"ಅವರು ಮಧ್ಯರಾತ್ರಿಯಲ್ಲಿ ನಮ್ಮ ಊರನ್ನು ಪ್ರವೇಶಿಸಿ ನಮ್ಮ ಬೆಳೆಗಳನ್ನು ನಾಶಪಡಿಸಿದರು. ರಾತ್ರೋರಾತ್ರಿ ನಮ್ಮ ಭೂಮಿಯನ್ನು ನಮ್ಮಿಂದ ಕಸಿದುಕೊಂಡು ಅದರಲ್ಲಿ ಗುಡಿಸಲು ನಿರ್ಮಿಸಿದರು,” 48 ವರ್ಷದ ಅನುಸಯಾ ಕುಮಾರೆ, ಫೆಬ್ರವರಿ 2020ರಲ್ಲಿ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಖಾನಿ ಗ್ರಾಮದಲ್ಲಿ ತಮ್ಮ ಕುಟುಂಬವು ತಮ್ಮ ಎಂಟು ಎಕರೆ ಕೃಷಿಭೂಮಿಯ ದೊಡ್ಡ ಭಾಗವನ್ನು ಹೇಗೆ ಕಳೆದುಕೊಂಡಿತು ಎನ್ನುವುದನ್ನು ವಿವರಿಸುತ್ತಿದ್ದರು.
ಕೆಲವು ಸ್ಥಳೀಯ ಬುಡಕಟ್ಟು ಸಮುದಾಯದವರಲ್ಲದ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕುಟುಂಬದ ಭೂಮಿಯನ್ನು ಕದಿಯಲು ಗೂಂಡಾಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಗೊಂಡ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಅನುಸಯಾ ನಂಬಿದ್ದಾರೆ. “ಈ ಜನರು ಸುಳ್ಳು ದಾಖಲೆಗಳನ್ನು ರಚಿಸಿ ನಮ್ಮ ಭೂಮಿಯನ್ನು ಬುಡಕಟ್ಟಿನವರಲ್ಲದ ಜನರಿಗೆ ಮಾರಿದರು. ಏಳು ಹನ್ನೆರಡು [7/12; ಭೂ ಹಕ್ಕುಗಳ ದಾಖಲೆ] ನಮ್ಮ ಹೆಸರಿನಲ್ಲಿ ಇನ್ನೂ ಇದೆ." ಅವರ ಪರಿವಾರವು ಆ ಭೂಮಿಯಲ್ಲಿ ಹತ್ತಿ, ಮಸೂರ್ ಬೇಳೆ, ತೊಗರಿ ಮತ್ತು ಗೋಧಿಯನ್ನು ಬೆಳೆಯುತ್ತದೆ.
“ಕೋವಿಡ್ [ಲಾಕ್‌ಡೌನ್] ಸಮಯದಲ್ಲಿ, ನಾವು ಉಳಿದಿರುವ ಒಂದಿಷ್ಟು ಭೂಮಿಯಲ್ಲಿ ಬೆಳೆದ ಬೆಳೆಗಳಿಂದ ದಿನಗಳನ್ನು ಕಳೆದಿದ್ದೆವು. ಕಳೆದ ತಿಂಗಳು [2020 ರ ಡಿಸೆಂಬರ್‌ನಲ್ಲಿ] ಅವರು ಅದನ್ನು ಸಹ ಕಸಿದುಕೊಂಡರು” ಎಂದು ಅನುಸಯಾ ಹೇಳಿದರು. ಸರ್ಖಾನಿಯಲ್ಲಿ ಭೂಮಿಯನ್ನು ಕಳೆದುಕೊಂಡವರು ಇವರೊಬ್ಬರೇ ಅಲ್ಲ, 3,250 ಜನರಿರುವ ಈ ಗ್ರಾಮದಲ್ಲಿ (ಜನಗಣತಿ 2011) 900 ಬುಡಕಟ್ಟು ಜನಾಂಗದವರಲ್ಲಿ 200 ಜನರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅವರು ಜನವರಿ ಆರಂಭದಿಂದ ಪ್ರತಿದಿನ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
“ನಾವು ಪಂಚಾಯತ್ ಕಚೇರಿಯೆದುರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಕಾಲುಗಳು ನೋಯುತ್ತಿವೆ,” ಎನ್ನುತ್ತಾ ಅನುಸಯಾ ತನ್ನ ಕಾಲುಗಳನ್ನು ಎರಡೂ ಕೈಗಳಿಂದ ಉಜ್ಜಿಕೊಂಡರು. ಅಂದು ಜನವರಿ 23ರಂದು ರಾತ್ರಿ 9 ಗಂಟೆಯ ಸಮಯವಾಗಿತ್ತು. ಅವರು ಆಗಷ್ಟೇ ಸಜ್ಜೆಯ ರೊಟ್ಟಿ ಮತ್ತು ಬೆಳ್ಳುಳ್ಳಿ ಚಟ್ನಿಯ ಊಟವನ್ನು ಮುಗಿಸಿದ್ದರು. ಅವರು ಹಾಗೂ ಇತರ ಕೆಲವು ಮಹಿಳೆಯರು ರಾತ್ರಿ ಕಳೆಯುವ ಸಲುವಾಗಿ ಇಗತ್‌ಪುರಿಯ ಘಂಟಾದೇವಿ ದೇವಸ್ಥಾನದೊಳಗೆ ದಪ್ಪ ಹೊದಿಕೆಗಳನ್ನು ಹಾಸಿಕೊಂಡಿದ್ದರು.
ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಾಸಿಕ್‌ನಿಂದ ಮುಂಬೈಗೆ ಬಂದ ವಾಹನ ಮೆರವಣಿಗೆಯಲ್ಲಿ ಈ ಮಹಿಳೆಯರು ಭಾಗವಹಿಸಿದ್ದರು. ಅವರು ಜೊತೆಗೆ ತಮ್ಮ ಅನೇಕ ಸಮಸ್ಯೆಗಳನ್ನೂ ಗಮನಕ್ಕೆ ತರಲು ಹೊರಟಿದ್ದರು.





