"ಶಾಲೆತ್ ಜಾತೆಯ್... ಶಾಲೆತ್ ... ವೈಭವ್... ವೈಭವ್... ಶಾಲೆತ್ ... [ಶಾಲೆಗೆ ಹೋಗಲು ಬಯಸುತ್ತೇನೆ... ಶಾಲೆ...]."
ಹೀಗೆ ಪ್ರತೀಕ್ ಹೇಳುತ್ತಲೇ ಇರುತ್ತಾನೆ. ಇಲ್ಲದ ತನ್ನ ಸಹಪಾಠಿಯನ್ನು ಕರೆಯುತ್ತಲೇ ಇರುತ್ತಾನೆ. ಅವನು ತನ್ನ ಒಂದು ಮಣ್ಣಿನ ಮನೆಯ ಹೊಸ್ತಿಲಲ್ಲಿ ಕೂತು ಪಕ್ಕದಲ್ಲಿ ಆಟವಾಡುವ ಮಕ್ಕಳನ್ನು ನೋಡುತ್ತಾ ಅಳುತ್ತಿರುತ್ತಾನೆ. ಈ 13 ವರ್ಷದ ಹುಡುಗ ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿಯೇ ಇರುತ್ತಾನೆ. ಅಥವಾ ಮನೆಯ ಮುಂದೆ ಅಂಗಳದಲ್ಲಿ ನಿಂತು, ಮರಕ್ಕೆ ಒರಗಿಕೊಂಡು, ಹೊರಗಿನ ಜಗತ್ತನ್ನು ನೋಡುತ್ತಾ ಇದ್ದುಬಿಡುತ್ತಾನೆ. ಕಳೆದ 11 ತಿಂಗಳಿಂದ ಈ ಹುಡುಗನ ಜಗತ್ತಿನಲ್ಲಿ ಮನೆ, ಮರಗಳ ನೆರಳಿನ ಅಂಗಳ ಮತ್ತು ದನದ ಕೊಟ್ಟಿಗೆ ಬಿಟ್ಟರೆ ಬೇರೇನೂ ಇಲ್ಲ.
ರಾಶಿನ್ ಗ್ರಾಮದ ಇತರ ಮಕ್ಕಳು ಪ್ರತೀಕ್ ಜೊತೆ ಆಟವಾಡುವುದಿಲ್ಲ. “ಆ ಹುಡುಗರಿಗೆ ಅವನು ಏನು ಮಾತನಾಡುತ್ತಿದ್ದಾನೆಂದು ತಿಳಿಯುವುದಿಲ್ಲ. ಆದ್ದರಿಂದ ಅವನು ಒಬ್ಬಂಟಿಯಾಗಿದ್ದಾನೆ, ” ಎಂದು ಅವನ ತಾಯಿ 32 ವರ್ಷದ ಶಾರದಾ ರಾವುತ್ ಹೇಳುತ್ತಾರೆ. ಹಳ್ಳಿಯ ಇತರ ಮಕ್ಕಳಿಗಿಂತ, ಮತ್ತು ದೊಡ್ಡ ಮಕ್ಕಳಿಗಿಂತಲೂ ಪ್ರತೀಕ್ ವಿಭಿನ್ನ ಎಂದು ಅವರು ಬೇಗನೇ ಅರಿತುಕೊಂಡರು. ಅವನಿಗೆ 10ನೇ ವಯಸ್ಸಿನಲ್ಲಿಯೂ ಹೆಚ್ಚು ಮಾತನಾಡಲು ಅಥವಾ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಪ್ರತೀಕ್ ಎಂಟು ವರ್ಷ ವಯಸ್ಸಿನವನಾಗಿದ್ದಾಗ ಡೌನ್ ಸಿಂಡ್ರೋಮ್‌ನ ಸೌಮ್ಯ ರೂಪದಿಂದ ಬಳಲುತ್ತಿದ್ದನು. ಅಹಮದ್‌ನಗರದ ಕರ್ಜತ್ ತಾಲೂಕಿನ ರಾಶಿನ್‌ನಿಂದ 160 ಕಿ.ಮೀ ದೂರದಲ್ಲಿರುವ ಸೊಲ್ಲಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಸರ್ವೋಪಚಾರ್ ಆಸ್ಪತ್ರೆಯಲ್ಲಿ ಈ ರೋಗನಿರ್ಣಯವನ್ನು ಮಾಡಲಾಗಿದೆ. "10ನೇ ವಯಸ್ಸಿನಲ್ಲಿ, ಅವನಿಗೆ ನಡೆಯಲು ಸಾಧ್ಯವಾಗಲಿಲ್ಲ," ಎಂದು ಶಾರದಾ ಹೇಳುತ್ತಾರೆ. "ಆದರೆ ಅದರ ನಂತರ ಅವನು ಶಾಲೆಗೆ ಹೋಗಲು ಪ್ರಾರಂಭಿಸಿದನು ಮತ್ತು ನನ್ನನ್ನು ಅಮ್ಮ ಎಂದು ಕರೆಯಲು ಪ್ರಾರಂಭಿಸಿದ. ಈಗ ತಾನೇ ಬಾತ್ ರೂಮಿಗೆ ಹೋಗುತ್ತಾನೆ, ಸ್ನಾನ ಮಾಡುತ್ತಾನೆ. ನನ್ನ ಮಗನಿಗೆ ಶಾಲೆ ಬಹಳ ಮುಖ್ಯ. ಒಂದಿಷ್ಟು ಅಕ್ಷರಗಳನ್ನು ಕಲಿತು ಹೀಗೆಯೇ ಶಾಲೆಗೆ ಹೋದರೆ ಖಂಡಿತ ಸುಧಾರಿಸಿಕೊಳ್ಳುತ್ತಾನೆ. ಆದರೆ ಈಗ ಈ ಸಾಂಕ್ರಾಮಿಕ ರೋಗ ಬಂದಿದೆ!" ಎಂದು ಅವರು ಉದ್ಗರಿಸುತ್ತಾರೆ.
ಪ್ರತೀಕ್ ಹೋಗುತ್ತಿದ್ದ ವಸತಿ ಶಾಲೆಯ ಆವರಣವನ್ನು ಮಾರ್ಚ್ 2020ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಆರಂಭದಲ್ಲಿಯೇ ಮುಚ್ಚಲಾಯಿತು. ಎಲ್ಲಾ 25 ಮಾನಸಿಕ ವಿಕಲಾಂಗ ಹುಡುಗರನ್ನು ಅವರವರ ಮನೆಗೆ ಕಳುಹಿಸಲಾಗಿದೆ.











