"ಎರಡಕ್ಕೆ ಎರಡನ್ನು ಕೂಡಿದರೆ ಎಷ್ಟಾಗುತ್ತದೆ? ಪ್ರತೀಕ್, ನಿನಗೆ ಸಂಕಲನ ಮಾಡುವುದು ಹೇಗೆ ಎಂಬುದು ನೆನಪಿದೆಯಾ?”
ಶಿಕ್ಷಕ ಮೋಹನ್ ತಳೇಕರ್ ಸ್ಲೇಟಿನ ಮೇಲೆ ಬರೆದಿರುವ ಸಂಖ್ಯೆಗಳನ್ನು ಪ್ರತೀಕ್ ರಾವುತ್ ಗೆ ತೋರಿಸುತ್ತಾರೆ. 14 ವರ್ಷದ ಪ್ರತೀಕ್‌ಗೆ ಸಂಖ್ಯೆಗಳನ್ನು ಗುರುತಿಸಲು ಹೇಳುತ್ತಾರೆ. ಅವನು ಸ್ಲೇಟನ್ನೇ ದಿಟ್ಟಿಸಿ ನೋಡುತ್ತಾನೆ, ಆದರೆ ಅವನಿಗೆ ಆ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಜೂನ್ 15, 2022, ನಾವು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಲಾ ತಾಲ್ಲೂಕಿನಲ್ಲಿರುವ ಪ್ರತೀಕ್ ಓದುವ ಶಾಲೆ ಜ್ಞಾನಪ್ರಬೋಧನ್ ಮತಿಮಂದ್ ನಿವಾಸಿ ವಿದ್ಯಾಲಯದಲ್ಲಿದ್ದೇವೆ. ಅವನು ಎರಡು ವರ್ಷಗಳ ನಂತರ ಶಾಲೆಗೆ ಮರಳಿದ್ದಾನೆ. ಎರಡು ವರ್ಷ ತುಂಬಾ ದೀರ್ಘವಾದ ಅವಧಿ.
“ಪ್ರತೀಕ್‌ಗೆ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್-19 ಬರುವ ಮೊದಲು ಅವನಿಗೆ ಕೂಡಿಸುವುದು, ಮರಾಠಿ ಮತ್ತು ಇಂಗ್ಲಿಷ್ ವರ್ಣಮಾಲೆಯನ್ನು ಬರೆಯಲು ತಿಳಿದಿತ್ತು. ನಾವು ಈಗ ಮೊದಲಿನಿಂದಲೇ ಅವನಿಗೆ ಎಲ್ಲವನ್ನೂ ಕಲಿಸಬೇಕಾಗಿದೆ,”ಎಂದು ಅವನ ಶಿಕ್ಷಕರು ಹೇಳುತ್ತಾರೆ.
ಅಕ್ಟೋಬರ್ 2020 ರಲ್ಲಿ ನಾನು ವರದಿ ಮಾಡುವಾಗ ಪ್ರತೀಕ್‌ನನ್ನು ಅಹ್ಮದ್‌ನಗರ ಜಿಲ್ಲೆಯ ರಶಿನ್ ಹಳ್ಳಿಯಲ್ಲಿರುವ ಅವನ ಮನೆಯಲ್ಲಿ ಭೇಟಿಯಾಗಿದ್ದೆ. ಆಗ ಅವನಿಗೆ 13 ವರ್ಷ ವಯಸ್ಸು. ಪ್ರತೀಕ್‌ಗೆ ವರ್ಣಮಾಲೆಯ ಕೆಲವು ಅಕ್ಷರಗಳನ್ನು ಬರೆಯಲು ಬರುತ್ತಿತ್ತು. ಡಿಸೆಂಬರ್ 2020 ರ ಹೊತ್ತಿಗೆ ಅವನು ಬರೆಯುವುದನ್ನೇ ನಿಲ್ಲಿಸಿದ.
ಪ್ರತೀಕ್ ಶಾಲೆಗೆ ಹೋಗಲು ಶುರುಮಾಡಿದ್ದು 2018ರಲ್ಲಿ. ಎರಡು ವರ್ಷ ಸತತ ಅಭ್ಯಾಸವನ್ನು ಮಾಡಿ ಸಂಖ್ಯೆಗಳು ಮತ್ತು ಪದಗಳನ್ನು ಓದಲು ಮತ್ತು ಬರೆಯಲು ಕಲಿತ. ಮಾರ್ಚ್ 2020 ರಲ್ಲಿ ಅವನ ಓದು – ಬರಹ ಸುಧಾರಿಸುತ್ತಿದ್ದಂತೆ ಕೋವಿಡ್ -19 ಬಂತು. ಬೌದ್ಧಿಕವಾಗಿ ಅಸಮರ್ಥರಾಗಿರುವ 6 ರಿಂದ 18 ವರ್ಷ ವಯಸ್ಸಿನ 25 ವಿದ್ಯಾರ್ಥಿಗಳಲ್ಲಿ ಪ್ರತೀಕ್ ಕೂಡ ಒಬ್ಬ. ಅವರ ವಸತಿ ಶಾಲೆ ಎರಡು ವರ್ಷಗಳ ಕಾಲ ಮುಚ್ಚಿದ್ದರಿಂದ ಅವರನ್ನು ಅವರವರ ಮನೆಗೆ ಕಳುಹಿಸಲಾಯ್ತು.












