿಲ್ಲ, ನನ್ನ ಪೂರ್ವಜರೂ ಹೊಂದಿರಲಿಲ್ಲ" ಎಂದು ಕಮಲ್‌ಜಿತ್ ಕೌರ್ ಹೇಳುತ್ತಾರೆ. "ಆದರೂ, ನಮ್ಮ ರೈತರಿಗೆ ನನ್ನ ಸಣ್ಣ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ, ಏಕೆಂದರೆ ನಾನು ಮಾಡದೆ ಹೋದರೆ, ನನ್ನ ಮಕ್ಕಳ ತಟ್ಟೆಯಲ್ಲಿ ಏನಾದರೂ ಆಹಾರ ಕಾಣಿಸಲು ನಾನು ಕಾರ್ಪೊರೇಟ್ ದುರಾಶೆಯನ್ನು ಎದುರಿಸಬೇಕಾಗುತ್ತದೆನ್ನುವ ಭಯವಿದೆ"
ಕಮಲ್‌ಜಿತ್ (35) ಪಂಜಾಬ್‌ನ ಲುಧಿಯಾನ ನಗರದ ಶಿಕ್ಷಕಿಯಾಗಿದ್ದು, ಕೆಲವು ಸ್ನೇಹಿತರ ಜೊತೆಗೂಡಿ ಸಿಂಘುವಿನಲ್ಲಿ ನೆರಳಿರುವ ಜಾಗದಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ನಡೆಸುತ್ತಿದ್ದಾರೆ. ಅವರು ಪ್ರತಿಭಟನಾ ಸ್ಥಳಕ್ಕೆ ಸರದಿಯಂತೆ ಬರುತ್ತಾರೆ. ಒಮ್ಮೆ ಬಂದರೆ ಮೂರು ದಿನಗಳವರೆಗೆ ಇರುತ್ತಾರೆ, ಮತ್ತು ಪ್ರತಿಭಟನಾ ನಿರತ ರೈತರ ಅಂಗಿಯ ಹರಿದ ಗುಂಡಿಗಳನ್ನು ಸರಿಪಡಿಸುತ್ತಾರೆ ಅಥವಾ ಅವರ ಹರಿದ ಸಲ್ವಾರ್-ಕಮೀಜ್ ಅನ್ನು ಹೊಲಿಯುತ್ತಾರೆ. ಅವರ ಬಳಿ ಪ್ರತಿದಿನ ಸುಮಾರು 200 ಜನರು ಬರುತ್ತಾರೆ.
ಈ ರೀತಿಯ ಸೇವೆಗಳು ವಿವಿಧ ರೂಪಗಳಲ್ಲಿ ಮತ್ತು ಸಿಂಘುವಿನಲ್ಲಿ ಪ್ರತಿಭಟನೆಗೆ ಬೆಂಬಲವಾಗಿ ಅತ್ಯಂತ ಉದಾರವಾದ ರೀತಿಯಲ್ಲಿ ಲಭ್ಯವಿದೆ.
ಅಂತಹ ಸೇವೆಗಳನ್ನು ಒದಗಿಸುವವರಲ್ಲಿ ಇರ್ಷಾದ್ (ಪೂರ್ಣ ಹೆಸರು ಲಭ್ಯವಿಲ್ಲ) ಕೂಡ ಒಬ್ಬರು. ಸಿಂಘು ಗಡಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕುಂಡ್ಲಿ ಕೈಗಾರಿಕಾ ಪ್ರದೇಶದ ಟಿಡಿಐ ಮಾಲ್‌ನ ಹೊರಗಿನ ಕಿರಿದಾದ ಮೂಲೆಗಳಲ್ಲಿ, ಅವರು ಸಿಖ್ ಪ್ರತಿಭಟನಾಕಾರರ ತಲೆಗೆ ಮಸಾಜ್ ಮಾಡುತ್ತಿದ್ದಾರೆ. ಇನ್ನೂ ಅನೇಕರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಕುರುಕ್ಷೇತ್ರದ ನಿವಾಸಿಯಾಗಿರುವ ಇರ್ಷಾದ್ ಕ್ಷೌರಿಕರಾಗಿದ್ದು, ಬಿರದಾರಿ - ಭ್ರಾತೃತ್ವದ ಭಾವದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ.
ಇದೇ ಮಾರ್ಗದಲ್ಲಿ, ತನ್ನ ಮಿನಿ ಟ್ರಕ್‌ನ ಹೊರಗೆ ಕುಳಿತ ಸರ್ದಾರ್ ಗುರ್ಮಿಕ್ ಸಿಂಗ್ ಅವರ ಬಳಿ ಮಸಾಜ್ ಮಾಡಿಸಿಕೊಂಡು ತಮ್ಮ ಸ್ನಾಯುಗಳನ್ನು ಸಡಿಲಗೊಳಿಸಿಕೊಳ್ಳಲು ಅನೇಕರು ಒಗ್ಗೂಡಿದ್ದಾರೆ. "ಅವರು ಇದೀಗ ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ....." ಈ ವಿಷಯವೇ ಅವರನ್ನು ಇಲ್ಲಿಗೆ ಕರೆತಂದಿದ್ದೆಂದು ಅವರು ಹೇಳುತ್ತಾರೆ.
ಚಂಡೀಗಢದ ವೈದ್ಯ ಸುರಿಂದರ್ ಕುಮಾರ್ ಅವರು ಸಿಂಘುವಿನಲ್ಲಿ ಇತರ ವೈದ್ಯರೊಂದಿಗೆ ವೈದ್ಯಕೀಯ ಶಿಬಿರದಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಇದು ಪ್ರತಿಭಟನಾ ಸ್ಥಳದಲ್ಲಿನ ಹಲವಾರು ವೈದ್ಯಕೀಯ ಶಿಬಿರಗಳಲ್ಲಿ ಒಂದಾಗಿದೆ - ಅವುಗಳಲ್ಲಿ ಕೆಲವು ಕೋಲ್ಕತಾ ಅಥವಾ ಹೈದರಾಬಾದ್‌ನಂತಹ ದೂರದ ಪ್ರದೇಶಗಳ ವೈದ್ಯರಿಂದ ನಡೆಸಲ್ಪಡುತ್ತಿವೆ. "ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶೀತವನ್ನು ಎದುರಿಸುತ್ತಿರುವ ವಯಸ್ಸಾದವರಿಗೆ ಸೇವೆ ಸಲ್ಲಿಸುವ ಮೂಲಕ, ನಾವು ಪದವಿ ಪಡೆಯುವಾಗ ತೆಗೆದುಕೊಂಡ ಪ್ರತಿಜ್ಞೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ. ಅವರಲ್ಲಿ ಹಲವರು ತೆರೆದ ರಸ್ತೆಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಸುರಿಂದರ್ ಹೇಳುತ್ತಾರೆ.
ಹೋರಾಟಗಾರರ ಮನೋಸ್ಥೈರ್ಯವನ್ನು ಹೆಚ್ಚಿಸಲು ಸಹಾಯ ಮಾಡಲು, ಲುಧಿಯಾನಾದ ಸತ್ಪಾಲ್ ಸಿಂಗ್ ಮತ್ತು ಅವರ ಸ್ನೇಹಿತರು ತೆರೆದ ಟ್ರಕ್‌ನಲ್ಲಿ ಕಬ್ಬು ಹಿಂಡುವ ಭಾರೀ ಯಂತ್ರವನ್ನು ಸಿಂಘುವಿಗೆ ತಂದಿದ್ದಾರೆ. ಈ ಯಂತ್ರಗಳನ್ನು ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ - ಪ್ರತಿಭಟನಾ ಸ್ಥಳದಲ್ಲಿ, ಸತ್ಪಾಲ್ ಅವರ ಕ್ರಷರ್ ಹಾದುಹೋಗುವ ಎಲ್ಲರಿಗೂ ಸಿಹಿ, ತಾಜಾ ಕಬ್ಬಿನ ರಸವನ್ನು ಹಂಚುತ್ತದೆ. ಅವರು ಪ್ರತಿದಿನ ಒಂದು ಟ್ರಕ್ ಕಬ್ಬನ್ನು ಬಳಸುತ್ತಾರೆ, ಇದನ್ನು ಲುಧಿಯಾನ ಜಿಲ್ಲೆಯ ಅವರ ಊರಾದ ಅಲಿವಾಲ್‌ನಲ್ಲಿ ಸಂಗ್ರಹಿಸಿದ ದೇಣಿಗೆ ಹಣದಿಂದ ಖರೀದಿಸಲಾಗುತ್ತದೆ.
ಮತ್ತು ಕುಂಡ್ಲಿಯ ಅದೇ ಮಾಲ್‌ನ ಮೈದಾನದಲ್ಲಿ, ಬಟಿಂಡಾದ ನಿಹಾಂಗ್ ಅಮಂದೀಪ್ ಸಿಂಗ್ ಕಪ್ಪು ಕುದುರೆಗೆ ಸ್ನಾನ ಮಾಡಿಸುತ್ತಿದ್ದರು, ಅವರು ಪಂಜಾಬಿನ ಕೃಷಿ ಆರ್ಥಿಕತೆಯನ್ನು ರಕ್ಷಿಸಲು ತಾನು ಸಿಂಘುವವಿಗೆ ಬಂದಿರುವುದಾಗಿ ಹೇಳುತ್ತಾರೆ. ಮಾಲ್ ಬಳಿಯ ಲಂಗರಿನನಲ್ಲಿ ಸಂದರ್ಶಕರಿಗೆ ಆಹಾರವನ್ನು ನೀಡುವುದರ ಹೊರತಾಗಿ, ಅಮಂದೀಪ್ ಮತ್ತು ಇತರರು (ಇವರೆಲ್ಲರೂ ನಿಹಾಂಗ್ಸ್, ಸಿಖ್ ಯೋಧರ ಗುಂಪಿಗೆ ಸೇರಿದವರು) ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳಾಗಿ ಬಳಸಿರುವ ಕಂಟೇನರ್‌ಗಳ ನೆರಳಿನಲ್ಲಿ ಪ್ರತಿದಿನ ಸಂಜೆ ಕೀರ್ತನೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ಅಮೃತಸರದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರುವೇಜ್ ಸಿಂಗ್, ಇತರ ವಿದ್ಯಾರ್ಥಿಗಳೊಂದಿಗೆ, ಟ್ರಾಲಿ ಟೈಮ್ಸ್ ಎಂಬ ವಾರಕ್ಕೆರಡು ಸಲ ಪ್ರಕಟವಾಗುವ ಪತ್ರಿಕೆಯನ್ನು, ಸಿಂಘುವಿನಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ವಿತರಿಸುತ್ತಾರೆ. ಅವರು ಬಟ್ಟೆ ಮತ್ತು ಪ್ಲಾಸ್ಟಿಕ್ ಶೀಟ್‌ಗಳನ್ನು ದೊಡ್ಡ ಜಾಗದಲ್ಲಿ ಸುತ್ತಲೂ ಕಟ್ಟಿ ಅಲ್ಲಿ ಪೋಸ್ಟರ್‌ಗಳಲ್ಲಿ ಘೋಷಣೆಗಳನ್ನು ಬರೆಯಲು ಸಂದರ್ಶಕರಿಗಾಗಿ ಪೇಪರ್‌ಗಳು ಮತ್ತು ಪೆನ್‌ಗಳನ್ನು ಇರಿಸಿದ್ದಾರೆ - ಈ ಪೋಸ್ಟರ್‌ಗಳ ಪ್ರದರ್ಶನ ಸದಾ ತೆರೆದಿರುತ್ತದೆ ಮತ್ತು ಅವರು ಅಲ್ಲಿ ಉಚಿತ ಗ್ರಂಥಾಲಯವನ್ನು ಸಹ ನಡೆಸುತ್ತಾರೆ. ಪಂಜಾಬ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯರು ಕೂಡ ಸಿಂಘುವಿನಲ್ಲಿ ಉಚಿತ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ, ಮತ್ತು ಅವರು ಪೋಸ್ಟರ್‌ಗಳನ್ನು ಸಹ ತಯಾರಿಸುತ್ತಾರೆ (ಮೇಲಿನ ಕವರ್ ಫೋಟೋ ನೋಡಿ).
ರಾತ್ರಿ, ನಾವು ಸಿಂಘು ಗಡಿಯಿಂದ ಕುಂಡ್ಲಿಗೆ ಹಿಂತಿರುಗುವಾಗ, ವಿವಿಧ ಗುಂಪುಗಳು ಅಲ್ಲಿ ಬೆಂಕಿಯೆದುರು ಕುಳಿತು ಚಳಿ ಕಾಯಿಸುತ್ತಿದ್ದವು. ನಾವೂ ಅಲ್ಲಲ್ಲಿ ನಿಂತು ಮೈ ಬೆಚ್ಚಗಾಗಿಸಿಕೊಂಡು ಮುಂದುವರೆಯುತ್ತಿದ್ದೆವು.
ನಾವು ಬಾಬಾ ಗುರ್ಪಾಲ್ ಸಿಂಗ್ ಅವರನ್ನು ರಸ್ತೆಯ ಗುಡಾರದಲ್ಲಿ ಭೇಟಿಯಾಗಿ ಅವರು ಹೋರಾಟಗಾರರಿಗಾಗಿ ಮಾಡಿಟ್ಟಿದ್ದ ಚಹಾವನ್ನು ಸೇವಿಸಿದೆವು, ಅದನ್ನು ಅವರು ಯಾವಾಗಲೂ ಸಿದ್ಧವಾಗಿರಿಸಿರುತ್ತಾರೆ. 86 ವರ್ಷದ ಬಾಬಾ ಗುರ್ಪಾಲ್ ಅವರು ಪಟಿಯಾಲ ಬಳಿಯ ಖಾನ್ಪುರ್ ಗೊಂಡಿಯಾ ಗುರುದ್ವಾರದಲ್ಲಿ ಸನ್ಯಾಸಿ ಮತ್ತು ಗ್ರಂಥಿಯಾಗಿದ್ದಾರೆ. ಅವರು ಕಲಿತ ವ್ಯಕ್ತಿ, ಮತ್ತು ಸಿಖ್ಖರ ಅಸ್ಮಿತೆಯಾಧರಿಸಿ ರಾಜಕೀಯದ ಇತಿಹಾಸವನ್ನು ತಿಳಿಸುತ್ತಾರೆ ಮತ್ತು ಈ ರೈತ ಪ್ರತಿಭಟನೆಯು ಪಂಜಾಬ್ ಅಸ್ಮಿತೆಯ ಗಡಿಗಳನ್ನು ದಾಟಿ ಎಲ್ಲರ ಒಳಿತಿಗಾಗಿ ಅಖಿಲ ಭಾರತ ಚಳುವಳಿಯಾಗಿ ಹೇಗೆ ಮಾರ್ಪಟ್ಟಿದೆ ಎನ್ನುವುದನ್ನೂ ನಮಗೆ ವಿವರಿಸಿದರು.
ನಾನು ಬಾಬಾ ಗುರ್‌ಪಾಲ್ ಅವರ ಬಳಿ ಅವರು ತನ್ನ ಹಿರಿಯ ಜೊತೆಗಾರರೊಂದಿಗೆ ಸೇರಿ ದಿನಕ್ಕೆ ಎಂಟು ಗಂಟೆಗಳ ಕಾಲ ಎಲ್ಲರಿಗೂ ಚಹಾವನ್ನು ನೀಡುತ್ತಾ ಸೇವೆ ಮಾಡಲು ಕಾರಣವೇನೆಂದು ಕೇಳಿದಾಗ ಅವರು, ಅಲ್ಲಿ ರಾತ್ರಿಯ ಕತ್ತಲಿನೊಂದಿಗೆ ಬೆರೆಯುತ್ತಿದ್ದ ಹೊಗೆ ಮತ್ತು ಬೆಂಕಿಯ ಕಡೆ ನೋಡುತ್ತಾ "ಇದು ನಾವೆಲ್ಲ ಮನೆಗಳಿಂದ ನಮ್ಮ ಪಾಲಿನ ಕೊಡುಗೆಯನ್ನು ನೀಡಬೇಕಿರುವ ಸಮಯವಾಗಿದೆ, ಏಕೆಂದರೆ ಇದು ಈಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ನೇರ ಯುದ್ಧ. ಕುರುಕ್ಷೇತ್ರದ ಯುದ್ಧದಲ್ಲೂ [ಮಹಾಭಾರತ] ಇದೇ ನಡೆದಿತ್ತು.” ಎಂದು ಹೇಳಿದರು.
ಅನುವಾದ - ಶಂಕರ ಎನ್. ಕೆಂಚನೂರು