“ನಾನು ಮಾಡಿದ್ದು, ನಾನು ಮಾಡಿದ್ದು…” ಎನ್ನುತ್ತ ನಾನು ಕೇಳಿದ ಪ್ರಶ್ನೆಗೆ ಎಲ್ಲರಿಗಿಂತ ಮೊದಲೇ ಉತ್ಸಾಹದಿಂದಲೇ ಉತ್ತರಿಸುತ್ತ ಅಮನ್ ಮೊಹಮ್ಮದ್ ಕೈ ಎತ್ತಿದ. ಸುಮಾರು ಹನ್ನೆರಡು ಮಂದಿಯಿದ್ದ ಗುಂಪಿನ ಜೊತೆಯಲ್ಲಿ ಮಾತನಾಡುತ್ತ, ಈ ವರ್ಷದ ವಿನಾಯಕ ಚತುರ್ಥಿ ಹಬ್ಬ ನಡೆಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಯಾರು ಎಂದು ನಾನು ಕೇಳಿದ್ದೆ. “2,000 ರೂಪಾಯಿಗಳನ್ನು ಆತ ಒಬ್ಬನೇ ಸಂಗ್ರಹಿಸಿದ್ದಾನೆ,” ಎಂದು ಆ ಗುಂಪಿನವರ ಪೈಕಿ ಅತ್ಯಂತ ಹಿರಿಯ ವ್ಯಕ್ತಿ ಟಿ. ರಾಗಿಣಿ ಹೇಳಿದರು. ಬೇರೆ ಯಾರೂ ಕೂಡ ಆಕೆಯ ಮಾತನ್ನು ಅಲ್ಲಗಳೆಯಲಿಲ್ಲ.
ಈ ವರ್ಷ ಸಂಗ್ರಹಿಸಿದ್ದ ಒಟ್ಟು ವಂತಿಗೆ ಮೊತ್ತದ ಪೈಕಿ ಆತನ ಪಾಲು ಅತ್ಯಧಿಕ. ಅಂದರೆ, ಹಬ್ಬದ ಪ್ರಯುಕ್ತ ಸಂಗ್ರಹಿಸಿದ ರೂ. 3,000 ಒಟ್ಟು ಮೊತ್ತದಲ್ಲಿ ಮುಕ್ಕಾಲು ಭಾಗದಷ್ಟು. ಆಂಧ್ರ ಪ್ರದೇಶದ ಅನಂತಪುರ ಪಟ್ಟಣದ ಸನಿಹದಲ್ಲೇ ಇರುವ ಸಾಯಿ ನಗರದ ಬೀದಿಗಳಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಿ ಅವರು ವಂತಿಗೆ ಸಂಗ್ರಹಿಸಿದ್ದರು.
ಅದು ತನ್ನ ನೆಚ್ಚಿನ ಹಬ್ಬ ಎಂದು ಅಮನ್ ಹೇಳಿದ. ನನಗೆ ಆಶ್ಚರ್ಯವೆನಿಸಿತು.
2018ರಲ್ಲಿ ಸಾಯಿ ನಗರದಲ್ಲಿ ವಿನಾಯಕ ಚತುರ್ಥಿ ಹಬ್ಬ ಮುಗಿದು ಕೆಲವು ವಾರಗಳ ಕಳೆದಿದ್ದರೂ, ಅದೊಂದು ಭಾನುವಾರ ಕೆಲವೊಂದು ಹುಡುಗರು ಸೇರಿ ನಡೆಸುತ್ತಿದ್ದ ಹಬ್ಬದ ಅಣಕು ಪ್ರದರ್ಶನ ಗಮನಿಸಿದೆ. ಅವರ ಒಂದಿಷ್ಟು ಫೋಟಗಳನ್ನು ಕೂಡ ಕ್ಲಿಕ್ಕಿಸಿದೆ. ಅವರು ʼಅವ್ವಾ ಅಪ್ಪಾಚಿʼ ಎಂಬ ಮಕ್ಕಳ ಅಚ್ಚುಮೆಚ್ಚಿನ ಆಟದ ರೀತಿಯಲ್ಲೇ ಈ ಆಟ ಆಡುತ್ತಿದ್ದರು. ಅದು ವಿನಾಯಕ ಚತುರ್ಥಿ ಹಬ್ಬದ ದೃಶ್ಯ ಮತ್ತು ಅವರ ಪೈಕಿ ಒಬ್ಬ ಹುಡುಗ ಹಿಂದೂ ದೇವತೆ ಗಣೇಶನ ಹಾಗೆ ನಟಿಸುತ್ತಿದ್ದ. ಇನ್ನಿಬ್ಬರು ಮಕ್ಕಳು ಅವನನ್ನು ಹೊತ್ತುಕೊಂಡು ಹೋಗುತ್ತಿದ್ದರು ಮತ್ತು ಕೊನೆಗೆ ಗಣಪತಿ ವಿಗ್ರಹದ ವಿಸರ್ಜಜನೆ ಮಾಡುವ ರೀತಿಯಲ್ಲಿ ನೆಲದ ಮೇಲೆ ಇಳಿಸಿದರು.
ವಿನಾಯಕ ದೇವರ ಪಾತ್ರ ಮಾಡಿದ್ದ ಆ ಪುಟ್ಟ ಬಾಲಕನ ಹೆಸರು ಅಮನ್ ಮೊಹಮ್ಮದ್. ಈಗ ಹನ್ನೊಂದು ವರ್ಷ ಪ್ರಾಯದ ಹುಡುಗನಾಗಿರುವ ಅವನನ್ನು ಕವರ್ ಫೋಟೊದಲ್ಲಿ ಮೊದಲ ಸಾಲಿನಲ್ಲಿ (ಎಡ ಭಾದಗ ತುತ್ತ ತುದಿಯಲ್ಲಿ) ನೋಡಬಹುದು.
ಈ ವರ್ಷ ಅಗಸ್ಟ್ ತಿಂಗಳಲ್ಲಿ ವಿನಾಯಕ ಚತುರ್ಥಿ ಹಬ್ಬದ ವೇಳೆ ಅಮನ್ ಮತ್ತು ಅವನ ಗೆಳೆಯರು ತಮ್ಮ ಗಣಪತಿ ವಿಗ್ರಹವನ್ನು 2*2 ಅಳತೆಯ ಪೆಂಡಾಲ್ ಒಂದರಲ್ಲಿ ಸ್ಥಾಪಿಸಿದ್ದರು. ಇದು ಇಡೀ ಅನಂತಪುರ ಪಟ್ಟಣದಲ್ಲೇ ಅತೀ ಸಣ್ಣ ಪೆಂಡಾಲ್. ನಾನು ಪೋಟೊ ಕ್ಲಿಕ್ಕಿಸುವ ಮೊದಲೇ ಅವರ ಪೆಂಡಾಲನ್ನು ತೆಗೆಯಲಾಗಿತ್ತು. ರೂ. 1,000 ತೆತ್ತು ವಿಗ್ರಹ ತರಲಾಗಿತ್ತು ಮತ್ತು ಉಳಿದ ರೂ. 2,000 ಮಂಟಪ ಮತ್ತು ಅಲಂಕಾರಕ್ಕೆ ಖರ್ಚಾಯಿತು ಎಂದು ಮಕ್ಕಳು ತಿಳಿಸಿದರು. ಸಾಯಿ ನಗರ 3ನೇ ಕ್ರಾಸಿನ ಬಳಿ ಇರುವ ದರ್ಗಾಕ್ಕೆ ತಾಗಿಕೊಂಡೇ ವಿಗ್ರಹ ಇರಿಸಲಾಗಿತ್ತು.







