"ತುರ್ತು ಸಂದರ್ಭಗಳಲ್ಲಿ ನಾನು ಇಲ್ಲಿಯೇ ಎಲ್ಲವನ್ನೂ ಮುಗಿಸಿಕೊಳ್ಳುತ್ತೇನೆ" ಎಂದು ದಡ್ಡವಾಗಿ ಬೆಳೆದಿರುವ ಮುಳ್ಳುಗಂಟಿ ಚಹಾ ಗಿಡಗಳ ನಡುವೆ ಇರುವ ಜಾಗವನ್ನು ತೋರಿಸುತ್ತಾ ದಿಯಾ ಟೊಪ್ಪೊ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. “ಇವತ್ತು ಬೆಳಿಗ್ಗೆ ಜೇನುನೊಣವೊಂದು ನನಗೆ ಕಚ್ಚಿತು; ನಿಮಗೆ ಇಲ್ಲಿ ಹಾವುಗಳೂ ಕಚ್ಚಬಹುದು,” ಎಂದು ಅವರು ಆತಂಕದಿಂದ ಹೇಳುತ್ತಾರೆ.

ಕೂಲಿ ಕಾರ್ಮಿಕರ ದಿನನಿತ್ಯದ ಕೆಲಸದ ಪರಿಸ್ಥಿತಿ ಕಠಿಣವಾಗಿ ಪರಿಣಮಿಸಿದೆ, ಆದರಲ್ಲೂ ನೀವು ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯಾಗಿದ್ದರೆ ಸಂಡಾಸಿಗೆ ಹೋಗಲು ಬ್ರೇಕ್‌ ತೆಗೆದುಕೊಳ್ಳುವುದೂ ಅಪಾಯಗಳನ್ನು ಮೈಮೇಲೆ ಎಳೆದುಕೊಂಡಂತೆ.

“ಬಾಲ್ಯದಲ್ಲಿ ಅನೇಕ ಬಾರಿ ನಾನು ಸಂಡಾಸಿಗೆ ಹೋಗಲು ನಾನು ಕ್ವಾರ್ಟರ್ಸ್‌ಗೆ ಸೈಕಲ್‌ ನಲ್ಲಿ ಹೋಗಲು ಯೋಚಿಸುತ್ತಿದ್ದೆ,” ಎಂದು 53 ವರ್ಷ ಪ್ರಾಯದ ಆ ಕಾರ್ಮಿಕೆ ಹೇಳುತ್ತಾರೆ. ಆದರೆ ಅದಕ್ಕೆ ಹಿಡಿಯುವ ಸಮಯ ಚಹಾ ಎಲೆಗಳನ್ನು ಕೀಳುವ ಕೆಲಸದ ಸಮಯವನ್ನು ಕಡಿಮೆ ಮಾಡುತ್ತದೆ: “ನಾನು [ಎಲೆಗಳನ್ನು ಕೀಳುವ] ದೈನಂದಿನ ಟಾರ್ಗೆಟನ್ನು ಪೂರ್ಣಗೊಳಿಸಬೇಕು. ನನಗೆ ರಿಸ್ಕ್‌ ತೆಗೆದುಕೊಳ್ಳಲು (ವೇತನ ಕಡಿತ) ಸಾಧ್ಯವಿಲ್ಲ,” ಎಂದು ಮುಂದುವರಿಸುತ್ತಾರೆ.

ಅವರ ಸಹೋದ್ಯೋಗಿ ಸುನಿತಾ ಕಿಸ್ಕು (ಹೆಸರು ಬದಲಾಯಿಸಲಾಗಿದೆ) ಅವರು “ನಮ್ಮಲ್ಲಿ ಎರಡು ಆಯ್ಕೆಗಳಿವೆ, ಒಂದೋ ಇಡೀ ದಿನ [ಮೂತ್ರ ವಿಸರ್ಜನೆಯನ್ನು] ನಿಯಂತ್ರಿಸಿಕೊಳ್ಳುವುದು ಇಲ್ಲವೇ ಇಲ್ಲೇ ಎಲ್ಲಾದರೂ ಜಾಗದಲ್ಲಿ ಮೂತ್ರ ಮಾಡುವುದು. ಆದರೆ ಇಲ್ಲಿರುವ ಕೀಟಗಳು ಮತ್ತು ಜಿಗಣೆಗಳನ್ನು ನೋಡಿದರೆ ತುಂಬಾ ಭಯವಾಗುತ್ತದೆ,” ಎನ್ನುತ್ತಾರೆ.

ಕೆಲವು ಟೀ ಕಂಪನಿಗಳು ಛತ್ರಿ, ಚಪ್ಪಲ್ (ಸ್ಯಾಂಡಲ್), ಟ್ರಿಪೋಲ್ (ಟಾರ್ಪೌಲಿನ್) ಮತ್ತು ಜುರಿ (ಬ್ಯಾಗ್) ಗಳನ್ನು ಕೊಡುತ್ತವೆ. “ಟ್ರಿಪೋಲ್ ಗಿಡಗಳಲ್ಲಿರುವ ನೀರಿನಿಂದ ನಮ್ಮ ಬಟ್ಟೆಗಳು ಒದ್ದೆಯಾಗದಂತೆ ರಕ್ಷಿಸುತ್ತದೆ. ಬೂಟುಗಳಂತಹ ಇತರ ವಸ್ತುಗಳನ್ನು ನಾವೇ ಖರೀದಿಸಬೇಕು” ಎನ್ನುತ್ತಾರೆ ದಿಯಾ.

"ನಾವು ಸತತವಾಗಿ 10 ಗಂಟೆಗಳ ಕಾಲ ಕೆಲಸ ಮಾಡಬೇಕು" ಎಂದು 26 ವರ್ಷದ ಸುನೀತಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಅವರು ಶೌಚಾಲಯಕ್ಕೆ ಹೋಗಲು ಕೆಲಸ ಮಾಡುವ ತೋಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಹೋದರೆ ಕೆಲವು ಗಂಟೆಗಳ ಸಂಬಳವನ್ನು ಕಳೆದುಕೊಳ್ಳುತ್ತಾರೆ. ಎರಡು ಮಕ್ಕಳ ತಾಯಿಯಾಗಿರುವ ಇವರಿಗೆ ಇದು ಸಣ್ಣ ವಿಷಯವಲ್ಲ.

PHOTO • Adhyeta Mishra
PHOTO • Adhyeta Mishra

ಎಡ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿರುವ ಎಸ್ಟೇಟ್. ಬಲ: ಕಾರ್ಮಿಕರು ಕೊಡೆಯನ್ನು ಬಳಸಿ ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತಿರುವುದು

ಪಶ್ಚಿಮ ಬಂಗಾಳದ ಡೋರ್ಸ್ ಪ್ರದೇಶದ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸಾವಿರಾರು ದಿನಗೂಲಿ ಕಾರ್ಮಿಕರಲ್ಲಿ ದಿಯಾ ಮತ್ತು ಸುನೀತಾ ಕೂಡ ಸೇರಿದ್ದಾರೆ. ಈ ಕಾರ್ಮಿಕರಲ್ಲಿ ಹೆಚ್ಚಿನವರು ಮಹಿಳೆಯರು. ಹೆಸರು ಹೇಳಲು ಬಯಸದ ಅನೇಕ ಮಹಿಳಾ ಕಾರ್ಮಿಕರು ಕೆಲಸದ ಸಮಯದಲ್ಲಿ ಶೌಚಾಲಯ ಬಳಸಲು ಸಾಧ್ಯವಿಲ್ಲದ ತಮ್ಮ ಪರಿಸ್ಥಿತಿಯ ಬಗ್ಗೆ ಪರಿಗೆ ತಿಳಿಸಿದರು.

ಅಷ್ಟೇ ಅಲ್ಲದೆ, ಮೂತ್ರ ಮಾಡುವಾಗ ಉರಿ ನೋವು ಉಂಟಾಗಿ ತಡೆದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಅವರು ಹಿರಿಯ ಎ.ಎನ್.ಎಂ (ಸಹಾಯಕ ನರ್ಸ್ ಹಾಗೂ ಸೂಲಗಿತ್ತಿ) ಚಂಪಾ ಡೇ (ಹೆಸರು ಬದಲಾಯಿಸಲಾಗಿದೆ) ಅವರ ಹತ್ತಿರ ಹೋಗುತ್ತಾರೆ. ಉರಿ ನೋವು ಮತ್ತು ಅವರ ಮೂತ್ರದಲ್ಲಿ ರಕ್ತ ಬರುವುದು ಮೂತ್ರದ ಸೋಂಕಿನ (UTI) ಲಕ್ಷಣ ಎಂದು ಡೇ ಹೇಳುತ್ತಾರೆ. "ಸರಿಯಾಗಿ ನೀರು ಕುಡಿಯದೆ ಹೀಗಾಗುತ್ತದೆ" ಎಂದು 34 ವರ್ಷಗಳಿಂದ ಚಹಾ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿರುವ ಈಆರೋಗ್ಯ ಕಾರ್ಯಕರ್ತೆ ಹೇಳುತ್ತಾರೆ.

ಚಹಾ ಕಂಪನಿಗಳು ತೋಟಗಳ ಸುತ್ತ ಕೆಲವು ಸ್ಥಳಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳ ವ್ಯವಸ್ಥೆ ಮಾಡಿವೆ. "ಅವರಲ್ಲಿ ಹೆಚ್ಚಿನವರು [ಮಹಿಳಾ ಕಾರ್ಮಿಕರು] ಬಯಲಲ್ಲಿ ಮೂತ್ರ ವಿಸರ್ಜನೆಯನ್ನು ಮಾಡುವುದನ್ನು ತಪ್ಪಿಸಲು ನೀರು ಕುಡಿಯುವುದನ್ನು ಕಡಿಮೆ ಮಾಡಲು ಅವುಗಳನ್ನು ಬಳಸುವುದಿಲ್ಲ" ಎಂದು ಚಂಪಾ ಹೇಳುತ್ತಾರೆ.

ಶೌಚಾಲಯಗಳು ದೂರದಲ್ಲಿದ್ದರೆ ಅವುಗಳನ್ನು ಬಳಸಲು ಕಾರ್ಮಿಕರು ತೆಗೆದುಕೊಳ್ಳುವ ಸಮಯ ಅವರು ಟೀ ಎಲೆಗಳನ್ನು ಕೀಳಲು ತೆಗೆದುಕೊಳ್ಳುವ ಕೆಲಸದ ಸಮಯವನ್ನು ಕಡಿಮೆ ಮಾಡುವುದರಿಂದ ಅವರ ವೇತನದಲ್ಲಿ ಕಡಿತ ಮಾಡಲಾಗುತ್ತದೆ. 232 ರುಪಾಯಿ ದಿನಗೂಲಿಯನ್ನು ಪಡೆಯಲು ಒಬ್ಬ ಕೆಲಸಗಾರ 20 ಕಿಲೋ ಎಲೆಗಳನ್ನು ಕೀಳಬೇಕು. ಅವರು ಬಿಡುವಿಲ್ಲದೆ ಹತ್ತು ಗಂಟೆಗಳ ಕಾಲ ದಿನದಲ್ಲಿ ಕೆಲಸ ಮಾಡಿದರೆ ಗಂಟೆಗೆ ಸರಿಸುಮಾರು 2 ಕಿಲೋ ಎಲೆಗಳಂತೆ 20 ಕಿಲೋ ಎಲೆಗಳನ್ನು ಸಂಗ್ರಹಿಸಬಹುದು.

PHOTO • Adhyeta Mishra

ಶೌಚಾಲಯಕ್ಕೆ ಹೋಗುವುದರಿಂದ ಕೆಲಸದ ಸಮಯ ಕಡಿಮೆಯಾಗಿ ವೇತನದಲ್ಲಿ ಕಡಿತ ಉಂಟಾಗುತ್ತದೆ

"ಉರಿ ಬಿಸಿಲು ಇರುವುದರಿಂದ ಎರಡು ಗಂಟೆಗಳಲ್ಲಿ 2 ಕಿಲೋಗ್ರಾಂಗಳಷ್ಟು ಪತ್ತಾಗಳನ್ನಷ್ಟೇ (ಎಲೆಗಳು) ಕೀಳಲು ನನಗೆ ಸಾಧ್ಯವಾಗುತ್ತದೆ" ಎಂದು ಪುಷ್ಪಾ ಲಾಕ್ರಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. 26 ವರ್ಷ ವಯಸ್ಸಿನ ಇವರು ಬೆಳಗ್ಗೆ 7:30 ಕ್ಕೆ ಕೆಲಸಕ್ಕೆ ಬಂದರೆ ಸಂಜೆ ಪಶ್ಚಿಮದಲ್ಲಿ ಸೂರ್ಯ ಮುಳುಗುವ ಮೊದಲು 5 ಗಂಟೆಗೆ ಮನೆಗೆ ಹೊರಡುತ್ತಾರೆ. ಕಳೆದ ಎಂಟು ವರ್ಷಗಳಿಂದ ಇದೇ ಇವರ ದಿನಚರಿ. ಇವರು ಕಿತ್ತ ಹಚ್ಚ ಹಸಿರ ಎಲೆಗಳು ಅವರ ತಲೆಗೆ ಕಟ್ಟಲಾದ ಜುರಿಯಲ್ಲಿ ಅಂಟಿಕೊಂಡಿರುತ್ತವೆ.

“ಹೆಚ್ಚಿನ ದಿನಗಳಲ್ಲಿ, ಅದರಲ್ಲೂ ಬೇಸಿಗೆ ಮತ್ತು ಮಾನ್ಸೂನ್ ಸಮಯದಲ್ಲಿ, ನಮಗೆ ಟಾರ್ಗೆಟ್‌ ಪೂರ್ತಿಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ನಮ್ಮ ದೈನಂದಿನ ಸಂಬಳದಲ್ಲಿ (ಹಾಜಿರ) 30 ರುಪಾಯಿ ಕಳೆದುಕೊಳ್ಳಬೇಕಾಗುತ್ತದೆ,” ಎಂದು ಕಳೆದ 5 ವರ್ಷಗಳಿಂದ ಚಹಾ ತೋಟದಲ್ಲಿ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿರುವ ದೀಪಾ ಓರಾನ್ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.

ಋತುಮತಿಯಾದ ಮಹಿಳೆಯರಿಗೆ ಶೌಚಾಲಯದ ಕೊರತೆ ಒಂದು ಸಮಸ್ಯೆಯಾಗಿ ಕಾಡುತ್ತಿದೆ. "ನಿಮಗೆ ಇಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ" ಎಂದು 28 ವರ್ಷ ವಯಸ್ಸಿನ ಕಾರ್ಮಿಕೆ ಮೇರಿ ಕಿಸ್ಕು (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಕಳೆದ 10 ವರ್ಷಗಳಿಂದ ಇವರು ಈ ಕೆಲಸ ಮಾಡುತ್ತಿದ್ದಾರೆ. “ಒಮ್ಮೆ ನಾನು ತೋಟದಲ್ಲಿ ಕೆಲಸ ಮಾಡುವಾಗ ರಕ್ತಸ್ರಾವ ಶುರುವಾದರೂ ಕೆಲಸ ಮುಗಿಸಿಯೇ ಮನೆಗೆ ಹೋಗದೆ ಏನೂ ಮಾಡಲು ಸಾಧ್ಯವಿರಲಿಲ್ಲ. ಆ ದಿನ ನಾನು ರಕ್ತದಿಂದ ತೊಯ್ದ ಬಟ್ಟೆಯಲ್ಲಿಯೇ ಮನೆಗೆ ಹೋಗಿದ್ದೆ,” ಎಂದು ಮೇರಿ ನೆನಪಿಸಿಕೊಳ್ಳುತ್ತಾರೆ.

ಸ್ಥಳೀಯ ಆಶಾ ಕಾರ್ಯಕರ್ತೆ ರಾಣಿ ಹೋರೋ ಅವರು ಮುಟ್ಟಿನ ನೈರ್ಮಲ್ಯದ ಮಹತ್ವದ ಬಗ್ಗೆ ತಮ್ಮ ರೋಗಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಕೂಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿರುವ ರಾಣಿ, "ಗಲೀಜಾಗಿರುವ ಶೌಚಾಲಯಗಳು, ನಿಯಮಿತ ನೀರಿನ ಪೂರೈಕೆಯ ಕೊರತೆ ಮತ್ತು ಮುಟ್ಟಿನ ಸಮಯದಲ್ಲಿ ಕೊಳಕು ಚಿಂದಿ ಬಟ್ಟೆಯ ಬಳಕೆಯು ಗರ್ಭಿಣಿಯರಲ್ಲಿ ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ,” ಎಂದು ಹೇಳುತ್ತಾರೆ.

ಚಹಾ ತೋಟಗಳಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಅವರಿಗೊಂದು ಹೆಚ್ಚುವರಿ ಸಮಸ್ಯೆ ಎಂದು ಚಂಪಾ ಹೇಳುತ್ತಾರೆ. "ಕ್ಷಯ ಮತ್ತು ರಕ್ತಹೀನತೆ ಹೊಂದಿರುವ ಮಹಿಳೆಯರು ಹೆರಿಗೆಯ ಸಮಯದಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ," ಎಂದು ಅವರು ಹೇಳುತ್ತಾರೆ.

PHOTO • Adhyeta Mishra
PHOTO • Adhyeta Mishra

ಅನೇಕ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆತರುತ್ತಾರೆ. ಏಕೆಂದರೆ ಮನೆಗಳಲ್ಲಿ ಅವರನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ. ನವಜಾತ ಶಿಶುಗಳು ಜೋಕಾಲಿಯಾಡುತ್ತಾ ಮಲಗಲು ನೆರಳಿನಲ್ಲಿ (ಬಲಭಾಗದಲ್ಲಿ) ದುಪ್ಪಟ್ಟಾಗಳನ್ನು ನೇತುಹಾಕಲಾಗುತ್ತದೆ

PHOTO • Adhyeta Mishra
PHOTO • Adhyeta Mishra

ಎಡ: ಸ್ಥಳೀಯ ಆರೋಗ್ಯ ಕಾರ್ಯಕರ್ತೆಯರು ಚಹಾ ತೋಟದ ಮಹಿಳಾ ಕಾರ್ಮಿಕರೊಂದಿಗೆ ಮಾತನಾಡುತ್ತಿರುವುದು. ಬಲ: ಜಲ್ಪೈಗುರಿಯ ಉದ್ಯಾನದಲ್ಲಿ ಇರುವ ಆರೋಗ್ಯ ಸೌಲಭ್ಯ

ಪುಷ್ಪಾ, ದೀಪಾ ಮತ್ತು ಸುನೀತಾ ಅವರಂತಹ ಕೆಲಸಗಾರರು ತಮ್ಮ ಮನೆಕೆಲಸಗಳನ್ನು ಮುಗಿಸಿ 6:30 ಕ್ಕೆ ಮನೆಯಿಂದ ಕೆಲಸಕ್ಕೆ ಹೊರಡುತ್ತಾರೆ. "ಸಮಯಕ್ಕೆ ಸರಿಯಾಗಿ ಚಹಾದ ತೋಟವನ್ನು ತಲುಪುವ ಅನೇಕ ಮಹಿಳೆಯರು ತಮ್ಮ ಬೆಳಗ್ಗಿನ ಉಪಹಾರವನ್ನು ಮಾಡದೆ ಕೆಲಸಕ್ಕೆ ಹಾಜರಾಗುತ್ತಾರೆ" ಎಂದು ಸಮುದಾಯ ಆರೋಗ್ಯ ಕಾರ್ಯಕರ್ತೆ ರಂಜನಾ ದತ್ತಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಅವರು ಸರಿಯಾಗಿ ಊಟದ ವಿರಾಮವನ್ನೂ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಸರಿಯಾಗಿ ಊಟವನ್ನು ಕೂಡ ಮಾಡಲು ಅವರಿಗೆ ಸಮಯವಿಲ್ಲ. "ಹೀಗಾಗಿ ಇಲ್ಲಿ ಅನೇಕ ಮಹಿಳಾ ಕಾರ್ಮಿಕರು ತೀವ್ರವಾದ ರಕ್ತಹೀನತೆಯಿಂದ ಬಳಲುತ್ತಿದ್ದಾರೆ" ಎಂದು ರಂಜನಾ ಹೇಳುತ್ತಾರೆ.

"ನಾವು ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯ ರಜೆಗಾಗಿ ಅರ್ಜಿ ಸಲ್ಲಿಸಬಹುದು [ಕೆಲವು ತೋಟಗಳಲ್ಲಿನ ಸೌಲಭ್ಯ] ಆದರೆ ನಾವು ನಮ್ಮ ವೇತನದ ನಾಲ್ಕನೇ ಒಂದು ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮಿಂದ ಅದು ಸಾಧ್ಯವಿಲ್ಲ,” ಎಂದು ಮೇರಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಅನೇಕ ಕಾರ್ಮಿಕರು ಅವರ ಮಾತನ್ನು ಒಪ್ಪುತ್ತಾರೆ. ತಾತ್ಕಾಲಿಕ ಕೆಲಸಗಾರರು ಕೆಲವು ಗಂಟೆಗಳ ಕಾಲ ಕೆಲಸದಿಂದ ತಪ್ಪಿಸಿಕೊಂಡರೆ ಅವರಿಗೆ ಸಂಬಳವೇ ಸಿಗುವುದಿಲ್ಲ.

ತೋಟದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ತಮ್ಮ ಮಕ್ಕಳ ಪ್ರಾಥಮಿಕ ಅರೈಕೆಯನ್ನು ತಾವೇ ನೋಡಿಕೊಳ್ಳಬೇಕು. “ನನ್ನ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವುದರಿಂದ ನನಗೆ ತೋಟಕ್ಕೆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇವತ್ತಿನ ಕೂಲಿಯಲ್ಲಿ ಕಾಲು ಭಾಗ ಕಳೆದುಕೊಳ್ಳುತ್ತೇನೆ” ಎನ್ನುತ್ತಾರೆ ಕಾಯಂ ಕೆಲಸಗಾರರಾದ ಪಂಪಾ ಓರಾನ್ (ಹೆಸರು ಬದಲಿಸಲಾಗಿದೆ).

ಮೀನಾ ಮುಂಡಾ (ಹೆಸರು ಬದಲಾಯಿಸಲಾಗಿದೆ) ಅವರಂತಹ ಅನೇಕ ಮಹಿಳೆಯರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕೆಲಸಕ್ಕೆ ಬರುವಾಗ ತಮ್ಮ ಜೊತೆಗೆ ಕರೆತರುತ್ತಾರೆ. ಇದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. “ಇದರಿಂದಾಗಿ ನನಗೆ ಕೆಲಸದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ,” ಎಂದು ಇಬ್ಬರು ಚಿಕ್ಕ ಮಕ್ಕಳ ತಾಯಿ ಮೀನಾ ಹೇಳುತ್ತಾರೆ.

ಅನೇಕ ಮಹಿಳೆಯರಿಗೆ ತಮಗೆ ಸಿಗುವ ಕಡಿಮೆ ಸಂಬಳದಿಂದಾಗಿ ತಮ್ಮ ಮಕ್ಕಳ ಶಿಕ್ಷಣಕ್ಕೆ ವ್ಯಯಿಸಲು ಹಣ ಸಾಕಾಗುವುದಿಲ್ಲ. “ಇದು ನನ್ನ ಮೊದಲ ಮಗು. ಇವನ ವಿದ್ಯಾಭ್ಯಾಸಕ್ಕೆ ನಾವು ಹಣ ಹೊಂದಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ,” ಎಂದು 20 ವರ್ಷದ ಕಾರ್ಮಿಕರಾದ ಮೊಂಪಿ ಹನ್ಸ್ಡಾ ತನ್ನ ಏಳು ತಿಂಗಳ ಮಗನ ಬಗ್ಗೆ ಹೇಳುತ್ತಾರೆ.

ಈ ಕಥೆಯಲ್ಲಿ ಅನೇಕ ಮಹಿಳೆಯರು ತಮ್ಮ ಹೆಸರನ್ನು ಗೌಪ್ಯವಾಗಿಟ್ಟು ತಮ್ಮ ಪರಿಸ್ಥಿತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅನುವಾದ: ಚರಣ್‌ ಐವರ್ನಾಡು

Student Reporter : Adhyeta Mishra

ਅਧੀਤਾ ਮਿਸ਼ਰਾ ਜਾਦਵਪੁਰ ਯੂਨੀਵਰਸਿਟੀ, ਕੋਲਕਾਤਾ ਵਿੱਚ ਤੁਲਨਾਤਮਕ ਸਾਹਿਤ ਦੀ ਪੋਸਟ-ਗ੍ਰੈਜੂਏਟ ਵਿਦਿਆਰਥਣ ਹਨ। ਉਹ ਲਿੰਗਕ ਮੁੱਦਿਆਂ ਦੇ ਅਧਿਐਨ ਅਤੇ ਪੱਤਰਕਾਰੀ ਵਿੱਚ ਵੀ ਦਿਲਚਸਪੀ ਰੱਖਦੀ ਹੈ।

Other stories by Adhyeta Mishra
Editor : Sanviti Iyer

ਸੰਵਿਤੀ ਅਈਅਰ, ਪੀਪਲਜ਼ ਆਰਕਾਈਵ ਆਫ਼ ਰੂਰਲ ਇੰਡੀਆ ਵਿਖੇ ਕੰਟੈਂਟ ਕੋਆਰਡੀਨੇਟਰ ਹਨ। ਉਹ ਉਹਨਾਂ ਵਿਦਿਆਰਥੀਆਂ ਦੀ ਵੀ ਮਦਦ ਕਰਦੀ ਹਨ ਜੋ ਪੇਂਡੂ ਭਾਰਤ ਦੇ ਮੁੱਦਿਆਂ ਨੂੰ ਲੈ ਰਿਪੋਰਟ ਕਰਦੇ ਹਨ ਜਾਂ ਉਹਨਾਂ ਦਾ ਦਸਤਾਵੇਜ਼ੀਕਰਨ ਕਰਦੇ ਹਨ।

Other stories by Sanviti Iyer
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad