ಪ್ರತಿದಿನ ಬೆಳಿಗ್ಗೆ ಶೇಖ್ ಕುಟುಂಬದ ಎಲ್ಲ ಸದಸ್ಯರೂ ಕೆಲಸಕ್ಕೆ ಹೊರಡುತ್ತಾರೆ. ಫಾತಿಮಾ ಬೆಳಗ್ಗೆ 9 ಗಂಟೆಗೆ ಮಧ್ಯ ಶ್ರೀನಗರದ ಬಟಮಾಲೂ ಪ್ರದೇಶದ ಕೊಳೆಗೇರಿ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಹೊರಟು, ನಗರದಲ್ಲಿ ಬಳಸಿ ಬಿಸಾಡಲಾಗಿರುವ ಬಾಟಲಿಗಳು ಮತ್ತು ರಟ್ಟಿನ ವಸ್ತುಗಳನ್ನು ಸುಮಾರು ಸಂಜೆ 5 ಗಂಟೆಯ ತನಕ ಸಂಗ್ರಹಿಸುತ್ತಾರೆ. ಅವರ ಪತಿ ಮೊಹಮ್ಮದ್ ಕುರ್ಬಾನ್ ಶೇಖ್ ಕೆಲವೊಮ್ಮೆ ಇನ್ನಷ್ಟು ಮುಂದಕ್ಕೂ ಹೋಗುತ್ತಾರೆ, ಕಸವನ್ನು ಎತ್ತಿಕೊಂಡು ನಗರದ ಗಡಿಯನ್ನು ದಾಟಿ 30 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹೋಗುತ್ತಾರೆ. ಫಾತಿಮಾರಂತೆಯೇ, ಅವರು ಕೂಡಾ ಮೂರು ಚಕ್ರದ ಗಾಡಿಯನ್ನು ಬಳಸುತ್ತಾರೆ – ಅದರ ಹಿಂಭಾಗದಲ್ಲಿ ಟೆಂಪೋಗಳಲ್ಲಿ ಇರುವಂತೆ ತಾತ್ಕಾಲಿಕ ಕಂಟೇನರ್‌ನಂತೆ, ಅವನ ಮಕ್ಕಳು ಮತ್ತು ಹೆಣ್ಣುಮಕ್ಕಳು 17ರಿಂದ 21 ವರ್ಷ ವಯಸ್ಸಿನವರು ಶ್ರೀನಗರದಲ್ಲಿ ಚಿಂದಿ ಆಯುವವರಾಗಿ ಕೆಲಸ ಮಾಡುತ್ತಾರೆ.
ಶ್ರೀನಗರದ ಮನೆಗಳು, ಹೋಟೆಲ್‌ಗಳು, ನಿರ್ಮಾಣ ಸ್ಥಳಗಳು, ತರಕಾರಿ ಮಾರುಕಟ್ಟೆಗಳು ಮತ್ತು ಇತರ ಅನೇಕ ಸ್ಥಳಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಒಟ್ಟು 450-500 ಟನ್‌ಗಳಷ್ಟು ತ್ಯಾಜ್ಯದ ಒಂದು ಸಣ್ಣ ಭಾಗವನ್ನು ಐದು ಜನರು ಒಟ್ಟಾಗಿ ಸ್ವಚ್ಛಗೊಳಿಸುತ್ತಾರೆ. ಈ ಅಂಕಿ ಅಂಶವನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ನೀಡಿದೆ.
ಶೇಖ್ ಕುಟುಂಬದ ಸದಸ್ಯರು ಹಾಗೂ ಇತರೆ ಮರುಬಳಕೆಯಾಗಬಲ್ಲ ವಸ್ತುಗಳನ್ನು ಆಯುವವರನ್ನು ಪುರಸಭೆಯ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆಗೆ ಜೋಡಿಸುವ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪೌರಾಯುಕ್ತ ಅತ್ತರ್ ಅಮೀರ್ ಖಾನ್ ಪ್ರಕಾರ, ನಗರದ ಘನತ್ಯಾಜ್ಯವನ್ನು ಆಯ್ದು ಸಂಗ್ರಹಿಸಲು ಮತ್ತು ಒಂದೇ ಸ್ಥಳದಲ್ಲಿ ಅವುಗಳನ್ನು ದಾಸ್ತಾನು ಮಾಡಲು ಸುಮಾರು 4,000 ಜನರನ್ನು ಖಾಯಂ ಅಥವಾ ಗುತ್ತಿಗೆಯ ಆಧಾರದ ಮೇಲೆ ನೈರ್ಮಲ್ಯ ಕಾರ್ಮಿಕರಾಗಿ ನೇಮಿಸಿಕೊಳ್ಳಲಾಗಿದೆ. ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಮುಖ್ಯ ನೈರ್ಮಲ್ಯ ಅಧಿಕಾರಿ ನಜೀರ್ ಅಹ್ಮದ್ ಹೇಳುತ್ತಾರೆ, “ಆದರೂ ಕಸದಲ್ಲಿನ ಮರುಬಳಕೆ ವಸ್ತುಗಳನ್ನು ಆಯುವ ಕೆಲಸ ಮಾಡುವ ಜನರೇ ನಮ್ಮ ಬೆಸ್ಟ್ ಫ್ರೆಂಡ್ಸ್. ಅವರು ನೂರು ವರ್ಷಗಳಾದರೂ ಕೊಳೆಯದ ಪ್ಲಾಸ್ಟಿಕ್ ಕಸವನ್ನು ಕೊಂಡುಹೋಗುತ್ತಾರೆ.”
ಇವರು 'ಸ್ವಯಂ ಉದ್ಯೋಗಿಗಳು' ಮಾತ್ರವಲ್ಲ, ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಕೆಲಸ ಮಾಡುತ್ತಾರೆ - ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಈಗ ಇನ್ನಷ್ಟು ಅಸುರಕ್ಷಿತರಾಗಿದ್ದಾರೆ. "ನಾನು (ಜನವರಿ 2021ರಲ್ಲಿ ಲಾಕ್ ಡೌನ್ ಸರಳಗೊಂಡ ನಂತರ) ದೇವರ ಮೇಲೆ ನಂಬಿಕೆ ಇರಿಸಿ ಕೆಲಸವನ್ನು ಪುನರಾರಂಭಿಸಿದೆ. ನಾನು ನನ್ನ ಕುಟುಂಬಕ್ಕೆ ಆಹಾರ ಸಂಪಾದಿಸುವ ಶುದ್ಧ ಉದ್ದೇಶದೊಂದಿಗೆ ಕೆಲಸ ಮಾಡುತ್ತೇನೆ ಮತ್ತು ನಾನು ಸೋಂಕಿಗೆ ಒಳಗಾಗುವುದಿಲ್ಲ ಎಂದು ನಂಬಿದ್ದೇನೆ..." ಎಂದು 40 ವರ್ಷದ ಫಾತಿಮಾ ಹೇಳುತ್ತಾರೆ.






















