ತಮಿಳು ನಾಡಿನ ಅನೇಕ ಭಾಗಗಳಂತೆಯೇ ತೂಥುಕುಡಿ ಪಟ್ಟಣದ ಬೀದಿಗಳಲ್ಲಿ ಜನರು ಗುಂಪು ಸೇರತೊಡಗಿದಾಗ – ಚಿಕ್ಕ ಹುಡುಗನೊಬ್ಬ ಓಡೋಡಿ ಬಂದು ಆ ಗುಂಪನ್ನು ಸೇರಿದ. ಕೆಲವೇ ಕ್ಷಣಗಳಲ್ಲಿ ಆತ ಪ್ರಜಾತಂತ್ರವಾದಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆಯ ಭಾಗವೆನಿಸಿದ. "ಇಂದು ನಿಮಗೆ ಇದು ಅರ್ಥವಾಗಲಾರದು. ಭಗತ್ ಸಿಂಗ್ ಅವರ ಮರಣದಂಡನೆಯು ತಮಿಳು ನಾಡಿನ ಸ್ವಾತಂತ್ರ್ಯ ಹೋರಾಟದ ಸಂಕ್ರಮಣ ಕಾಲವೆನ್ನಬಹುದು. ಸ್ತಂಭೀಭೂತರಾಗಿದ್ದ ಜನರ ಕಣ್ಣುಗಳು ಹನಿಗೂಡಿದ್ದವು", ಎಂದು ಅವರು ತಿಳಿಸಿದರು.
"ನನಗಾಗ ಕೇವಲ ಒಂಭತ್ತು ವರ್ಷ", ಎನ್ನುತ್ತಾ ಅವರು ಮುಸಿನಕ್ಕರು.
1947ರ ಆಗಸ್ಟ್ 14ರಂದು ಬ್ರಿಟಿಷರ ಜೈಲಿನಿಂದ ಹೊರಬಂದ ವ್ಯಕ್ತಿ ಇವರು. "ಅಂದು, ನ್ಯಾಯಾಧೀಶರು ಕೇಂದ್ರೀಯ ಕಾರಾಗೃಹಕ್ಕೆ ಬಂದು ನಮ್ಮನ್ನು ಬಿಡುಗಡೆಗೊಳಿಸಿದರು. ಮಧುರೈ ಒಳಸಂಚಿನ ಮೊಕದ್ದಮೆಯಲ್ಲಿ ನಮ್ಮನ್ನು ಬಿಡುಗಡೆಗೊಳಿಸಲಾಗಿತ್ತು. ಮಧುರೈ ಕೇಂದ್ರೀಯ ಕಾರಾಗೃಹದಿಂದ ಹೊರಬರುತ್ತಲೇ ಸ್ವಾತಂತ್ರ್ಯದ ಮೆರವಣಿಗೆಯಲ್ಲಿ ನಾನು ಭಾಗಿಯಾದೆ", ಎನ್ನುವ ಅವರಿಗೆ ಇಂದು 99 ವರ್ಷಗಳು ತುಂಬುತ್ತವೆಯಾದರೂ, (ಜುಲೈ 15, 2020) ತಮ್ಮನ್ನು ಸ್ವಾತಂತ್ರ್ಯ ಹೋರಾಟಗಾರ, ಭೂಗತ ಕ್ರಾಂತಿಕಾರಿ, ಬರಹಗಾರ, ವಾಗ್ಮಿ ಹಾಗೂ ಪ್ರಜಾತಂತ್ರವಾದಿ ಬುದ್ಧಿಜೀವಿಯನ್ನಾಗಿ ರೂಪಿಸಿದ ಕಿಚ್ಚು ಹಾಗೂ ಹುಮ್ಮಸ್ಸನ್ನು ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ.
ತಮ್ಮ ನೂರನೇ ವಯಸ್ಸಿಗೆ ಕಾಲಿಟ್ಟಿರುವ ಎನ್. ಶಂಕರಯ್ಯ ಈಗಲೂ ಉಪನ್ಯಾಸ ಹಾಗೂ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತ ಬೌದ್ಧಿಕವಾಗಿ ಸಕ್ರಿಯರಾಗಿದ್ದಾರೆ. ಈಗ ನಾವು ಇವರ ಸಂದರ್ಶನವನ್ನು ನಡೆಸುತ್ತಿರುವ ಚೆನ್ನೈ ಉಪನಗರ, ಕ್ರೊಂಪೇಟ್‍ನಲ್ಲಿನ ಅವರ ಮನೆಯಿಂದ 2018ರ ಅಂತಿಮ ಭಾಗದಲ್ಲಿ, ತಮಿಳು ನಾಡು ಪ್ರಗತಿಶೀಲ ಬರಹಗಾರರು ಮತ್ತು ಕಲಾವಿದರ ಸಭೆಯನ್ನುದ್ದೇಶಿಸಿ ಮಾತನಾಡಲು ಇವರು ಮಧುರೈಗೆ ತೆರಳಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ, ತಮ್ಮ ಪದವಿಯನ್ನೆಂದಿಗೂ ಪೂರೈಸಲು ಸಾಧ್ಯವಾಗದ ಇವರು ಅನೇಕ ರಾಜಕೀಯ ಕಿರುಹೊತ್ತಿಗೆಗಳು, ಪುಸ್ತಿಕೆಗಳು, ಕರಪತ್ರಗಳು ಹಾಗೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುತ್ತಾರೆ.
ನರಸಿಂಹಲು ಶಂಕರಯ್ಯನವರು ಮಧುರೈನ ದಿ ಅಮೆರಿಕನ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿ.ಎ. ಪದವಿಯನ್ನು ಪಡೆಯುವ ದಿನಗಳು ಹತ್ತಿರವಾಗುತ್ತಿದ್ದವು. ಆದರೆ 1941ರಲ್ಲಿ, ಕೇವಲ ಎರಡು ವಾರಗಳ ಅಂತರದಲ್ಲಿ ಅಂತಿಮ ವರ್ಷದ ಪರೀಕ್ಷೆಯನ್ನು ತಪ್ಪಿಸಿಕೊಂಡರು. "ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ನಾನು ಜಂಟಿ ಕಾರ್ಯದರ್ಶಿಯಾಗಿದ್ದೆ", ಎಂದು ತಿಳಿಸಿದ ಇವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರಲ್ಲದೆ, ಕಾಲೇಜಿನ ಆವರಣದಲ್ಲಿ ಕವನ ಸಮಾಜವನ್ನು ಸ್ಥಾಪಿಸಿದ್ದರು. ಫುಟ್‍ಬಾಲ್ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದೂ ಹೌದು. ಅಂದಿನ ದಿನಗಳಲ್ಲಿ ಬ್ರಿಟಿಷ್ ರಾಜ್ ವಿರೋಧಿ ಆಂದೋಳನಗಳಲ್ಲಿ ಇವರು ಬಹಳ ಸಕ್ರಿಯರಾಗಿದ್ದರು. "ನನ್ನ ಕಾಲೇಜು ದಿನಗಳಲ್ಲಿ ವಾಮ ಪಂಥೀಯ ವಿಚಾರಧಾರೆಯನ್ನುಳ್ಳ ಅನೇಕರೊಂದಿಗೆ ಗೆಳೆತನವಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಗದ ಹೊರತು, ಸಾಮಾಜಿಕ ಸುಧಾರಣೆಯು ಸಂಪೂರ್ಣವೆನಿಸುವುದಿಲ್ಲವೆಂಬುದನ್ನು ನಾನು ಅರ್ಥೈಸಿಕೊಂಡಿದ್ದೆ", ಎಂದು ಸಹ ಅವರು ತಿಳಿಸಿದರು. ತಮ್ಮ 17ನೇ ವಯಸ್ಸಿಗಾಗಲೇ ಇವರು ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಆಗ ಈ ಪಕ್ಷವನ್ನು ನಿಷೇಧಿಸಲಾಗಿದ್ದು ಭೂಗತವಾಗಿತ್ತು) ಸದಸ್ಯರಾಗಿದ್ದರು.
ಅಮೆರಿಕನ್ ಕಾಲೇಜಿನ ಸಕಾರಾತ್ಮಕ ನಿಲುವನ್ನು ನೆನಪಿಸಿಕೊಂಡ ಅವರು, "ನಿರ್ದೇಶಕರು ಹಾಗೂ ಶಿಕ್ಷಕ ವರ್ಗದ ಕೆಲವರು ಅಮೆರಿಕನ್ನರಾಗಿದ್ದು, ಉಳಿದವರು ತಮಿಳರಾಗಿದ್ದರು. ಇವರಿಂದ ತಟಸ್ಥ ನಿಲುವನ್ನು ನಿರೀಕ್ಷಿಸಲಾಗಿತ್ತಾದರೂ ಅವರು ಬ್ರಿಟಿಷರ ಪರವಾಗಿರಲಿಲ್ಲ. ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಅಲ್ಲಿ ಅವಕಾಶವಿತ್ತು...", ಎನ್ನುತ್ತಾರೆ. ಬ್ರಿಟಿಷರ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ, ಅನ್ನಾಮಲೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಬಂಧಿಸಿದ ಕಾರಣ 1941ರಲ್ಲಿ ಮಧುರೈನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. "ನಾವು ಕರಪತ್ರವೊಂದನ್ನು ಹೊರಡಿಸಿದೆವು. ನಮ್ಮ ಹಾಸ್ಟೆಲ್ ಕೊಠಡಿಗಳನ್ನು ಶೋಧಿಸಲಾಯಿತು. ಕರಪತ್ರವನ್ನು ಹೊಂದಿದ್ದ ಕಾರಣಕ್ಕಾಗಿ ನಾರಾಯಣಸ್ವಾಮಿಯನ್ನು (ನನ್ನ ಸ್ನೇಹಿತ) ಬಂಧಿಸಲಾಯಿತು. ನಂತರ ನಾವು ಪ್ರತಿಭಟನಾ ಸಭೆಯನ್ನು ಆಯೋಜಿಸಿ, ಆತನ ಬಂಧನವನ್ನು ಖಂಡಿಸಿದೆವು..."








