ಅಳಿದುಳಿದ ಪೇಪರುಗಳನ್ನು ತನ್ನ ಚೀಲದೊಳಗೆ ತುಂಬುತ್ತಿದ್ದ ಕಾಲೂ ದಾಸ್, “ಇಂದು ನಾನು ಸಂಗ್ರಹಿಸಿದ ವಸ್ತುಗಳೆಲ್ಲವನ್ನೂ ವಿಂಗಡಿಸಿದೆ. ಅವರು [ರದ್ದಿಯ ವಿತರಕರು] ಇವನ್ನು ತೆಗೆದುಕೊಂಡು, ತೂಕ ಮಾಡಿ, ನನಗೆ ಹಣವನ್ನು ಪಾವತಿಸುತ್ತಾರೆ, ನಂತರ, ಸಮಯಕ್ಕೆ ಸರಿಯಾಗಿ ಗಾಡಿಯು ದೊರೆತಲ್ಲಿ ಎರಡು ಗಂಟೆಯೊಳಗೆ ಮನೆ ಸೇರುತ್ತೇನೆ” ಎಂದರು.
ಸೆಪ್ಟೆಂಬರ್ ಮೊದಲ ಭಾಗದಲ್ಲಿ, 60ರ ವಯಸ್ಸಿನ ದಾಸ್, ಅನೇಕ ತಿಂಗಳುಗಳ ನಂತರ, ಎರಡನೆಯ ವಾರಾಂತ್ಯದಲ್ಲಿ, ದಕ್ಷಿಣದಲ್ಲಿನ 24 ಪರಗಣಗಳ ಜಿಲ್ಲೆಯಿಂದ ಸುಮಾರು 28 ಕಿ.ಮೀ. ದೂರವಿರುವ ಹಸನ್‌ಪುರ ಎಂಬ ತಮ್ಮ ಹಳ್ಳಿಯಿಂದ ಕೊಲ್ಕತ್ತಕ್ಕೆ ಟೊಟೊವೊಂದರಲ್ಲಿ (ಆಟೊರಿಕ್ಷ) ಸಹಪ್ರಯಾಣಿಕರೊಂದಿಗೆ ಹಾಗೂ ಬಸ್ಸಿನ ಮೂಲಕ ಪ್ರಯಾಣಿಸಿದರು. ಅಳ್ಳಕವಾಗಿದ್ದ ಬಿಳಿಯ ಚೀಲವೊಂದು ಅವರ ಭುಜದಲ್ಲಿ ನೇತಾಡುತ್ತಿತ್ತು.
ದಕ್ಷಿಣ ಹಾಗೂ ಪೂರ್ವ ಕೊಲ್ಕತ್ತದಲ್ಲಿನ ನೆರೆಹೊರೆಯ ಪ್ರದೇಶಗಳಿಂದ ದಾಸ್ ಅವರು 25 ವರ್ಷಗಳಿಂದಲೂ ರದ್ದಿಯನ್ನು ಸಂಗ್ರಹಿಸುತ್ತಿದ್ದಾರೆ. ಕಬಾಡಿವಾಲಾ ಆಗುವ ಮೊದಲು ಇವರು ನಗರದಲ್ಲಿನ ಸಿನಿಮಾ ಸುರುಳಿಗಳ ವಿತರಣಾ ಸಂಸ್ಥೆಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. “ನೆಪ್ಚೂನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಾಗಿ ನಾನು ಸಿನಿಮಾದ ಸುರುಳಿಗಳನ್ನು ಸಾಗಿಸುತ್ತಿದ್ದೆ. ದೆಹಲಿ, ಬಾಂಬೆ, ಮದ್ರಾಸುಗಳಿಂದ ಸರಕು ಒದಗಿಸಲು ಕೋರಿಕೆ (35 ಎಂಎಂ ಸುರುಳಿಗಳಿಗಾಗಿ) ಬರುತ್ತಿತ್ತು. ಭಾರಿ ಗಾತ್ರದ ಟ್ರಂಕ್‌ಗಳಲ್ಲಿ ಬರುತ್ತಿದ್ದ ಸುರುಳಿಗಳನ್ನು ಹೌರಾಕ್ಕೆ ತೆಗೆದುಕೊಂಡು ಹೋಗಿ, ಅವುಗಳನ್ನು ತೂಕ ಮಾಡಿ, ವಿತರಣೆಗಾಗಿ ವರ್ಗಾಯಿಸುತ್ತಿದ್ದೆ” ಎಂದು ಅವರು ತಿಳಿಸಿದರು.
ಸಂಸ್ಥೆಯನ್ನು ಮುಚ್ಚಿದಾಗ, ದಾಸ್ ಅವರಿಗೆ ಕೆಲಸವಿಲ್ಲದಂತಾಯಿತು. ಆ ಸಮಯದಲ್ಲಿ, ಅವರು ದಕ್ಷಿಣ ಕೊಲ್ಕತ್ತದಲ್ಲಿನ ಬೋಸ್‌ಪುಕುರ್ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಅವರ ನೆರೆಮನೆಯವರು ಅವರನ್ನು ಮರುಬಳಕೆಯ ವಸ್ತುಗಳ ಕಸುಬಿಗೆ ಪರಿಚಯಿಸಿದರು. “ನಾನು ಕೆಲಸವನ್ನು ಕಳೆದುಕೊಂಡಾಗ, ಆತನು ತನ್ನ ಕೆಲಸದಲ್ಲಿ ನಾನೂ ಸಹ ಜೊತೆಗೂಡುವಂತೆ ತಿಳಿಸಿದ. ಪ್ರತಿದಿನ ನನಗೆ 25 ರೂ.ಗಳನ್ನು ನೀಡುವುದಾಗಿ ಹೇಳಿದ ಆತನು, ನಾನು ಮುಂಜಾನೆ 8ಕ್ಕೆ ಕೆಲಸಕ್ಕೆ ಬಂದು ಮಧ್ಯಾಹ್ನ ಮನೆಗೆ ಹಿಂದಿರುಗಬಹುದೆಂದು ತಿಳಿಸಿ, ಸರಕನ್ನು ಹೊತ್ತು ನನ್ನೊಂದಿಗೆ ಸುತ್ತಾಡಬೇಕಾಗುತ್ತದೆ. ನಾವಿಬ್ಬರೂ ಒಟ್ಟಾಗಿ ಚಹಾ ಕುಡಿಯೋಣ” ಎಂತಲೂ ಹೇಳಿದನೆಂದರು.








