“ಹುರ್ರ್…
ಹೆಹೆಹೆಹೇ… ಹೋ… ಹೆಹೆಹೇ… ಹೋ…”
ಈ ದನಿ ಕೇಳುತ್ತಿದ್ದಂತೆ ತೋಟದ ಭಾಗದ ಆಕಾಶ ಹಕ್ಕಿಗಳ ಕೂಗಿನೊಂದಿಗೆ ತುಂಬಿಕೊಂಡು ರೆಕ್ಕೆಗಳ ಪಟಪಟಿಸುವಿಕೆಯೂ ಅದರೊಡನೆ ಸೇರಿಕೊಂಡಿತು. ಅವುಗಳನ್ನು ಹಾರುವಂತೆ ದನಿ ಎತ್ತರಿಸಿ ಕೂಗಿದವನು ಸೂರಜ್. ಇವನ ಕೆಲಸ ಈ ಹಕ್ಕಿಗಳು ಕುಳಿತಿದ್ದ ಜಾಗವಾದ ಪೇರಳೆ ತೋಟವನ್ನು ಕಾಯುವುದು. ಹಕ್ಕಿಗಳು ಹಣ್ಣುಗಳನ್ನು ತಿಂದು ಹಾಕದಂತೆ ರಕ್ಷಿಸುವುದು ಇವನ ಪಾಲಿನ ಜವಬ್ದಾರಿ. ಅವುಗಳನ್ನು ಬೆದರಿಸಿ ಓಡಿಸುವ ಸಲುವಾಗಿ ಅವನು ಆಗಾಗ ದೊಡ್ಡ ದನಿಯಲ್ಲಿ ಕೂಗುವುದರ ಜೊತೆಗೆ ಕಮಾನ್ ಅಥವಾ ಗುಲೆಲ್ (ಕವಣೆ) ಬಳಸಿ ರೋಡಾಗಳನ್ನು (ಮಣ್ಣಿನ ಹೆಂಟೆ) ಅವುಗಳೆಡೆಗೆ ಗುರಿಯಿಡುತ್ತಿರುತ್ತಾನೆ.
ವಾಯುವ್ಯ ಪಂಜಾಬಿನ ತರನ್ ತಾರನ್ ಜಿಲ್ಲೆಯ ಅಂಚಿನಲ್ಲಿರುವ ಪಟ್ಟಿ ಎನ್ನುವ ಈ ಊರು ಹಣ್ಣಿನ ತೋಟಗಳಿಗೆ ಹೆಸರುವಾಸಿಯಾಗಿದೆ. ಪೇರಳೆ ಮತ್ತು ಪೀಚ್ ಮರಗಳನ್ನು ನೋಡಿಕೊಳ್ಳಲು ವಲಸೆ ಕಾರ್ಮಿಕರು ವಾರ್ಷಿಕವಾಗಿ ಇಲ್ಲಿಗೆ ಬರುತ್ತಾರೆ. ಯಾವುದೇ ಸಮಯದಲ್ಲಿ ಉದುರಬಹುದಾದ ಮತ್ತು ಮಾಗಿದ ಹಣ್ಣನ್ನು ಹಕ್ಕಿಗಳು ಕುಕ್ಕದಂತೆ ಮತ್ತು ಕೀಳದಂತೆ ನೋಡಿಕೊಳ್ಳುವುದು ಇವರ ಕೆಲಸ. ಈ ಹಣ್ಣಿನ ತೋಟಗಳನ್ನು ಕಾಯುವ ಸೂರಜ್‌ನಂತಹ ಕಾರ್ಮಿಕರನ್ನು ರಾಖೇಂ ಎಂದು ಕರೆಯಲಾಗುತ್ತದೆ.
ಸೂರಜ್ ಬಹಾರ್ದಾರ್ ಕಾವಲು ಕಾಯುವ ತೋಟದಲ್ಲಿ, ಸರಿಸುಮಾರು ಎರಡು ಎಕರೆ ಭೂಮಿಯಲ್ಲಿ ಹರಡಿರುವ ಸುಮಾರು 144 ಪೇರಳೆ ಮರಗಳಿವೆ. ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತನಕದ ಹಣ್ಣಿನ ಋತುವಿನಲ್ಲಿ 15 ವರ್ಷದ ಈ ಹುಡುಗ ಒಬ್ಬನೇ ಇಡೀ ತೋಟವನ್ನು ನೋಡಿಕೊಳ್ಳಬೇಕು. ಅವನಿಗೆ ಮಾಲೀಕರು ತಿಂಗಳಿಗೆ 8,000 ರೂ.ಗಳ ವೇತನವನ್ನು ನೀಡುತ್ತಾರೆ.
"ಮರಗಳು ಹೂ ಬಿಡಲು ಆರಂಭಿಸಿದ ತಕ್ಷಣ, ಭೂಮಾಲೀಕರು ತಮ್ಮ ತೋಟಗಳನ್ನು ಗುತ್ತಿಗೆಗೆ ನೀಡುತ್ತಾರೆ. ಅವುಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಠೇಕೇದಾರರು ತೋಟದ ಕಾವಲಿಗೆ ರಾಖೇಗಳನ್ನು ನೇಮಿಸುತ್ತಾರೆ” ಎಂದು ಸೂರಜ್ ನಮಗೆ ಮಾಹಿತಿ ನೀಡಿದ. ಹೆಚ್ಚಿನ ರಾಖೇಗಳು ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು.









