25 ಮೀಟರ್ ಎತ್ತರದಿಂದ ಕೆಳಗೆ ನೋಡುತ್ತಾ ಹುಮಾಯೂನ್ ಶೇಖ್ ಹಿಂದಿಯಲ್ಲಿ ಹೇಳುತ್ತಾರೆ, “ದೂರ ಹೋಗಿ, ತಲೆ ಮೇಲೆ ಕಾಯಿ ಬೀಳುತ್ತೆ!”
ಮರದ ಕೆಳಗೆ ಯಾರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡ ಅವರು, ತನ್ನ ಹರಿತವಾದ ಕತ್ತಿಯಿಂದ ತೆಂಗಿನ ಗೊನೆಯನ್ನು ಕತ್ತರಿಸುತ್ತಾರೆ. ಮರು ಕ್ಷಣವೇ ದಡ್! ದಡ್! ಸದ್ದಿನೊಂದಿಗೆ ಮರದಿಂದ ತೆಂಗಿನ ಸುರಿಮಳೆಯಾಗುತ್ತದೆ.
ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಸಿದ ಅವರು ಮರವಿಳಿದು ಕೆಳಗೆ ಬರುತ್ತಾರೆ. ಅವರು ಎಷ್ಟು ಅದ್ಭುತವಾಗಿ ಮರ ಹತ್ತುತ್ತಾರೆಂದರೆ, ನಾಲ್ಕು ನಿಮಿಷಗಳಲ್ಲಿ ಮರವನ್ನು ಹತ್ತಿಳಿಯುತ್ತಾರೆ. ಇದಕ್ಕೆ ಕಾರಣ ಹುಮಾಯೂನ್ ಸಾಂಪ್ರದಾಯಿಕ ಕಾಯಿ ಕೊಯ್ಯುವವರಂತೆ ಇವರು ಹಗ್ಗದ ನೆರವಿನಿಂದ ಮರ ಹತ್ತುವ ಬದಲು ಉಪಕರಣವೊಂದನ್ನು ಬಳಸುತ್ತಾರೆ. ಇದನ್ನು ಮರ ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ.
ಉಪಕರಣವು ಎರಡು ಕಾಲಿಡಲು ಸ್ಥಳವನ್ನು ಹೊಂದಿದ್ದು, ಅದರಲ್ಲಿ ಹಗ್ಗವನ್ನು ಮರದ ಸುತ್ತಲೂ ಬರುವಂತೆ ಕಟ್ಟಲಾಗುತ್ತದೆ. ಇದು ಹುಮಾಯೂನ್ ಅವರಿಗೆ ಮರದ ಮೇಲೇರಲು ಸಹಾಯ ಮಾಡುತ್ತದೆ.








