ಶಾಂತಿಲಾಲ್, ಶಾಂತು, ಟಿಣಿಯೋ: ಮೂರು ಹೆಸರುಗಳು. ಒಬ್ಬರೇ ವ್ಯಕ್ತಿ. ಆದರೆ ನಾವು ಈ ಕತೆಗೆ ಅವರ ನಾಲ್ಕನೇ ಹೆಸರನ್ನೇ ಬಳಸೋಣ. ಅದು ಸಬರಕಾಂತ್‌ ಜಿಲ್ಲೆಯ ವಡಾಲಿ ಭಾಷೆಯಲ್ಲಿ ಅವರ ಊರಿನವರು ಅವರನ್ನು ಕರೆಯು ಹೆಸರು. ಆ ಹೆಸರು ಶೋಂತೋ.

ಶೋಂತು ಎನ್ನುವುದು ನಿಜಕ್ಕೂ ಒಂದು ಅಸಾಧಾರಣ ವ್ಯಕ್ತಿತ್ವ. ಇಲ್ಲಿ ಅಸಾಧಾರಣ ವ್ಯಕ್ತಿ ಎನ್ನುವುದು ಅನನ್ಯ, ಪ್ರಸಿದ್ಧ ಮುಂತಾದ ವಿಶೇಷಣಗಳ ಪರಿಭಾಷೆಗಳ ಅಡಿಯಲ್ಲಿ ಬರುವುದಿಲ್ಲ. ಅವರನ್ನು ಬದಲಾಗಿ, ನೀತಿವಂತರು, ಬಡವರು, ದೀನದಲಿತರು ಅಥವಾ ದಲಿತರು ಎನ್ನುವ ಕಾರಣಕ್ಕಾಗಿ ಶಾಶ್ವತವಾಗಿ ನೆಲೆಯಿಲ್ಲದೆ ಒಂದೆಡೆಯಿಂದ ಇನ್ನೊಂದೆಡೆಗೆ ಅಲೆಯುವ, ಸದಾ ಯಾತನೆ ಅನುಭವಿಸುವ ವ್ಯಕ್ತಿಯೆಂದು ವ್ಯಾಖ್ಯಾನಿಸಬಹುದು. ಒಮ್ಮೊಮ್ಮೆ ಈ ಶೋಂತು ಎನ್ನುವ ಪಾತ್ರದ ಅಸ್ತಿತ್ವವೇ ಸುಳ್ಳು ಎನ್ನಿಸಿಬಿಡುತ್ತದೆ.

ತಂದೆ, ತಾಯಿ, ಒಬ್ಬ ಅಣ್ಣ, ಒಬ್ಬ ಅಕ್ಕ ಮತ್ತು ಒಬ್ಬ ತಂಗಿಯಿರುವ ಕುಟುಂಬ ಅವರದು. ಬಡತನವನ್ನೇ ಹಾಸಿ ಹೊದ್ದಿರುವ, ಸದಾ ತಮ್ಮ ಬಯಕೆಗಳನ್ನು ಹತ್ತಿಕ್ಕಿಕೊಂಡು ಬದುಕಬೇಕಿದ್ದ ಅನಿವಾರ್ಯತೆಯಿದ್ದ ಕುಟುಂಬವೂ ಆಗಿತ್ತದು. ಅಪ್ಪ ಮತ್ತು ಅಣ್ಣ ಕುಟುಂಬಕ್ಕೆ ಹೇಗೋ ಎರಡು ಹೊತ್ತಿನ ಊಟವನ್ನು ಸಂಪಾದಿಸುತ್ತಿದ್ದರು. ಅಪ್ಪ ಒಂದು ಸರಕು ಸಾಗಣೆ ಮಾಡುವ ಗೂಡ್ಸ್‌ ಟೆಂಪೋ ಓಡಿಸುತ್ತಿದ್ದರು. ಅವರು ಅದರಲ್ಲಿ ಪ್ಯಾಸೆಂಜರ್‌ ಹತ್ತಿಸುತ್ತಿರಲಿಲ್ಲವಾದ ಕಾರಣ, ಹೆಚ್ಚುವರಿ ಸಂಪಾದನೆಯೂ ಇರುತ್ತಿರಲಿಲ್ಲ. ತಾಯಿ ಆಗಲೋ ಈಗಲೋ ಒಮ್ಮೆ ದೊರೆಯುತ್ತಿದ್ದ ದಿನಗೂಲಿ ಕೆಲಸಗಳಿಗೆ ಹೋಗುತ್ತಿದ್ದರು. ತಂದೆ ಕುಡುಕನಾಗಿರಲಿಲ್ಲದ ಕಾರಣ ಮನೆಯಲ್ಲಿ ಸದಾ ಪ್ರಕ್ಷುಬ್ಧ ವಾತಾವಾರವೊಂದು ಇರುತ್ತಿರಲಿಲ್ಲ.

ಶೋಂತು ಒಂಬತ್ತನೆಯ ತರಗತಿಯಲ್ಲಿರುವಾಗಲೊಮ್ಮೆ ಅವರ ಊರಿಗೆ ಸರ್ಕಸ್‌ ಬಂದಿತ್ತು. ಆದರೆ ಅಲ್ಲಿ ಶಾಲೆಯ ಮಕ್ಕಳಿಗೆ ಮಕ್ಕಳಿಗೆ ಮಾತ್ರ ಐದು ರೂಪಾಯಿಯ ರಿಯಾಯಿತಿ ಟಿಕೆಟ್‌ ಇಡಲಾಗಿತ್ತು. ಅಂದು ಅವರ ಪರಿಸ್ಥಿತಿ ಹೇಗಿತ್ತೆಂದರೆ ಮನೆಯಿಂದ ಕೊಂಡು ಹೋಗಲು ಅಲ್ಲಿ ಐದು ರೂಪಾಯಿಯೂ ಇದ್ದಿರಿಲಿಲ್ಲ. ಶೋಂತು ಶಾಲೆಗೆ ಹಣ ಕೊಂಡು ಹೋಗಿರದ ಕಾರಣ ಟೀಚರ್‌ ಎದ್ದು ನಿಲ್ಲುವಂತೆ ಹೇಳಿದರು. ನಂತರ, “ಮಗೂ, ನೀನೇಕೆ ಹಣ ತಂದಿಲ್ಲ?” ಎಂದು ಪ್ರೀತಿಯಿಂದ ಕೇಳಿದರು. ಆಗ ಶೋಂತು, “ಮೇಡಮ್‌, ಮನೆಯಲ್ಲಿ ತಂದೆಗೆ ಹುಷಾರಿಲ್ಲ, ಮಾ ಗೆ ಇನ್ನೂ ಹತ್ತಿ ಕೆಲಸದ ಹಣ ಬಂದಿಲ್ಲ,” ಎನ್ನುತ್ತಾ ಅಳತೊಡಗಿದರು.

ಮರುದಿನ ಅವರ ಸಹಪಾಠಿ ಕುಸುಮ್‌ ಪಠಾಣ್‌ ರಂಜಾನ್‌ ತಿಂಗಳಿನ ಪುಣ್ಯ ದಾನದ ಸಲುವಾಗಿ ಮನೆಯಿಂದ ಹತ್ತು ರೂಪಾಯಿ ತಂದು ಶೋಂತುವಿಗೆ ನೀಡಿದರು. ಮರುದಿನ ಆಕೆ ಶೋಂತುವಿನ ಬಳಿ, “ಹಣ ಏನು ಮಾಡಿದೆಯೆಂದು ಕೇಳಿದಾಗ,” ಶೋಂತು ಶೃದ್ಧೆಯಿಂದ, “ನಾನು ಐದು ರೂಪಾಯಿ ಸರ್ಕಸ್ಸಿಗೆ ಖರ್ಚು ಮಾಡಿದೆ. ಉಳಿದ ಐದು ರೂಪಾಯಿ ಮನೆಯ ಖರ್ಚಿಗೆ ಸಹಾಯವಾಗಲೆಂದು,” ನೀಡಿದೆ ಎಂದು ಹೇಳಿದರು. ಕುಸುಮ್‌, ಶೋಂತು ಮತ್ತು ಸರ್ಕಸ್‌ ಇದು ನಿಜಕ್ಕೂ ಇದು ಕರುಣಾಳು ಜಗತ್ತು.

ಶೋಂತು 11ನೇ ತರಗತಿಯಲ್ಲಿದ್ದಾಗ ಅವರ ಮನೆಯಲ್ಲಿ ಇಟ್ಟಿಗೆ ಮತ್ತು ಸಿಮೆಂಟ್‌ ಬಳಸಿ ಮರುನಿರ್ಮಾಣ ಮಾಡಲಾಯಿತು. ಆದರೆ ಮನೆಗೆ ಗಾರೆ ಮಾಡಿರಲಿಲ್ಲ. ಏಕೆಂದರೆ ಅದಕ್ಕೆ ಬೇಕಾಗುವಷ್ಟು ಹಣ ಕುಟುಂಬದ ಬಳಿಯಿರಲಿಲ್ಲ. ಮನೆ ಕಟ್ಟುವ ಕೆಲಸಕ್ಕೆ ಕೇವಲ ಓರ್ವ ಮೇಸ್ತ್ರಿಯನ್ನಷ್ಟೇ ದಿನಗೂಲಿಗೆ ಕೆಲಸಕ್ಕೆ ಇರಿಸಿಕೊಳ್ಳಲಾಗಿತ್ತು. ಈ ಮನೆಯ ಕೆಲಸದ ಗಡಿಬಿಡಿಯ ನಡುವೆ ಶೋಂತುವಿಗೆ ತನ್ನ ಕೊನೆಯ ಪರೀಕ್ಷೆ ಬಂದಿದ್ದೇ ಗೊತ್ತಾಗಿರಲಿಲ್ಲ. ಶೋಂತು ಕೊನೆಗೆ ಹೆಡ್‌ ಮಾಸ್ಟರ್‌ ಬಳಿ ಬೇಡಿಕೊಂಡಾಗ ಅವರು ಪರೀಕ್ಷೆ ಬರೆಯಲು ಅನುಮತಿ ನೀಡಿದರು.

ಅವರು ಪರೀಕ್ಷೆ ಪಾಸಾಗಿ 12ನೇ ತರಗತಿಗೆ ಪ್ರವೇಶ ಪಡೆದರು ಮತ್ತು ಉತ್ತಮ ಅಂಕಗಳನ್ನು ಪಡೆಯುವ ಪ್ರತಿಜ್ಞೆಯನ್ನು ಕೂಡಾ ಮಾಡಿದರು. ಶೋಂತು ಬಹಳ ಶೃದ್ಧೆಯಿಂದ ಓದುತ್ತಿದ್ದರು, ಆದರೆ ಇದೇ ಸಮಯದಲ್ಲಿ ಅವರ ತಾಯಿ ಕಾಯಿಲೆಬಿದ್ದರು. ಅವರ ಅನಾರೋಗ್ಯ ಬಹಳ ಬೇಗನೆ ತೀವ್ರಗೊಳ್ಳುತ್ತಾ ಹೋಯಿತು. ಮತ್ತು ಅವರು ಶೋಂತುವಿನ ಫೈನಲ್‌ ಎಕ್ಸಾಮ್‌ ಹತ್ತಿರದಲ್ಲಿರುವಾಗ ತೀರಿಕೊಂಡರು. ಆ ನೋವು, ನಷ್ಟ ಎನ್ನುವುದು ಹದಿನೆಂಟು ವರ್ಷದ ಹುಡುಗನೊಬ್ಬನಿಗೆ ಭರಿಸಲು ಸಾಧ್ಯವಿಲ್ಲದಷ್ಟು ತೀವ್ರವಾಗಿತ್ತು. ಅವರಿಗೆ ಪರೀಕ್ಷೆಯೆನ್ನುವುದು ಒತ್ತಡವಾಗಿ ಹೋಯಿತು. ಎಷ್ಟು ಕಷ್ಟಪಟ್ಟು ಓದಿದರೂ ಅದು ಸಹಾಯಕ್ಕೆ ಬರಲಿಲ್ಲ. ಕೊನೆ 65 ಶೇಕಡಾ ಅಂಕಗಳನ್ನು ತೆಗೆಯುವ ಮೂಲಕ ತೇರ್ಗಡೆಯಾದರು. ಶೋಂತು ತನ್ನ ಮುಂದಿನ ಓದಿನ ಕನಸ್ಸನ್ನು ಕೈಬಿಡಲಾರಂಭಿಸಿದರು.

ಶೋಂತುವಿಗೆ ಓದುವುದೆಂದರೆ ಬಹಳ ಮೆಚ್ಚು. ಅವರು ಲೈಬ್ರರಿಗಳಿಂದ ಪುಸ್ತಕ ತಂದು ಮನೆಯಲ್ಲಿ ಓದುತ್ತಿದ್ದರು. ಅವರ ಆಸಕ್ತಿಯನ್ನು ಗಮನಿಸಿದ ಸ್ನೇಹಿತನೊಬ್ಬ ವಡಾಲಿ ಕಲಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿಗಾಗಿ ಪ್ರವೇಶ ಪಡೆಯಲು ಪುಸಲಾಯಿಸಿದರು. “ನೀನು ಅಲ್ಲಿ ತುಂಬಾ ಒಳ್ಳೆಯ ಪುಸ್ತಕಗಳನ್ನು ಓದಬಹುದು,” ಎಂದು ಹೇಳಿದರು. ಶೋಂತು ಕಾಲೇಜಿಗೆ ಸೇರಿದರಾದರೂ ಅವರು ಅಲ್ಲಿಗೆ ಹೋಗುತ್ತಿದ್ದದ್ದು ಅಲ್ಲಿನ ಲೈಬ್ರರಿಯಿಂದ ಪುಸ್ತಕ ಪಡೆಯಲು ಮತ್ತು ಹಿಂತಿರುಗಿಸಲು ಮಾತ್ರ.

ಕಾಲೇಜಿ ಪ್ರೊಫೆಸರ್ ಶೋಂತುವಿನ ಫಲಿತಾಂಶಗಳನ್ನು ನೋಡಿದಾಗ, ನಿಯಮಿತವಾಗಿ ಕಾಲೇಜಿಗೆ ಹಾಜರಾಗುವಂತೆ ವಿನಂತಿಸಿದರು, ಮತ್ತು ಶೋಂತು ತನ್ನ ಓದನ್ನು ಆನಂದಿಸಲು ಪ್ರಾರಂಭಿಸಿದರು. ಅದು ಅವರ ಮೂರನೇ ವರ್ಷವಾಗಿತ್ತು. ಆ ವರ್ಷ ವಡಾಲಿಯ ಕಲಾ ಕಾಲೇಜು ಅತ್ಯುತ್ತಮ ಓದುವ ಕೌಶಲ್ಯವನ್ನು ಹೊಂದಿರುವ ವಿದ್ಯಾರ್ಥಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡಲು ನಿರ್ಧರಿಸಿತು. ಶೋಂತು ಅದನ್ನು ತನ್ನದಾಗಿಸಿಕೊಂಡರು. "ಶಾಂತಿಲಾಲ್, ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಳ್ಳಲು ನಿನಗೆ ಯಾವಾಗ ಸಮಯ ಸಿಗುತ್ತದೆ?" ಅವರ ಪ್ರೊಫೆಸರ್ ದಿಗ್ಭ್ರಮೆಯಿಂದ ಕೇಳಿದರು. ಶೋಂತು 2003ರಲ್ಲಿ ಶೇಕಡಾ 66ರಷ್ಟು ಅಂಕಗಳೊಂದಿಗೆ ಮೂರನೇ ವರ್ಷದ ಬಿಎ ಉತ್ತೀರ್ಣರಾದರು.

PHOTO • Shantilal Parmar
PHOTO • Shantilal Parmar

ಬಲಗಡೆ ಯಿರುವ ಚಿತ್ರದಲ್ಲಿ ನಮಗೆ ಅಭಿಮುಖವಾಗಿರುವ ಮನೆಯ ಮೇಲಿನ ಮಹಡಿಯು ಪ್ರಸ್ತುತ ಶೋಂ ತು ವಾಸಿಸುವ ಸ್ಥಳವಾಗಿದೆ . ಶೋಂ ತು 11 ನೇ ತರಗತಿಯಲ್ಲಿದ್ದಾಗ ಕುಟುಂಬವು ಇಟ್ಟಿಗೆಗಳು ಮತ್ತು ಸಿಮೆಂಟ್ ಬಳಸಿ ಮರುನಿರ್ಮಿಸಿದ ಮನೆ ಯಿ ದು . ಈಗ ನಾವು ನೋಡು ತ್ತಿರು ಪ್ಲಾಸ್ಟರ್ ಬಹಳ ತಡವಾಗಿ ಹಾಕಿಸಲಾಯಿತು

ನಂತರ ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ಅವರು ನೆರೆಯ ಮೆಹ್ಸಾನಾ ಜಿಲ್ಲೆಯ ವಿಸ್ನಗರಕ್ಕೆ ಹೋದರು, ಅಲ್ಲಿಯೇ ಹಾಸ್ಟೆಲ್ಲಿನಲ್ಲಿ ಉಳಿದಕೊಂಡು ಕಾಲೇಜಿಗೆ ಹೋಗತೊಡಗಿದರು. ಅಲ್ಲಿನ ಹಾಸ್ಟೆಲ್ಲಿನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಯು ಶೇಕಡಾ ಅರ್ವತ್ತರಷ್ಟು ಅಂಕಗಳನ್ನು ಪಡೆಯಬೇಕಿತ್ತು. ಅವರು ಬಿಎ ಪದವಿಯಲ್ಲಿ ಅದನ್ನು ಸಾಧಿಸಿದ್ದರಾದರೂ ಮುಂದಿನ ವರ್ಷ ಅವರಿಗೆ ಅಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ವರ್ಷ ಅವರಿಗೆ ಹಾಸ್ಟೆಲ್ಲಿನಲ್ಲಿ ಉಳಿಯಲು ಕೋಣೆ ಸಿಗಲಿಲ್ಲ. ಅವರು ಆ ವರ್ಷದ ಅಂತಿಮ ಪರೀಕ್ಷೆಯಲ್ಲಿ ನಿಗದಿತ ಅಂಕಕ್ಕಿಂತ ಕೇವಲ ಒಂದು ಅಂಕ ಕಡಿಮೆ (59) ಪಡೆದು ಅವಕಾಶ ವಂಚಿತರಾಗಿದ್ದರು.

ಅದರ ನಂತರ ಅವರ ವಿಸ್‌ ನಗರ ಮತ್ತು ವಡಾಲಿ ನಡುವಿನ ಒಂದೂವರೆ ಗಂಟೆಯ ದಾರಿ ಪ್ರಯಾಣಿಸಲಾರಂಭಿಸಿದರು. ದಿನದ ಮೂರು ಗಂಟೆ ಪ್ರಯಾಣಕ್ಕಾಗಿ ಮೀಸಲಿಡಬೇಕಿತ್ತು. ಆ ವರ್ಷದ ದೀಪಾವಳಿಯ ನಂತರ ಶೋಂತುವಿನ ಅಪ್ಪನಿಗೆ ಕೆಲಸವಿದ್ದಿರಲಿಲ್ಲ. ಅವರಿಗೆ ಟೆಂಪೋ ಸಾಲದ ಕಂತು ಕಟ್ಟುವುದಿರಲಿ, ಊಟಕ್ಕೂ ತತ್ವಾರವಾಗತೊಡಗಿತ್ತು. ಅವರ ಅಣ್ಣ ಆ ಸಮಯದಲ್ಲಿ ಟೈಲರಿಂಗ್‌ ಕೆಲಸ ಮಾಡಿ ಮನೆಯ ಎರಡು ಹೊತ್ತಿನ ಊಟ ಸಾಗಿಸಲು ಪ್ರಯತ್ನಿಸುತ್ತಿದ್ದ ಕಾರಣ ಶೋಂತುವಿಗೆ ತನ್ನ ಕಾಲೇಜಿನ ಖರ್ಚಿಗೆ ಹಣ ಕೇಳಲು ಸಂಕೋವಾಗುತ್ತಿತ್ತು. ಇದರಿಂದಾಗಿ ಮತ್ತೆ ಅವರಿಗೆ ತರಗತಿಗಳಿಗೆ ನಿಯಮಿತವಾಗಿ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ.

ಶೋಂತು ತನ್ನ ಮನೆಯ ಸಮಸ್ಯೆಗಳ ಪರಿಹಾರಕ್ಕೆ ಹೆಗಲಾಗಲು ಅವರು ಮಾರುಕಟ್ಟೆಯಲ್ಲಿ ಹತ್ತಿ ಚೀಲಗಳನ್ನು ತುಂಬಿಸುವುದು, ಲೋಡ್‌ ಮಾಡುವುದು ಇಂತಹ ಕೆಲಸಗಳನ್ನು ಮಾಡತೊಡಗಿದರು. ಈ ಮೂಲಕ ಅವರು ದಿನಕ್ಕೆ 100-200 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಈ ನಡುವೆ ಆ ವರ್ಷದ ಮಾರ್ಚ್‌ ತಿಂಗಳಲ್ಲಿ ಪರೀಕ್ಷೆಗಳು ಬಂದಾಗ ಶೋಂತುವಿನ ತರಗತಿ ಹಾಜರಿ ಸಂಖ್ಯೆ ಕಡಿಮೆಯಿತ್ತು. ಕಾಲೇಜು ಪರೀಕ್ಷೆಗೆ ಕೂರಲು ಅನುಮತಿ ನಿರಾಕರಿಸಿತಾದರೂ, ಕೊನೆಗೆ ಅವರ ಕೆಲವು ಗೆಳೆಯರ ಮಧ್ಯಪ್ರವೇಶದಿಂದಾಗಿ ಪರೀಕ್ಷೆ ಬರೆಯಲು ಅವಕಾಶ ದೊರೆಯಿತು. ಕೊನೆಗೂ ಎಮ್‌ಎ ಪರೀಕ್ಷೆಯನ್ನು 58.38 ಶೇಕಡಾ ಅಂಕಗಳೊಡನೆ ಮುಗಿಸಿದರು. ಆದರೆ ಸಾಕಷ್ಟು ಹಣವಿಲ್ಲದೆ ಹೋದ ಕಾರಣ ಶೋಂತು ತಮ್ಮ ಎಮ್‌ಫಿಲ್‌ ಮಾಡುವ ಕನಸನ್ನು ಕೈಚೆಲ್ಲಿದರು.

ಒಂದು ವರ್ಷದ ಸುದೀರ್ಘ ವಿರಾಮದ ನಂತರ, ಶೋಂತು ಅಗತ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿ ವಿಸ್ ನಗರದ ಸರ್ಕಾರಿ ಬಿಇಡಿ ಕಾಲೇಜಿನಲ್ಲಿ ಪ್ರವೇಶ ಪಡೆದರು. ತಕ್ಷಣವೇ, ರಾಜುಭಾಯ್ ಶೋಂತುವಿಗಾಗಿ ಶೇಕಡಾ 3ರಷ್ಟು ಬಡ್ಡಿ ದರದಲ್ಲಿ 7,000 ರೂಪಾಯಿಗಳ ಸಾಲವನ್ನು ತೆಗೆದುಕೊಂಡರು. ಅದರಲ್ಲಿ 3,500 ರೂಪಾಯಿಗಳು ಪ್ರವೇಶ ಶುಲ್ಕಕ್ಕೆ ಹೋದವು. ಇನ್ನೂ 2,500 ರೂಪಾಯಿ ಕಂಪ್ಯೂಟರ್ ಕಡ್ಡಾಯ ವಿಷಯದ ಶುಲ್ಕಕ್ಕೆ ಹೋಯಿತು.  ಶೋಂತು ತನ್ನ ಇತರ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು 1,000 ರೂಪಾಯಿಗಳನ್ನು ಹೊಂದಿದ್ದರು. ಇದು ಅವರು ಓದಿಗಾಗಿ ವಿಸ್‌ ನಗರಕ್ಕೆ ಪ್ರಯಾಣಿಸುತ್ತಿದ್ದ ಮೂರನೇ ವರ್ಷವಾಗಿತ್ತು.

ಅವರಿಗೆ ತನ್ನ ಕುಟುಂಬದ ಆರ್ಥಿಕ ತೊಂದರೆಗಳ ಬಗ್ಗೆ ಸದಾ ಅರಿವಿತ್ತು ಮತ್ತು ಅದರಿಂದಾಗಿ ಅವರು ತೊಂದರೆಗೀಡಾಗುತ್ತಿದ್ದರು. ಮನೆಯ ಕಷ್ಟ ನೋಡಲಾಗದೆ ಅವರು ರಾಜೂಬಾಯಿ ಬಳಿ ತನ್ನ ಓದು ನಿಲ್ಲಿಸುವುದಾಗಿ ಹೇಳಿದರು. "ನೀನು ಆರ್ಥಿಕ ಅಡಚಣೆಗಳ ನಡುವೆ ಬದುಕುವುದನ್ನು ಕಲಿಯುವುದು ಉತ್ತಮ," ಎಂದು ಅವರ ಅಣ್ಣ ಉತ್ತರಿಸಿದರು. "ಮನೆಯ ಬಗ್ಗೆ ಚಿಂತಿಸದೆ ನಿನ್ನ ದಿನ ಕಡೆ ಗಮನ ಹರಿಸು. ನೋಡ್ತಾ ನೋಡ್ತಾ ಈ ವರ್ಷ ಮುಗಿದು ಹೋಗುತ್ತೆ. ಮತ್ತು ದೇವರ ದಯೆಯಿದ್ರೆ, ನಿನ್ನ ಬಿ.ಎಡ್ ನಂತರ ನಿನಗೆ ಕೆಲಸ ಸಿಗಬಹುದು." ಸಹೋದರನ ಮಾತುಗಳು ಶೋಂತುವಿನಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿದವು, ಮತ್ತು ಅವರ ನಿಧಾನ ಗತಿಯ ಓದು ಬೇಸಿಗೆಯ ತನಕ ತೆವಳತೊಡಗಿತು.

ಚಳಿಗಾಲ ಬಂತು. ಈ ಸಲ ತಂದೆಯ ಆರೋಗ್ಯ ಹದಗೆಟ್ಟಿತ್ತು. ಅವರ ಅನಾರೋಗ್ಯ ಕುಟುಂಬದ ಎಲ್ಲ ಆದಾಯವನ್ನು ನುಂಗಿ ನೀರು ಕುಡಿಯಿತು. ರಾಜುಭಾಯಿ ಒಬ್ಬರೇ ತನ್ನ ಓದಿನ ಖರ್ಚು ನಿಭಾಯಿಸುತ್ತಿರುವುದು ತಿಳಿದು ಶೋಂತು ನೊಂದುಕೊಂಡರು. ಬಿಎಡ್‌ ಕೋರ್ಸು ಅವರಿಗೆ ವಿದ್ಯೆ ಮತ್ತು ಖರ್ಚುಗಳು ಒಟ್ಟೊಟ್ಟಿಗೆ ಬರುತ್ತವೆ, ಅವು ಒಂದನ್ನು ಬಿಟ್ಟು ಒಂದು ಇರಲಾರವು ಎನ್ನುವುದನ್ನು ಮನದಟ್ಟು ಮಾಡಿಸಿತು. ಕೊನೆಗೆ ಅವರು ಸರ್ವ ಶಿಕ್ಷಣ ಅಭಿಯಾನ (ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಯ ಕಾರ್ಯಕ್ರಮ) ಯೋಜನೆಯ ಇಂಟರ್ನ್‌ಶಿಪ್‌ನಲ್ಲಿ ತೊಡಗಿಕೊಂಡರು. ಇದಕ್ಕಾಗಿ ಅವರು 10 ದಿನಗಳ ಕಾಲ ವಿಸ್‌ ನಗರ ತಾಲ್ಲೂಕಿನ ಬೋಕರ್ವಾಡಾ ಮತ್ತು ಭಾಂಡು ಗ್ರಾಮಗಳಿಗೆ ಹೋಗಬೇಕಾಗಿತ್ತು. ಬೋಕರ್ವಾಡ ಪ್ರಾಥಮಿಕ ಶಾಲೆಯು ವಸತಿಯನ್ನು ಒದಗಿಸುತ್ತಿತ್ತು. ಅಣ್ಣನಿಗೆ ತೊಂದರೆ ಕೊಡುವುದು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ, ಅವರು ಕಾಲೇಜಿನ ಅಡ್ಮಿನ್ ಕಚೇರಿಯಲ್ಲಿ ಮಹೇಂದ್ರ ಸಿಂಹ ಠಾಕೂರ್ ಎನ್ನುವವರಿಂದ 300 ರೂಪಾಯಿಗಳನ್ನು ಸಾಲವಾಗಿ ಪಡೆದರು.

"ಊಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ನಾವು ಹಳ್ಳಿಯ ಪೂಜಾರಿಯವರ ಬಳಿ ಕೇಳಿದೆವು. ಅವರು ಒಂದು ಊಟಕ್ಕೆ 25 ರೂಪಾಯಿಯಂತೆ ಮಾಡಿಕೊಡುವುದಾಗಿ ಹೇಳಿದರು. ನಾವು ನಾಲ್ಕು ಜನ ಸ್ನೇಹಿತರು ನಾಲ್ಕು ದಿನಗಳ ಕಾಲ ಅವರ ಮನೆಯಲ್ಲಿ ಊಟ ಮಾಡಿದೆವು.ನಾನು ವಾರದಲ್ಲಿ ಎರಡು ದಿನ ಉಪವಾಸ ಮಾಡುವ ಮೂಲಕ 50 ರೂಪಾಯಿಗಳನ್ನು ಉಳಿಸಿದ್ದೆ," ಎಂದು ಶೋಂತು ನೆನಪಿಸಿಕೊಳ್ಳುತ್ತಾರೆ. ಅದರ ನಂತರ, ಅವರು ನೆರೆಯ ಭಾಂಡು ಗ್ರಾಮದಲ್ಲಿ ಇನ್ನೂ ಐದು ದಿನಗಳನ್ನು ಕಳೆಯಬೇಕಾಯಿತು, ಅಲ್ಲಿ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಳ್ಳಲಿ ಸಾಧ್ಯವಾಗಲಿಲ್ಲ. ಇದರರ್ಥ ಬೊಕರ್‌ ವಾಡದಿಂದ ಅಲ್ಲಿಗೆ ಹೋಗಿ ಬರುವುದು, ಪ್ರತಿ ಮಾರ್ಗಕ್ಕೂ ಹೆಚ್ಚುವರಿಯಾಗಿ 10 ರೂಪಾಯಿಗಳನ್ನು ಖರ್ಚು ಮಾಡುವುದು. ಇದಕ್ಕಾಗಿ ಶೋಂತು ಮಹೇಂದ್ರ ಸಿಂಗ್ ಅವರಿಂದ ಇನ್ನೂ 200 ರೂಪಾಯಿಗಳನ್ನು ಸಾಲವಾಗಿ ಪಡೆದರು.

ಭಾಂಡುವಿನಲ್ಲಿ ಎಂಜಿನಿಯರಿಂಗ್ ಕಾಲೇಜ್‌ ಒಂದರಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು, ಆದರೆ ಇಲ್ಲಿಯೂ ಒಂದು ಊಟಕ್ಕೆ 25 ರೂಪಾಯಿಗಳನ್ನು ಕೊಡಬೇಕಿತ್ತು. ಶೋಂತು ಇಲ್ಲಿಯೂ ಎರಡು ದಿನಗಳ ಕಾಲ ಉಪವಾಸವನ್ನು ಮುಂದುವರಿಸಿದರು. ಸ್ನೇಹಿತರು ಅದನ್ನು ಇಷ್ಟಪಡಲಿಲ್ಲ. "ಶಾಂತಿಲಾಲ್," ಅವರಲ್ಲಿ ಒಬ್ಬರು ಹೇಳಿದರು, "ನಾವು ಐದು ದಿನಗಳ ಹಣವನ್ನು ಮುಂಚಿತವಾಗಿ ಪಾವತಿಸಿದ್ದೇವೆ. ನೀವು ಊಟ ಮಾಡಿದ ನಂತರ ಹಣ ಕೊಡುತ್ತೀರಿ, ನಾವು ಮೊದಲೇ ಐದು ದಿನದ ಹಣವನ್ನು ಕೊಟ್ಟಿರುತ್ತೇವೆ ಹೀಗಾಗಿ ನಮ್ಮ ಬಳಿ ಅವರು ಹಣ ಕೇಳುವುದಿಲ್ಲ. ನೀವೂ ನಮ್ಮ ಜೊತೆ ಊಟ ಮಾಡಿ ಎದ್ದು ಬಿಡಿ. ಆಗ ನಿಮ್ಮ ಬಳಿ ಯಾರೂ ಹಣ ಕೇಳುವುದಿಲ್ಲ!" ಶೋಂತು ಹಾಗೇ ಮಾಡಿದರು. "ನಾನು ಅವರ ಮಾತುಗಳನ್ನು ಕೇಳಿದೆ ಮತ್ತು ಮುಂದಿನ ಕೆಲವು ದಿನಗಳವರೆಗೆ ಹಣವನ್ನು ಪಾವತಿಸದೆ ಊಟ ಮಾಡಿದೆ," ಎಂದು ಶೋಂತು ಹೇಳುತ್ತಾರೆ.

ಆದರೆ ಈ ರೀತಿ ಊಟ ಮಾಡುವುದು ಶೋಂತು ಅವರ ಪಾಲಿಗೆ ಸಂತೋಷವೇನೂ ಕೊಟ್ಟಿರಲಿಲ್ಲ. ಇದೆಲ್ಲದರ ಹೊರತಾಗಿಯೂ ಅವರು ತಮ್ಮ ಪ್ರೊಫೆಸರ್ ಎಚ್.ಕೆ. ಪಟೇಲರಿಂದ ಇನ್ನೂ 500 ರೂಪಾಯಿಗಳನ್ನು ಮತ್ತೆ ಸಾಲ ಪಡೆಯಬೇಕಾಯಿತು. "ನನ್ನ ವಿದ್ಯಾರ್ಥಿವೇತನದ ಮೊತ್ತ ಬಂದ ನಂತರ ನಾನು ಇದನ್ನು ಹಿಂದಿರುಗಿಸುತ್ತೇನೆ," ಎಂದು ಅವರು ಹೇಳಿದ್ದರು. ದಿನವೂ ಖರ್ಚುಗಳಿರುತ್ತಿದ್ದವು, ಜೊತೆಗೆ ಭಾಂಡು ಶಾಲೆಯ ಶಿಕ್ಷಕರಿಗೆ ಇವರು ಉಪಹಾರ ಕೊಡಿಸಬೇಕೆಂದು ನಿರೀಕ್ಷಿಸಲಾಗಿತ್ತು,

ಎಚ್.ಕೆ. ಪಟೇಲರು ಒಂದು ದಿನ ಶೋಂತು ಅವರನ್ನು ಸ್ಟಾಫ್ ರೂಮಿಗೆ ಕರೆದರು. "ನಿಮ್ಮ ತಂದೆಯ ಆರೋಗ್ಯ ಬಹಳ ಹದಗೆಟ್ಟಿದೆ," ಎಂದು ಹೇಳಿ ಅವರು 100 ರೂಪಾಯಿ ನೋಟನ್ನು ಕೊಟ್ಟು, "ಬೇಗ ಮನೆಗೆ ಹೋಗಿ," ಎಂದರು, ಮನೆಯಲ್ಲಿ, "ಎಲ್ಲರೂ ನನಗಾಗಿ ಕಾಯುತ್ತಿದ್ದರು" ಎಂದು ಶೋಂತು ಹೇಳುತ್ತಾರೆ. "ಅಲ್ಲಿ ಅಪ್ಪನ ಮುಖವನ್ನು ನನಗೆ ತೋರಿಸಿದರು ಮತ್ತು ದೇಹವನ್ನು ಅಂತ್ಯಕ್ರಿಯೆಗೆ ತಯಾರಿಸಲು ಪ್ರಾರಂಭಿಸಿದರು." ಇದರೊಂದಿಗೆ ಅವರ ಕುಟುಂಬಕ್ಕೆ ದೊಡ್ಡ ಬಿಕ್ಕಟ್ಟು ಕಾದಿತ್ತು. 12ನೇ ದಿನದ ಕಾರ್ಯವು ಪೋಷಕರ ಮರಣದ ನಂತರ ಆಚರಿಸಬೇಕಾದ ಕಡ್ಡಾಯ ಸಂಪ್ರದಾಯವಾಗಿತ್ತು. ಅಂದರೆ ಕನಿಷ್ಠ 40,000 ರೂಪಾಯಿ ಖರ್ಚು.

PHOTO • Shantilal Parmar
PHOTO • Shantilal Parmar

ಇದು ಶೋಂತುವಿಗೆ ಅತ್ಯಂತ ಪರಿಚಿತ ಬೀದಿ, ಈ ಬೀದಿಯ ಕೊನೆಯಲ್ಲಿ ನಿಂತಿರುವ ಮನೆಯಂತೆ ಇಲ್ಲಿನ ಎಲ್ಲವೂ ಅವರಿಗೆ ಪರಿಚಿತ. ಅವರು ಇದೇ ದಾರಿಯ ಮೂಲಕ ಶಾಲೆಗೆ, ನಂತರ ವಡಾಲಿಯಿಂದ ವಿಸ್‌ ನಗರದ ಹೋಗಿ ಕಾಲೇಜಿಗೆ ಬರುತ್ತಿದ್ದಿದ್ದು

ಅವರ ತಾಯಿ ತೀರಿಕೊಂಡಾಗಲೂ ಈ ತಿಥಿ ಕಾರ್ಯ ಮಾಡಿರಲಿಲ್ಲವಾದ ಕಾರಣ ಈ ಬಾರಿ ಅವರು ತಪ್ಪಿಸಿಕೊಳ್ಳುವಂತಿರಲಿಲ್ಲ. ಕೊನೆಗೆ ಒಂದು ಸಮುದಾಯ ಸಭೆಯನ್ನು ನಡೆಸಿ ಇದರಿಂದ ವಿನಾಯಿತಿ ನೀಡುವಂತೆ ವಡಾಲಿಯ ಕೆಲವು ಹಿರಿಯರು ವಿನಂತಿಸಿದರು. “ಹುಡುಗರಿಬ್ಬರೂ ಇನ್ನೂ ಸಣ್ಣವರು, ಅವರಲ್ಲಿ ಒಬ್ಬ ಇನ್ನೂ ಓದುತ್ತಿದ್ದಾನೆ. ಮತ್ತೆ ಇನ್ನೊಬ್ಬ ಕುಟುಬ ನೋಡಿಕೊಳ್ಳುತ್ತಿದ್ದಾನೆ. ಹೀಗಾಗಿ ಎಲ್ಲಾ ಖರ್ಚು ಒಬ್ಬನ ಮೇಲೆ ಬೀಳುತ್ತದೆ. ಅವರಿಗೆ ಖರ್ಚನ್ನು ಭರಿಸುವುದು ಕಷ್ಟ,” ಎಂದು ಅವರು ಹೇಳಿದರು. ಇದರೊಂದಿಗೆ ಕುಟುಂಬವು ದೊಡ್ಡದೊಂದು ಆರ್ಥಿಕ ಹೊಡೆತದಿಂದ ಪಾರಾಯಿತು.

ಶೋಂತು ಶೇಕಡಾ 76ರಷ್ಟು ಅಂಕಗಳನ್ನು ಗಳಿಸುವುದರೊಂದಿಗೆ ಬಿಎಡ್‌ ಮುಗಿಸಿ, ಕೆಲಸಕ್ಕಾಗಿ ಹುಡುಕತೊಡಗಿದರು. ಈ ನಡುವೆ ಮಳೆಗಾಲವು ರಾಜುಭಾಯಿಯ ಆದಾಯದಲ್ಲಿ ಕುಸಿತವನ್ನು ತಂದಿತು. “ನಾನು ನನ್ನಕನಸಿನ ಕೆಲಸದ ಆಸೆ ಬಿಟ್ಟು ಹೊಲಗಳಲ್ಲಿ ದುಡಿಯತೊಡಗಿದೆ,” ಎನ್ನುತ್ತಾರೆ ಶೋಂತು. ಕೆಲವು ಸ್ವತಂತ್ರ ಬಿಎಡ್‌ ಕಾಲೇಜುಗಳನ್ನು ತೆರೆಯಲಾಯಿತಾದರೂ ಅಲ್ಲಿ ಕೆಲಸ ಮಾಡಲು ಹೆಚ್ಚಿನ ಅರ್ಹತೆ ಬೇಕಿತ್ತು. ಅಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಸಾಧ್ಯವಿರಲಿಲ್ಲ. ಅಲ್ಲದೆ ನೇಮಕಾತಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರವೂ ಅವರ ಕೆಲಸದ ಕನಸಿಗೆ ಅಡ್ಡಲಾಗಿ ನಿಂತಿದ್ದವು.

ಸ್ವಲ್ಪ ಸಮಯದ ನಂತರ ತಾನು ನಡೆಯುತ್ತಿರುವ ದಾರಿಯನ್ನು ಬದಲಾಯಿಸುವ ಸಲುವಾಗಿ ಕಂಪ್ಯೂಟರ್‌ ವಿಷಯದಲ್ಲಿ ಒಂದು ಕೈ ಪ್ರಯತ್ನಿಸಲು ಹೊರಟರು. ಅವರ ಜಿಲ್ಲೆಯಾದ ಸಬರಕಾಂತದ ವಿಜಯನಗರದಲ್ಲಿನ ಪಿಜಿಡಿಸಿಎ ತಾಂತ್ರಿಕ ಕಾಲೇಜಿನಲ್ಲಿ ಒಂದು ವರ್ಷದ ಡಿಪ್ಲೊಮಾಗೆ ಅರ್ಜಿ ಸಲ್ಲಿಸಿದರು. ಅರ್ಹತೆಯ ಪಟ್ಟಿಯಲ್ಲಿ ಅವರ ಹೆಸರು ಸಹ ಕಾಣಿಸಿಕೊಂಡಿತು. ಆದರೆ ಶೋಂತು ಬಳಿ  ಅದರ ಶುಲ್ಕಕ್ಕೆ ಬೇಕಾಗಿರುವ ಹಣವಿರಲಿಲ್ಲ.

ಅವರು ವಡಾಲಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕೋಟಿಕಂಪದ ಚಿಂತನ್ ಮೆಹ್ತಾ ಅವರನ್ನು ಭೇಟಿಯಾದರು. ಮೆಹ್ತಾ ಕಾಲೇಜಿನ ಟ್ರಸ್ಟಿಗಳೊಡನೆ ಮಾತನಾಡಿ, ವಿದ್ಯಾರ್ಥಿವೇತನಕ್ಕೆ ಹೊಂದುವಂತೆ ಶೋಂತುವಿನ ಶುಲ್ಕವನ್ನು ಸರಿಹೊಂದಿಸುವಂತೆ ಮಾಡಿದರು. ಮರುದಿನ ಶೋಂತು ವಿಜಯನಗರಕ್ಕೆ ಹೋದರು. ಕಾಲೇಜಿನ ಕಚೇರಿಯ ಗುಮಾಸ್ತ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. "ನಾವು ಇಲ್ಲಿ ಆಡಳಿತವನ್ನು ನಿರ್ವಹಿಸುವವರು," ಎಂದು ಅವರು ಹೇಳಿದರು. ಸತತ ಮೂರು ದಿನಗಳ ಕಾಲ ಶುಲ್ಕ ಪಾವತಿಸದ ಕಾರಣ, ಶೋಂತು ಅವರ ಹೆಸರನ್ನು ಮೆರಿಟ್ ಪಟ್ಟಿಯಿಂದ ಕೈಬಿಡಲಾಯಿತು.

ಶೋಂತು ಭರವಸೆ ಕಳೆದುಕೊಳ್ಳಲಿಲ್ಲ. ಕ್ಲರ್ಕ್‌ ಮೂಲಕ ಕಾಲೇಜು ಇನ್ನಷ್ಟು ಸೀಟುಗಳನ್ನು ಹೆಚ್ಚಿಸಲಿದೆ ಎಂದು ತಿಳಿದುಬಂದಿತು. ಅವರು ಹೊಸ ಸೀಟ್‌ ಅನುಮೋದನೆ ಆಗುವ ತನಕ ತನಗೆ ತರಗತಿಗಳಿಗೆ ಹಾಜರಾಗಲು ಅನುಮತಿ ಕೇಳಿದರು.ಅನುಮತಿ ದೊರಕಿತು. ಅವರು ವಡಾಲಿಯಿಂದ ವಿಜಯನಗರಕ್ಕೆ ಓಡಾಡತೊಡಗಿದರು. ಇದಕ್ಕಾಗಿ ದಿನಕ್ಕೆ 50 ರೂ.ಗಳು ಬೇಕಾಗುತ್ತಿತ್ತು. ಈಗಲೂ ಸ್ನೇಹಿತರು ಸಹಾಯ ನೀಡಲು ಮುಂದೆ ಬಂದರು. ಅವರ ಗೆಳೆಯರಲ್ಲಿ ಒಬ್ಬರಾದ ಶಶಿಕಾಂತ್‌ ಬಸ್‌ ಪಾಸ್‌ ಖರೀದಿಗಾಗಿ 250 ರೂಪಾಯಿಗಳನ್ನು ನೀಡಿದರು. ಹಲವು ಮನವಿಗಳ ನಂತರ ಕಾಲೇಜಿನ ಕ್ಲರ್ಕ್‌ ಅವರ ಪಾಸಿನ ಮೇಲೆ ಕಾಲೇಜಿನ ಸೀಲ್‌ ಹಾಕಿದರು. ಈ ಸೀಲ್‌ ಅವರಿಗೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯತಿ ಪಾಸ್‌ ಪಡೆಯಲು ಅನಿವಾರ್ಯ. ಕಾಲೇಜಿನಲ್ಲಿ ಸೀಟು ಸಿಗುವ ಭರವಸೆಯಲ್ಲಿ ಶೋಂತು ಒಂದೂವರೆ ತಿಂಗಳು ಕಾಲೇಜಿಗೆ ಹೋದರು. ಆದರೆ ಕಾಲೇಜಿಗೆ ಹೆಚ್ಚುವರಿ ಸೀಟುಗಳಿಗೆ ಅನುಮತಿ ದೊರೆಯಲಿಲ್ಲ. ಅದು ತಿಳಿದ ದಿನದಿಂದ ಅವರು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದರು.

ಶೋಂತು ಪುನಃ ಕೃಷಿ ಕಾರ್ಮಿಕರಾಗಿ ಕೆಲಸ ಮಾಡತೊಡಗಿದರು. ಒಂದು ತಿಂಗಳು ಹೊಲದಲ್ಲಿ ಕೆಲಸ ಮಾಡಿದ ನಂತರ ಅವರು ವಡಾಲಿ ಗ್ರಾಮದ ರೆಪಿಡಿಮಾತಾ ಮಂದಿರದ ಬಳಿ ರಸ್ತೆ ಬದಿಯಲ್ಲಿರುವ ರಾಜುಭಾಯ್ ಅವರೊಂದಿಗೆ ಟೈಲರಿಂಗ್ ಕೆಲಸವನ್ನು ಪ್ರಾರಂಭಿಸಿದರು. ನಂತರ ಹುಣ್ಣಿಮೆಗೆ ಮೂರು ದಿನಗಳಿರುವಾಗ ಶೋಂತು ತನ್ನ ಸ್ನೇಹಿತ ಶಶಿಕಾಂತ್ ಅವರನ್ನು ಭೇಟಿಯಾದರು. “ಶಾಂತಿಲಾಲ್‌ ತರಗತಿಯ ಪಾಠಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಕೆಲವರು ವಿದ್ಯಾರ್ಥಿಗಳು ಪಿಜಿಡಿಸಿಎ ಕೋರ್ಸನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ, ಮತ್ತು ನಿನಗೆ ಈಗ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ," ಎಂದು ಶಶಿಕಾಂತ್ ಹೇಳಿದರು.

ಮರುದಿನ ವಿಜಯನಗರಕ್ಕೆ ಹೋಗಿ ಆ ಗುಮಾಸ್ತರನ್ನು ಮತ್ತೆ ಭೇಟಿಯಾದರು. ಆ ವ್ಯಕ್ತಿಯು ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಿದನು. ಶೋಂತು ರಾಜುಭಾಯಿಯೊಡನೆ ಕೆಲಸ ಮಾಡಿ ಸಂಪಾದಿಸಿದ್ದ 1,000 ರೂಪಾಯಿಗಳನ್ನು ಪಾವತಿಸಿದರು. "ದೀಪಾವಳಿ ವೇಳೆಗೆ ಉಳಿದ 5,200 ರೂಪಾಯಿಗಳ ವ್ಯವಸ್ಥೆ ಮಾಡಲು ಏನನ್ನಾದರೂ ಮಾಡುತ್ತೇನೆ," ಎಂದು ಹೇಳಿ ಕಾಲೇಜಿನಲ್ಲಿ ಪ್ರವೇಶ ಪಡೆದರು.

ಅವರು ಕಾಲೇಜಿಗೆ ಪ್ರವೇಶ ಪಡೆದ ಹದಿನೈದು ದಿನಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ಆರಂಭಗೊಂಡವು. ಶೋಂತು ಇದರಲ್ಲಿ ಫೇಲ್‌ ಆದರು. ಅವರಿಗೆ ಯಾವುದೇ ತರಬೇತಿ ಇದ್ದಿರಲಿಲ್ಲ. ಅವರ ಶಿಕ್ಷಕರು ಕೋರ್ಸಿಗೆ ಸೇರಿದ್ದು ತುಂಬಾ ತಡವಾಗಿರುವುದರಿಂದ ಸುಮ್ಮನೆ ಹಣ ವ್ಯರ್ಥ ಮಾಡದಂತೆ ಬುದ್ಧಿ ಹೇಳಿದರು. ನಿನ್ನಿಂದ ಪರೀಕ್ಷೆಗಳನ್ನು ಪಾಸ್‌ ಮಾಡುವುದು ಕಷ್ಟವಾಗಹುದು ಎಂದರು. ಆದರೆ ಶೋಂತು ಈ ಕುರಿತು ಭರವಸೆಯನ್ನು ಕಳೆದುಕೊಂಡಿರಲಿಲ್ಲ. ವಡಾಲಿಯ ಹಿಮಾಂಶು ಭಾವಸಾರ್ ಮತ್ತು ಗಜೇಂದ್ರ ಸೋಲಂಕಿ ಮತ್ತು ಇಡಾರ್‌ನ ಶಶಿಕಾಂತ್ ಪರ್ಮಾರ್ ಅವರು ಗೆಳೆಯ ಕಳೆದುಕೊಂಡಿದ್ದನ್ನು ಸರಿದೂಗಿಸಲು ನೆರವಾದರು. ಅವರು ಮೊದಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಶೇಕಡಾ 50ರಷ್ಟು ಅಂಕಗಳನ್ನು ಗಳಿಸಿದರು. ಅವರ ಶಿಕ್ಷಕರು ತಾವು ನೋಡಿದ್ದನ್ನು ನಂಬಲು ತಯಾರಿರಲಿಲ್ಲ.

PHOTO • Labani Jangi

ಶೋಂತು ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರು. ಅವರ ಶಿಕ್ಷಕರು ಹಣ ವ್ಯರ್ಥ ಮಾಡದಂತೆ ಬುದ್ಧಿ ಹೇಳಿದ್ದರು. ಪರೀಕ್ಷೆಗಳನ್ನು ಪಾಸ್‌ ಮಾಡಲು ಕಷ್ಟವಾಗಬಹುದೆನ್ನುವುದು ಅವರ ವಾದವಾಗಿತ್ತು. ಆದರೆ ಶೋಂತು ಭರವಸೆ ಕಳೆದುಕೊಂಡಿರಲಿಲ್ಲ

ನಂತರ ಎರಡನೇ ಸೆಮಿಸ್ಟರಿನ ಶುಲ್ಕವು 9,300 ರೂಪಾಯಿಗಳಾಗಿತ್ತು. ಶೋಂತು ಹಿಂದಿನ ಸೆಮಿಸ್ಟರಿನ ಶುಲ್ಕದಲ್ಲಿ 5,200 ಪಾವತಿಸುವುದು ಬಾಕಿಯಿತ್ತು, ಇದರಿಂದಾಗಿ ಒಟ್ಟು 14,500 ರೂಪಾಯಿಗಳನ್ನು ಅವರು ಕಟ್ಟಬೇಕಿತ್ತು. ಅದು ಅವರಿಗೆ ಪಾವತಿಸಲು ಅಸಾಧ್ಯವಾದ ಮೊತ್ತವಾಗಿತ್ತು. ವಿನಂತಿಗಳು ಮತ್ತು ಶಿಫಾರಸುಗಳೊಂದಿಗೆ, ಅವರ ಪರಿಸ್ಥಿತಿಯು ಎರಡನೇ ಸೆಮಿಸ್ಟರಿನ ಅಂತಿಮ ಪರೀಕ್ಷೆಗಳವರೆಗೂ ಎಳೆದುಕೊಂಡು ಹೋಯಿತು. ಆದರೆ ಈಗ ಶುಲ್ಕವನ್ನು ಪಾವತಿಸಲೇಬೇಕಾಗಿತ್ತು. ಈ ಬಾರಿ ಶೋಂತು ಸಿಕ್ಕಿಹಾಕಿಕೊಂಡರು. ಅವರಿಗೆ ಮುಂದಿನ ದಾರಿ ಕಾಣಲಿಲ್ಲ. ಕೊನಗೆ, ಅವರ ಪಾಲಿನ ಭರವಸೆಯಾಗಿ ವಿದ್ಯಾರ್ಥಿವೇತನ ಕಂಡಿತು.

ಶೋಂತು ಕೂಡಲೇ ಹೋಗಿ ಗುಮಾಸ್ತನನ್ನು ಕಂಡು ವಿದ್ಯಾರ್ಥಿವೇತನ ಬಂದಾಗ ಅದರ ಮೂಲಕ ವಿದ್ಯಾರ್ಥಿವೇತನದ ಮೊತ್ತದಿಂದ ಕಡಿತಗೊಳಿಸುವಂತೆ ಅವರು ವಿನಂತಿಸಿದರು. ಗುಮಾಸ್ತ ಕೊನೆಗೂ ಒಪ್ಪಿಕೊಂಡರು. ಆದರೆ ಒಂದು ಷರತ್ತು ವಿಧಿಸಿದ್ದರು. ಅದರ ಪ್ರಕಾರ ಶೋಂತು ದೇನಾ ಬ್ಯಾಂಕಿನ ವಿಜಯನಗರ ಶಾಖೆಯಲ್ಲಿ ಖಾತೆಯನ್ನು ತೆರೆಯಬೇಕಾಗಿತ್ತು ಮತ್ತು ಸಹಿ ಮಾಡಿದ ಖಾಲಿ ಚೆಕ್ಕನ್ನು ಭದ್ರತಾ ಠೇವಣಿಯಾಗಿ ಹಸ್ತಾಂತರಿಸಬೇಕಾಗಿತ್ತು. ಹೊಸ ಖಾತೆಯನ್ನು ತೆರೆಯಲು ಅಗತ್ಯವಿರುವ 500 ರೂಪಾಯಿಗಳು ಶೋಂತುವಿನ ಬಳಿ ಇರಲಿಲ್ಲ.

ಅವರು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದರು, ಆದರೆ ಕೇವಲ 700 ರೂಪಾಯಿಗಳ ಠೇವಣಿಯೊಂದಿಗೆ, ಬ್ಯಾಂಕ್ ಅವರಿಗೆ ಚೆಕ್ ಪುಸ್ತಕವನ್ನು ನೀಡಲು ಬ್ಯಾಂಕ್ ನಿರಾಕರಿಸಿತು. ಅವರು ತಮ್ಮ ಪರಿಸ್ಥಿತಿಯನ್ನು ರಮೇಶ್ ಭಾಯ್ ಸೋಲಂಕಿ ಎಂಬ ಪರಿಚಿತರಿಗೆ ವಿವರಿಸಿದರು. ರಮೇಶಭಾಯಿ ಶೋಂತು ಹೇಳಿದ ಮಾತುಗಳನ್ನು ನಂಬಿದರು ಮತ್ತು ದೇನಾ ಬ್ಯಾಂಕಿನಿಂದ ಒಂದು ಖಾಲಿ ಚೆಕ್ಕನ್ನು ಅವರ ಸ್ವಂತ ಸಹಿಯೊಂದಿಗೆ ಅವರಿಗೆ ನೀಡಿದರು. ಶೋಂತು ಚೆಕ್ಕನ್ನು ಕಾಲೇಜಿನಲ್ಲಿ ಠೇವಣಿ ಇಟ್ಟರು ಮತ್ತು ನಂತರ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುಮತಿಸಲಾಯಿತು.

ಉತ್ತರ ಗುಜರಾತಿನ ಹೇಮಚಂದ್ರಾಚಾರ್ಯ ವಿಶ್ವವಿದ್ಯಾಲಯ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಅವರು ಶೇ.58ರಷ್ಟು ಅಂಕಗಳನ್ನು ಗಳಿಸಿದರು. ಆದರೆ ಅವರ ಅದರ ಅಂಕಪಟ್ಟಿಯನ್ನು ಸಿಗಲೇ ಇಲ್ಲ.

ಕಾಲ್ ಲೆಟರ್ ಬರುವ ಮೊದಲು ತನ್ನ ಅಂಕಪಟ್ಟಿಯನ್ನು ಪಡೆಯುವ ಭರವಸೆಯಿಂದ ಶೋಂತು ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸಿದರು, ಆದರೆ ಅದು ಹಾಗಾಗಲಿಲ್ಲ. ಅವರ ವಿದ್ಯಾರ್ಥಿವೇತನವನ್ನು ಅನುಮೋದಿಸುವವರೆಗೆ ಮತ್ತು ಅವರ ಶುಲ್ಕವನ್ನು ಪಾವತಿಸುವವರೆಗೆ ಅಂಕಪಟ್ಟಿಯನ್ನು ತಡೆಹಿಡಿಯಲಾಯಿತು. ತನ್ನ ಬಳಿ ಮೂಲ ಅಂಕಪಟ್ಟಿ ಇಲ್ಲದ ಕಾರಣ ಶೋಂತು ಸಂದರ್ಶನಕ್ಕೆ ಹೋಗಲಿಲ್ಲ, ಅಲ್ಲಿ ಅದು ಅಗತ್ಯವಾಗಿತ್ತು.

ಸಬರಕಾಂತದ ಇಡಾರ್‌ನಲ್ಲಿ ಹೊಸದಾಗಿ ಆರಂಭಗೊಂಡ ಐಟಿಐ ಕಾಲೇಜಿನಲ್ಲಿ ತಿಂಗಳಿಗೆ 2,500 ರೂಪಾಯಿಗಳ ಸಂಬಳದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಅವರು, ಒಂದು ತಿಂಗಳ ಅವಧಿಯಲ್ಲಿ ತಮ್ಮ ಅಂಕಪಟ್ಟಿಯನ್ನು ಹಾಜರುಪಡಿಸಬೇಕೆಂಬ ಷರತ್ತಿನ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಒಂದು ತಿಂಗಳು ಕಳೆದರೂ ಅಂಕಪಟ್ಟಿ ಬಂದಿರಲಿಲ್ಲ. ಅವರು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ವಿಚಾರಿಸಿದಾಗ, ವಿದ್ಯಾರ್ಥಿವೇತನದ ಮೊತ್ತವನ್ನು ಈಗಾಗಲೇ ಕಾಲೇಜಿಗೆ ವರ್ಗಾಯಿಸಲಾಗಿದೆ ಎಂದು ಅವರಿಗೆ ತಿಳಿಸಲಾಯಿತು. ಶೋಂತು ವಿಜಯನಗರಕ್ಕೆ ಭೇಟಿ ನೀಡಿ ಗುಮಾಸ್ತರೊಡನೆ ಮಾತನಾಡಿದರು. ಗುಮಾಸ್ತ ಅನುದಾನವನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು, ಆದರೆ ಅದನ್ನು ಕಾಲೇಜು ಅನುಮೋದಿಸಿದಾಗಲಷ್ಟೇ ಅವರ ಶುಲ್ಕವನ್ನು ಅದರಿಂದ ಕಡಿತಗೊಳಿಸಬಹುದಿತ್ತು. ಮತ್ತು ಅದರ ನಂತರವೇ ಅವರು ತನ್ನ ಅಂಕಪಟ್ಟಿಯನ್ನು ಪಡೆಯಲು ಸಾಧ್ಯವಾಗುತ್ತಿತ್ತು.

ರಮೇಶಭಾಯಿ ಸಹಿ ಮಾಡಿದ ಖಾಲಿ ಚೆಕ್ಕನ್ನು ಹಿಂದಿರುಗಿಸುವಂತೆ ಶೋಂತುವನ್ನು ವಿನಂತಿಸಿದರು. "ಅದು ನಿಮಗೆ ಸಿಗಲಿದೆ.” ಎಂದು ಇನ್ನು ಇಲ್ಲಿಗೆ ಬರುವುದು ಬೇಡ ಎಂದು ಕಳುಹಿಸಿದರು. "ನನಗೆ ಕರೆ ಮಾಡಿ ನಿಮ್ಮ ಖಾತೆ ಸಂಖ್ಯೆಯನ್ನು ಹೇಳಿ," ಎಂದು ಅವರು ಹೇಳಿದರು. ದೀಪಾವಳಿ ಮತ್ತು ಹೊಸ ವರ್ಷದ ನಡುವೆ ಬಿದ್ದ ನಿಷ್ಕ್ರಿಯ ದಿನದಂದು ಶೋಂಟು ಗುಮಾರಿಗೆ ಕರೆ ಮಾಡಿದರು. "ನೀವು ಯಾವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೀರಿ ಎಂದು ಹೇಳಿದಿರಿ?" ಗುಮಾಸ್ತ ಕೇಳಿದರು. "ಬರೋಡಾ ಬ್ಯಾಂಕ್" ಎಂದು ಶೋಂತು ಹೇಳಿದರು. "ನೀವು ಮೊದಲು ದೇನಾ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬೇಕು," ಎಂದು ಗುಮಾಸ್ತನು ಉತ್ತರಿಸಿದರು.

ಅಂತಿಮವಾಗಿ ಶೋಂತುವಿಗೆ ಸರ್ವ ಶಿಕ್ಷಣ ಅಭಿಯಾನದಲ್ಲಿ ಕೆಲಸ ದೊರಕಿತು ಮತ್ತು ಜೂನ್ 2021 ರಿಂದ , ಸಬ ರಕಾಂ ಜಿಲ್ಲೆಯ ಬಿಆ ರ್ ಸಿ ಭವನ್ ಖೇ ಡ್ ಬ್ರ ಹ್ಮಾದಲ್ಲಿ 11 ತಿಂಗಳ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ . ಪ್ರಸ್ತುತ ಅವರು ಡಾಟಾ ಎಂಟ್ರಿ ಆಪರೇಟರ್ ಕಮ್ ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದು , 10,500 ರೂಪಾಯಿಗಳ ಸಂಬಳ ಪಡೆಯುತ್ತಿದ್ದಾರೆ .

ಕಥೆಯನ್ನು ಲೇಖಕರ ಗುಜರಾತಿ ಭಾಷೆಯ ಸೃಜನಶೀಲ ನೈಜ - ಕಥನಗಳ ಸಂಗ್ರಹವಾದ ಮಾ ಟಿ ಎನ್ನುವ ಪುಸ್ತಕದಿಂದ ಆರಿಸಿ ಕೊಳ್ಳಲಾಗಿದೆ

ಅನುವಾದ: ಶಂಕರ. ಎನ್. ಕೆಂಚನೂರು

Umesh Solanki

ਉਮੇਸ਼ ਸੋਲਾਂਕੀ ਅਹਿਮਦਾਬਾਦ ਦੇ ਇੱਕ ਫ਼ੋਟੋਗ੍ਰਾਫ਼ਰ, ਡਾਕਿਊਮੈਂਟਰੀ ਫ਼ਿਲਮਮੇਕਰ ਤੇ ਲੇਖਕ ਹਨ, ਜਿਨ੍ਹਾਂ ਨੇ ਪੱਤਰਕਾਰਤਾ ਵਿੱਚ ਮਾਸਟਰ ਕੀਤਾ ਹੈ। ਉਹ ਖ਼ਾਨਾਬਦੋਸ਼ ਹੋਂਦ (ਆਜੜੀਆਂ ਦੇ ਜੀਵਨ) ਨੂੰ ਪਿਆਰ ਕਰਦੇ ਹਨ। ਉਨ੍ਹਾਂ ਕੋਲ਼ ਤਿੰਨ ਪ੍ਰਕਾਸ਼ਤ ਕਾਵਿ-ਸੰਗ੍ਰਹਿ, ਇੱਕ ਨਾਵਲ-ਇੰਨ-ਵਰਸ, ਇੱਕ ਨਾਵਲ ਤੇ ਸਿਰਜਾਣਤਮਕ ਗ਼ੈਰ-ਕਲਪ ਦਾ ਇੱਕ ਪੂਰਾ ਸੰਗ੍ਰਹਿ ਮੌਜੂਦ ਹੈ।

Other stories by Umesh Solanki
Illustration : Labani Jangi

ਲਾਬਨੀ ਜਾਂਗੀ 2020 ਤੋਂ ਪਾਰੀ ਦੀ ਫੈਲੋ ਹਨ, ਉਹ ਵੈਸਟ ਬੰਗਾਲ ਦੇ ਨਾਦਿਆ ਜਿਲ੍ਹਾ ਤੋਂ ਹਨ ਅਤੇ ਸਵੈ-ਸਿੱਖਿਅਤ ਪੇਂਟਰ ਵੀ ਹਨ। ਉਹ ਸੈਂਟਰ ਫਾਰ ਸਟੱਡੀਜ ਇਨ ਸੋਸ਼ਲ ਸਾਇੰਸ, ਕੋਲਕਾਤਾ ਵਿੱਚ ਮਜ਼ਦੂਰ ਪ੍ਰਵਾਸ 'ਤੇ ਪੀਐੱਚਡੀ ਦੀ ਦਿਸ਼ਾ ਵਿੱਚ ਕੰਮ ਕਰ ਰਹੀ ਹਨ।

Other stories by Labani Jangi
Editor : Pratishtha Pandya

ਪ੍ਰਤਿਸ਼ਠਾ ਪਾਂਡਿਆ PARI ਵਿੱਚ ਇੱਕ ਸੀਨੀਅਰ ਸੰਪਾਦਕ ਹਨ ਜਿੱਥੇ ਉਹ PARI ਦੇ ਰਚਨਾਤਮਕ ਲੇਖਣ ਭਾਗ ਦੀ ਅਗਵਾਈ ਕਰਦੀ ਹਨ। ਉਹ ਪਾਰੀਭਾਸ਼ਾ ਟੀਮ ਦੀ ਮੈਂਬਰ ਵੀ ਹਨ ਅਤੇ ਗੁਜਰਾਤੀ ਵਿੱਚ ਕਹਾਣੀਆਂ ਦਾ ਅਨੁਵਾਦ ਅਤੇ ਸੰਪਾਦਨ ਵੀ ਕਰਦੀ ਹਨ। ਪ੍ਰਤਿਸ਼ਠਾ ਦੀਆਂ ਕਵਿਤਾਵਾਂ ਗੁਜਰਾਤੀ ਅਤੇ ਅੰਗਰੇਜ਼ੀ ਵਿੱਚ ਪ੍ਰਕਾਸ਼ਿਤ ਹੋ ਚੁੱਕਿਆਂ ਹਨ।

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru