ಅವರು ಸೋಷಿಯಲ್ ಮೀಡಿಯಾಗಳಲ್ಲಿ ತಾವು ಹಾಡಿದ ಹಾಡುಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಎಂದಾದರೂ ಒಂದು ದಿನ ಜನರು ತನ್ನ ಹಾಡುಗಳನ್ನು ಕೇಳಿ ತನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಬಹುದೆನ್ನುವ ನಂಬಿಕೆ ಅವರಿಗೆ,
ಅಸ್ಸಾಂನ ಜೋರ್ಹತ್ ಜಿಲ್ಲೆಯ ಸಿಕೊಟಾ ಟೀ ಎಸ್ಟೇಟ್‌ನ ಧೇಕಿಯಾಜುಲಿ ವಿಭಾಗದ 24 ವರ್ಷದ ಈ ಯುವಕ ಸಾಂತೋ ತಾಂತಿ "ನನಗೆ ಮುಂದೊಂದು ದಿನ ನನ್ನದೇ ಆಲ್ಬಮ್ ತರುವ ಹಂಬಲವಿದೆ." ಎನ್ನುತ್ತಾರೆ
ಸಾಂತೋ, ಹಾಡುಗಾರನಾಗುವ ಕನಸು ಕಾಣುತ್ತಲೇ ಬೆಳೆದರು. ಆದರೆ ಬದುಕಿನ ವಾಸ್ತವಗಳು ಅದಕ್ಕೆ ಆಸ್ಪದ ನೀಡುತ್ತಿರಲಿಲ್ಲ. ಬದುಕಿನ ಅನಿವಾರ್ಯತೆ ಅವರನ್ನು ತನ್ನ ತಂದೆಯ ಸೈಕಲ್ ರಿಪೇರಿ ಅಂಗಡಿಯಲ್ಲಿ ಅವರಿಗೆ ಸಹಾಯಕನಾಗಿ ದುಡಿಯುವಂತೆ ಮಾಡಿತು.
ಸಾಂತೋ ತಾಂತಿ ಆದಿವಾಸಿ ಸಮುದಾಯಕ್ಕೆ ಸೇರಿದವರು - ಆದರೆ ನೀವು ಅವರನ್ನು ಆ ವರ್ಗದೊಳಗಿನ ಒಂದು ನಿರ್ದಿಷ್ಟ ಬುಡಕಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಪ್ರಾಯಶಃ ಒಂದೂವರೆ ಶತಮಾನಗಳ ಹಿಂದೆ, ಅಸ್ಸಾಂನ ಚಹಾ ತೋಟದ ಪ್ರದೇಶಗಳಿಗೆ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದ ಆದಿವಾಸಿ ಸಮುದಾಯದ ಜನರು ವಲಸೆ ಕಾರ್ಮಿಕರಾಗಿ ಇಲ್ಲಿಗೆ ಬಂದಿದ್ದಾರೆ. ಈ ಗುಂಪುಗಳ ಅನೇಕ ವಂಶಸ್ಥರು ಆದಿವಾಸಿ ಸಮುದಾಯಗಳು ಮತ್ತು ಇತರ ಸಾಮಾಜಿಕ ಗುಂಪುಗಳೊಂದಿಗೆ ಬೆರೆತಿದ್ದಾರೆ. ಒಟ್ಟಾರೆಯಾಗಿ ಈ ಸಮುದಾಯಗಳನ್ನು ಸಾಮಾನ್ಯವಾಗಿ 'ಟೀ ಟ್ರೈಬ್ಸ್' ಎಂದು ಕರೆಯಲಾಗುತ್ತದೆ.
ಅವರಲ್ಲಿ ಅರವತ್ತು ಲಕ್ಷಕ್ಕೂ ಹೆಚ್ಚು ಜನರು ಅಸ್ಸಾಂನಲ್ಲಿ ವಾಸಿಸುತ್ತಿದ್ದಾರೆ, ಮತ್ತು ಅವರ ಮೂಲ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳೆಂದು ಗುರುತಿಸಲ್ಪಟ್ಟಿದ್ದರೂ, ಇಲ್ಲಿ ಆ ಸ್ಥಾನಮಾನವನ್ನು ಅವರಿಗೆ ನಿರಾಕರಿಸಲಾಗಿದೆ. ಅವರಲ್ಲಿ ಸುಮಾರು 12 ಲಕ್ಷ ಜನರು ರಾಜ್ಯದ ಸುಮಾರು 1,000 ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಾರೆ.
ಇಲ್ಲಿನ ಕಾರ್ಮಿಕರ ಬದುಕಿನ ದಿನನಿತ್ಯದ ಕಷ್ಟಗಳು ಮತ್ತು ತೀವ್ರ ಶ್ರಮವು ಅವರೊಳಗಿನ ಇತರ ಆಕಾಂಕ್ಷೆಗಳನ್ನು ಕೊಲ್ಲುವಷ್ಟು ಶಕ್ತವಾಗಿವೆ. ಆದರೆ ಸಾಂತೋ ಅವುಗಳೆದುರು ಸೋತಿಲ್ಲ. ಅವರು ತನ್ನ ಸುತ್ತಲಿನ ಜನರ ಬದುಕಿನ ನೋವುಗಳನ್ನು ವ್ಯಕ್ತಪಡಿಸುವ ಝುಮೂರ್ ಹಾಡುಗಳನ್ನು ಹಾಡುತ್ತಾರೆ. ಅವರು ಚಹಾ ತೋಟಗಳಲ್ಲಿ ಬಿಸಿಲು ಮತ್ತು ಮಳೆಯಲ್ಲಿ ದುಡಿಯುವ ಜನರ ಹಾಡನ್ನು ಹಾಡುತ್ತಾರೆ, ಮತ್ತು ನಾವು ಕುಡಿದು ಉಲ್ಲಾಸಗೊಳ್ಳುವ ಪ್ರತಿ ಕಪ್ ಚಹಾದ ಹಿಂದೆ ಇರುವ ಕಠಿಣ ಪರಿಶ್ರಮವನ್ನು ಹಾಡುಗಳಲ್ಲಿ ಕಟ್ಟಿಕೊಡುತ್ತಾರೆ.
ಇಲ್ಲಿರುವ ಝುಮೂರ್ ಹಾಡುಗಳನ್ನು ಸದ್ರಿ ಭಾಷೆಯಲ್ಲಿ ಹಾಡಲಾಗುತ್ತದೆ ಮತ್ತು ಅವುಗಳು ಅನೇಕ ತಲೆಮಾರುಗಳನ್ನು ಮೌಖಿಕವಾಗಿ ದಾಟಿ ಬಂದಿವೆ. ಸಾಂತೋ ಹಾಡುವ ಹಾಡುಗಳು ಅವರ ತಂದೆ ಮತ್ತು ಚಿಕ್ಕಪ್ಪನಿಂದ ರಚಿಸಲ್ಪಟ್ಟಿವೆ, ಇನ್ನೂ ಕೆಲವು ತನ್ನ ಹಿರಿಯ ತಲೆಮಾರುಗಳಿಂದ ಬಾಲ್ಯದಲ್ಲಿ ಕೇಳಿದ ಹಾಡುಗಳು. ಈ ಹಾಡುಗಳು ದೇಶದ ವಿವಿಧ ಭಾಗಗಳಿಂದ ಅಸ್ಸಾಂನ ಚಹಾ ತೋಟಗಳಿಗೆ ಆದಿವಾಸಿ ಸಮುದಾಯಗಳ ವಲಸೆಯ ಕಥೆಗಳನ್ನು ಹೊಂದಿವೆ. ಇದು ಹಳೆಯದನ್ನು ಮರೆತು ಹೊಸ ಮನೆಗೆ ಬಂದ ಅವರ ಪ್ರಯಾಣದ ಕತೆ. ಈ ಹಾಡುಗಳೆಂದರೆ ಅವರು ದಟ್ಟವಾದ ಕಾಡನ್ನು ಕಡಿದು ಸಪಾಟಿಲ್ಲದ ನೆಲವನ್ನು ಹಸನುಗೊಳಿಸಿ ಉತ್ಪತ್ತಿ ನೀಡುವ ಚಹಾ ತೋಟಗಳನ್ನಾಗಿ ಪರಿವರ್ತಿಸಿದ ಕಥೆಗಳು.
ಹಳ್ಳಿಗರು ಹೆಚ್ಚಾಗಿ ಸಾಂತೋವಿನ ಸಂಗೀತದ ಕುರಿತ ಅಭಿಮಾನವನ್ನು ಗೇಲಿ ಮಾಡುತ್ತಾರೆ. ನೀನು ಎಷ್ಟೇ ಕನಸು ಕಂಡರೂ ಟೀ ಎಸ್ಟೇಟಿನಲ್ಲಿ ಚಹಾ ಎಲೆಗಳನ್ನು ಕೀಳುವುದು ತಪ್ಪುವುದಿಲ್ಲವೆಂದು ಕುಟುಕುತ್ತಾರೆ. ಒಮ್ಮೊಮ್ಮೆ ಜನರ ಕುಹಕದ ಮಾತುಗಳು ಸಾಂತೋವಿನ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತವೆ. ಆದರೆ ಇಂತಹ ಮಾತುಗಳಿಗೆ ಅವರನ್ನು ಹಾಡುವುದನ್ನು ನಿಲ್ಲಿಸುವಂತೆ ಮಾಡುವುದಾಗಲಿ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಹಾಡುಗಳನ್ನು ಅಪ್ಲೋಡ್ ಮಾಡದಂತೆ ತಡೆಯುವುದಾಗಲಿ ಸಾಧ್ಯವಾಗಿಲ್ಲ. ಈ ರೀತಿಯ ಸನ್ನಿವೇಶಗಳಲ್ಲಿ ಅವರ ಸಂಗೀತ ಪ್ರೀತಿಯೇ ಗೆಲ್ಲುತ್ತದೆ.
ಅನುವಾದ: ಶಂಕರ ಎನ್. ಕೆಂಚನೂರು