ಮೇ 4ರಂದು ಅಂತ್ಯಕ್ರಿಯೆಗಾಗಿ ಕೊನೆಯ ಎರಡು ಶವಗಳನ್ನು ಸಿದ್ಧಪಡಿಸುವಂತೆ ಹರಿಂದರ್ ಸಿಂಗ್ ತನ್ನ ಸಹೋದ್ಯೋಗಿ ಪಪ್ಪುವಿಗೆ ಹೇಳಿದಾಗ ಆತ ಹೇಳಿದ ಮಾತು ಅವರನ್ನು ಬೆಚ್ಚಿಬೀಳಿಸಿತ್ತು.
ಹರಿಂದರ್ "ದೋ ಲೌಂಡೇ ಲೇಟೆ ಹುವೇ ಹೈಂ [ಇಬ್ಬರು ಹುಡುಗರು ಬಿದ್ದುಕೊಂಡಿದ್ದಾರೆ" ಎಂದು ಹೇಳಿದಾಗ ಅವರ ಸಹೋದ್ಯೋಗಿಗಳಿಗೆ ಆ ಮಾತುಗಳಿಂದ ಆಶ್ಚರ್ಯವಾದರೂ ಅವರು ಕೆಲಸದಲ್ಲಿ ಮಗ್ನತೆಯಿಂದಿರುವುದನ್ನು ನೋಡಿ ವಿನೋದದಿಂದ ಎಲ್ಲರೂ ನಕ್ಕರು. ನವದೆಹಲಿಯ ಅತ್ಯಂತ ವ್ಯಸ್ತ ಸ್ಮಶಾನವಾದ ನಿಗಮ್ ಬೋಧ್ ಘಾಟ್‌ನಲ್ಲಿ ಅವರ ಬಿಡುವಿರದ ಕೆಲಸದ ನಡುವೆ ಇಂತಹ ಹಗುರ ಕ್ಷಣಗಳು ಅಪರೂಪ.
ಆದರೆ ತನ್ನ ಮಾತುಗಳ ಕುರಿತು ವಿವರಿಸಬೇಕಿದೆಯೆಂದು ಹರಿಂದರ್ ಅವರಿಗೆ ಎನ್ನಿಸಿತು. ಅವರು ಸ್ಮಶಾನದ ಚಿತಾಗಾರಗಳ (furnaces) ಬಳಿಯ ಸಣ್ಣ ಕೋಣೆಯೊದರಲ್ಲಿ ಸೋದ್ಯೋಗಿಗಳೊಂದಿಗೆ ಕುಳಿತು ರಾತ್ರಿಯ ಊಟ ಮಾಡುತ್ತಿದ್ದರು. ನಿಧಾನವಾಗಿ ಉಸಿರೆಳೆದುಕೊಂಡ ಅವರು (ಈ ಕೊವಿಡ್ ಸೃಷ್ಟಿಸಿರುವ ನರಕದಲ್ಲಿ ಉಸಿರಾಡಲು ಸಾಧ್ಯವಿರುವುದು ಕೂಡ ಅದೃಷ್ಟವೇ) "ನೀವು ಅವುಗಳನ್ನು ದೇಹಗಳೆಂದು ಕರೆಯುತ್ತೀರಿ ನಾವು ಲೌಂಡೇ [ಹುಡುಗರು] ಎಂದು ಕರೆಯುತ್ತೇವೆ" ಎಂದರು.
"ಇಲ್ಲಿಗೆ ಕರೆತರಲಾಗುವ ಪ್ರತಿಯೊಂದು ಶವವೂ ನನ್ನಂತೆಯೇ ಯಾರಿಗೋ ಮಗ ಅಥವಾ ಮಗಳು ಆಗಿರುತ್ತಾರೆ" ಎಂದು ಪಪ್ಪು ಮುಂದುವರೆದು ಹೇಳಿದರು. “ಅವರನ್ನು ಚಿತೆಯ ಬೆಂಕಿಯಲ್ಲಿಡುವುದು ನೋವಿನ ಸಂಗತಿ. ಆದರೆ ನಾವು ಅದನ್ನು ಅವರ ಆತ್ಮದ ಸದ್ಗತಿಗಾಗಿ ಮಾಡಲೇಬೇಕು, ಅಲ್ಲವೇ?” ತಿಂಗಳಿಗೂ ಹೆಚ್ಚು ಕಾಲ ನಿಗಮ್ ಬೋಧ್ ಸ್ಮಶಾನದಲ್ಲಿ ಸಿಎನ್‌ಜಿ ಮತ್ತು ತೆರೆದ ಸ್ಥಳದ ಕಟ್ಟಿಗೆಯ ಚಿತೆಗಳಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು.
ಆ ದಿನ, ಮೇ 4ರಂದು ನಿಗಮ್ ಬೋಧ್ ಘಾಟ್‌ನಲ್ಲಿ ಸಿಎನ್‌ಜಿ ಚಿತೆಗಳಲ್ಲಿ 35 ಶವಗಳನ್ನು ಅಂತ್ಯಕ್ರಿಯೆ ಮಾಡಲಾಯಿತು. ಎರಡನೇ ಕೋವಿಡ್ ಅಲೆ ದೆಹಲಿಯನ್ನು ಕಾಡುತ್ತಿದ್ದ ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದರೆ ಈ ಸಂಖ್ಯೆ ಅಂದಿನ ದೈನಂದಿನ ಸರಾಸರಿ 45-50ಕ್ಕಿಂತ ಸ್ವಲ್ಪ ಕಡಿಮೆಯಿತ್ತು. ಆದರೆ ಸಾಂಕ್ರಾಮಿಕ ಪಿಡುಗಿನ ಮೊದಲು, ಶ್ಮಶಾನದ ಸಿಎನ್‌ಜಿ ಚಿತೆಗಳು ತಿಂಗಳಿಗೆ ಸುಮಾರು 100 ಶವಗಳಿಗಷ್ಟೇ ಅಂತ್ಯಕ್ರಿಯೆಯನ್ನು ನಿಭಾಯಿಸುತ್ತಿದ್ದವು.
ದೆಹಲಿಯ ಕಾಶ್ಮೀರ್ ಗೇಟ್ ಬಳಿ ಯಮುನಾ ನದಿಯ ದಡದಲ್ಲಿರುವ ಘಾಟ್‌ನ ಪ್ರವೇಶದ್ವಾರದಲ್ಲೊಂದು ದೊಡ್ಡ ಭಿತ್ತಿ ಚಿತ್ರವಿದೆ. ಅದರಲ್ಲಿ ಹೀಗೆ ಬರೆಯಲಾಗಿದೆ: “ನನ್ನನ್ನು ಇಲ್ಲಿಯವರೆಗೆ ಕರೆತಂದಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿಂದ ನಾನು ಏಕಾಂಗಿಯಾಗಿ ಮುಂದುವರಿಯುತ್ತೇನೆ.” ಆದರೆ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ -19 ರಾಷ್ಟ್ರ ರಾಜಧಾನಿಯನ್ನು ಆಕ್ರಮಿಸಿಕೊಂಡಾಗ, ಸತ್ತವರು ಒಬ್ಬಂಟಿಯಾಗಿರಲಿಲ್ಲ - ಮರಣಾನಂತರದ ಜೀವನದೆಡೆಗಿನ ಪ್ರಯಾಣದಲ್ಲಿ ಅವರು ಸ್ನೇಹಿತರನ್ನು ಕಂಡುಕೊಂಡಿರಬಹುದು.














