ಮೀನಾ ಮೆಹರ್ ಅವರ ಪಾಲಿನ ಇಡೀ ದಿನ ಚಟುವಟಿಕೆಯಿಂದ ಕೂಡಿರುತ್ತದೆ. ಅವರಿಗೆ ಒಂದಿಷ್ಟೂ ಪುರುಸೊತ್ತು ಸಿಗುವುದಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ತನ್ನ ಹಳ್ಳಿಯಾದ ಸತ್ಪತಿಯ ಸಗಟು ಮಾರುಕಟ್ಟೆಯಲ್ಲಿ ದೋಣಿ ಮಾಲೀಕರು ತಂದ ಮೀನುಗಳನ್ನು ಹರಾಜು ಕೂಗಲು ತಲುಪುತ್ತಾರೆ. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮರಳಿ ಬರುವ ಅವರು ಮೀನುಗಳಿಗೆ ಉಪ್ಪೂಡಿ ಒಣಗಿಸಲು ಥರ್ಮಾಕೋಲ್ ಬಾಕ್ಸ್‌ನಲ್ಲಿ ಹಾಕುತ್ತಾರೆ, ನಂತರ ಅದನ್ನು ತನ್ನ ಮನೆಯ ಹಿತ್ತಲಿನಲ್ಲಿ ಒಣ ಹಾಕುತ್ತಾರೆ, ಈ ಒಣಗಿದ ಮೀನುಗಳನ್ನು ಒಂದು ಅಥವಾ ಎರಡು ವಾರಗಳ ನಂತರ ಮಾರಾಟ ಮಾಡಲಾಗುತ್ತದೆ. ಸಂಜೆ, ಅವರು ತನ್ನ ಮನೆಯಿಂದ 12 ಕಿಮೀ ದೂರದ ಪಾಲ್ಘರ್‌ನಲ್ಲಿರುವ ಚಿಲ್ಲರೆ ಮಾರುಕಟ್ಟೆಗೆ ತನ್ನ ಮೀನುಗಳನ್ನು ಮಾರಾಟ ಮಾಡಲು ಬಸ್ ಅಥವಾ ಆಟೋರಿಕ್ಷಾ ಮೂಲಕ ಹೋಗುತ್ತಾರೆ. ಮೀನು ಉಳಿದಿದ್ದರೆ ಅದನ್ನು ಸತ್ಪತಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರುತ್ತಾರೆ.
ಆದರೆ ಈಗ ಹರಾಜಿಗೆ ಬರುವ ದೋಣಿಗಳೂ ಕಡಿಮೆಯಾಗಿವೆ. ಜೊತೆಗೆ ಒಣಗಿಸಲು ಸಿಗುವ ಮೀನುಗಳು ಕೂಡಾ ಕಡಿಮೆಯಾಗಿವೆ. “ಮೀನೇ ಇಲ್ಲ, ಏನನ್ನ ಮಾರೋದು?” ಎಂದು ಕೇಳುತ್ತಾರೆ ಕೋಲಿ ಸಮುದಾಯಕ್ಕೆ (ಒಬಿಸಿ ವರ್ಗ) ಸೇರಿದವರಾದ 58 ವರ್ಷದ ಮೀನಾ. ಇದರಿಂದಾಗಿ ಅವರು ತನ್ನ ವ್ಯವಹಾರದ ಶೈಲಿಯನ್ನು ಬದಲಾಯಿಸಿದ್ದಾರೆ. ಮಳೆಗಾಲದ ನಂತರ ದೋಣಿ ಮಾಲಿಕರಿಂದ ಅಥವಾ ಸತ್ಪತಿಯ ಸಗಟು ಮಾರುಕಟ್ಟೆಯಿಂದ ಅದನ್ನು ಮಾರಿ ಒಂಧಷ್ಟು ಸಂಪಾದಿಸಲು ಪ್ರಯತ್ನಿಸುತ್ತಾರೆ. (ಆದರೆ ಅವರು ತನ್ನ ಆದಾಯದ ಕುರಿತಾಗಿ ಯಾವುದೇ ವಿವರಗಳನ್ನು ನೀಡಲಿಲ್ಲ)
ಕುಟುಂಬದ ಆದಾಯದ ಕೊರತೆಯನ್ನು ಸರಿದೂಗಿಸಲು, ಅವರ ಪತಿ 63 ವರ್ಷದ ಉಲ್ಹಾಸ್ ಮೆಹರ್ ಕೂಡ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಅವರು ಸಾಂದರ್ಭಿಕವಾಗಿ ಒಎನ್ ಜಿಸಿ ಸಮೀಕ್ಷೆಯ ದೋಣಿಗಳಲ್ಲಿ ಕಾರ್ಮಿಕನಾಗಿ ಮತ್ತು ಮಾದರಿ ಸಂಗ್ರಾಹಕರಾಗಿ ಹೊರಗೆ ಹೋಗುವುದನ್ನು ಮುಂದುವರಿಸಿದ್ದಾರೆ, ಆದರೆ ವರ್ಷದ ಸುಮಾರು ಎರಡು ತಿಂಗಳುಗಳ ಕಾಲ ಮಾಡುತ್ತಿದ್ದ ಮುಂಬೈನ ದೊಡ್ಡ ಮೀನುಗಾರಿಕಾ ದೋಣಿಗಳಲ್ಲಿನ ತಮ್ಮ ಕೆಲಸವನ್ನು 4-6 ತಿಂಗಳುಗಳಿಗೆ ವಿಸ್ತರಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಅವರ ಕರಾವಳಿ ಗ್ರಾಮವಾದ ಸತ್ಪತಿ 'ಗೋಲ್ಡನ್ ಬೆಲ್ಟ್' ಎಂದು ಕರೆಯಲ್ಪಡುತ್ತದೆ, ಅದರ ಸಮುದ್ರತಳವು ಮೀನು ಸಂತಾನೋತ್ಪತ್ತಿ ಮತ್ತು ಪ್ರಸಿದ್ಧ ಬೊಂಬಿಲ್ (Bombay duck) ಗಾಗಿ ಗುರುತಿಸಲ್ಪಟ್ಟಿದೆ. ಆದರೆ ಬೊಂಬಿಲ್ ಸಿಗುವುದು ಕಡಿಮೆಯಾಗುತ್ತಿದೆ - ರಾಜ್ಯವು 1979ರಲ್ಲಿ ಸತ್ಪತಿ-ದಹನು ವಲಯದಲ್ಲಿ ದಾಖಲೆಯ 40,065 ಟನ್ ಗಳಿಂದ, 2018ರಲ್ಲಿ ಕೇವಲ 16,576 ಟನ್‌ಗಳನ್ನು ಉತ್ಪಾದಿಸಿತು.
ಕಾರಣಗಳು ಅನೇಕ - ಕೈಗಾರಿಕಾ ಮಾಲಿನ್ಯದ ಹೆಚ್ಚಳ, ಟ್ರಾಲರ್ ಗಳು ಮತ್ತು ಪರ್ಸೀನ್ ದೋಣಿಗಳಿಂದ ಅತಿಯಾದ ಮೀನುಗಾರಿಕೆ (ಇನ್ನೂ ಬೆಳವಣಿಗೆ ಹೊಂದಬೇಕಿರುವ ಸಣ್ಣ ಮೀನುಗಳು ಸೇರಿದಂತೆ ಆಳ ಸಮುದ್ರದಲ್ಲಿ ಸೆರೆಹಿಡಿಯಲು ಬಳಸುವ ದೊಡ್ಡ ಬಲೆಗಳು.)
ಮೀನಾ ಹೇಳುತ್ತಾರೆ, "ಈ ಟ್ರಾವ್ಲರ್ ದೋಣಿಗಳು ಸಮುದ್ರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಆದರೆ ಅವುಗಳನ್ನು ತಡೆಯಲು ಯಾರೂ ಇಲ್ಲ, ಮೊದಲು ಮೀನುಗಾರಿಕೆ ಒಂದು ಸಮುದಾಯದ ವ್ಯವಹಾರವಾಗಿತ್ತು, ಆದರೆ ಈಗ ಯಾರು ಬೇಕಿದ್ದರೂ ದೋಣಿ ಖರೀದಿಸಬಹುದು, ಈ ದೊಡ್ಡ ಹಡಗುಗಳು ಮೊಟ್ಟೆಗಳು ಮತ್ತು ಸಣ್ಣ ಮೀನುಗಳನ್ನು ಕೊಲ್ಲುತ್ತವೆ. ಇದರಿಂದಾಗಿಯೇ ನಮಗೆ ಅಲ್ಲಿ ಏನೂ ಉಳಿದಿಲ್ಲ."
ದೀರ್ಘಕಾಲದಿಂದ, ಮೀನಾ ಮತ್ತು ಇತರ ಹರಾಜುದಾರರನ್ನು ಮೀನು ಇದ್ದಾಗಲೆಲ್ಲಾ ಸ್ಥಳೀಯ ದೋಣಿ ಮಾಲೀಕರು ಕರೆಯುತ್ತಿದ್ದರು ಆದರೆ ಈಗ ದೋಣಿಗಳು ಪೂರ್ತಿಯಾಗಿ ಬೊಂಬಿಲ್ ಮತ್ತು ಸಿಲ್ವರ್ ಪಾಂಫ್ರೆಟ್ ಜೊತೆ ಸಣ್ಣ ಮುಶಿ, ವಾಮ್ ಇತ್ಯಾದಿ ಮೀನುಗಳೊಂದಿಗೆ ಹಿಂತಿರುಗುತ್ತವೆ ಎಂಬ ಭರವಸೆಯಿಲ್ಲ. ಮೀನಾ ಈಗ ಕೇವಲ ಎರಡು ದೋಣಿಗಳಿಗೆ ಮಾತ್ರವೇ ಹರಾಜು ಕೂಗುತ್ತಾರೆ - ಸುಮಾರು ಒಂದು ದಶಕದ ಹಿಂದೆ ಎಂಟರ ತನಕ ಕೂಗುತ್ತಿದ್ದರು. ಇಲ್ಲಿನ ಹಲವು ದೋಣಿ ಮಾಲೀಕರು ಮೀನುಗಾರಿಕೆ ನಿಲ್ಲಿಸಿದ್ದಾರೆ.
"1980ರ ದಶಕದಲ್ಲಿ, ಸತ್ಪತಿಯಲ್ಲಿ (ಬೊಂಬಿಲ್ ಮೀನು ಹಿಡಿಯಲು) 30-35 ದೋಣಿಗಳು ಮೀನುಗಾರಿಕೆ ನಡೆಸುತ್ತಿದ್ದವು, ಆದರೆ ಈ ಸಂಖ್ಯೆಯು 12ಕ್ಕೆ (2019ರ ಮಧ್ಯಭಾಗದಲ್ಲಿ) ಕಡಿಮೆಯಾಗಿದೆ" ಎಂದು ರಾಷ್ಟ್ರೀಯ ಮೀನು ಕಾರ್ಮಿಕರ ವೇದಿಕೆಯ ಅಧ್ಯಕ್ಷ ಮತ್ತು ಸತ್ಪತಿ ಮೀನುಗಾರರ ಸರ್ವೋದಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನರೇಂದ್ರ ಪಾಟೀಲ್ ದೃಢಪಡಿಸಿದ್ದಾರೆ.
ಇದು ಸತ್ಪತಿಯಲ್ಲಿ ವಾಸಿಸುವ ಮೀನುಗಾರ ಸಮುದಾಯದ ಕಥೆ, ಪ್ರತಿಯೊಬ್ಬರೂ ಈ ಆರ್ಥಿಕ ಹಿಂಜರಿತದಿಂದ ಪ್ರಭಾವಿತರಾಗಿದ್ದಾರೆ. ಗ್ರಾಮ ಪಂಚಾಯತ್ ಮತ್ತು ಸಹಕಾರ ಸಂಘಗಳ ಅಂದಾಜಿನ ಪ್ರಕಾರ, ಇಲ್ಲಿನ ಜನಸಂಖ್ಯೆಯು 35,000ಕ್ಕೆ ಏರಿದೆ (ಇಲ್ಲಿನ ಜನಸಂಖ್ಯೆಯು 2011ರ ಜನಗಣತಿಯ ಆಧಾರದ ಮೇಲೆ 17,032). ಮೀನುಗಾರಿಕಾ ಪ್ರಾಥಮಿಕ ಶಾಲೆಯನ್ನು (ನಿಯಮಿತ ಶೈಕ್ಷಣಿಕ ಪಠ್ಯಕ್ರಮದೊಂದಿಗೆ) ರಾಜ್ಯ ಸರ್ಕಾರವು 1950ರಲ್ಲಿ ಸ್ಥಾಪಿಸಿತು ಮತ್ತು ಇದನ್ನು 2002ರಲ್ಲಿ ಜಿಲ್ಲಾ ಪರಿಷತ್ತಿಗೆ ವರ್ಗಾಯಿಸಲಾಯಿತು. ಅದೂ ಇಂದು ಇಳಿಜಾರಿನಲ್ಲಿದೆ. ಅದೇ ರೀತಿ 1954ರಲ್ಲಿ ಸ್ಥಾಪಿತವಾದ ಸಮುದ್ರ ಮೀನುಗಾರಿಕಾ ತರಬೇತಿ ಕೇಂದ್ರಕ್ಕೆ ವಿಶೇಷ ಪಠ್ಯಕ್ರಮದ ಪ್ರಕಾರ ತರಬೇತಿ ನೀಡಲಾಗುತ್ತಿದ್ದು, ಈಗ ಬೀಗ ಹಾಕಲಾಗಿದೆ. ಈಗ ಕೇವಲ ಎರಡು ಮೀನು ಸಹಕಾರಿ ಸಂಘಗಳು ಮಾತ್ರ ಉಳಿದಿವೆ ಮತ್ತು ದೋಣಿ ಮಾಲೀಕರು ಮತ್ತು ಮೀನು ರಫ್ತುದಾರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಸೊಸೈಟಿಗಳು ಅವರಿಗೆ ಸಾಲ ನೀಡುವುದರ ಹೊರತಾಗಿ ಡೀಸೆಲ್ ಮತ್ತು ಇತರ ಸೌಲಭ್ಯಗಳಿಗೆ ಸಹಾಯಧನ ನೀಡುತ್ತವೆ.
ಆದರೆ ಸತ್ಪತಿಯ ಮೀನುಗಾರ ಮಹಿಳೆಯರು ಹೇಳುವಂತೆ ಸರಕಾರದಿಂದಾಗಲಿ, ಸಹಕಾರಿ ಸಂಘಗಳಿಂದಾಗಲಿ ಅವರಿಗೆ ಯಾವುದೇ ಸಹಾಯ ಸಿಗುತ್ತಿಲ್ಲ; ಇದು ಅವರಿಗೆ ಕನಿಷ್ಟ ದರದಲ್ಲಿ ಐಸ್ ಮತ್ತು ಕೋಲ್ಡ್ ಸ್ಟೋರೇಜ್ ಜಾಗವನ್ನು ಮಾತ್ರ ಒದಗಿಸುತ್ತದೆ.
"ಎಲ್ಲ ಮೀನುಗಾರ ಮಹಿಳೆಯರಿಗೆ ಅವರ ವ್ಯಾಪಾರಕ್ಕೆ ಸರ್ಕಾರ ಕನಿಷ್ಠ ಹತ್ತು ಸಾವಿರ ರೂಪಾಯಿ ನೀಡಬೇಕು, ಮಾರಾಟ ಮಾಡಲು ಮೀನು ಖರೀದಿಸಲು ನಮ್ಮಲ್ಲಿ ಹಣವಿಲ್ಲ" ಎನ್ನುತ್ತಾರೆ 50 ವರ್ಷದ ಅನಾಮಿಕಾ ಪಾಟೀಲ್. ಈ ಹಿಂದೆ ಇಲ್ಲಿಯ ಮಹಿಳೆಯರು ತಮ್ಮ ಕುಟುಂಬದವರು ಹಿಡಿದ ಮೀನುಗಳನ್ನು ಮಾರಾಟ ಮಾಡುತ್ತಿದ್ದು, ಈಗ ಅನೇಕರು ವ್ಯಾಪಾರಿಗಳು ಹಿಡಿದ ಮೀನುಗಳನ್ನು ಖರೀದಿಸಬೇಕಾಗಿದೆ. ಮತ್ತು ಅದಕ್ಕಾಗಿ ಹಣ ಅಥವಾ ಬಂಡವಾಳದ ಅಗತ್ಯವಿದೆ.
ಕೆಲವರು ಖಾಸಗಿ ಲೇವಾದೇವಿದಾರರಿಂದ 20ರಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ. ಅವರಿಗೆ ಸಾಂಸ್ಥಿಕ ಸಾಲವನ್ನು ಪಡೆಯಲು ಯಾವುದೇ ಮಾರ್ಗಗಳಿಲ್ಲ. ಅದಕ್ಕೆ ಕಾರಣವನ್ನು ವಿವರಿಸುವ ಅನಾಮಿಕಾ, ‘‘ಅದಕ್ಕಾಗಿ ನಾವು ನಮ್ಮ ಒಡವೆ, ಮನೆ, ಅಥವಾ ಭೂಮಿಯನ್ನು ಅಡಮಾನ ಇಡಬೇಕು. ಅನಾಮಿಕಾ ಬೋಟ್ ಮಾಲೀಕರೊಬ್ಬರ ಬಳಿ 50 ಸಾವಿರ ಸಾಲ ಪಡೆದಿದ್ದಾರೆ."
ಇತರ ಮೀನುಗಾರ ಮಹಿಳೆಯರು ಈ ಉದ್ಯೋಗವನ್ನು ಸಂಪೂರ್ಣವಾಗಿ ತೊರೆದಿದ್ದಾರೆ ಅಥವಾ ಅವರ ದಿನದ ಅಲ್ಪ ಭಾಗವನ್ನು ಈ ಚಟುವಟಿಕೆಗಳಲ್ಲಿ ಕಳೆಯುತ್ತಾರೆ. ಸತ್ಪತಿ ಮೀನುಗಾರ ಸರ್ವೋದಯ ಸಹಕಾರಿ ಸಮಿತಿಯ ಅಧ್ಯಕ್ಷ ಕೇತನ್ ಪಾಟೀಲ್ ಹೇಳುತ್ತಾರೆ, “ಮೀನುಗಾರಿಕೆ ಕ್ಷೀಣಿಸುತ್ತಿರುವ ಕಾರಣ, ಬೊಂಬಿಲ್ ಒಣಗಿಸುವ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಬೇರೆ ಪ್ರದೇಶಗಳಲ್ಲಿ ಕೆಲಸ ಹುಡುಕಬೇಕಾಗಿದೆ, ಅವರು ಈಗ ಉದ್ಯೋಗಕ್ಕಾಗಿ ಪಾಲ್ಘರ್‌ಗೆ ಹೋಗುತ್ತಾರೆ. ಅಲ್ಲಿ ಎಮ್‌ಐಡಿಸಿ [ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್] ನಲ್ಲಿ ಕೆಲಸ ಹುಡುಕುತ್ತಾರೆ."
ಸ್ಮಿತಾ ತಾರೆ ಕಳೆದ 15 ವರ್ಷಗಳಿಂದ ಪಾಲ್ಘರ್‌ನ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದಾರೆ. ಅವರು ವಿವರಿಸುತ್ತಾರೆ, "ಸತ್ಪತಿ ಬೊಂಬಿಲ್ ಮೀನುಗಳಿಂದ ತುಂಬಿತ್ತು, ನಮ್ಮ ಮನೆಯೆಲ್ಲಾ ಸರಕುಗಳಿಂದ ತುಂಬಿರುವ ಕಾರಣ ನಾವು ಮನೆಗಳ ಹೊರಗೆ ಮಲಗುತ್ತಿದ್ದೆವು. ಈಗ ಮೀನುಗಾರಿಕೆ ಕಡಿಮೆಯಾಗುವುದರಿಂದ [ಸಾಕಷ್ಟು ಹಣ] ಗಳಿಸುವುದು ತುಂಬಾ ಕಷ್ಟಕರವಾಗಿದೆ." ಈಗ ಬೇರೆ ಕೆಲಸಗಳನ್ನು ಮಾಡಲು ವಾರದಲ್ಲಿ 6 ದಿನ ಹಾಗೂ ದಿನಕ್ಕೆ 10 ಗಂಟೆ ದುಡಿಯುವ ಅವರು ತಿಂಗಳಿಗೆ 8,000 ರೂ. ಸಂಪಾದಿಸುತ್ತಾರೆ. ಅವರ ಪತಿ ಕೂಡ ವ್ಯವಹಾರವನ್ನು ತೊರೆದಿದ್ದಾರೆ, ಆದರೆ ಈಗ ಪಾಲ್ಘರ್ ಮತ್ತು ಇತರೆಡೆಗಳಲ್ಲಿ ಮದುವೆಗಳು ಮತ್ತು ಇತರ ಸಮಾರಂಭಗಳಲ್ಲಿ ಬ್ಯಾಂಡ್‌ನಲ್ಲಿ ಡೋಲು ಬಾರಿಸುತ್ತಾರೆ.
ಅಲ್ಲಿಂದ ಪಾಲ್ಘರ್ 15 ಕಿ.ಮೀ ದೂರದಲ್ಲಿದೆ. ಇದೀಗ ಬೆಳಗ್ಗೆಯೇ ಮಹಿಳೆಯರು ಕೆಲಸಕ್ಕೆ ತೆರಳಲು ಸಮೀಪದ ಬಸ್ ನಿಲ್ದಾಣದಲ್ಲಿ ನಿಂತಿದ್ದಾರೆ.
ಮೀನಾ ಅವರ ಸೊಸೆ ಶುಭಾಂಗಿ (32 ವರ್ಷ) ಕಳೆದ ವರ್ಷ ಫೆಬ್ರವರಿಯಿಂದ ಪಾಲ್ಘರ್‌ನ ಉಪಕರಣಗಳ ಘಟಕವೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಅವರು ಕೂಲರ್‌ಗಳು, ಮಿಕ್ಸರ್‌ಗಳು ಮತ್ತು ಇತರ ವಸ್ತುಗಳನ್ನು ಪ್ಯಾಕೇಜಿಂಗ್ ಮಾಡುವ ಕೆಲಸ ಮಾಡುತ್ತಾರೆ. ದಿನಕ್ಕೆ 10 ಗಂಟೆ ಪಾಳಿಗೆ 240 ರೂ., 12 ಗಂಟೆಗೆ 320 ರೂ. ವಾರದಲ್ಲಿ ನೀಡಲಾಗುತ್ತದೆ. ಶುಕ್ರವಾರ ಒಂದು ದಿನ ರಜೆ ಸಿಗುತ್ತದೆ. (ಶುಭಾಂಗಿಯವರ ಪತಿ ಪ್ರಜ್ಯೋತ್, 34, ಮೀನಾ ರಒಣ ಮೀನು ವ್ಯವಹಾರದಲ್ಲಿ ಸಹಾಯ ಮಾಡುತ್ತಾರೆ ಮತ್ತು ಮೀನುಗಾರಿಕೆ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಾರೆ. ಅವರು ಖಾಯಂ ಉದ್ಯೋಗವನ್ನು ಹೊಂದಿದ್ದರೂ ಸಹ, ಸಹಕಾರಿ ಸಂಘಗಳು ಸಹ ತೊಂದರೆಗಳನ್ನು ಎದುರಿಸುತ್ತಿರುವ ಕಾರಣ ಈ ಕೆಲಸವನ್ನು ಕಳೆದುಕೊಳ್ಳುವ ಭಯವಿದೆ.)
ಮೀನಾ ಈಗ ಕನ್ನಡಕವನ್ನು ಧರಿಸುತ್ತಾರೆ ಮತ್ತು ಬಿಳಿ ಮಣಿಗಳು, ಚಿನ್ನದ ಲೋಹದ ತಂತಿಗಳು, ದೊಡ್ಡ ಜರಡಿ ಮತ್ತು ನೇಲ್ ಕಟರ್‌ನೊಂದಿಗೆ ದಿನಕ್ಕೆ 2 ರಿಂದ 3 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಮಣಿಯನ್ನು ತಂತಿಗಳಲ್ಲಿ ಹಾಕಿ ಕೊಕ್ಕೆ ಹಾಕುತ್ತಾಳೆ. ಗ್ರಾಮದ ಮಹಿಳೆಯೊಬ್ಬರು ಈ ಕೆಲಸ ನೀಡಿದ್ದು, ಅದರಲ್ಲಿ 250 ಗ್ರಾಂ ರೆಡಿಮೇಡ್ ಮಾಲೆಗೆ 200ರಿಂದ 250 ರೂ. ಕೊಡುತ್ತಾರೆ. ಅವುಗಳನ್ನು ತಯಾರಿಸಲು ಒಂದು ವಾರದವರೆಗೆ ತೆಗೆದುಕೊಳ್ಳುತ್ತದೆ. ಈ ಹಣದಲ್ಲಿಯೇ ನೂರು ರೂಪಾಯಿಯ ಕಚ್ಚಾವಸ್ತು ಕೂಡಾ ಖರೀದಿಸುತ್ತಾರೆ.
43 ವರ್ಷದ ಭಾರತಿ ಮೆಹರ್ 2019ರಲ್ಲಿ ಕಾಸ್ಮೆಟಿಕ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಕುಟುಂಬವು ಮೀನುಗಾರಿಕಾ ದೋಣಿಯನ್ನು ಹೊಂದಿದೆ. ಮೀನು ವ್ಯಾಪಾರ ಇಳಿಮುಖವಾದ ಕಾರಣ ಕಾಸ್ಮೆಟಿಕ್ ಕಂಪನಿಯಲ್ಲಿ ಕೆಲಸ ಆರಂಭಿಸಿದರು. ಅದಕ್ಕೂ ಮೊದಲು, ಭಾರತಿ ಮತ್ತು ಅವರ ಅತ್ತೆ, ಮೀನಾ ಅವರಂತೆಯೇ, ಮೀನು ಹರಾಜು ಮತ್ತು ಮಾರಾಟವನ್ನು ಮಾಡುವುದರ ಜೊತೆಗೆ ಕೃತಕ ಆಭರಣಗಳನ್ನು ತಯಾರಿಸುತ್ತಿದ್ದರು.
ಸತ್ಪತಿಯ ಅನೇಕ ಜನರು ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ, ಅವರ ಮಾತಿನಲ್ಲಿ ಹಿಂದಿನ ಕಾಲದ ನೆನಪುಗಳು ಇನ್ನೂ ಉಳಿದಿವೆ. ಕೆಲವು ವರ್ಷಗಳ ನಂತರ ನಾವು ನಮ್ಮ ಮಕ್ಕಳಿಗೆ ಪಾಂಫ್ರೆಟ್ ಅಥವಾ ಬೊಂಬಿಲ್ ಮೀನುಗಳ ಬಗ್ಗೆ ಚಿತ್ರಗಳ ಮೂಲಕ ಹೇಳಬೇಕಾಗುತ್ತದೆ, ಏಕೆಂದರೆ ಅಲ್ಲಿಯವರೆಗೆ ಈ ಮೀನುಗಳು ಇರುವುದಿಲ್ಲ ಎಂದು ಚಂದ್ರಕಾಂತ್ ನಾಯಕ್ ಹೇಳುತ್ತಾರೆ. ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್‌ನ ನಿವೃತ್ತ ಚಾಲಕರಾದ ಚಂದ್ರಕಾಂತ್ ಈಗ ತನ್ನ ಸೋದರಳಿಯನ ಚಿಕ್ಕ ದೋಣಿಯಲ್ಲಿ ಮೀನುಗಾರಿಕೆಗೆ ಹೋಗುತ್ತಾರೆ.
ಆದರೂ, ಈ ಹಳೆಯ ನೆನಪುಗಳು ವಾಸ್ತವಕ್ಕೆ ವಿರುದ್ಧವಾಗಿ ಅವರನ್ನು ಮೀನುಗಾರಿಕೆ ಮಾಡಲು ಸಾಲುವುದಿಲ್ಲವೆನ್ನುವುದು ಅವರೆಲ್ಲರಿಗೂ ಖಚಿತವಾಗಿ ತಿಳಿದಿದೆ. "ನಾನು ನನ್ನ ಮಕ್ಕಳು ದೋಣಿ ಹತ್ತಲು ಬಿಡುವುದಿಲ್ಲ. ಸಣ್ಣ [ಮೀನುಗಾರಿಕೆಗೆ ಸಂಬಂಧಿಸಿದ] ಕೆಲಸಗಳು ಪರವಾಗಿಲ್ಲ, ಆದರೆ ನಾನು ಅವರನ್ನು ದೋಣಿ ಕೆಲಸಕ್ಕೆ ಕರೆದುಕೊಳ‍್ಳುವುದಿಲ್ಲ." ಎಂದು 51 ವರ್ಷದ ಜಿತೇಂದ್ರ ತಮೋರ್ ಹೇಳುತ್ತಾರೆ, ಅವರು ತಮ್ಮ ತಂದೆಯಿಂದ ದೋಣಿಯನ್ನು ಪರಂಪರೆಯಾಗಿ ಪಡೆದಿದ್ದಾರೆ. ಕುಟುಂಬವು ಸತ್ಪತಿಯಲ್ಲಿ ಮೀನುಗಾರಿಕೆ ಬಲೆಯ ಅಂಗಡಿಯನ್ನು ಸಹ ಹೊಂದಿದೆ, ಇದು ಅವರ ಬದುಕಿನ ದೋಣಿ ತೇಲಲು ಸಹಾಯ ಮಾಡುತ್ತದೆ. "ಬಲೆಯ ವ್ಯವಹಾರದಿಂದಾಗಿ ನಾವು ನಮ್ಮ ಪುತ್ರರಿಗೆ [20 ಮತ್ತು 17 ವರ್ಷ ವಯಸ್ಸಿನ] ಶಿಕ್ಷಣ ನೀಡಲು ಸಾಧ್ಯವಾಯಿತು" ಎಂದು ಅವರ ಪತ್ನಿ 49 ವರ್ಷ ವಯಸ್ಸಿನ ಜೂಹಿ ತಮೋರ್ ಹೇಳುತ್ತಾರೆ. "ಆದರೆ ನಮ್ಮ ಬದುಕು ನಡೆಯುತ್ತಿರುವಂತೆ ಅವರದೂ ಆಗುವುದು ಬೇಡ, ಏನೇ ಆದರೂ ಅವರು ಮೀನುಗಾರಿಕೆಯ ವ್ಯವಹಾರಕ್ಕೆ ಇಳಿಯುವುದನ್ನು ನಾವು ಬಯಸುವುದಿಲ್ಲ."
ಈ ವರದಿಗಾಗಿ ಕೆಲವು ಸಂದರ್ಶನಗಳನ್ನು 2019ರಲ್ಲಿ ಮಾಡಲಾಯಿತು.
ಕವರ್ ಫೋಟೋ: ಹೋಳಿ ಹಬ್ಬದ ಸಮಯದಲ್ಲಿ, ಮಾರ್ಚ್ 9, 2020ರಂದು, ಸತ್ಪತಿಯಲ್ಲಿ ಮಹಿಳೆಯರು ತಮ್ಮ ಪುರುಷರಿಗೆ ಸಮುದ್ರದಲ್ಲಿದ ಸಮೃದ್ಧ ಮೀನು ಸಿಗುವಂತೆ ಮತ್ತು ಸುರಕ್ಷತೆಗಾಗಿ ಸಮುದ್ರ ದೇವರನ್ನು ಪ್ರಾರ್ಥಿಸುತ್ತಿರುವುದು. ಹಬ್ಬದ ಅಂಗವಾಗಿ ದೋಣಿಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು