ಗಣೇಶ್ ಮತ್ತು ಅರುಣ್ ಮುಕನೆ ಈಗ ಶಾಲೆಗೆ ಹೋಗುವಂತಿದ್ದಿದ್ದರೆ ಕ್ರಮವಾಗಿ ಒಂಬತ್ತು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರಬೇಕಿತ್ತು, ಆದರೆ ಅವರು ಕೊಲೊಶಿಯಲ್ಲಿರುವ ತಮ್ಮ ಮನೆಯಲ್ಲಿ ವ್ಯರ್ಥ ಚಟುವಟಿಕೆಗಳಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಕೊಲೋಶಿ ಮುಂಬೈನ ಹೊರವಲಯದಲ್ಲಿರುವ ಥಾಣೆ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಅವರು ಸುತ್ತಮುತ್ತ ಸಿಗುವ ಕಸವನ್ನು ಸಂಗ್ರಹಿಸಿ ಅದರಿಂದ ಕಾರು ಮತ್ತು ಇತರ ವಸ್ತುಗಳನ್ನು ತಯಾರಿಸುತ್ತಾರೆ ಅಥವಾ ಅಲ್ಲಿ ಇಲ್ಲಿ ಕುಳಿತು ತಮ್ಮ ಸಮಯವನ್ನು ಕಳೆಯುತ್ತಾರೆ. ಅವರ ತಂದೆ-ತಾಯಿ ಇಬ್ಬರೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾರೆ.
“ಅವರು ಈಗ ಶಾಲೆಗೆ ಹೋಗುತ್ತಿಲ್ಲ. ಚಿಕ್ಕವನು [ಅರುಣ] ಯಾವಾಗಲೂ ಗುಜರಿ ವಸ್ತುಗಳು ಮತ್ತು ಮರ ಬಳಸಿ ಬಸ್ಸು ತಯಾರಿಸುತ್ತಿರುತ್ತಾನೆ. ಅವನ ಇಡೀ ದಿನ ಆಟದಲ್ಲೇ ಕಳೆದುಹೋಗುತ್ತದೆ,” ಎನ್ನುತ್ತಾರೆ ನಿರಾ ಮುಕನೆ. “ನಂಗೆ ಶಾಲೆಯಲ್ಲಿ ಬೋರ್ ಆಗುತ್ತೆ ಅಂತ ಎಷ್ಟು ಸಲ ಹೇಳಬೇಕು?” ಎಂದು ಕೇಳುತ್ತಾ ಅಮ್ಮನೊಡನೆ ಒಂದಷ್ಟು ಹೊತ್ತು ಕಿತ್ತಾಡಿದ ಅರುಣ ಮತ್ತೆ ತನ್ನ ಗುಜರಿ ವಸ್ತುಗಳಿಂದ ಮಾಡಿದ ಆಟಿಕೆ ಕಾರನ್ನು ಹುಡುಕಿ ಹೋದ.
26 ವರ್ಷದ ನಿರಾ 7ನೇ ತರಗತಿಯವರೆಗೆ ಓದಿದ್ದಾರೆ, ಆದರೆ ಆಕೆಯ ಪತಿ 35 ವರ್ಷದ ವಿಷ್ಣು 2ನೇ ತರಗತಿಯ ನಂತರ ಶಾಲೆಯನ್ನು ತೊರೆದರು. ಮುಕಾನೆ ದಂಪತಿ ತಮ್ಮ ಮಕ್ಕಳು ಔಪಚಾರಿಕ ಶಿಕ್ಷಣವನ್ನು ಪಡೆಯಬೇಕು ಎಂದು ದೃಢವಾಗಿ ಹೇಳುತ್ತಾರೆ. ಮಕ್ಕಳು ಓದದಿದ್ದ ಅವರೂ ತಮ್ಮಂತೆ ಸ್ಥಳೀಯ ತೊರೆಗಳಲ್ಲಿ ಮೀನುಗಾರಿಕೆ ಅಥವಾ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವುದು ಅಥವಾ ಅನೇಕ ಆದಿವಾಸಿ ಕುಟುಂಬಗಳಂತೆ ಶಹಾಪುರ-ಕಲ್ಯಾಣ್ ಪ್ರದೇಶಕ್ಕೆ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ ಹೋಗಬೇಕಾಗುತ್ತದೆನ್ನುವ ಅರಿವು ಅವರಿಗಿದೆ.
"ನನಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಆದರೆ ನನ್ನ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ನಾನು ಬಯಸುತ್ತೇನೆ," ಎಂದು ಮಹಾರಾಷ್ಟ್ರದ ವಿಶೇಷ ಮೂರು ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಒಂದಾದ ಎಂದು ಪಟ್ಟಿ ಮಾಡಲಾದ ಕತ್ಕರಿ ಸಮುದಾಯಕ್ಕೆ ಸೇರಿದ ವಿಷ್ಣು ಹೇಳಿದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2013ರ ವರದಿಯ ಪ್ರಕಾರ, ರಾಜ್ಯದಲ್ಲಿ ಕತ್ಕರಿ ಸಮುದಾಯವು ಶೇಕಡಾ 41ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.
ನಾಲ್ಕು ವರ್ಷಗಳ ಹಿಂದೆ ಸಾಕಷ್ಟು ವಿದ್ಯಾರ್ಥಿಗಳು ಲಭ್ಯವಿಲ್ಲದ ಕಾರಣ ಸ್ಥಳೀಯ ಸರ್ಕಾರಿ ಶಾಲೆಯನ್ನು ಮುಚ್ಚುವುದಾಗಿ ಘೋಷಿಸಿದಾಗ, ವಿಷ್ಣು ಮತ್ತು ಅವರ ಪತ್ನಿ ತಮ್ಮ ಮಕ್ಕಳನ್ನು ಮಾಧ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಆಶ್ರಮ ಶಾಲೆಗೆ ಸೇರಿಸಿದರು. ಸ್ಥಳೀಯವಾಗಿ ಮಾಧ್ ಆಶ್ರಮ ಶಾಲೆ ಎಂದು ಕರೆಯಲ್ಪಡುವ ಈ ಸರ್ಕಾರಿ ವಸತಿ ಶಾಲೆಯು 1ರಿಂದ 12ನೇ ತರಗತಿಯವರೆಗೆ ತರಗತಿಗಳನ್ನು ಹೊಂದಿದೆ ಮತ್ತು ಇದು ಥಾಣೆ ಜಿಲ್ಲೆಯ ಮುರ್ಬಾದ್‌ನಿಂದ 30 ಕಿಲೋಮೀಟರ್ ದೂರದಲ್ಲಿದೆ. ಒಟ್ಟು 379 ವಿದ್ಯಾರ್ಥಿಗಳಲ್ಲಿ, ದಂಪತಿಗಳ ಮಕ್ಕಳು ಸೇರಿ 125 ಮಕ್ಕಳು ವಸತಿ ವಿದ್ಯಾರ್ಥಿಗಳು. "ಅಲ್ಲಿ ಅವರ ವಿದ್ಯಾಭ್ಯಾಸ ಮತ್ತು ಊಟ ಎರಡಕ್ಕೂ ಶಾಲೆಯಲ್ಲಿ ವ್ಯವಸ್ಥೆ ಇದ್ದ ಕಾರಣ ನನಗೆ ತುಂಬಾ ಖುಷಿಯಾಯಿತು ಎನ್ನುತ್ತಾರೆ ವಿಷ್ಣು. ಆದರೆ ನಮಗೆ ಅವರ ನೆನಪು ಬಹಳವಾಗಿ ಕಾಡುತ್ತಿತ್ತು."







