ಅವರು ರೈತರೂ ಹೌದು. ಅವರ ಎದೆಯ ಮೇಲೆ ಹೆಮ್ಮೆಯಿಂದ ಅಲಂಕರಿಸಲ್ಪಟ್ಟ ಪದಕ ಇಲ್ಲದೆ ಹೋಗಿದ್ದರೆ, ದೆಹಲಿಯ ಗಡಿಗಳಲ್ಲಿ ಹಾಜರಿದ್ದ ರೈತರ ಗುಂಪಿನಲ್ಲಿ ಅವರೂ ಒಬ್ಬರಾಗಿರುತ್ತಿದ್ದರು. ಅವರು 1965 ಮತ್ತು 1971ರ ಪಾಕಿಸ್ತಾನದ ಯುದ್ಧಗಳಲ್ಲಿ ತೋರಿಸಿದ ಧೈರ್ಯಕ್ಕಾಗಿ ಗೌರವಿಸಲ್ಪಟ್ಟ ವೀರರಾಗಿದ್ದಾರೆ, ಅವರಲ್ಲಿ ಕೆಲವರು 1980ರ ದಶಕದಲ್ಲಿ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಈಗ ಆಕ್ರೋಶಗೊಂಡಿದ್ದಾರೆ ಮತ್ತು ಅದು ಸಹಜವೂ ಹೌದು, ಈ ಪ್ರತಿಭಟನಾನಿರತರನ್ನು ಸರ್ಕಾರ ಮತ್ತು ಮಾಧ್ಯಮಗಳ ಪ್ರಬಲ ವಿಭಾಗಗಳು 'ರಾಷ್ಟ್ರ ವಿರೋಧಿ', 'ಭಯೋತ್ಪಾದಕ' ಮತ್ತು 'ಖಲಿಸ್ತಾನಿ' ಎಂದು ಕರೆಯುತ್ತಿರುವುದರಿಂದಾಗಿ ಅವರು ಹೆಚ್ಚು ಆಕ್ರೋಶಿತರಾಗಿದ್ದಾರೆ.
ಪಂಜಾಬ್‌ನ ಲುಧಿಯಾನ ಜಿಲ್ಲೆಯ ಗಿಲ್ ಗ್ರಾಮದ ಬ್ರಿಗೇಡಿಯರ್ ಎಸ್.ಎಸ್. ಗಿಲ್ (ನಿವೃತ್ತ) ನನ್ನೊಡನೆ ಹೇಳುತ್ತಾರೆ, "ಶಾಂತಿಯುತವಾಗಿ ಪ್ರತಿಭಟಿಸುವ ರೈತರ ವಿರುದ್ಧ ಸರ್ಕಾರ ಬಲಪ್ರಯೋಗ ನಡೆಸಿದ್ದು ವಿಷಾದನೀಯ. ಅವರು ದೆಹಲಿಯನ್ನು ತಲುಪಲು ಬಯಸಿದ್ದರು, ಆದರೆ ಸರ್ಕಾರ ಅವರನ್ನು ತಡೆದು ನಿಲ್ಲಿಸಿತು, ಅದು ಅಸಭ್ಯ ವರ್ತನೆ ಮತ್ತು ತಪ್ಪು. ಅವರು ಬ್ಯಾರಿಕೇಡ್‌ಗಳನ್ನು ನೆಟ್ಟರು, ರಸ್ತೆಗಳನ್ನು ಅಗೆದರು, ಲಾಠಿ ಚಾರ್ಜ್ ಮಾಡಿದರು ಮತ್ತು ಈ ರೈತರ ಮೇಲೆ ನೀರಿನ ಫಿರಂಗಿಗಳನ್ನು ಬಳಸಿದರು. ಯಾವ ಕಾರಣಾಕ್ಕಾಗಿ? ಯಾಕಾಗಿ? ಇದನ್ನು ಮಾಡಲು ಕಾರಣವೇನು? ಆ ಎಲ್ಲ ಅಡೆತಡೆಗಳನ್ನು ರೈತರು ಮೀರಿ ನಿಂತಿರುವುದು ತಮ್ಮ ಬದ್ಧತೆಯ ಕಾರಣದಿಂದ.”
ತನ್ನ ಸಕ್ರಿಯ ಸೇವೆಯ ಸಮಯದಲ್ಲಿ 13 ಪದಕಗಳನ್ನು ಗೆದ್ದ ಒಬ್ಬ ಯುದ್ಧ ವೀರ, 72 ವರ್ಷದ ಗಿಲ್ ತನ್ನ ಕುಟುಂಬದಲ್ಲಿ 16 ಸದಸ್ಯರನ್ನು ಮತ್ತು ಕೆಲವು ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರು 1971ರ ಯುದ್ಧದಲ್ಲಿ ಭಾಗವಹಿಸಿದ್ದರು ಮತ್ತು 1990ರ ದಶಕದಲ್ಲಿ ಪಂಜಾಬ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸೇರಿದಂತೆ ಇತರ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
"ಈ ಕಾನೂನುಗಳ ಕುರಿತು ರೈತರ ಅಭಿಪ್ರಾಯ ಕೇಳಲಾಗಿಲ್ಲ ಅಥವಾ ಅವರೊಂದಿಗೆ ಸಮಾಲೋಚಿಸಲಾಗಿಲ್ಲ" ಎಂದು ಬ್ರಿಗೇಡಿಯರ್ ಗಿಲ್ ಹೇಳುತ್ತಾರೆ. "ಇದು ವಿಶ್ವದ ಅತಿದೊಡ್ಡ ಕ್ರಾಂತಿಗಳಲ್ಲಿ ಒಂದಾಗಿದೆ, ಇದು ಪ್ರಸ್ತುತ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದೆ. ಸರ್ಕಾರ ಈ ಕಾನೂನುಗಳನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಸರಕಾರ ಈ ಕೆಲಸವನ್ನು ಇಷ್ಟು ಹೊತ್ತಿಗಾಗಲೇ ಮಾಡಬೇಕಾಗಿತ್ತು."
ಕೇಂದ್ರ ಸರ್ಕಾರವು ಮೊದಲಿಗೆ ಜೂನ್ 5, 2020ರಂದು ಸುಗ್ರೀವಾಜ್ಞೆಯಾಗಿ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ನಂತರ ಸೆಪ್ಟೆಂಬರ್ 14ರಂದು ಅವುಗಳನ್ನು ಸಂಸತ್ತಿನಲ್ಲಿ ಕೃಷಿ ಮಸೂದೆಯಾಗಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳಲ್ಲಿ 20ರಂದು ಕಾಯ್ದೆಯಾಗಿಸಲಾಗಿದೆ. ಅದುವೇ ಈ ಮೂರು ಕಾನೂನುಗಳು: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.











