ಲಕ್ಷ್ಮಿ ತುಡು ಆಸ್ಪತ್ರೆ ತಲುಪುವಷ್ಟರಲ್ಲಿ ಕಲ್ಪನಾ ತೀರಿಕೊಂಡಿದ್ದರು. “ಹುಡುಗಿ ಆ ದಿನ ಬೆಳಿಗ್ಗೆ ತುಂಬಾ ಹಸಿದಿದ್ದಳು. ನಾನು ಅವಳಿಗೆ ಅನ್ನ ತರಬೇಕೆಂದಿದ್ದೆ ಆದರೆ ಅಷ್ಟು ಹೊತ್ತಿಗೆ ತಡವಾಗಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ. “ಅಂದು ಜೋರಾಗಿ ಮಳೆ ಬರುತ್ತಿತ್ತು”
ಅದು ಜೂನ್ 2020, ಅಂದು ಅವರ 26 ವರ್ಷದ ಮಗಳು ಕಲ್ಪನಾ ತಲೆನೋವು ಮತ್ತು ನಿರಂತರ ವಾಂತಿಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಲಕ್ಷ್ಮಿಯವರ ಮಧ್ಯದ ಮಗಳಾದ ಶಿಬಾನಿ ಆಸ್ಪತ್ರೆಯಲ್ಲಿ ತನ್ನ ಅಕ್ಕನೊಂದಿಗೆ ಇದ್ದಳು.
ಕಲ್ಪನಾ ಅವರು 2017ರಿಂದ ಖಾಸಗಿ ಡಯಾಗ್ನಾಸ್ಟಿಕ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಸ್ಥಳೀಯವಾಗಿ ಕಲ್ಡಿಘಿ ಆಸ್ಪತ್ರೆ ಎಂದು ಕರೆಯಲಾಗುವ ಗಂಗಾರಂಪುರದ ಸರ್ಕಾರಿ-ಉಪವಿಭಾಗದ ಆಸ್ಪತ್ರೆಯ ವೈದ್ಯರು ಖಾಸಗಿ ನರವಿಜ್ಞಾನ ತಜ್ಞರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದರು. ಎರಡನೇ ಮಗನ ಜನನದ ನಂತರ 2019ರಲ್ಲಿ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತು.
ಮಾರ್ಚ್ 2020ರಲ್ಲಿ ಲಾಕ್ಡೌನ್ ಪ್ರಾರಂಭಗೊಳ್ಳುವುದರೊಂದಿಗೆ, ಆಕೆಯ ಕೋಲ್ಕತ್ತಾದಲ್ಲಿರುವ ಡಯಾಗ್ನಾಸ್ಟಿಕ್ ಕೇಂದ್ರದ ವೈದ್ಯರ ಮಾಸಿಕ ಭೇಟಿ ಅನಿಯಮಿತಗೊಳ್ಳತೊಡಗಿತು. "ನಾವು ಕಾಯಲು ಸಿದ್ಧರಿದ್ದೆವು ಆದರೆ ಅವರ ಭೇಟಿಯ ದಿನಾಂಕಗಳನ್ನು ನಿರಂತರವಾಗಿ ಮುಂದೂಡಲಾಗುತ್ತಿತ್ತು" ಎಂದು ಲಕ್ಷ್ಮಿ ನೆನಪಿಸಿಕೊಳ್ಳುತ್ತಾರೆ. "ಹೀಗಾಗಿ ನಾವು ಮೊದಲು ಬರೆದುಕೊಡಲಾಗಿದ್ದ ಅದೇ ಔಷಧಿಗಳನ್ನು ಮತ್ತೆ ಮತ್ತೆ ಖರೀದಿಸಿದೆವು."
ಕಲ್ಪನಾ ಗಂಗಾರಂಪುರ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಾಗ 2014ರಲ್ಲಿ ಅವರ ವಿವಾಹವಾಯಿತು. ಅವರ 29 ವರ್ಷದ ಪತಿ ನಯನ್ ಮರ್ಡಿ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ ಜಿಲ್ಲೆಯ ಗಂಗಾರಂಪುರ ಪಟ್ಟಣದಿಂದ 17 ಕಿಲೋಮೀಟರ್ ದೂರದಲ್ಲಿರುವ ಅನಂತಪುರ ಗ್ರಾಮದಲ್ಲಿ ಅರೆಕಾಲಿಕ ಟೈಲರಿಂಗ್ ವೃತ್ತಿ ಕೂಡಾ ಮಾಡುತ್ತಿದ್ದರು. ಆಕೆಯ ಅತ್ತೆ ಕೃಷಿ ಕಾರ್ಮಿಕರಾಗಿದ್ದರು. ಒಂದು ವರ್ಷದ ನಂತರ, ಕಲ್ಪನಾಳ ಮೊದಲ ಗಂಡು ಮಗುವಿನ ಜನನದ ನಂತರ, ಬಾಲ್ಯದಿಂದಲೂ ಅನುಭವಿಸುತ್ತಿದ್ದ ತಲೆನೋವು ವಿಪರೀತವಾಗಿ ಉಲ್ಬಣಿಸತೊಡಗಿತು.










