ತನ್ನ ಭೋಜನವನ್ನು ಮುಗಿಸಿದ್ದ ಆಕೆ ಪ್ರತಿದಿನದಂತೆ ಟಿವಿ ನೋಡದಿರಲು ನಿರ್ಧರಿಸಿದ್ದಳು. ಮಕ್ಕಳು ಇಂದು ರಾತ್ರಿ ಅನ್ನ ಹಾಗೂ ಷೆಜ್ವಾನ್ ಸಾಸ್ ಜೊತೆಗೆ ತರಕಾರಿಗಳನ್ನು ಬೇಡಿಕೆ ಇಟ್ಟಿದ್ದರು. ಇಂದು ಬೆಳಗ್ಗೆ ಬಂದಂತಹ ತರಕಾರಿ ಮಾರುವವನ ಬಳಿ ಕೆಂಪು ಮತ್ತು ಹಳದಿ ದೊಣ್ಣೆ ಮೆಣಸಿನಕಾಯಿ ಬೇರೆ ಇರಲಿಲ್ಲ. "ಮಂಡಿ ಬಂದ್ ಕರ್ ದಿಯಾ ಮೇಡಂ, ಲಾಕ್ಡೌನ್ ತೋ ಹೈ,ಹಿ, ಉಪರ್ ಸೆ ಕರ್ಫ್ಯೂ. ಸಬ್ಜಿ ಕಹಾಂಸೆ ಲಾಯೇಂ? ಯೆ ಸಬ್ ಭಿ ಅಭಿ ಖೇತ್ ಸೆ ಲೇಕೆ ಆತೆ ಹೈ (ಮಾರುಕಟ್ಟೆ ಮುಚ್ಚಿದೆ ಮೇಡಂ.ಲಾಕ್ ಡೌನ್ ಇನ್ನೂ ಹಾಗೆ ಇದೆ, ಮೇಲಿಂದ ಕರ್ಪ್ಯೂ ಆದೇಶವಿದೆ. ಹಾಗಾಗಿ ಈ ಲಾಕ್ ಡೌನ್ ನಲ್ಲಿ ತರಕಾರಿಗಳನ್ನು ಎಲ್ಲಿಂದ ತರೋದು ಹೇಳಿ? ಇವೆಲ್ಲವನ್ನೂ ನಾನು ಗದ್ದೆಗಳಿಂದ ತರುತ್ತೇನೆ) ತನ್ನ ತರಕಾರಿ ಗಾಡಿಯಲ್ಲಿದ್ದ ಅದೇ ಹಳೆಯ ಕಾಯಿಪಲ್ಲೆ ಬಗ್ಗೆ ಆಕೆ ದೂರು ನೀಡಿದಾಗ ಅವನು ಈ ರೀತಿ ಹಲುಬಿದನು.
ಅವನು ಜೀವನದಲ್ಲಿ ಎದುರಾಗುವ ಪರೀಕ್ಷೆಗಳ ಬಗ್ಗೆ ಮಾತನಾಡುತ್ತಿದ್ದನು, ಆದರೆ ಆಕೆಗೆ ಆದನ್ನು ಕೇಳುವ ಯಾವುದೇ ಸಂಯಮವಿರಲಿಲ್ಲ, ಹೀಗಾಗಿ ಅವಳು ಅದನ್ನು ಕೇಳುವುದನ್ನು ನಿಲ್ಲಿಸಿದ್ದಳು.ಆಕೆಯು ತನ್ನ ಮಕ್ಕಳು ಇಟ್ಟಿದ್ದ ಸಾಯಂಕಾಲದ ಬೇಡಿಕೆಗೆ ಅನುಗುಣವಾಗಿ ಭೋಜನವನ್ನು ಸಿದ್ಧಪಡಿಸುವುದರಲ್ಲಿ ತಲ್ಲೀನಳಾಗಿದ್ದಳು.ದಿನದ ಕೊನೆಯಲ್ಲಿ ಆಕೆಗೆ ಚೀನೀ ಥಾಯ್ ಮಾಡುವ ಯೋಚನೆಯೊಂದು ಹೊಳೆದಿತ್ತು, ಆ ಮೂಲಕ ತನ್ನ ಮಕ್ಕಳನ್ನು ಸುಮ್ಮನಿರಿಸಬಹುದು ಎನ್ನುವುದು ಆಕೆಯ ಉಪಾಯವಾಗಿತ್ತು. ಇನ್ನೊಂದೆಡೆಗೆ ಆಕೆ ಇತ್ತೀಚಿಗೆ ಟಿವಿ ನೋಡುವುದರಲ್ಲೂ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
ಟಿವಿ ಪರದೆಯ ಮೇಲೆ ಅದೇ ಚಿತ್ರಗಳನ್ನು ಮತ್ತೆ ಮತ್ತೆ ಬಿತ್ತರಿಸುತ್ತಿರುವ ಹಿನ್ನಲೆಯಲ್ಲಿ ಅವಳು ಸುದ್ಧಿ ವಾಹಿನಿಗಳನ್ನು ಹೆಚ್ಚು ದ್ವೇಷಿಸುತ್ತಿದ್ದರು. ಕೊಳೆಗೇರಿಗಳಲ್ಲಿ ನೀರಿಲ್ಲದ ಬಡ ಜನರು, ರಕ್ಷಣಾತ್ಮಕ ಸಾಧನಗಳಿಲ್ಲದೆ ಹೀನಾಯ ಸ್ಥಿತಿಯಲ್ಲಿರುವ ಸಫಾಯಿ ಕರ್ಮಚಾರಿಗಳು, ಲಕ್ಷಾಂತರ ಹಸಿದಿರುವ ವಲಸೆ ಕಾರ್ಮಿಕರು ಮನೆಗೆ ಹೋಗುವಾಗ ಅರ್ಧ ದಾರಿಯಲ್ಲಿಯೇ ಸಿಲುಕಿಕೊಂಡಿರುವುದು ಅಥವಾ ನಗರಗಳಲ್ಲಿ ಸಿಲುಕಿಕೊಂಡಿರುವುದು, ವೈದ್ಯಕೀಯ ಆರೈಕೆ ಮತ್ತು ಆಹಾರವಿಲ್ಲದೆ ಸಾಯುತ್ತಿರುವುದು, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಮತ್ತು ಅನೇಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸುತ್ತಿದ್ದಾರೆ, ಮತ್ತು ಬೀದಿಯಲ್ಲಿ ಗಲಭೆಗಳನ್ನು ನಡೆಸುತ್ತಿದ್ದಾರೆ.
ಈ ಗೆದ್ದಲುಗಳ ಅತಿರೇಕದ ಚಮತ್ಕಾರವನ್ನು ಎಷ್ಟೊತ್ತು ನೋಡಬಹುದು ಹೇಳಿ? ಅವಳು ತಕ್ಷಣ ವಾಟ್ಸಾಪ್‌ಗೆ ಹಿಂತಿರುಗುತ್ತಾಳೆ, ತನ್ನ ವಾಟ್ಸಪ್ ಗ್ರೂಪ್ ಒಂದರಲ್ಲಿ ತನ್ನ ಸ್ನೇಹಿತೆಯರು ಹೊಸ ಪಾಕಶಾಲೆಯ ಕೌಶಲ್ಯಗಳನ್ನು ತೋರಿಸುತ್ತಿದ್ದಾರೆ. ಅವಳು ತನ್ನದೇ ಆದ ಊಟದ ಮೇಜಿನಿಂದ ತೆಗೆದ ಫೋಟೊ ಒಂದನ್ನು ಕಳುಹಿಸುತ್ತಾಳೆ. ಮತ್ತೊಂದು ಗ್ರೂಪಿನಲ್ಲಿ, ಮುಂಬೈನ ಬ್ರೀಚ್ ಕ್ಯಾಂಡಿ ಕ್ಲಬ್ ಬಳಿ ಸಮುದ್ರದಲ್ಲಿ ಡಾಲ್ಫಿನ್ ಗಳು, ನವಿ ಮುಂಬೈನ ಫ್ಲೆಮಿಂಗೊಗಳು, ಮಲಬಾರ್ ಸಿವೆಟ್ ರಸ್ತೆಗಳಲ್ಲಿ ಸಂಚರಿಸುತ್ತಿರುವ ಚಂಡೀಗಢದ ಸಾಂಬಾರ್ ಜಿಂಕೆಗಳ ವೀಡಿಯೊಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಅವಳು ಕೆಂಪು ಇರುವೆಗಳ ಸಾಲು ತನ್ನ ಮೊಬೈಲ್ ಪೋನ್ ಮೇಲೆ ನುಸುಳಿಕೊಂಡು ಬರುವುದನ್ನು ನೋಡುತ್ತಾಳೆ..
ಕೆಂಪು ಇರುವೆಗಳು
ಚಿಕ್ಕದಾದ ಹುತ್ತದಿಂದ
ಸಣ್ಣ ಕೆಂಪು ಇರುವೆಗಳು ಹೊರಬಂದವು
ಅಡಿಗೆ ಮನೆ ಬಾಗಿಲಿನ ಚೌಕಟ್ಟಿನ ಕೆಳಗಿನ ಬಲ ಮೂಲೆಯಲ್ಲಿ
ನೇರವಾಗಿ ಒಂದೇ ಸಾಲಿನಲ್ಲಿ ಚಲಿಸುತ್ತಾ
ಮೊದಲು ಮೇಲಕ್ಕೆ ಹೋಗಿ
ನಂತರ ಎಡಕ್ಕೆ
ತದನಂತರ ಕೆಳಗೆ
ಮತ್ತೆ ಸರಳ ರೇಖೆಯಂತೆ ಚಲಿಸಿ
ಅಡುಗೆ ಕಟ್ಟೆಯುದ್ದಕ್ಕೂ
ಒಂದೇ ಓರಣದಂತೆ ಮೆರವಣಿಗೆ
ಒಂದರ ನಂತರ ಒಂದಾಗಿ
ಬಹಳ ಶಿಸ್ತುಬದ್ಧ ಕಾರ್ಮಿಕರ ಹಾಗೆ.
ಅಮ್ಮ ಸ್ವಲ್ಪ ಸಕ್ಕರೆ ಹಾಕಿದಾಗ
ಅಥವಾ ಅಡಿಗೆ ಕೋಣೆಯಲ್ಲಿ ಸತ್ತ ಜಿರಳೆ ಇದ್ದಾಗ
ಅವು ಪ್ರತಿ ಬಾರಿ ಬರುತ್ತಿದ್ದವು
ಈ ಇರುವೆಗಳು ಪ್ರತಿ ಧಾನ್ಯವನ್ನು
ಅಥವಾ ಇಡೀ ಅವಶೇಷವನ್ನು ಎಳೆಯುವ ದೃಶ್ಯ ನೋಡುತ್ತಿದ್ದಳು.
ಅವು ಹಿಂತಿರುಗುವಾಗಲೂ ಸಹ
ಅದೇ ವಾಕರಿಕೆಯ
ಶಿಸ್ತುಬದ್ಧ ಶೈಲಿ
ತಾಯಿ ತನ್ನ ರಕ್ಷಣೆಗೆ ಧಾವಿಸುವವರೆಗೂ
ಅವಳು ಕಿರುಚುತ್ತಿದ್ದಳು.
ಇಂದು ಪ್ರತಿಕಾರ ತಿರಿಸಿಕೊಳ್ಳಲು
ಅವು ಆಕೆಯ ಮನೆಗೆ
ದಾಳಿ ಇಟ್ಟಿದ್ದವು
ಮಧ್ಯರಾತ್ರಿಯ ದುಃಸ್ವಪ್ನದಂತೆ,
ತಮ್ಮ ಮನೆಯೊಳಗೆ
ಅಸಂಖ್ಯಾತ ಇರುವೆಗಳು ಬಂದಿದ್ದು ಹೇಗೆಂದು
ಆಕೆ ಅಚ್ಚರಿಪಟ್ಟಿದ್ದಳು.
ಯಾವುದೇ ಸಾಲುಗಳಿಲ್ಲ
ಯಾವುದೇ ಕ್ರಮವಿಲ್ಲ
ಇನ್ನಾವುದೇ ಶಿಸ್ತಿಲ್ಲ
ಮೊದಲಿನ ಹಾಗೆಯೇ ಅವು
ಇಡೀ ಗೂಡಿನಿಂದ
ಹೊರಬಂದವು.
ಅಮ್ಮ ಗೂಡಿನ ದಿಬ್ಬಗಳ ಮೇಲೆ ಸ್ವಲ್ಪ ಗಾಮಕ್ಸಿನ್ ಪುಡಿ
ಉದುರಿಸಿದಾಗ ಭಾವೋನ್ಮತ್ತ,
ಆಕ್ರೋಶದೊಂದಿಗೆ,
ಉಸಿರಾಡಲು ಹೆಣಗಾಡುತ್ತಾ
ಅವು ಆಕೆಯ ಮನೆಗೆ
ದಾಳಿ ಇಡುತ್ತಿದ್ದವು.
ಅವಳು ಬೇಗನೆ ಅವುಗಳನ್ನು
ಕೋಣೆಯಿಂದ
ಹೊರಗೆ ಗುಡಿಸಿ
ಬಾಗಿಲನ್ನು ಬಿಗಿಯಾಗಿ
ಮುಚ್ಚಿದಳು.
ಆದರೆ ತಕ್ಷಣ ಅವು ಕಿಟಕಿಯ ತಳದಿಂದ
ಬಾಗಿಲಿನ ಕೆಳಗಿನಿಂದ
ಒಮ್ಮೆಗೆ ಲಕ್ಷಾಂತರ ಸಂಖ್ಯೆಯಲ್ಲಿ
ಆ ಮೇಲ್ಮೈಯನ್ನು ಆವರಿಸಿಕೊಂಡಿರುವುದು
ಅಷ್ಟೇನೂ ಕಾಣುತ್ತಿಲ್ಲ
ಬಾಗಿಲಿನ ಚೌಕಟ್ಟಿನಲ್ಲಿನ ಬಿರುಕುಗಳಿಂದ
ಮುಖ್ಯ ಬಾಗಿಲಿನ ಸಣ್ಣ ಕೀ ಹೋಲ್‌ನಿಂದ
ಸ್ನಾನ ಗೃಹದ ರಂಧ್ರಗಳಿಂದ
ಬಿಳಿ ಸಿಮೆಂಟಿನ ಸಂದಿನಿಂದ
ಫ್ಲೋರಿನ ಅಂಚುಗಳಿಂದ
ಸ್ವಿಚ್ ಬೋರ್ಡಿನ ಹಿಂದಿನಿಂದ
ಗೋಡೆಗಳಲ್ಲಿನ ತೇವದ ಬಿರುಕುಗಳಿಂದ
ಪೊಳ್ಳಾಗಿರುವ ಕೇಬಲ್ ಗಳಿಂದ
ಕಪಾಟುಗಳಲ್ಲಿ ಆವರಿಸಿರುವ ಕತ್ತಲೆಯಿಂದ
ಹಾಸಿಗೆಯ ಕೆಳಗಿರುವ ಖಾಲಿ ಪ್ರದೇಶದಿಂದ
ವಿಚಲಿತಗೊಂಡಂತಹ ಇರುವೆಗಳು
ಕಾಲೋನಿಗಳನ್ನು ಆವರಿಸಿವೆ
ಅವು ತಮ್ಮ ಮನೆಗಳ ಹುಡುಕಾಟದಲ್ಲಿವೆ
ಭಗ್ನಗೊಂಡಿರುವ,
ವಿನಾಶವಾಗಿರುವ, ಧ್ವಂಸಗೊಂಡಿರುವ
ತಮ್ಮ ಜೀವನದ ಹುಡುಕಾಟದಲ್ಲಿವೆ
ಯಾರದೋ ಬೆರಳುಗಳ ನಡುವೆ ಹತ್ತಿಕ್ಕಲಾಗಿದೆ
ಇನ್ನಾರದೋ ಕಾಲಡಿಯಲ್ಲಿ ಉಸಿರುಗಟ್ಟಿವೆ
ಹಸಿದ ಗೂಡುಗಳು
ಬಾಯಾರಿದ ಗೂಡುಗಳು
ಕೆರಳಿರುವ ಗೂಡುಗಳು
ಕೆಂಪು ಕಟ್ಟಿರುವೆ
ಗೂಡುಗಳು
ಉಸಿರಾಟಕ್ಕಾಗಿ ಏದುಸಿರು ಬಿಡುತ್ತಿವೆ
ಆ ಕೆಂಪು ಇರುವೆಗಳ ಗೂಡುಗಳು.
ಆಡಿಯೋ: ಸುಧನ್ವಾ ದೇಶಪಾಂಡೆ ಜನ ನಾಟ್ಯ ಮಂಚ್ ತಂಡದಲ್ಲಿ ನಟ ಮತ್ತು ನಿರ್ದೇಶಕರಾಗಿದ್ದಾರೆ ಮತ್ತು ಲೆಫ್ಟ್ ವರ್ಡ್ ಬುಕ್ಸ್ (LeftWord Books) ನಲ್ಲಿ ಸಂಪಾದಕರಾಗಿದ್ದಾರೆ.
ಅನುವಾದ: ಎನ್.ಮಂಜುನಾಥ್