ನಾಲ್ಕು ದಿನಗಳನ್ನು ರಸ್ತೆಯಲ್ಲಿ ಕಳೆದು 750 ಕಿ.ಮೀ ದೂರವನ್ನು ಕ್ರಮಿಸಿದ ನಂತರ, ಟೆಂಪೊ ಮತ್ತು ಜೀಪ್‌ಗಳ ಕಾರವಾನ್ ರಾಜಸ್ಥಾನದ ಕೋಟಾದಲ್ಲಿನ ಗುರುದ್ವಾರದಲ್ಲಿ ಊಟಕ್ಕೆ ನಿಂತಿತು. ಡಿಸೆಂಬರ್ 24ರಂದು ಮಧ್ಯಾಹ್ನ ತಂಪಾದ ವಾತಾವರಣದಲ್ಲಿ ಪ್ರಯಾಣಿಕರಾದ ಮಹಾರಾಷ್ಟ್ರದ ರೈತರು ಮತ್ತು ಕೃಷಿ ಕಾರ್ಮಿಕರು ರಾತ್ರಿಯ ಪ್ರಯಾಣದಿಂದಾಗಿ ದಣಿದಿದ್ದಾರೆ. ಆದರೆ ಅವರು ಗುರುದ್ವಾರದಲ್ಲಿ ಸಮುದಾಯ ಅಡುಗೆ ಮನೆಯ ಆಹಾರಕ್ಕಾಗಿ ಕಾಯುತ್ತಿರುವಾಗ, ಸವಿತಾ ಗುಂಜಲ್ ಅವರ ಹಾಡು ಅವರೆಲ್ಲರ ಉತ್ಸಾಹವನ್ನು ಹೆಚ್ಚಿಸುತ್ತದೆ - ಕಾಮಗರ್ ಚ್ಯಾ ಕಷ್ಟಾನಾ ನಟವಾಲಾ ಜಗ್ಲಾ, ಜೀವನ್ ನಾ ಕೊಯಿ ಪೊಟಲಾ, ಕಪ್ಡಾ ನಹಿ ನೇಸಯಾಲ ('ಕಾರ್ಮಿಕರ ಶ್ರಮವು ಜಗತ್ತನ್ನು ಸುಂದರಗೊಳಿಸುತ್ತದೆ, ಆದರೆ ಅವರಿಗೆ ಇಲ್ಲ ತಿನ್ನಲು ರೊಟ್ಟಿಯಿಲ್ಲ ಅಥವಾ ಧರಿಸಲು ಬಟ್ಟೆಯಿಲ್ಲ').
ಕಡು ಕೆಂಪು ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ 16 ವರ್ಷದ ಭಿಲ್ ಬುಡಕಟ್ಟು ಗಾಯಕಿ "ನಾನು ಹಾಡಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳುತ್ತಾರೆ. “ರೈತರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ನಾನು ಬಯಸುತ್ತೇನೆ. ನನ್ನ ಪರಿಸ್ಥಿತಿಯ ಬಗ್ಗೆ ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ ” ಎಂದು ನಾಸಿಕ್ ಜಿಲ್ಲೆಯ ಚಂದ್ವಾಡ್ ತಾಲ್ಲೂಕಿನ ಚಾಂದವಾಡ್ ಗ್ರಾಮದ ಸವಿತಾ ಹೇಳುತ್ತಾರೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಲು ಅವರು ಡಿಸೆಂಬರ್ 21ರಂದು ನಾಸಿಕ್ನಿಂದ ಒಂದು ಗುಂಪಿನ ರೈತರೊಂದಿಗೆ ಹೊರಟರು. ಲಕ್ಷಾಂತರ ರೈತರು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿದ್ದಾರೆ, ಇದನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಯಾಗಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರಂದು ಈ ಕಾಯ್ದೆಯನ್ನಾಗಿ ಮಾಡಲಾಗಿದೆ.
ಸವಿತಾ ತನ್ನ ಹಳ್ಳಿಯಲ್ಲಿ, ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ಕೃಷಿ ಕಾರ್ಮಿಕಳಾಗಿ ಕೆಲಸ ಮಾಡುತ್ತಾ ದಿನಕ್ಕೆ 150-200 ರೂ ಸಂಪಾದಿಸುತ್ತಾರೆ. "ಒಂದು ವೇಳೆ ಕೆಲಸ ಇದ್ದರೆ, ನಾನು ಹೊಲಗಳಿಗೆ ಹೋಗುತ್ತೇನೆ" ಎಂದು ಅವರು ಹೇಳುತ್ತಾರೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ, ಅವರು ಚಾಂದ್‌ವಾಡ್‌ನ ಹೊಲಗಳಲ್ಲಿ ಕೆಲಸ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆದರು. "ಲಾಕ್ ಡೌನ್ ಸಮಯದಲ್ಲಿ ಬಹಳ ಕಡಿಮೆ ಕೆಲಸವಿತ್ತು. ನನಗೆ ಸಿಕ್ಕಷ್ಟು ಕೆಲಸ ಮಾಡಿದ್ದೇನೆ ಮತ್ತು ಎಷ್ಟು ಸಾಧ್ಯವೋ ಅಷ್ಟು ಸಂಪಾದಿಸಿದೆ” ಎಂದು ಅವರು ಹೇಳುತ್ತಾರೆ. ಅವರು ಈ ವರ್ಷ (2020ರಲ್ಲಿ) ಪ್ರೌಢಶಾಲೆ ಮುಗಿಸಿದರು, ಆದರೆ ಕೊರೋನಾ ಪಿಡುಗಿನಿಂದಾಗಿ ಕಾಲೇಜು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.




