ವಾರ್ಧಾ ಜಿಲ್ಲೆಯ 23 ವಯಸ್ಸಿನ ಪ್ರಫುಲ್ಲ ಕಾಲೋಕರರ ಹಳ್ಳಿಗೆ ಕರೋನಾ ವೈರಸ್ ತಲುಪುವುದೋ ಇಲ್ಲವೋ ಗೊತ್ತಿಲ್ಲ. “ನನಗೆ ಗೊತ್ತಿಲ್ಲ, ಆದರೆ ಅದರ ಆರ್ಥಿಕ ಪರಿಣಾಮಗಳು ಈಗಾಗಲೆ ನಮ್ಮೂರನ್ನು ಮುಟ್ಟಿವೆ” ಎಂದು ಹೇಳುತ್ತಾರೆ.
ಪ್ರಫುಲ್ಲರ ಚಂದಾನಿ ಹಳ್ಳಿಯಲ್ಲಿ ದಿನಕ್ಕೆ 500 ಲೀಟರ್ ಸಂಗ್ರಹವಾಗುತ್ತಿದ್ದ ಹಾಲು ಮಾರ್ಚಿ, 25ರಂದು ಕೋವಿಡ್-19 ಲಾಕ್ ಡೌನ್ ಪ್ರಾರಂಭವಾದ ಮೇಲೆ ಸೊನ್ನೆಗೆ ಇಳಿದಿತ್ತು. ಸುಮಾರು 520 ಜನಸಂಖ್ಯೆ ಇರುವ ಆರವಿ ತಾಲೂಕಿನ ಈ ಹಳ್ಳಿಯಲ್ಲಿ ವಾಸಿಸುತ್ತಿರುವ ಬಹುತೇಕರು ನಂದಗೌಳಿಗ ಸಮುದಾಯದವರು.
ವಾರ್ಧಾ ಜಿಲ್ಲೆಯಲ್ಲಿರುವ ಬೋರ್ ಹುಲಿ ಸಂರಕ್ಷಿತಾರಣ್ಯದ ಸುತ್ತಲಿನ ಸುಮಾರು 40-50 ಹಳ್ಳಿಗಳಲ್ಲಿ ವಾಸಿಸುತ್ತಿರುವ ನಂದಗೌಳಿಗರು ಅರೆ ದನಗಾಹಿ ಸಮುದಾಯದವರು. ಗೌಳಿಗರು ಎಂದು ಕರೆಯಲ್ಪಡುವ ಇವರು ಸ್ಥಳೀಯ ಗೌಳವ ತಳಿಯ ಹಸುವನ್ನು ಸಾಕುತ್ತಾರೆ ಮತ್ತು ಇಡೀ ವಾರ್ಧಾದ ಜನರಿಗೆ ಹಸುವಿನ ಹಾಲು, ಮೊಸರು, ಬೆಣ್ಣೆ, ತುಪ್ಪ ಮತ್ತು ಖೋವಾವನ್ನು ಪೂರೈಸುವವರು ಇವರೇ. “ನಂದಗೌಳವರ ಹಾಲಿನ ಮಾರಾಟ ಕಮ್ಮಿ ಅಂದ್ರೂ 25,000 ಲೀಟರ್ ಕಮ್ಮಿಯಾಗಿದೆ.” ಲಾಕ್ ಡೌನಿನ ಮೊದಲ 15 ದಿನಗಳಲ್ಲಿ ವಾರ್ಧಾದಲ್ಲಿ ಸಮುದಾಯದವರು ಅನುಭವಿಸಿದ ನಷ್ಟವನ್ನು ಕಾಲೋಕರ್ ಲೆಕ್ಕ ಹಾಕುತ್ತಾ ಹೇಳುತ್ತಾರೆ.
ಬೇಗ ಕೆಡುವಂತಹ ಈ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದರಿಂದ ಹೈನು ಉದ್ದಿಮೆಯು ಸಂಕಷ್ಟಕ್ಕೆ ಸಿಲುಕಿತು. ಕೇವಲ ಸಾಮಾನ್ಯ ಜನರು ಹಾಲಿನ ಬಳಕೆಯನ್ನು ಕಡಿಮೆ ಮಾಡಿದುದು ಮಾತ್ರವಲ್ಲ, ಹೋಟೆಲುಗಳು, ತಿನಿಸು ಅಂಗಡಿಗಳು, ಸಿಹಿ ತಿಂಡಿ ಅಂಗಡಿಗಳು ಮುಚ್ಚಿದ್ದರಿಂದ ಹೈನು ಉತ್ಪನ್ನಗಳಿಗೆ ಬೇಡಿಕೆ ಇನ್ನೂ ಕುಸಿಯಿತು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಸಹ ಸಂಸ್ಥೆಯಾದ ಮದರ್ ಡೈರಿಯೂ ಸೇರಿದಂತೆ ದೊಡ್ಡ ಹೈನು ಉದ್ದಿಮೆಗಳೇ ರೈತರಿಂದ ಹಾಲು ಕೊಳ್ಳುವುದನ್ನು ನಿಲ್ಲಿಸಿದವು.
ಈ ಉದ್ದಿಮೆಯಲ್ಲಿನ ಉತ್ಪಾದಕರಿಂದ ಹಿಡಿದು ಗ್ರಾಹಕರವರೆಗಿನ ಉದ್ದವಾದ ಪೂರೈಕೆಯ ಸರಪಳಿಯಲ್ಲಿರುವ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿಗಳ ದಿನದ ಆದಾಯಕ್ಕೆ ಆಗಿರುವ ಈ ಹಣಕಾಸಿನ ನಷ್ಟವು ಬಹುಶಃ ತುಂಬಾ ದಿನಗಳವರೆಗೆ ಕಾಡಲಿದೆ ಎಂದು ಕಾಲೋಕರ್ ಅಂದಾಜಿಸುತ್ತಾರೆ. ಪ್ರಫುಲ್ಲರವರು ನಂದಗೌಳವ ಸಮುದಾಯದ ಏಕೈಕ ಪಿ.ಎಚ್.ಡಿ ವಿದ್ಯಾರ್ಥಿ. ನಾಗಪುರ ವಿಶ್ವವಿದ್ಯಾನಿಲಯದಲ್ಲಿ ವಾರ್ಧಾದ ಹತ್ತಿ ಆರ್ಥಿಕತೆಯ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ಹೈನುಗಾರರು, ಸಾಂಪ್ರದಾಯಿಕ ದನ ಸಾಕುವವರು ಮತ್ತು ನಂದಗೌಳಿಗರಂತಹ ದನಗಾಹಿಗಳಿಗೆ ಹೈನು ಉದ್ದಿಮೆಯೇ ಆಧಾರ. ಇವರಲ್ಲಿ ಅನೇಕರು ಮೂಡಣ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಕೃಷಿ ಸಮಸ್ಯೆಗಳೊಂದಿಗೆ ಅನೇಕ ವರ್ಷಗಳಿಂದ ಹೋರಾಡುತ್ತಿರುವವರು. ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಇವರ ಭವಿಷ್ಯ ಇನ್ನಷ್ಟು ಅನಿಶ್ಚಿತತೆಗೆ ತಳ್ಳಲ್ಪಟ್ಟಿತು, ಇನ್ನು ಕೆಲವರ ಇದ್ದ ಒಂದು ಜೀವನೋಪಾಯವೂ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ಮುಳುಗಿ ಹೋಯಿತು.
ಈ ಸಮಸ್ಯೆ ಹಾಲಿನ ಮಾರಾಟದ ಕುಸಿತಕ್ಕೆ ನಿಲ್ಲುವುದಿಲ್ಲ. “ನಾವು ರಾಸುಗಳಿಂದ ಹಾಲು ಕರೆಯಲೇಬೇಕು, ಇಲ್ಲದಿದ್ದರೆ ಕೆಚ್ಚಲಿನಲ್ಲಿ ಗಂಟು ಬಂದು, ಮುಂದೆ ಅವು ಹಾಲು ಕೊಡದಂತಾಗಬಹುದು. ಆದರೆ ಕರೆದ ಅಷ್ಟೊಂದು ಹಾಲನ್ನು ಏನು ಮಾಡುವುದು? ಮಾರುಕಟ್ಟೆಗಳು ಮುಚ್ಚಿರುವುದರಿಂದ ಬೆಣ್ಣೆ ಅಥವಾ ಖೋವಾವನ್ನು ಮಾಡಿದರೂ ಪ್ರಯೋಜನವಿಲ್ಲ” ಎಂದು ಹೇಳುತ್ತಾರೆ ಪ್ರಫುಲ್ಲಾರ ಚಿಕ್ಕಪ್ಪ.
ಲಾಕ್ ಡೌನಿನ ಪರಿಣಾಮದಿಂದ ಮತ್ತು ಬಹುಪಾಲು ಜನರು ಹಾಲು ಕೊಳ್ಳುವುದನ್ನು ಕಡಿಮೆ ಮಾಡಿದ್ದರಿಂದ ಉಳಿಕೆಯಾದ ಹೆಚ್ಚುವರಿ ಹಾಲಿನ ಸಮಸ್ಯೆಯನ್ನು ನಿಭಾಯಿಸಲು, ಮಾರ್ಚಿ, 30 ರಂದು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರಕಾರವು ರಾಜ್ಯ ಸಹಕಾರಿ ಹೈನು ಮಹಾಮಂಡಲ ‘ಮಹಾನಂದ’ ದ ಮೂಲಕ ಹಸುವಿನ ಹಾಲನ್ನು ಹೈನುಗಾರರಿಂದ ಕೊಳ್ಳಲು ತೀರ್ಮಾನಿಸಿತು.
2020ರ ಏಪ್ರಿಲ್ನಿಂದ ಜೂನ್ ತಿಂಗಳವರೆಗೆ- ಮೂರು ತಿಂಗಳು ಪ್ರತಿ ದಿನ ಹತ್ತು ಲಕ್ಷ ಲೀಟರ್ ಹಾಲು ಖರೀದಿಸಲು ಮತ್ತು ಅದನ್ನು ಹಾಲಿನ ಪುಡಿಯನ್ನಾಗಿಸಲು ಸರಕಾರ ಯೋಜಿಸಿದೆ. ಮಹಾರಾಷ್ಟ್ರದಲ್ಲಿ ಮಹಾನಂದದ ಮೂಲಕ ಹಾಲಿನ ಖರೀದಿಯು ಏಪ್ರಿಲ್ 4ರಂದು ಪ್ರಾರಂಭವಾಯಿತು. ರಾಜ್ಯದ ಪಶುಸಂಗೋಪನೆ ಸಚಿವರಾದ ಸುನಿಲ್ ಕೇದಾರ್ ಅವರು “ಈ ತುರ್ತು ಸಮಸ್ಯೆಗೆ ನಾವು ರೂ. 187 ಕೋಟಿಗಳನ್ನು ಹಂಚಿಕೆ ಮಾಡಿದ್ದೇವೆ. ಒಂದು ವೇಳೆ ಕೇಂದ್ರ ಸರಕಾರ ಸಹಾಯ ಒದಗಿಸಿದರೆ, ಹಾಲಿನ ಖರೀದಿಯನ್ನು ನಾವು ಇನ್ನಷ್ಟು ಹೆಚ್ಚಿಸಬಹುದು” ಎಂದು ‘ಪರಿ’ ಗೆ ಹೇಳಿದರು.
ಮಹಾನಂದವನ್ನು ಬಿಟ್ಟರೆ ಇನ್ನೂ ಕೆಲವು ಸಹಕಾರಿ ಡೈರಿಗಳಾದ ಗೋಕುಲ್ ಮತ್ತು ವಾರಣ ಡೈರಿಯವರು ಸಹ ಹಾಲು ಉತ್ಪಾದಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಹಾಲಿನ ಖರೀದಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲಿ ಸ್ವಲ್ಪವನ್ನು ಹಾಲಿನ ಪುಡಿ ಮಾಡಲಿದ್ದಾರೆ. ಆದರೂ ವಾರ್ಧಾದಲ್ಲಿ ಮಹಾನಂದವು ವ್ಯವಹಾರ ನಡೆಸುತ್ತಿಲ್ಲದಿರುವುದರಿಂದ, ನಂದಗೌಳಿಗರಂತೆ ಮಹಾನಂದ ಒಕ್ಕೂಟಕ್ಕೆ ಸೇರಿರದ ಇಲ್ಲಿನ ಹೈನು ಉತ್ಪಾದಕರ ಸಮಸ್ಯೆ ಹಾಗೆಯೇ ಉಳಿದಿದೆ. ಜೊತೆಗೆ ನಂದಗೌಳಿಗರು ಯಾವಾಗಲೂ ಇಲ್ಲಿನ ಸಹಕಾರಿ ಡೈರಿಗಳಲ್ಲಿ ಅಥವಾ ದೊಡ್ಡ ಖಾಸಗಿ ಡೈರಿಗಳಲ್ಲಿ ಸದಸ್ಯರಾಗಿರಲಿಲ್ಲ. ಸಾಮಾನ್ಯವಾಗಿ ಅವರು ಹಾಲನ್ನು ಚಿಲ್ಲರೆಯಾಗಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಆದರೆ ಅವು ಈಗ ಮುಚ್ಚಿವೆ
ಮೂಡಣ ಮಹಾರಾಷ್ಟ್ರದಲ್ಲಿರುವ ವಿದರ್ಭ ಪ್ರದೇಶವು ಉತ್ತರ ಮತ್ತು ಪಶ್ಚಿಮ ಮಹಾರಾಷ್ಟ್ರದಂತೆ ಹಾಲು ಉತ್ಪಾದನೆಯ ಪ್ರಮುಖ ಕೇಂದ್ರವಾಗಿಲ್ಲ. ಆದರೆ ಇದು ಬಹುಪಾಲು ದನಗಾಹಿ ಜನರ ತವರಾಗಿದ್ದು, ಅವರಲ್ಲಿ ಬಹುತೇಕ ದನಸಾಕುವವರ ಮುಖ್ಯ ಉದ್ಯೋಗ ಹಾಲು ಮಾರುವುದು.
ಅವರಲ್ಲಿ ಒಬ್ಬರಾದ ನಂದಗೌಳಿಗರು ಅಲೆಮಾರಿ ಬುಡಕಟ್ಟಿಗೆ ಸೇರಿದ್ದು, ವಾರ್ಧಾದ ಬಯಲು ಪ್ರದೇಶಗಳಲ್ಲಿ ಮಾತ್ರವಲ್ಲದೆ ಅಮರಾವತಿ ಜಿಲ್ಲೆಯ ಮೇಲ್ಘಾಟ್ ಬೆಟ್ಟಗಳಲ್ಲಿಯೂ ನೆಲೆಸಿದ್ದಾರೆ. ಮತ್ತೆ ಗುಜರಾತಿನ ಕಛ್ ಮೂಲದ ಭರವಾಡರು, ಎಮ್ಮೆಗಳನ್ನು ಸಾಕುವ ಗಡಚಿರೋಲಿ ಜಿಲ್ಲೆಯ ಗೋಲ್ಕಾರರು, ವಿದರ್ಭದ ಎಲ್ಲ ಕಡೆ ಚದುರಿ ಹೋಗಿರುವ ದನ ಸಾಕುವ ಗೋವಾರಿಯರೂ ಇದ್ದಾರೆ. ಗಟ್ಟಿಮುಟ್ಟಾದ ಎತ್ತುಗಳಿಗೆ ಹೆಸರಾಗಿರುವ ಉಮರ್ದಾ ತಳಿಯ ದನಗಳನ್ನು ಸಾಕುವ ಮಥುರಾ ಲಮಾಣಿ ಜನರು ಯಾವತ್ತಮಲ್ ಜಿಲ್ಲೆಯ ಉಮರ್ಖೇಡ ತಾಲ್ಲೂಕಿನೊಳಗೆ ನೆಲೆಸಿದ್ದಾರೆ.
ಅಕೋಲಾ, ಬುಲ್ದಾನಾ ಮತ್ತು ವಾಸಿಮ್ ಜಿಲ್ಲೆಯಲ್ಲಿ ಕುರಿ ಮತ್ತು ಆಡುಗಳನ್ನು ಸಾಕುವ ಧನಗಾರ್ ಸಮುದಾಯ ಹಾಗೂ ಸಾಂಸ್ಕೃತಿಕವಾಗಿ ಕರ್ನಾಟಕದ ಕುರುಬರಂತೆ ಇರುವ ಚಂದ್ರಾಪುರ ಮತ್ತು ಗಡಚಿರೋಲಿ ಜಿಲ್ಲೆಯ ಕುರುಮರು ವಿದರ್ಭದಲ್ಲಿ ಜಾನುವಾರುಗಳನ್ನು ಸಾಕುತ್ತಾರೆ. ಕೆಲವು ದನಗಾಹಿ ಸಮುದಾಯಗಳು ಅರೆ-ಅಲೆಮಾರಿ ಸಮುದಾಯವಾಗಿದ್ದು ಜಾನುವಾರುಗಳನ್ನು ಮೇಯಿಸಲು ಹುಲ್ಲುಗಾವಲು ಮತ್ತು ಕಾಡುಗಳನ್ನು ನೆಚ್ಚಿಕೊಂಡಿದ್ದಾರೆ.
2011 ರ ನಂತರ ಬೋರ್ ಹುಲಿ ರಕ್ಷಿತಾರಣ್ಯದ ಸುತ್ತಲಿನ ಕಾಡುಗಳಲ್ಲಿ ದನ ಮೇಯಿಸುವುದನ್ನು ನಿಷೇಧಿಸಿದ ಮೇಲೆ, ವಿದರ್ಭದ ದನಗಾಹಿ ಸಮುದಾಯದವರು ಹುಲ್ಲುಗಾವಲುಗಳು ಮತ್ತು ಹೊಲಗಳಲ್ಲಿ ಸುಗ್ಗಿಯ ನಂತರದ ಉಳಿಯುವ ಮೇವಿನ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳುತ್ತಾರೆ ಸುಜಲ್ ಕುಲಕರ್ಣಿ. ನಾಗಪುರ ಮೂಲದ ಇವರು ಮಳೆಯಾಶ್ರಿತ ಬೇಸಾಯದ ಪುನಶ್ಚೇತನ ಜಾಲದ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಹೈನುಗಾರಿಕೆ ಕಲಿಯುತ್ತಾ ವಿದರ್ಭದ ಹೈನುಗಾರರೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಲಾಕ್ ಡೌನಿನ ಸಮಯದಲ್ಲಿ ಮೇವಿನ ಲಭ್ಯತೆ ಮತ್ತು ಪೂರೈಕೆಯೂ ಅಸ್ತವ್ಯಸ್ತಗೊಂಡಿತು. ಕೆಲವರು ನಂದಗೌಳಿಗರು ತಮ್ಮ ಮನೆಗಳಿಂದ 30-40 ಕಿಮೀ ದೂರದ ಹಳ್ಳಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರೆಲ್ಲಾ ಹುಲ್ಲುಗಾವಲು ಹಾಗೂ ಹಿಂಗಾರು ಬೆಳೆಯ ಹೊಲಗಳಲ್ಲಿನ ಮೇವನ್ನು ಹುಡುಕಿಕೊಂಡು ಮೊದಲೇ ಹೊರಟು ಹೋಗಿದ್ದರು.
ಲಾಕ್ ಡೌನಿನ ಸಮಯದಲ್ಲಿ ಮೇವಿನ ಲಭ್ಯತೆ ಮತ್ತು ಪೂರೈಕೆಯೂ ಅಸ್ತವ್ಯಸ್ತಗೊಂಡಿತು. ಕೆಲವರು ನಂದಗೌಳಿಗರು ತಮ್ಮ ಮನೆಗಳಿಂದ 30-40 ಕಿಮೀ ದೂರದ ಹಳ್ಳಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು
‘ಹಾಲು ಅಥವಾ ಮಾಂಸದಿಂದ ಇವರಿಗೆ ಬರುವ ಆದಾಯ ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆ ಮತ್ತು ಚಿಲ್ಲರೆ ಗಿರಾಕಿಗಳಿಂದ. ಆದರೆ ಈಗ ಹಾಲು ಮಾರೋದಕ್ಕೆ, ಮೇವು ಕೊಳ್ಳಲಿಕ್ಕೆ ಈ ಸಮುದಾಯದ ಜನರನ್ನು ಊರ ಒಳಕ್ಕೇ ಬಿಟ್ಟುಕೊಳ್ಳುತ್ತಿಲ್ಲ’ ಎಂದು ಹೇಳುತ್ತಾರೆ ಕುಲ್ಕರ್ಣಿ.
ಇವರಲ್ಲಿ ಅತಿ ಹೆಚ್ಚು ತಾಪತ್ರಯಕ್ಕೊಳಗಾದವರು, ಚದುರಿದಂತೆ ಅಲ್ಲಲ್ಲಿ ನೆಲೆಸಿರುವ ಗಿರ್ ತಳಿಯ ಹಸುಗಳನ್ನು ಸಾಕುವ ಭರವಾಡರು. ಸಮುದಾಯದ ಮುಖಂಡರಾದ ರಾಮ್ ಜಿ ಭಾಯ್ ಜೋಗ್ರಾನರು ಫೋನಿನಲ್ಲಿ ಮಾತನಾಡುವಾಗ “ಇದು ನಮಗೆ ಅತ್ಯಂತ ಕಷ್ಟದ ಸಮಯ. ನಾವು ಮತ್ತು ನಮ್ಮ ರಾಸುಗಳು ಕಾಡಿನಲ್ಲಿ ಜೀವನ ಮಾಡುತ್ತಿದ್ದೇವೆ” ಎಂದು ತಮ್ಮ ರಾಸುಗಳನ್ನು ಮೇಯಿಸುವ ಕುರುಚಲು ಕಾಡಿನಲ್ಲೇ ತಾವೂ ಉಳಿದುಕೊಂಡಿರುವುದನ್ನು ಹೇಳಿದರು.
ನಾಗಪುರದಿಂದ ಕಿಮೀ ದೂರದಲ್ಲಿರುವ ಸೊಂಖಾಂಬ ಎನ್ನುವ ಹಳ್ಳಿಯ ಹೊರಗೆ ಜೋಗ್ರಾನರು ಮತ್ತು 20 ಭರವಾಡಿ ಕುಟುಂಬಗಳ ಗುಂಪು ನೆಲೆಸಿದೆ. ಪ್ರತಿದಿನ ಒಟ್ಟಾರೆಯಾಗಿ 3500 ಲೀ ಹಾಲನ್ನು ಅವರು ಉತ್ಪಾದಿಸುತ್ತಾರೆ ಎಂದು ರಾಮ್ ಜಿ ಭಾಯ್ ಅಂದಾಜಿಸುತ್ತಾರೆ. ಭರವಾಡರು ಅತ್ತ ಸಾಂಪ್ರದಾಯಿಕವಾಗಿ ಯಾವ ಭೂಮಿಯನ್ನೂ ಹೊಂದಿಲ್ಲ ಇತ್ತ ಬೇರೆ ಯಾವುದೇ ಮೂಲದ ವರಮಾನವೂ ಇಲ್ಲ. ಲಾಕ್ ಡೌನಿನ ಸಮಯದಲ್ಲಿ ಇವರು ಹಳ್ಳಿಯವರಿಗೆ ಉಚಿತವಾಗಿ ಹಾಲನ್ನು ವಿತರಿಸುತ್ತಿದ್ದರು. ಆದರೆ ಉಳಿದ ಹಾಲನ್ನು ಕರುಗಳಿಗೆ ಕುಡಿಸಬೇಕಿತ್ತು ಇಲ್ಲವೆ ಚೆಲ್ಲಬೇಕಿತ್ತು. “ಯಾವುದೇ ಡೈರಿ ಅಥವಾ ಚಿಲ್ಲರೆ ಅಂಗಡಿ ಅಥವಾ ಸಿಹಿ ತಿಂಡಿ ಅಂಗಡಿಯವರಾಗಲಿ ಕೊಂಡ್ಕೊಳ್ತಿರ್ಲಿಲ್ಲ” ಎಂದು ಹೇಳುತ್ತಾರೆ ರಾಮ್ ಜಿ ಭಾಯ್.
ಮೊದಲು ಭೂಮಿ ಕೊಂಡು ಮನೆ ಕಟ್ಟಿಕೊಂಡ ಇವರ ಸಮುದಾಯದ ಜನರಲ್ಲಿ ರಾಮ್ ಜಿ ಭಾಯ್ ಮೊದಲಿಗರು. ಇವರ ಹಳ್ಳಿಯ ಮದರ್ ಡೈರಿಯ ಘಟಕಕ್ಕೆ ಹಾಲು ಕೊಡುವುದರ ಜೊತೆಗೆ ನಾಗಪುರದಲ್ಲೂ ನೇರವಾಗಿ ಗಿರಾಕಿಗಳಿಗೆ ಮಾರುತ್ತಾರೆ. “ಇದಕ್ಕೆ ತೊಂದರೆಯೇನೂ ಆಗಿಲ್ಲ. ಆದರಿದು ಸಣ್ಣ ವ್ಯಾಪಾರ ಅಷ್ಟೆ.” ಎಂದು ಹೇಳುತ್ತಾರೆ.
ರಾಮ್ ಜಿ ಭಾಯ್ ‘ದಿನ್ ಶಾ’ಸ್ ಮತ್ತು ಹಲ್ದಿರಾಮ್ಸ್ ನಂತಹ ಖಾಸಗಿ ಡೈರಿಗಳಿಗೆ ಮತ್ತೆ ಹೋಟೆಲ್ ಗಳು, ಚಹಾದವರು, ಸಿಹಿತಿಂಡಿ ಅಂಗಡಿಗಳಂತ ಚಿಲ್ಲರೆ ಗಿರಾಕಿಗಳಿಗೆ ಹಾಲು ಪೂರೈಸುತ್ತೇವೆ [ನಾಗಪುರದೊಳಗೆ ಮತ್ತು ಸುತ್ತಮುತ್ತ]” ಎಂದು ಹೇಳುತ್ತಾರೆ.
ನಾಗಪುರ ಜಿಲ್ಲೆಯೊಂದರಲ್ಲೇ ಸುಮಾರು 60 ಭರವಾಡಿ ತಾಂಡಾಗಳಿವೆ ಎಂದು ರಾಮ್ ಜಿ ಭಾಯ್ ಅಂದಾಜಿಸುತ್ತಾರೆ. “ಎಲ್ಲರೂ ಸೇರಿ ಪ್ರತಿದಿನ 20,000 ಹಸುಗಳಿಂದ ಸುಮಾರು 1.5 ಲಕ್ಷ ಲೀ. ಹಾಲನ್ನು ಪೂರೈಸುತ್ತೇವೆ. ಇವತ್ತು ಅದು ಸೊನ್ನೆಗೆ ಇಳಿದಿದೆ” ಎನ್ನುತ್ತಾರೆ.
ಕೊಬ್ಬಿನ ಪ್ರಮಾಣ ಮತ್ತು ಒಟ್ಟಾರೆ ಹಾಲಿನ ಗುಣಮಟ್ಟವನ್ನು ಲೆಕ್ಕ ಹಾಕಿಯೂ ಒಂದು ಲೀಟರ್ ಹಸುವಿನ ಹಾಲು ಸಮುದಾಯಕ್ಕೆ 30-40 ರೂಪಾಯಿ ತಂದುಕೊಡುತ್ತದೆ. ನಮ್ಮ ಜನರಿಗಾದ ನಷ್ಟವು ಕೇವಲ ಅಲ್ಪಕಾಲಿಕವಾದ ಆರ್ಥಿಕ ನಷ್ಟ ಮಾತ್ರವಲ್ಲ, ಅದರೊಂದಿಗೆ ದೀರ್ಘಕಾಲಿಕ ಸಮಸ್ಯೆಗಳನ್ನೂ ತರುತ್ತದೆ. ಏಕೆಂದರೆ ಹಾಲು ಕೊಡುವ ಹಸುಗಳು ಹಾಲು ಕರೆಯದೆ ಬಿಟ್ಟರೆ ಅವು ಮುಂದೆ ಹಾಲು ಕೊಡದಂತಾಗುತ್ತವೆ.
“ಮೇವಿನ ಪೂರೈಕೆ ಕಡಿಮೆಯಾಗಿ ಬಿಟ್ಟಿದೆ ಮತ್ತು ಅದು ಬೇಗ ಸರಿಯಾಗುತ್ತೆ ಅನ್ನೋ ನಂಬಿಕೆಯೂ ಇಲ್ಲ.” ಎನ್ನುತ್ತಾರೆ ರಾಮ್ ಜಿ ಭಾಯ್. ಉತ್ತಮ ಗುಣಮಟ್ಟದ ಹಾಲು ಕೊಡಬೇಕೆಂದರೆ ರಾಸುಗಳಿಗೆ ಹಸಿ ಹುಲ್ಲಿನ ಜೊತೆಗೆ ಎಣ್ಣೆ ಹಿಂಡಿಯಂತಹ ಬೇರೆ ಬೇರೆ ಪೌಷ್ಟಿಕ ಪಶುಆಹಾರ ನೀಡಬೇಕಾಗುತ್ತದೆ.
ಭರವಾಡಿ ಜನರು ಕ್ಯಾನಿನಲ್ಲಿದ್ದ ಹಾಲನ್ನು ಬೀದಿಗಳಲ್ಲಿ ಮತ್ತು ಕಾಲುವೆಗಳಿಗೆ ಸುರಿಯುವ ಇತ್ತೀಚೆಗಿನ ವಿಡಿಯೋಗಳನ್ನು ರಾಮ್ ಜಿ ಭಾಯ್ ನಮಗೆ ತೋರಿಸಿದರು. (‘ಪರಿ’ಯು ಅವುಗಳನ್ನು ಸತ್ಯಾಸತ್ಯತೆ ಪರಿಶೀಲಿಸಿಲ್ಲ) “ನಮ್ಮ ಸಮುದಾಯದ ಬೇರೆ ಬೇರೆ ತಾಂಡಾಗಳಿಂದ ಪ್ರತಿದಿನ ಇಂತದೇ ಅನೇಕ ವಿಡಿಯೋಗಳು ನನಗೆ ಬರುತ್ತಿವೆ”
ನಮ್ಮ ಜನರಿಗಾದ ನಷ್ಟವು ಕೇವಲ ಅಲ್ಪಕಾಲಿಕವಾದ ಆರ್ಥಿಕ ನಷ್ಟ ಮಾತ್ರವಲ್ಲ, ಅದರೊಂದಿಗೆ ದೀರ್ಘಕಾಲಿಕ ಸಮಸ್ಯೆಗಳನ್ನೂ ತರುತ್ತದೆ. ಏಕೆಂದರೆ ಹಾಲು ಕೊಡುವ ಹಸುಗಳು ಹಾಲು ಕರೆಯದೆ ಬಿಟ್ಟರೆ ಅವು ಮುಂದೆ ಹಾಲು ಕೊಡದಂತಾಗುತ್ತವೆ
ಉತ್ತರ ಮಹಾರಾಷ್ಟ್ರದಲ್ಲಿನ ಧುಲೆ ಜಿಲ್ಲೆಯ ದೊಂಡೈಚ-ವರವಾಡೆ ಪಟ್ಟಣದ ಹೊರವಲಯದ ಹೈನುಗಾರರು ಲಾಕ್ ಡೌನಿನಲ್ಲಿ ಅವರ ಹಾಲಿನ ವ್ಯವಹಾರವು ನುಚ್ಚುನೂರಾಗಿ ಪೂರ್ತಿ ನಿಂತು ಹೋದ್ದರಿಂದ ಅನುಭವಿಸಿದ ಹಠಾತ್ ಹಣಕಾಸಿನ ಮುಗ್ಗಟ್ಟಿನ ಕುರಿತು ಹೇಳಿದರು.
ರಾಸುಗಳೊಂದಿಗೆ ವಲಸೆ ಹೋಗಿರುವ ಅನೇಕರು ದಾರಿಯಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. “ಈ ವರ್ಷ ಎಲ್ಲಿಗೂ ಹೋಗಬಾರದೆಂದು ತೀರ್ಮಾನಿಸಿದ್ದೇವೆ” ಎಂದರು 20 ರ ಹರೆಯದ ರಾಹುಲ್ ಮಾಫಾ ಜೋಗ್ರಾನ. ನಾಗಪುರ ಜಿಲ್ಲೆಯ ಕಮಲೇಶ್ವರ ತಾಲ್ಲೂಕಿನ ಇವರು ಮನೆಯಲ್ಲೇ ಉಳಿದರೂ, ಇವರ ತಮ್ಮ ಗಣೇಶರವರು ನಾಗಪುರದಿಂದ 60 ಕಿಮೀ ದೂರದ ರಾಮತೇಕದ ಸುತ್ತ ತಮ್ಮ ಹಸುಗಳೊಂದಿಗೆ ಮೇವು ಮತ್ತು ನೀರನ್ನು ಅರಸುತ್ತಾ ಅಲೆಯುತ್ತಿದ್ದಾರೆ.
ಹಳ್ಳಿಗಳಲ್ಲಿ ರೈತರು ರಾಸುಗಳನ್ನು ಹೊಲದೊಳಗೆ ಮೇಯಲು ಬಿಡುವುದಿಲ್ಲವಾದ್ದರಿಂದ ಗಣೇಶರವರು ಆ ಹೊಲಗಳಿಂದ ಒಂದು ಟ್ರಾಕ್ಟರ್ ಲೋಡಿನಷ್ಟು ಎಲೆಕೋಸನ್ನು ಕೊಯ್ದು ತಂದರು. ಮಾರ್ಚಿ ಮಧ್ಯದಲ್ಲೇ ಸ್ವಲ್ಪ ಒಣಹುಲ್ಲನ್ನು ಒಟ್ಟಿಕೊಂಡಿದ್ದರಿಂದ ಲಾಕ್ ಡೌನಿನ ನಂತರ ಕೆಲವು ವಾರಗಳು ನಡೆಯಿತು. ಈಗ ರಾಮತೇಕದ ಹತ್ತಿರ ಗಣೇಶರವರು ರಾಸುಗಳೊಂದಿಗೆ ಉಳಿದುಕೊಂಡಿರುವ ಜಾಗಕ್ಕೆ ಹಾಲಿನ ಗಾಡಿಯ ಡ್ರೈವರು ಮಾರುಕಟ್ಟೆಯಿಂದ ಮೇವನ್ನು ತೆಗೆದುಕೊಂಡು ಹೋಗುತ್ತಾರೆ.
23 ವರ್ಷದ ಭರವಾಡಿ ಯುವಕ ವಿಕ್ರಮ್ ಜೋಗ್ರಾನ ಕೂಡ ತಮ್ಮ ರಾಸಿನ ಹಿಂಡಿನೊಂದಿಗೆ ಅಲೆಯುತ್ತಿದ್ದಾರೆ. ನಮಗೆ ಅವರು ಸಿಕ್ಕಿದ್ದು ಉತ್ತರ ನಾಗಪುರ ಜಿಲ್ಲೆಯ ಪರ್ಸಿಯೋನಿ ಭಾಗದಲ್ಲಿದ್ದಾಗ. ಅಲ್ಲಿನ ಹಳ್ಳಿಯವರು ಇವರ ರಾಸುಗಳನ್ನು ತಮ್ಮ ಜಮೀನಿನೊಳಕ್ಕೆ ಬರದಂತೆ ತಡೆದಿದ್ದರು. ತಮ್ಮ ಮತ್ತು ರೈತರ ಬಹುಕಾಲದ ಪರಸ್ಪರ ಸಹಜೀವನ ಸಂಬಂಧದಲ್ಲಿ ಇದೆಲ್ಲಾ ಸಹಜವೆನ್ನುತ್ತಾ “ದನಗಳ ಸಗಣಿ ಜಮೀನಿಗೆ ಒಳ್ಳೆಯ ಗೊಬ್ಬರವೇ, ಆದರೆ ನಮ್ಮ ದನಗಳು ಜಮೀನಿಗೆ ಇಳಿದಾಗ ತೆನೆಗಳಿಗೆ ಬಾಯಿ ಹಾಕುತ್ತವೆ” ಎಂದರು.
ಆಗಾಗ್ಗೆ ತನ್ನ ಮೋಬೈಲಿಗೆ ಚಾರ್ಜ್ ಮಾಡಲು ಅವಕಾಶ ಸಿಗುವುದಿಲ್ಲವಾದ್ದರಿಂದ ವಿಕ್ರಮರವರು ಕಮಲೇಶ್ವರದಲ್ಲಿರುವ ತಮ್ಮ ಕುಟುಂಬದವರನದನು ಸರಿಯಾಗಿ ಮಾತನಾಡಿಸಲು ಸಾಧ್ಯವಾಗುತ್ತಿಲ್ಲ. “ನಮಗಿದು ಅತ್ಯಂತ ಸಂಕಷ್ಟದ ಸಮಯ” ಎಂದರು.
ಅನುವಾದ: ಬಿ.ಎಸ್. ಮಂಜಪ್ಪ .